ಕಲಿಯೋಕೆ ಕೋಟಿ ಭಾಷೆ; ಆಡೋಕೆ ಒಂದೇ ಭಾಷೆ – ಕನ್ನಡ

0
61

       ಕನ್ನಡ ಮಾಧ್ಯಮದಲ್ಲಿಯೇ ಓದಿದ ನಮ್ಮೆಲ್ಲರ ಮನಸಿನ ಭಾಷೆ ಕನ್ನಡವಾಗಿದೆ. ನಮ್ಮ ಮನೆಯ ಮಾತೃಭಾಷೆ ಕನ್ನಡವಾಗಿದ್ದರಿಂದ ಮಕ್ಕಳೂ ಕೂಡ ಕನ್ನಡವನ್ನು ಚೆನ್ನಾಗಿ ಮಾತನಾಡುತ್ತಾರೆ. ಆದರೆ ದುರಂತವೆಂದರೆ ಆ ಮಕ್ಕಳ ಮನಸಿನ ಭಾಷೆ ಮಾತ್ರ ಇಂಗ್ಲಿಷ್ ಆಗಿದೆ! ನಾವು ಅವರಿಗೆ ಕನ್ನಡದಲ್ಲಿ ಹೇಳಿದರೂ, ಮಾತನಾಡಿಸಿದರೂ ಅದನ್ನು ಅವರ ಮನಸಿನ ಭಾಷೆ ಇಂಗ್ಲಿಷಿನಲ್ಲಿ ಅರ್ಥಮಾಡಿಕೊಂಡು ಕನ್ನಡದಲ್ಲಿ ಉತ್ತರ ನೀಡುತ್ತಾರೆ ಎಂಬುದು ಬಹಳಷ್ಟು ಜನರ ಅಳಲು. ಏಕೆಂದರೆ ಅವರ ಮಕ್ಕಳು ಇಂಗ್ಲಿಷ್‌ಕಾನ್ವೆಂಟ್‌ನಲ್ಲಿ ಓದುತ್ತಿದ್ದಾರೆ. ಮಕ್ಕಳ ಮುಂದಿನ ಭವಿಷ್ಯಕ್ಕೆ ಇಂಗ್ಲಿಷ್ ಬೇಕೆ ಬೇಕು ಎಂದು ಮಕ್ಕಳ ಮನಸಿನ ಭಾಷೆಯನ್ನು ಅರ್ಥಮಾಡಿಕೊಂಡ ಬಹಳಷ್ಟು ಹೆತ್ತವರ ಸೂಕ್ಷ್ಮಸಂವೇದನೆಯ ನೋವಿನ ಮಾತು.

ಕನ್ನಡದ ಅಡಿಪಾಯ:

