ವಾಷಿಂಗ್ಟನ್ :
ಇರಾನ್ ಮೇಲಿನ ನಿರ್ಬಂಧ ನವೆಂಬರ್ 4ರಿಂದ ಜಾರಿಗೆ ಬರುತ್ತಿದ್ದು, ಅಷ್ಟರೊಳಗೆ ಎಲ್ಲ ದೇಶಗಳು ಅಲ್ಲಿಂದ ತೈಲ ಖರೀದಿ ಪ್ರಮಾಣವನ್ನು ಸಂಪೂರ್ಣ ಸ್ಥಗಿತಗೊಳಿಸಬೇಕು. ಇದನ್ನು ಪಾಲಿಸದ ದೇಶಗಳನ್ನು ಅಮೆರಿಕ ನೋಡಿಕೊಳ್ಳಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
ಇರಾನ್‌ನಿಂದ ಕಚ್ಚಾ ತೈಲ ಖರೀದಿಗೆ ತನ್ನ ಸಂಸ್ಥೆಗಳು ವ್ಯವಹಾರ ನಡೆಸಿವೆ ಎಂದು ಭಾರತ ಪ್ರಕಟಿಸಿದ ಬೆನ್ನಲ್ಲೇ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.
ಇರಾನ್ ಮೇಲೆ ಅಮೆರಿಕ ನಿರ್ಬಂಧ ವಿಧಿಸುತ್ತಿದ್ದು, ಅದರೊಂದಿಗಿನ ಎಲ್ಲ ವ್ಯವಹಾರಗಳನ್ನು ಕಡಿತಗೊಳಿಸುವಂತೆ ಅಮೆರಿಕ ಸೂಚಿಸಿದೆ. ಆದರೆ, ತಮ್ಮ ತೈಲ ಆಮದಿಗೆ ಇರಾನ್‌ಅನ್ನು ಹೆಚ್ಚಾಗಿ ನೆಚ್ಚಿಕೊಂಡಿರುವ ಭಾರತ, ಅಮೆರಿಕದ ಎಚ್ಚರಿಕೆಯನ್ನೂ ಮೀರಿ ತೈಲ ಖರೀದಿ ವ್ಯವಹಾರ ಮುಂದುವರಿಸಲು ಸಿದ್ಧತೆ ನಡೆಸಿದೆ.
ಭಾರತಕ್ಕೆ ಪರ್ಯಾಯ ಮಾರ್ಗದ ಮೂಲಕ ತೈಲ ಒದಗಿಸಲು ಏರ್ಪಾಡು ಮಾಡುವುದಾಗಿ ಅಮರಿಕ ಭರವಸೆ ನೀಡಿದ್ದರೂ ಅದು ಕಾರ್ಯಗತವಾಗುವುದು ತಡವಾಗಬಹುದು. ಇದರಿಂದ ಭಾರತ ತೀವ್ರ ತೈಲ ಕೊರತೆಗೆ ಒಳಗಾಗಲಿದೆ. ಇರಾನ್ ಜತೆ ವಹಿವಾಟು ಮುಂದುವರಿಸಿದರೆ ಭಾರತದ ಮೇಲೆಯೂ ಅಮೆರಿಕ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುವ ಸಾಧ್ಯತೆ ಇದೆ.
ಭಾರತವು ನವೆಂಬರ್ 4ರಿಂದ ಇರಾನ್‌ನ ತೈಲವನ್ನು ಖರೀದಿಸುವುದು ಹಾಗೂ ರಷ್ಯಾದಿಂದ ಎಸ್-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯನ್ನು ಕೊಳ್ಳಲು ಮುಂದಾಗಿರುವುದರಿಂದ ‘ಉಪಯೋಗವಿಲ್ಲ’ ಎಂದು ಅಮೆರಿಕ ವ್ಯಾಖ್ಯಾನಿಸಿದೆ. ಹಾಗೂ ಈ ಬೆಳವಣಿಗೆಯನ್ನು ‘ಎಚ್ಚರಿಕೆಯಿಂದ’ ಪರಿಶೀಲಿಸುವುದಾಗಿ ಟ್ರಂಪ್ ಸರಕಾರ ಹೇಳಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