ದಾವಣಗೆರೆ
ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಾವು ದಿನದಿಂದ ಏರುತ್ತಲೇ ಇದೆ. ಹಾಗೆಯೇ ಈ ಸಮಯದಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಲ್ಲೆಡೆ ಅಲರ್ಟ್ ಆಗಿದ್ದು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಹೀಗೆ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 9,96,542 ರೂಪಾಯಿ ಮೌಲ್ಯದ ಅಕ್ರಮ ಮದ್ಯ, ಬಿಯರ್ ಹಾಗೂ ದ್ವಿಚಕ್ರ ವಾಹನವನ್ನು ಅಬಕಾರಿ ಇಲಾಖೆ ಜಪ್ತಿ ಪಡಿಸಿಕೊಂಡಿದೆ.
ಅಲ್ಲದೇ ಈ ಸಂಬಂಧ ಒಟ್ಟಾರೆ 101 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತರು ಮಾಹಿತಿ ನೀಡಿದ್ದಾರೆ. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ಸಲುವಾಗಿ ಜಾರಿ ಮತ್ತು ತನಿಖಾ ಕಾರ್ಯಗಳನ್ನು ಚುರುಕುಗೊಳಿಸಿ ದಾಳಿಯನ್ನು ನಡೆಸಲಾಗಿದೆ.
ಮಾರ್ಚ್ 29ರಿಂದ ಏಪ್ರಿಲ್ 9ರವರೆಗೆ 556.335 ಲೀಟರ್ ಮದ್ಯ, 70.870 ಲೀಟರ್ ಬಿಯರ್ ಹಾಗೂ 20 ದ್ವಿಚಕ್ರ ವಾಹನಗಳು ಸೇರಿದಂತೆ ಒಟ್ಟು 9,96,542 ರೂಪಾಯಿ ಮೊತ್ತದ ದಾಸ್ತಾನನ್ನು ವಶಪಡಿಸಿಕೊಳ್ಳಲಾಗಿದೆ.
ಮದ್ಯ ಸಾಗಾಣಿಕೆ, ದಾಸ್ತಾನು ಕುರಿತಂತೆ 27 ಘೋರ ಮೊಕದ್ದಮೆಗಳು, ಸಾರ್ವಜನಿಕ ಸ್ಥಳಗಳಲ್ಲಿ ಮದ್ಯ ಮಾರಾಟ ಕುರಿತು 55 ಮೊಕದ್ದಮೆಗಳು ಹಾಗೂ ಮದ್ಯದಂಗಡಿಗಳಲ್ಲಿನ ಸನ್ನದು ಷರತ್ತುಗಳ ಉಲ್ಲಂಘನೆಗಾಗಿ 19 ಬಿ.ಎಲ್.ಸಿ ಮೊಕದ್ದಮೆಗಳನ್ನು ಒಳಗೊಂಡಂತೆ ಒಟ್ಟಾರೆಯಾಗಿ 101 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.
ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಇನ್ನು ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಯಾವುದೇ ದೂರುಗಳು, ಚುನಾವಣಾ ಅಕ್ರಮಗಳು ಕಂಡುಬದಲ್ಲಿ ಫೋಟೋ ತೆಗೆದು ಸಿ-ವಿಜಲ್ ದೂರ ಆ್ಯಪ್‌ನಲ್ಲಿ ಅಪ್‍ಲೋಡ್ ಮಾಡಬಹುದು. ಚುನಾವಣಾ ಆಯೋಗ ಈ ದೂರುಗಳ ಕುರಿತಂತೆ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ದಾವಣಗರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ಅವರು ಇತ್ತೀಚೆಗಷ್ಟೇ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