Related image

      ಮನಸಿನ ಭಾಷೆ ಅಥವಾ ಯೋಚನಾ ಭಾಷೆ, ಇದನ್ನು ಇಂಗ್ಲಿಷ್‌ನಲ್ಲಿ ‘ಥಿಂಕಿಂಗ್ ಲಾಂಗ್ವೇಜ್’ ಅಂತ ಸರಳವಾಗಿ ಹೇಳಬಹುದಷ್ಟೇ. ಸಾಮಾನ್ಯವಾಗಿ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದವರು, ಮಾತೃಭಾಷೆ ಕನ್ನಡವಾಗಿದ್ದವರು, ಮೊದಲು ಕನ್ನಡವನ್ನು ತುಂಬಾ ಸ್ಪಷ್ಟವಾಗಿ, ಆಳವಾಗಿ ಕಲಿಯುತ್ತಾರೆ. ಹಾಗಾಗಿ ಕನ್ನಡ ಭಾಷೆಯ ಎಲ್ಲ ಅಕ್ಷರಗಳು ಅವರ ತಲೆಯಲ್ಲಿ ಹೊಕ್ಕು ಬಿಟ್ಟಿರುತ್ತವೆ. ಸುತ್ತಲಿನ ಕನ್ನಡದ ವಾತಾವರಣ ಕೂಡ ಅವರ ಮನಸ್ಸಿನ ಮೇಲೆ ಗಾಢವಾಗಿ ಬೀರಿರುತ್ತೆ.ಮನಸ್ಸಿನಲ್ಲಿ ಕನ್ನಡದ ಅಡಿಪಾಯ ಸರಿಯಾಗಿ ಬಿದ್ದಮೇಲೆ ಇಂಗ್ಲಿಷ್‌ಕಲಿಯಲಿಕ್ಕೆ ಪ್ರಾರಂಭಿ ಸುತ್ತಾರೆ. ಸಾಧಾರಣವಾಗಿ ಇಂಗ್ಲಿಷ್‌ನ್ನು ಕಲಿತ ಮೇಲೆ ಪುಸ್ತಕದಲ್ಲಿನ ಇಂಗ್ಲಿಷ್ ಪದಗಳು, ವಾಕ್ಯಗಳು ಮತ್ತು ನಾಮ ಪದ ಗಳನ್ನು ಓದಿದರೂ ಮೊದಲು ಅದನ್ನು ಮನಸ್ಸಿನಲ್ಲಿ ಕನ್ನಡಕ್ಕೆ ಭಾಷಾಂತರ ಮಾಡಿಕೊಂಡು ಆಂಗ್ಲ ಭಾಷೆಯನ್ನು ಅರ್ಥಮಾಡಿಕೊಳ್ಳುತ್ತೇವೆ. ಹಾಗಾಗಿ ಇಂಗ್ಲಿಷ್ ನಮಗೆ ಸುಲಭವಾಗಿ ಅರ್ಥವಾಗಿ ಬಿಡುತ್ತದೆ.

ಮನಸಿನ ಭಾಷೆಯ ಭಾಷಾಂತರ:Related image

      ಮಾರ್ಕೆಟ್‌ನಲ್ಲಿನ ಹಣ್ಣಿನ ಅಂಗಡಿಯಲ್ಲಿ ಕಣ್ಣಿಗೆ ಕಾಣುವ ಆಪಲ್ ನಮ್ಮ ಮನಸಿನ ಭಾಷೆಯಲ್ಲಿ ಸೇಬು ಎಂದು ಭಾಷಾಂತರಿಸಿಕೊಂಡು ಅರ್ಥಮಾಡಿಕೊಳ್ಳುತ್ತದೆ. ನಮ್ಮ ಎದುರಿಗೆ ಯಾರೇ ಇಂಗ್ಲಿಷಿನಲ್ಲಿ ಮಾತನಾಡಿದರೂ, ನಮ್ಮ ಮನಸ್ಸು ಅದನ್ನು ಕನ್ನಡಕ್ಕೆ ಭಾಷಾಂತರಿಸಿ ಅರ್ಥಮಾಡಿಕೊಳ್ಳುತ್ತದೆ, ಆಮೇಲೆ ನಾವು ಅದಕ್ಕೆ ಉತ್ತರವಾಗಿ ಇಂಗ್ಲಿಷ್‌ನಲ್ಲೇ ಪ್ರತಿಕ್ರಿಯಿಸುತ್ತೇವೆ. ಹೀಗೆ ನಮ್ಮ ಮನಸಿನ ಭಾಷೆ ಇಲ್ಲವೇ ಯೋಚನಾ ಭಾಷೆ ಈ ರೀತಿಯಾಗಿ ಕೆಲಸ ಮಾಡುತ್ತದೆ.ಇಂದಿಗೂ ಕನ್ನಡ ಭಾಷೆಯನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಅನೇಕರಿಗೆ ಇದರ ಸ್ಪಷ್ಟತೆ ಕಣ್ಣಿಗೆ ಕಟ್ಟುತ್ತದೆ.

