ಸರ್ಕಾರಕ್ಕೆ ತಲೆನೋವಾದ ಉದ್ಯೋಗ ಭರ್ತಿ…!

ಬೆಂಗಳೂರು:

     ಸದ್ಯ ಖಾಲಿ ಇರುವ 2.58 ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಸವಾಲು ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಮುಂದಿದೆ.2023-24ನೇ ಹಣಕಾಸು ವರ್ಷದಲ್ಲಿ ವೇತನಕ್ಕಾಗಿಯೇ ₹ 68 ಸಾವಿರ ಕೋಟಿ ನಿಗದಿ ಮಾಡಲಾಗಿದೆ.

      7ನೇ ವೇತನ ಆಯೋಗ ರಚನೆಯ ನಂತರ ನೀಡಿದ ನೌಕರರ ಮೂಲವೇತನದ ಶೇ 17ರಷ್ಟು ಮಧ್ಯಂತರ ಪರಿಹಾರವೇ ₹ 10 ಸಾವಿರ ಕೋಟಿಯಾಗಿದೆ. ವೇತನ ಆಯೋಗ ಶಿಫಾರಸಿನ ನಂತರ ಹೆಚ್ಚುವರಿ ವೆಚ್ಚ ₹12 ಸಾವಿರ ಕೋಟಯಿಂದ ₹ 18 ಸಾವಿರ ಕೋಟಿವರೆಗೆ ಆಗಬಹುದು ಎಂದು ಅಂದಾಜಿಸಲಾಗಿದೆ. ಅಲ್ಲದೇ, 1.46 ಲಕ್ಷದಷ್ಟಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು, ವಿಶ್ವವಿದ್ಯಾಲಯಗಳ ಬೋಧಕೇತರ ಸಿಬ್ಬಂದಿ ವೇತನಾನುದಾನ ಮತ್ತು ಪಿಂಚಣಿಗೆ ಹಣ ಒದಗಿಸಬೇಕಿದೆ. ಇದೆಲ್ಲವೂ ಸೇರಿ ನೌಕರರ ವೇತನ ವೆಚ್ಚಗಳು ರಾಜ್ಯದ ಆದಾಯದ ಶೇ 30ಕ್ಕೆ ತಲುಪಿದೆ.

    ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮೂಲಕ ನಿರುದ್ಯೋಗಿಗಳನ್ನು ಸಮಾಧಾನ ಪಡಿಸಬೇಕಾದರೆ ಈಗ ವೆಚ್ಚ ಮಾಡುತ್ತಿರುವ ₹68 ಸಾವಿರ ಕೋಟಿ ಜತೆಗೆ, ಅಂದಾಜು ಇನ್ನೂ ₹25 ಸಾವಿರ ಕೋಟಿಯನ್ನು ಹೊಂದಿಸಬೇಕಾಗುತ್ತದೆ ಎಂದು ಆಡಳಿತ ತಜ್ಞರು ವಿವರಿಸುತ್ತಾರೆ.

     ಟಿ.ಎಂ.ವಿಜಯಭಾಸ್ಕರ್ ಅಧ್ಯಕ್ಷ ರಾಜ್ಯದ ಎರಡನೇ ಆಡಳಿತ ಸುಧಾರಣಾ ಆಯೋಗಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಡತಗಳ ವಿಲೇವಾರಿಗೆ ಹಲವು ಹಂತಗಳಿವೆ. ಇದರಿಂದ ಸಿಬ್ಬಂದಿ ವೆಚ್ಚ ಸಮಯ ವ್ಯರ್ಥವಾಗುತ್ತಿದೆ. ಹಂತಗಳನ್ನು 3 ಅಥವಾ 4ಕ್ಕೆ ಮಿತಿಗೊಳಿಸಬೇಕು. ಮರುಹೊಂದಾಣಿಕೆಯ ನಂತರ ಅಗತ್ಯ ಸಿಬ್ಬಂದಿ ನೇಮಕ ಮಾಡಿಕೊಳ್ಳಬೇಕು.

    ಸದ್ಯ, ವಿವಿಧ ಇಲಾಖೆಗಳಲ್ಲಿ ಮಂಜೂರಾದ ಹುದ್ದೆಗಳಲ್ಲಿ ಮೂರನೇ ಒಂದು ಭಾಗದಷ್ಟು ಖಾಲಿ ಇವೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸರ್ಕಾರಗಳು ಆಶ್ವಾಸನೆ ನೀಡುತ್ತಾ ಬಂದಿವೆ. ಹಾಗಿದ್ದರೂ, ಎರಡು ದಶಕಗಳಿಂದ ಅಧಿಕ ಸಂಖ್ಯೆಯ ಹುದ್ದೆಗಳು ಖಾಲಿ ಇದ್ದರೂ ಪೂರ್ಣ ಪ್ರಮಾಣದಲ್ಲಿ ನೇಮಕಾತಿಯೇ ಆಗಿಲ್ಲ. ಕೆಲ ಇಲಾಖೆಗಳಲ್ಲಿ ಖಾಲಿ ಇರುವ ಒಂದಷ್ಟು ಸ್ಥಾನಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಆದರೆ, ಖಾಲಿ ಇರುವ ಸಂಖ್ಯೆಗೆ ಹೋಲಿಸಿದರೆ ಅದು ಅತ್ಯಲ್ಪ.

