ತುಮಕೂರು:
ಮೂರು ಪ್ರಮುಖ ಕಾಯ್ದೆಗಳನ್ನು ವಿರೋಧಿಸಿ ರೈತರು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಇಳಿದಿದ್ದಾರೆ. ರೈತ ಸಂಘಟನೆಗಳನ್ನು ಬೆಂಬಲಿಸಿ ರಾಷ್ಟ್ರಾದ್ಯಂತ ನಿನ್ನೆ ಭಾರತ್ ಬಂದ್‍ಗೆ ಕರೆ ನೀಡಲಾಗಿತ್ತು. ಹಲವು ರಾಜ್ಯಗಳಲ್ಲಿ ಬಂದ್ ಯಶಸ್ವಿಯಾಗಿದೆ. ರೈತರಿಗೆ ಧ್ವನಿಯಾಗಿ ಸಂಘಟನೆಗಳು ನಿಂತಿವೆ. ರಾಜ್ಯದಲ್ಲಿಯೂ ಸುಮಾರು 50 ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದವು.
ತುಮಕೂರಿನಲ್ಲಿಯೂ ಬಂದ್‍ಗೆ ಕರೆ ನೀಡಲಾಗಿತ್ತು. ಎಲ್ಲ ರೈತಪರ ಸಂಘಟನೆಗಳು ಹಾಗೂ ಕೂಲಿಕಾರ್ಮಿಕ ಸಂಘಟನೆಗಳು ಬಂದ್ ಕರೆಗೆ ಬೆಂಬಲಿಸಿ ಬಂದ್ ಯಶಸ್ವಿಗೊಳಿಸುವಂತೆ ಕಳೆದ 2 ದಿನಗಳ ಹಿಂದೆಯೇ ಕರೆ ನೀಡಿದ್ದವು. ಕೆಲವಷ್ಟೇ ಸಂಘಟನೆಗಳು ಬಂದ್ ಬೆಂಬಲಿಸಿ ಪ್ರತಿಭಟನೆಗೆ ಇಳಿದದ್ದನ್ನು ಬಿಟ್ಟರೆ ಉಳಿದ ಕೆಲವರು ಕೇವಲ ಹೇಳಿಕೆಗೆ ಸೀಮಿತವಾಗಿಬಿಟ್ಟರು.
ಆದರೆ ನಾವಿಲ್ಲಿ ಯೋಚಿಸಬೇಕಾದ ವಿಷಯ ಎಂದರೆ ಹಿಂದಿನ ಕೆಲವು ಬಂದ್ ಆಚರಣೆಗಳು ಹೇಗಿರುತ್ತಿದ್ದವು? ಈಗ ಹೇಗೆ ನಡೆಯುತ್ತಿದೆ? ಎಂಬ ಬಗ್ಗೆ. ಸಂಘಟಿತರು ಮತ್ತು ಅಸಂಘಟಿತ ವಲಯದವರ ಬಗ್ಗೆ. ಸಂಘಟಿತ ವಲಯಗಳು ಬಂದ್ ಕರೆ ನೀಡಿದರೆ ಅದನ್ನು ಅಕ್ಷರಶಃ ಯಶಸ್ವಿಗೊಳಿಸಲು ಇನ್ನಿಲ್ಲದ ಹರಸಾಹಸಪಡುತ್ತಾರೆ. ಆದರೆ ಅಸಂಘಟಿತ ವಲಯದವರ ಬಗ್ಗೆ ಬಂದ್ ಕರೆ ನೀಡಿದರೆ ಸ್ಪಂದಿಸಲು ಹಿಂದೆ ಮುಂದೆ ನೋಡುತ್ತಾರೆ. ಬಂದ್‍ನ ದಿನ ತುಮಕೂರಿನಲ್ಲಿ ಕಂಡುಬಂದ ವಾತಾವರಣವೂ ಇದೆ ಆಗಿತ್ತು.
ಇದನ್ನು ಪ್ರಶ್ನಿಸಿ ಪ್ರಗತಿಪರ ಕೃಷಿಕರೊಬ್ಬರು ದೂರವಾಣಿ ಕರೆ ಮಾಡಿ ನಮ್ಮ ದೇಶದ ಹೋರಾಟಗಳು ಎಲ್ಲಿಗೆ ಬಂದು ನಿಂತಿವೆ ಎಂದರು. ಸಣ್ಣಪುಟ್ಟ ವಿಷಯಗಳಿಗೆಲ್ಲ ಹೋರಾಟಕ್ಕೆ ಇಳಿಯುವ, ಪ್ರತಿಭಟನೆ ನಡೆಸುವ, ರಸ್ತೆಗಳಲ್ಲಿ ಟೈರ್ ಸುಡುವ, ಅಂಗಡಿಗಳ ಬಾಗಿಲು ಬಂದ್ ಮಾಡಿ ವೀರಾವೇಷ ತೋರುವ ಮಂದಿ ಅನ್ನದಾತರ ಪರವಾಗಿ ನಡೆದ ಬಂದ್ ಸಂದರ್ಭದಲ್ಲಿ ವೀರಾವೇಶ ಎಲ್ಲಿ ಹೋಗಿತ್ತು? ಹಾಗಾದರೆ ಇವರಿಗೆಲ್ಲ ರೈತರ ಬಗ್ಗೆ ಸಹಾನುಭೂತಿ ಇಲ್ಲವೆ ಎಂಬುದಾಗಿತ್ತು. ನಿಜವಾದ ಹೋರಾಟಗಾರರು ಎಲ್ಲಿ ಹೋದರು? ಎಂಬ ಕಳಕಳಿ ಅವರದ್ದಾಗಿತ್ತು.
ಎಲ್ಲರಿಗೂ ತಿನ್ನಲು ಅನ್ನ ಬೇಕು. ರೈತರು ಉತ್ಪಾದಿಸುವ ಉತ್ಪನ್ನಗಳು ಬೇಕು. ಆದರೆ ಅವರ ಬಗ್ಗೆ ಚಿಂತೆ ಮಾತ್ರ ಯಾರಿಗೂ ಬೇಡ. ಸರ್ಕಾರಗಳು ರೈತ ವರ್ಗವನ್ನು ಹಿಂದಿನಿಂದಲೂ ನಿರ್ಲಕ್ಷಿಸುತ್ತಲೇ ಬಂದಿವೆ. ಇವರೆಲ್ಲ ಅಸಂಘಟಿತರೆಂಬ ಕಾರಣಕ್ಕೆ ಯಾವ ಯೋಜನೆಗಳು ಇವರ ಪರವಾಗಿ ಬರುತ್ತಿಲ್ಲ. ಬದಲಾಗಿ ರೈತ ವಿರೋಧಿ ಕಾನೂನುಗಳೇ ಹೆಚ್ಚುತ್ತಿವೆ. ರೈತರು ನೆಮ್ಮದಿಯಾಗಿ ದುಡಿದು ತಿನ್ನುವಂತಹ ವಾತಾವರಣವನ್ನು ಸರ್ಕಾರಗಳು ಕಲ್ಪಿಸುತ್ತಿಲ್ಲ. ಅವರಿಗೆ ವಾಸ್ತವವಾಗಿ ಏನು ಬೇಕು ಎಂಬ ಬಗ್ಗೆಯೂ ಚರ್ಚಿಸುತ್ತಿಲ್ಲ. ಬದಲಾಗಿ ಗಾಜಿನ ಮನೆಯಲ್ಲಿ ಕುಳಿತು ಕಾನೂನು ರೂಪಿಸಿ ಏನೂ ಅರಿಯದ ರೈತರ ಮೇಲೆ ಪ್ರಹಾರ ಮಾಡುವ ಯೋಜನೆಗಳೇ ಹೆಚ್ಚು ಹೆಚ್ಚು ಬರತೊಡಗಿವೆ. ಇವುಗಳನ್ನು ವಿರೋಧಿಸುವ ಅಥವಾ ನಾವು ರೈತರು, ನಮ್ಮ ಪರ ನಿಲ್ಲಿ ಎಂದು ಕೂಗುವ ರೈತರ ಪರವಾಗಿ ನಗರದ ನಾಗರಿಕರು ನಿಲ್ಲಬೇಕಲ್ಲವೆ?
ನಗರದಲ್ಲಿರುವವರು ಏನೂ ಮಾಡಬೇಕಿಲ್ಲ. ಪ್ರತಿಭಟನೆಗೆ ಇಳಿಯಬೇಕಿಲ್ಲ. ಅದು ಸರಿಯೋ, ತಪ್ಪೋ ಬೇರೆ ಮಾತು. ಆದರೆ ಬಂದ್ ಕರೆ ಕೊಟ್ಟಿರುವುದು ರೈತರ ಪರವಾಗಿ. ಈ ಹಿನ್ನೆಲೆಯಲ್ಲಿ ಕೆಲವೇ ಕ್ಷಣ ವಾಸ್ತವವಾಗಿ ಯೋಚಿಸಿದರೆ ಸಾಕು. ಬಂದ್‍ಗೆ ಬೆಂಬಲಿಸಿ ಕೆಲ ಹೊತ್ತು ಮನೆಯಲ್ಲೇ ಉಳಿಯುವ, ರಸ್ತೆ ಸಂಚಾರಕ್ಕೆ ಇಳಿಯದೆ ಇರುವ, ಅಂಗಡಿಗಳನ್ನು ತೆರೆಯದೆ, ವಹಿವಾಟು ನಡೆಸದೆ ಇರುವ ಬಗ್ಗೆ ನಿರ್ಧಾರ ಕೈಗೊಂಡಿದ್ದರೆ ಅದೇ ರೈತರಿಗೆ ನಿಜವಾಗಿ ಸೂಚಿಸುತ್ತಿದ್ದ ಬೆಂಬಲ.
ಹೊಸದಾಗಿ ಜಾರಿಯಾಗಿರುವ ಕಾನೂನುಗಳು ದೇಶದ ಕೃಷಿ ವ್ಯವಸ್ಥೆಯನ್ನು ಬಂಡವಾಳಶಾಹಿಗಳ ಕೈಗೊಪ್ಪಿಸುತ್ತಿವೆ. ಕಾರ್ಪೋರೇಟ್ ಕುಳಗಳು ಹೆಚ್ಚಾಗಿ ರೈತರನ್ನು ಶೋಷಣೆ ಮಾಡುತ್ತವೆ. ಮುಂದೆ ಈಗ ಸಿಗುತ್ತಿರುವ ಕನಿಷ್ಠ ಬೆಂಬಲ ಬೆಲೆಯ ಆಸರೆಯು ಇಲ್ಲದಾಗುತ್ತದೆ.
ಕೆಲವೇ ಕಂಪನಿಗಳು ವ್ಯವಹಾರದ ನಿರ್ಧಾರ ಮಾಡಿ ಬೆಲೆಯನ್ನು ನಿಗದಿಪಡಿಸುತ್ತವೆ. ರೈತರು ಇದನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾದ ಸಂದಿಗ್ದತೆ ಸೃಷ್ಟಿಯಾಗುತ್ತದೆ. ರೈತರಲ್ಲದವರು ಕೃಷಿ ಭೂಮಿಯನ್ನು ಅನಿರ್ಬಂಧಿತವಾಗಿ ಕೊಳ್ಳುವ ಅವಕಾಶ ನೀಡುವುದರಿಂದ ಸಣ್ಣಪುಟ್ಟ ರೈತರು ನಿರ್ನಾಮವಾಗುತ್ತಾರೆ. ಕೃಷಿ ಭೂಮಿ ಕ್ರಮೇಣ ಮಾಯವಾಗಿ ಬಂಡವಾಳ ಶಾಹಿಗಳು ಭೂಮಿ ಖರೀದಿಸಿ ತಮ್ಮಿಷ್ಟಕ್ಕೆ ತಕ್ಕಂತೆ ಅದನ್ನು ಮಾರ್ಪಡಿಸಿಕೊಳ್ಳುತ್ತಾರೆ. ಇಂತಹ ಹಲವು ಹತ್ತು ಆತಂಕದ ಪ್ರಶ್ನೆಗಳು ರೈತ ಹೋರಾಟಗಾರರಲ್ಲಿ ಇವೆ. ಈ ಆತಂಕವನ್ನು ದೂರ ಮಾಡುವ ಪ್ರಯತ್ನಗಳಾಗಬೇಕು. ರೈತರಿಗೆ ಸ್ಪಷ್ಟತೆ ಸಿಗಬೇಕು. ಹೊಸ ಕಾನೂನುಗಳಿಂದ ಏನೆಲ್ಲ ಅಪಾಯಗಳಿವೆ ಎಂಬುದು ಮನದಟ್ಟಾಗಿದ್ದು, ಈ ಅಪಾಯಗಳಿಂದ ರೈತರನ್ನು ರಕ್ಷಿಸುವ ವ್ಯವಸ್ಥೆ ನಿರ್ಮಾಣವಾಗಬೇಕು.
ಇದೆಲ್ಲವೂ ಒಂದು ಕಡೆ ಇರಲಿ. ಕೆಲವೊಮ್ಮೆ ಪ್ರತಿಭಟನೆಗಳು, ಬಂದ್‍ಗಳು ಅವರವರ ಇಚ್ಛಾನುಸಾರ ನಡೆಯುತ್ತವೆ ಎಂದಿಟ್ಟುಕೊಳ್ಳೋಣ. ಆದರೆ ರೈತರ ಸಮಸ್ಯೆಗಳ ವಿಷಯಕ್ಕೆ ಬಂದಾಗ ಯಾರು ಇದನ್ನು ರಾಜಕೀಯಕರಣಗೊಳಿಸದೆ ಅವರ ಸಮಸ್ಯೆ ಇತ್ಯರ್ಥಪಡಿಸುವುದಕ್ಕೆ ಮುಂದಾಗುವುದು ಒಳಿತಲ್ಲವೆ? ಯಾವುದೋ ವಿಷಯಗಳಿಗೆ ಬಂದ್ ಮಾಡಿ ಅಂಗಡಿಗಳನ್ನು ಮುಚ್ಚಿಸುವಷ್ಟರ ಮಟ್ಟಿಗೆ ಪ್ರತಿಭಟನಾಕಾರರು ಇಳಿಯುವಾಗ ರೈತರ ಪರವಾಗಿ ನಡೆಯುವ ಬಂದ್ ಅಥವಾ ಪ್ರತಿಭಟನೆಗಳಿಗೆ ಬೆಂಬಲ ಸೂಚಿಸುವುದು ನಾಗರಿಕರ ಕರ್ತವ್ಯವಾಗಬೇಕಲ್ಲವೆ?
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