      ಆಂಗ್ಲ ಸಾಹಿತ್ಯವನ್ನು ಚೆನ್ನಾಗಿ ಅರ್ಥಮಾಡಿಕೊಂಡವರು, ಓದಿದವರು, ಕಾರ್ಪೋರೇಟ್ ಜಗತ್ತಿನಲ್ಲಿ ಕೆಲಸ ಮಾಡುವವರು ವಿಶೇಷವಾಗಿ ಮನಸ್ಸಿನ ಭಾಷೆ ಕನ್ನಡ ಆಗಿದ್ದವರಿಗೆ ಇದು ದಿನನಿತ್ಯದ ಪರಿಪಾಠವಾಗಿರುತ್ತದೆ. ನಾವು ಯಾವುದೇ ಭಾಷೆಯನ್ನು ಕಲಿಯುವಾಗಲೂ ಮನಸಿನ ಭಾಷೆಯ ಭಾಷಾಂತರ ಆದಾಗಲೇ ಮಾತ್ರ ಅನೇಕ ಭಾಷೆಗಳನ್ನು ನಾವು ಅರ್ಥಮಾಡಿಕೊಳ್ಳಬಹುದು, ಕಲಿಯಬಹುದು. ಹೀಗೆ ಕರ್ನಾಟಕದವನಿಗೆ ಕನ್ನಡ ಮನಸಿನ ಭಾಷೆಯಾದರೆ, ತಮಿಳು, ಮಲಯಾಳಿ, ಅಸ್ಸಾಮಿಯವನಿಗೆ ಆತನ ಮಾತೃಭಾಷೆಯೇ ಯೋಚನಾ ಭಾಷೆಯಾಗಿರುತ್ತದೆ. ಮುಖ್ಯವಾಗಿ ಆತ ಮಾತೃಭಾಷೆಯಲ್ಲಿ ಮೂಲ ಶಿಕ್ಷಣ ಪಡೆದಿರಬೇಕು.

ಇಂಗ್ಲಿಷ್‌ನ ಅತಿಯಾದ ಹೇರಿಕೆ :

Related image

      ಇತ್ತೀಚಿನ ದಿನಗಳಲ್ಲಿ ಮಕ್ಕಳ ಮನಸಿನ ಭಾಷೆ ಬದಲಾಗುತ್ತಿದೆ. ಕನ್ನಡ, ತಮಿಳು, ಮರಾಠಿ ಇನ್ನೂ ಮುಂತಾದ ನಮ್ಮ ದೇಶದ ಪ್ರಾದೇಶಿಕ ಜನರ ಮನಸಿನ ಭಾಷೆ ಕೂಡ ಇಂಗ್ಲಿಷ್‌ ಆಗುತ್ತಿದೆ. ಇದಕ್ಕೆ ಕಾರಣ ಇಂಗ್ಲಿಷ್ ಭಾಷೆಯ ಅತಿಯಾದ ಹೇರಿಕೆ. ಇಂಗ್ಲಿಷ್ ಕಲಿಯದೇ ಇದ್ದರೇ ಮಕ್ಕಳಿಗೆ ಭವಿಷ್ಯವೇ ಇಲ್ಲ ಅನ್ನುವ ಕೆಟ್ಟ ನಂಬಿಕೆ ಎಲ್ಲೆಡೆ ತಳವೂರಿದೆ. ಇಂದಿಗೂ ಜಪಾನಿಗರು, ಚೀನಿಯರು, ಫ್ರಾನ್ಸ್‌ರು ತಮ್ಮ ತಮ್ಮ ಮಾತೃಭಾಷೆಯಲ್ಲೇ ಎಲ್ಲವನ್ನು ಕಲಿಯುತ್ತಿದ್ದಾರೆ. ಜಗತ್ತನ್ನು ಅರಿಯುತ್ತಿದ್ದಾರೆ. ಅವರಿಗೆ ಇಂಗ್ಲಿಷ್ ಬೇಕೆ ಬೇಕು ಅನ್ನುವ ಅನಿವಾರ್ಯತೆ ಕಾಡುತ್ತಿಲ್ಲ. ಹೀಗಿದ್ದರೂ ಇಂಗ್ಲಿಷನ್ನು ಕಲಿಯದೇ ಜಗತ್ತಿನಲ್ಲಿ ಅವರು ಸಾಧನೆ ಮಾಡುತ್ತಿಲ್ಲವೇ?

      ಇಂದಿಗೂ ನೀವು ಬಳಸುವ ನೋಕಿಯಾ ಕಂಪನಿಯ ಮೊಬೈಲ್‌ನಲ್ಲಿ, ಎಲೆಕ್ಟ್ರಾನಿಕ್ ಉತ್ಪನ್ನಗಳಲ್ಲಿ ಚೀನಿಯರ ಹಾಗೂ ಜಪಾನ್ ಭಾಷೆಯನ್ನು ಕಾಣಬಹುದು.ಅವರು ತಮ್ಮ ರಾಷ್ಟ್ರ ಭಾಷೆಗೆ ಕೊಟ್ಟ ಪ್ರಾಮುಖ್ಯತೆಯನ್ನು ನಾವು ನಮ್ಮ ಹಿಂದಿ ಭಾಷೆಗೆ ನೀಡಿಲ್ಲ. ತಮ್ಮ ಮಕ್ಕಳನ್ನು ಒಳ್ಳೆಯ ಇಂಗ್ಲಿಷ್ ಕಲಿಸುವ ಕಾನ್ವೆಂಟ್‌ಗೆ ಸೇರಿಸಬೇಕು ಅನ್ನುವ ಗುಂಗಿನಲ್ಲಿ ಮಕ್ಕಳನ್ನು ಕ್ರೈಸ್ತಮಿಷನರಿಗಳು ನಡೆಸುವ ಕಾನ್ವೆಂಟ್‌ಗಳು, ಇಲ್ಲವೇ ಇವುಗಳಿಂದ ಪ್ರೇರೇಪಿತವಾದಂತಹ ಸ್ಕೂಲ್‌ಗಳಲ್ಲಿ ಮಕ್ಕಳನ್ನು ಸೇರಿಸುತ್ತಾರೆ.

      ಕ್ಲಾಸಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುವ ಶಾಲೆಗಳು, ಅತಿಯಾಗಿ ಇಂಗ್ಲಿಷ್ ಭಾಷೆಯನ್ನು ಎಳೆಯ ಮಕ್ಕಳ ಮನಸ್ಸಿನ ಮೇಲೆ ಹೇರುತ್ತಾರೆ. ಹೀಗಾಗಿ ದಂಡ, ಶಿಕ್ಷೆ ಅನ್ನುವ ಹೆದರಿಕೆಯಲ್ಲಿ ಮಕ್ಕಳು ಕೂಡ ಸಂಪೂರ್ಣವಾಗಿ ಇಂಗ್ಲಿಷ್‌ನಲ್ಲಿ ಚಿಂತಿಸಲು, ಬರೆಯಲು, ಓದಲು ಪ್ರಾರಂಭಿಸುತ್ತಾರೆ. ಹೀಗೆ ಮಕ್ಕಳ ಮನಸ್ಸಿನ ಭಾಷೆಯಲ್ಲಿ ಇಂಗ್ಲಿಷ್ ಆವರಿಸಿಕೊಳ್ಳುತ್ತದೆ. ಅವರವರ ಮಾತೃಭಾಷೆಯ ಮೇಲಿನ ಮೋಹ ಕಡಿಮೆಯಾಗುತ್ತದೆ.

