ಬೆಂಗಳೂರು
ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವಂಚಕರ ವಿರುದ್ಧ ಪೋಲೀಸ್ ಕ್ರಮ ಕೈಗೊಳ್ಳಲು ಅನುಮತಿ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರವನ್ನು ಒತ್ತಾಯಿಸಿದೆ. ವಿಧಾನಸೌಧದ ಸಮಿತಿ ಕೊಠಡಿಯಲ್ಲಿಂದು ನಡೆದ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಈ ವಿಷಯ ತಿಳಿಸಿದರು. ಜಿಎಸ್ಟಿ ಕಾಯ್ದೆಯಲ್ಲಿ ಕೆಲ ತಿದ್ದುಪಡಿಗಳನ್ನು ತರಲು ಕೇಂದ್ರ ಮುಂದಾಗಿದ್ದು ಈ ಸಂಬಂಧ ರಾಜ್ಯಕ್ಕಿರುವ ಆತಂಕಗಳ ಕುರಿತು ಕೇಂದ್ರಕ್ಕೆ ವಿವರಿಸಿದ್ದೇವೆ ಎಂದರು.
ಜಿ.ಎಸ್.ಟಿ ಪಾವತಿದಾರರು ವಂಚನೆ ಮಾಡಿರುವುದು ಖಚಿತವಾದರೆ ಅವರ ವಿರುದ್ಧ ವಾಣಿಜ್ಯ ತೆರಿಗೆ ಇಲಾಖೆಯ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ.ಆದರೆ ಇಂತವರ ವಿರುದ್ಧ ಐಪಿಸಿ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಿದ್ದೇವೆ. ಇದೇ ರೀತಿ ವರ್ತಕರು ಜಿಎಸ್ಟಿ ಪಾವತಿಸಿದ್ದಾರೆಯೇ?ಪಾವತಿಸಿದ್ದರೆ ಎಷ್ಟು ಪಾವತಿ ಮಾಡಿದ್ದಾರೆ?ಅಥವಾ ಜಿಎಸ್ಟಿ ಪಾವತಿಯನ್ನೇ ಮಾಡಿಲ್ಲವೇ?ಎಂಬ ಕುರಿತು ಪ್ರತಿಯೊಬ್ಬರಿಗೂ ಮಾಹಿತಿ ಸಿಗುವಂತಾಗಬೇಕು ಎಂಬುದು ರಾಜ್ಯ ಸರ್ಕಾರದ ನಿಲುವು.
ಈಗ ಆರ್.ಟಿ.ಐ ಅಡಿ ಅರ್ಜಿ ಸಲ್ಲಿಸಿ ವರ್ತಕರು ಜಿಎಸ್ಟಿ ಪಾವತಿಸಿದ್ದಾರೆಯೇ?ಇಲ್ಲವೇ?ಪಾವತಿಸಿದ್ದರೆ ಎಷ್ಟು ಪಾವತಿ ಮಾಡಿದ್ದಾರೆ ಎಂಬ ಕುರಿತು ಮಾಹಿತಿ ಪಡೆಯಬಹುದು.ಆದರೆ ವರ್ತಕರ ಜಿಎಸ್ಟಿ ಸಲ್ಲಿಕೆಯ ಕುರಿತು ಬಯಸಿದವರಿಗೆ ತಕ್ಷಣ ಮಾಹಿತಿ ಸಿಗಬೇಕು ಎಂಬುದು ನಮ್ಮ ನಿಲುವು. ಇನ್ನು ಜಿಎಸ್ಟಿ ಪಾವತಿ ಮಾಡುವುದೂ ಸೇರಿದಂತೆ ಹಲವು ವಿಷಯಗಳು ಜಿಎಸ್ಟಿಯ ನಿಯಮಾವಳಿಯ ವ್ಯಾಪ್ತಿಯಲ್ಲಿವೆ.ಆದರೆ ಇದು ಕಾಯ್ದೆಯ ರೂಪದಲ್ಲಿರಬೇಕು ಎಂಬುದು ನಮ್ಮ ನಿಲುವು ಎಂದು ಸ್ಪಷ್ಟಪಡಿಸಿದರು.
ಹಂಪಿಯಲ್ಲಿ ಶೃಂಗಸಭೆ
ಜುಲೈ 13 ರಿಂದ 16 ರವರೆಗೆ ಹಂಪಿಯಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು ಜಗತ್ತಿನ ಮೂವತ್ಮೂರು ದೇಶಗಳ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಇದೇ ಸಂದರ್ಭದಲ್ಲಿ ಅವರು ವಿವರಿಸಿದರು.
ಮೂವತ್ಮೂರು ದೇಶಗಳ ಮುಖ್ಯಸ್ಥರ ಪ್ರಧಾನ ಸಲಹೆಗಾರರು ಮತ್ತು ಅಧಿಕಾರಿಗಳು ಸೇರಿದಂತೆ ಹಲ ಪ್ರಮುಖರು ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿದ್ದು,ಈ ಮಹತ್ವದ ಸಭೆಯ ಸಿದ್ಧತೆಗಾಗಿ 47.66 ಕೋಟಿ ರೂಪಾಯಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದರು.
ಈ ಕುರಿತು ಇಂದು ನಡೆದ ಚರ್ಚೆಯ ಸಂದರ್ಭದಲ್ಲಿ ಪ್ರವಾಸೋದ್ಯಮ,ಲೋಕೋಪಯೋಗಿ ಮತ್ತು ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕನ್ನಡ-ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳು ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.
ಜಿ-20 ಶೃಂಗಸಭೆ ನಡೆಯಲು ಅಗತ್ಯವಾದ ಪೂರ್ವಭಾವಿ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ವಿವಿಧ ಇಲಾಖೆಯ ಪ್ರಮುಖರಿಗೆ ಸೂಚಿಸಲಾಗಿದ್ದು,ಶೃಂಗಸಭೆಗೆ ಆಗಮಿಸುವ ಪ್ರಮುಖರಿಗೆ ಹಂಪಿ ಸೇರಿದಂತೆ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಲವು ಸ್ಥಳಗಳನ್ನು ತೋರಿಸಲಾಗುವುದು ಎಂದರು.
ಈ ಅಂತಾರಾಷ್ಟ್ರೀ ಯ ಮಹತ್ವದ ಶೃಂಗಸಭೆಯನ್ನು ಯಶಸ್ವಿಗೊಳಿಸಲು ನಾಳೆಯಿಂದ ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