     ‘ಸಿಬ್ಬಂದಿ ಕೊರತೆಯ ಕಾರಣ ಬಹುತೇಕ ಇಲಾಖೆಗಳಲ್ಲಿ ಕೆಲಸದ ಕಾರ್ಯಕ್ಷಮತೆ, ದಕ್ಷತೆ ಕ್ಷೀಣಿಸಿದೆ. ಸಕಾಲದಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಲು ಸಾಧ್ಯವಾಗುತ್ತಿಲ್ಲ. ಶಿಕ್ಷಣ, ಆರೋಗ್ಯದಂತಹ ಸೇವಾ ಆಧಾರಿತ ವಲಯದಲ್ಲಿ ಈ ಕೊರತೆ ಗಣನೀಯ ಸಮಸ್ಯೆಗಳನ್ನು ಸೃಷ್ಟಿಸಿದೆ’ ಎಂಬ ವಿಶ್ಲೇಷಣೆಯನ್ನು ಆಡಳಿತ ತಜ್ಞರು ಮಾಡಿದ್ದಾರೆ.    ‘2006ರ ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಜಾರಿಗೊಳಿಸಿದ ಜನಪ್ರಿಯ ಯೋಜನೆಗಳಿಗಾಗಿಯೇ ಸರ್ಕಾರಗಳು ಸಾಕಷ್ಟು ಹಣ ಖರ್ಚು ಮಾಡುತ್ತಿವೆ. ಅದಕ್ಕಾಗಿ ಸರಿ ಸುಮಾರು ₹ 1 ಲಕ್ಷ ಕೋಟಿ ಖರ್ಚಾಗುತ್ತಿದೆ. ಇದರ ಜತೆಗೆ ಸಾಮಾನ್ಯ ಮತ್ತು ಆರ್ಥಿಕ ಸೇವೆಗಳ ವೆಚ್ಚವೂ ಹೆಚ್ಚಾಗುತ್ತಿದೆ. ಹೀಗೆ, ರಾಜ್ಯ ಸರ್ಕಾರ 2022-23ನೇ ಸಾಲಿನಲ್ಲಿ ಮಾಡಿರುವ ಒಟ್ಟು ವೆಚ್ಚ ₹ 2.67 ಲಕ್ಷ ಕೋಟಿಯಾಗಿತ್ತು. 2023-24ನೇ ಸಾಲಿನ ವೆಚ್ಚವನ್ನು ₹ 2.79 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ. ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನದಿಂದ ಈ ಮೊತ್ತ ಇನ್ನೂ ₹ 50 ಸಾವಿರ ಕೋಟಿ ಹೆಚ್ಚಳವಾಗುವ ಸಾಧ್ಯತೆ ಇದೆ’ ಎನ್ನುವುದು ರಾಜ್ಯ ಹಣಕಾಸು ತಜ್ಞರ ವಿಶ್ಲೇಷಣೆ.

    ‘ವೆಚ್ಚದಾಯಕ ಆರ್ಥಿಕ ಸವಾಲುಗಳ ಮಧ್ಯೆಯೂ ಸೇವಾಧಾರಿತ ಕಾರ್ಯಗಳು, ಆದಾಯ ಸಂಗ್ರಹದಂತಹ ಸರ್ಕಾರಿ ಕಾರ್ಯಗಳಿಗೆ ಅಗತ್ಯ ಸಿಬ್ಬಂದಿ ನಿಯೋಜನೆಯೂ ಅನಿವಾರ್ಯ. ನೇಮಕಾತಿಗಳ ವಿಳಂಬದ ಕಾರಣ ಬಹಳಷ್ಟು ಪ್ರತಿಭಾವಂತರು ಖಾಸಗಿ ಕ್ಷೇತ್ರಗಳತ್ತ ಸಾಗಿದ್ದಾರೆ.

     ಸರ್ಕಾರಿ ಹುದ್ದೆಗಳಿಗೆ ಪ್ರತಿಭಾವಂತರನ್ನು ಆಕರ್ಷಿಸಲು, ನಿರೋದ್ಯೋಗ ಸಮಸ್ಯೆ ನಿವಾರಿಸಲು, ವಯೋಮಿತಿ ಮೀರುವ ವಿದ್ಯಾವಂತರಿಗೆ ಸೂಕ್ತ ನ್ಯಾಯ ಒದಗಿಸಲು ಸರ್ಕಾರ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಕಾಲಮಿತಿಯ ಒಳಗೆ ನೇಮಕಾತಿ ಪ್ರಕ್ರಿಯೆಗಳನ್ನು ಆರಂಭಿಸಬೇಕು’ ಎನ್ನುತ್ತಾರೆ ಸ್ಪರ್ಧಾ ಪರೀಕ್ಷೆಗಳಿಗಾಗಿ ಸಿದ್ಧತೆ ನಡೆಸಿರುವ ಉದ್ಯೋಗಾಕಾಂಕ್ಷಿ ಸೋಮನಾಥ್.

    ಸಿ.ಎಸ್‌.ಷಡಾಕ್ಷರಿ ಅಧ್ಯಕ್ಷ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ಸಿಬ್ಬಂದಿ ಕೊರತೆಯ ಮಧ್ಯೆಯೂ ಅಭಿವೃದ್ಧಿಯಲ್ಲಿ ರಾಜ್ಯ ದೇಶದಲ್ಲಿ 6ನೇ ಸ್ಥಾನದಲ್ಲಿದೆ. ಕೊಟ್ಟ ಮಾತಿನಂತೆ ಸರ್ಕಾರ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಿದರೆ ಸದಾ ಮೊದಲ ಸ್ಥಾನದಲ್ಲಿರಲಿದೆ. ತ್ವರಿತವಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link