      ಮನೆಯಲ್ಲಿ ಅಮ್ಮ-ಅಪ್ಪ ಏನೇ ಹೇಳಿದರೂ, ಕಾನ್ವೆಂಟ್‌ನಲ್ಲಿ ಓದುವ ಮಗು ಮೊದಲು ಮನೆಭಾಷೆಯಲ್ಲಿ ಕೇಳಿಸಿಕೊಂಡು ಇಂಗ್ಲಿಷ್‌ನಲ್ಲಿ ಅರ್ಥಮಾಡಿಕೊಳ್ಳುತ್ತದೆ.ಅಮ್ಮ ‘ಸಕ್ಕರೆ ತಗೊಂಡು ಬಾ’ ಅಂತ ಮಗುವಿಗೆ ಹೇಳಿದರೆ, ‘ಏನು ಶುಗರ್ ಅಲ್ವಾ?’ ಅಂತ ಕೇಳಲಾರಂಭಿಸುತ್ತವೆ. ನಾವು ಕನ್ನಡದಲ್ಲಿ ಏನೇ ಹೇಳಿದರೂ, ಅದು ಮಕ್ಕಳ ಮನಸ್ಸಿಗೆ ಅರ್ಥವಾಗುವುದು ಇಂಗ್ಲಿಷಲ್ಲಿ. ಹೀಗೆ ಮಕ್ಕಳು ಯಾವುದನ್ನೇ ನೋಡಿದರೂ, ಏನೇ ಅರ್ಥ ಮಾಡಿಕೊಳ್ಳಬೇಕಾದರೂ ಅದನ್ನು ಕನ್ನಡದಿಂದ ಇಂಗ್ಲಿಷಿಗೆ ಭಾಷಾಂತರಿಸಿ ಅರ್ಥ ಮಾಡಿಕೊಳ್ಳುತ್ತಾರೆ. ಇದು ಇಂದಿನ ಮಕ್ಕಳ ಮನಸ್ಸಿನಲ್ಲಾಗುತ್ತಿರುವ ದೊಡ್ಡ ಪರಿಣಾಮ. ತಮಿಳು,ಕೇರಳದವರಿಗಿಂತ ಕನ್ನಡದಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿದೆ ಅಂತ ಅಂದಾಜಿಸಬಹುದು. ಹೀಗೆ ಮನಸಿನ ಭಾಷೆ ಮತ್ತು ಮಾತೃಭಾಷೆಯ ನಡುವೆ ಸಣ್ಣ ತಿಕ್ಕಾಟ ನಡೆಯುತ್ತಲೇ ಇದೆ.

ಇಂಗ್ಲಿಷ್ ವ್ಯವಹಾರಿಕ ಭಾಷೆಯಾಗಲಿ: ಮನಸಿನ ಭಾಷೆಕನ್ನಡವಾಗಿರಲಿ:

Related image

      ಇಂಗ್ಲಿಷ್ ಕೇವಲ ಕಲಿಕಾ ಭಾಷೆ, ವ್ಯವಹಾರಿಕ ಭಾಷೆ ಅಂತ ಮಾತ್ರ ಹೇಳಬಹುದು. ಇಂಗ್ಲಿಷ್ ನಮ್ಮ ಮಾತೃಭಾಷೆಯಾಗಲು ನಾವೇನು ಅಮೇರಿಕನ್ನರೇ ಇಲ್ಲವೇ ಇಂಗ್ಲೆಂಡಿನವರೇ? ನಮಗೆ ನೋವಾದಾಗ ‘ಅಯ್ಯೋ…ಅಮ್ಮ..!’ ಅಂತ ಹೇಳುತ್ತೇವೆಯೇ ಹೊರತು ‘ಓ ಮೈ ಗಾಡ್’ ಅಂತ ನಮ್ಮ ಬಾಯಿಗೆ ಮೊದಲು ಬರುವುದಿಲ್ಲ. ಮಾತೃಭಾಷೆ ಅನ್ನುವುದು ಹೃದಯದ ಭಾಷೆ. ಆ ಭಾಷೆಯಲ್ಲಿ ನಮ್ಮ ನೋವಿದೆ, ಖುಷಿಯಿದೆ, ನಮ್ಮ ಜೀವವೇ ಆ ಮಾತಿನಲ್ಲಿ ಅಡಗಿ ಕುಳಿತಿರುತ್ತದೆ. ಹೀಗಿರುವಾಗ ಇಂಗ್ಲಿಷ್ ನಮ್ಮ ಮಾತೃಭಾಷೆಯಾಗುವ ಅರ್ಹತೆ ಇದೆಯೇ?

      ಇಂಗ್ಲಿಷಲ್ಲಿ ಒಮ್ಮೆ ಚೆನ್ನಾಗಿ ಓದಲು, ಬರೆಯಲು, ವ್ಯವಹರಿಸಲು, ದೇಶ ಸುತ್ತಲು ಕಲಿತ ಮೇಲೆ ಅದರ ಸ್ಥಾನವನ್ನು ನಾವು ಅರಿತು ಅದನ್ನು ಎಲ್ಲಿ ಇಡಬೇಕೋ ಅಲ್ಲಿಯೇ ಇಡಬೇಕು.ಅದೇ ತಟ್ಟೆ ತುಂಬುವ ಅನ್ನವಾಗಬಾರದು. ಇಂದು ಹೆಚ್ಚಿನ ಕನ್ನಡಿಗರು ತಮ್ಮ ತಮ್ಮ ಮಾತೃಭಾಷೆ ಕನ್ನಡವನ್ನು ಮರೆಯುತ್ತಿದ್ದಾರೆ. ಅವರವರ ಮನಸಿನ ಭಾಷೆಯಾವುದೇ ಆಗಲಿ, ಮಾತೃಭಾಷೆಯಾದ ಕನ್ನಡವನ್ನು ಮಾತ್ರ ಖಂಡಿತ ಎಂದಿಗೂ ಮರೆಯಬಾರದು. ಇಂಗ್ಲಿಷ್ ಭಾಷೆಗಿಂತಲೂ ಶ್ರೆಮಂತ ಹಾಗೂ ಹಿನ್ನಲೆ, ಸಂಸ್ಕೃತಿಯನ್ನು ನಮ್ಮ ಭಾರತೀಯ ಭಾಷೆಗಳು ಹೊಂದಿವೆ.

      ನಮ್ಮ ನಮ್ಮ ಭಾಷೆಯಲ್ಲಿ ಮಾತನಾಡುವ, ಹಂಚಿಕೊಳ್ಳುವ ಖುಷಿ, ನೋವು ಇಂಗ್ಲಿಷಿನಲ್ಲಿಲ್ಲ. ನೀವು ಇದುವರೆಗೂ ಹೇಳಿರುವುದು ತಪ್ಪು, ಇಂಗ್ಲಿಷ್ ಭಾಷೆಯೇ ಸರ್ವಶ್ರೇಷ್ಠ ಅಂತ ವಾದಿಸುವವರೂ ಕೂಡ ಇರಬಹುದು. ಆದರೆ ಬೆಂಗಳೂರಿಂತಹ ನಗರ ಪ್ರದೇಶಗಳಲ್ಲಿ ವಾಸಿಸುವ ಪ್ರತಿ ಹತ್ತು ಕನ್ನಡ ಮನೆಗಳಲ್ಲಿ ಕಾಣುವ ಈ ರೀತಿಯ ಕನ್ನಡ ಅನಾರೋಗ್ಯ ವಾತಾವರಣವನ್ನು ಮೊದಲು ನಮ್ಮ ಮನೆಯಲ್ಲಿ ಇಲ್ಲದಂತೆ ಮಾಡಿಕೊಂಡಾಗ ಮಾತ್ರ ಮುಂದಿನ ಪೀಳಿಗೆಯ ನಡುವೆ ಒಳ್ಳೆಯ ಕನ್ನಡ ಮನಸ್ಸುಗಳನ್ನು ಕಾಣಿಕೆಯಾಗಿ ನಮ್ಮ ನಾಡಿಗೆ ನೀಡಬಹುದು.

–  ಲಕ್ಷ್ಮೀಕಾಂತ್  ಎಲ್.ವಿ.

ಮೊ.ಸಂ: 9945803434

LEAVE A REPLY

Please enter your comment!
Please enter your name here