ನವದೆಹಲಿ :
ದೇಶಾದ್ಯಂತ ರೈತ ಹೋರಾಟದ ಕಿಚ್ಚು ಹೆಚ್ಚಾಗುತ್ತಿದ್ದಂತೆಯೇ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರೈತರೊಂದಿಗೆ ಸಭೆ ನಡೆಸಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಮಸೂದೆಗಳನ್ನು ವಿರೋಧಿಸಿ ದೇಶದ ತರು ಕರೆ ಕೊಟ್ಟಿರುವ “ದೆಹಲಿ ಚಲೋ” ಹೋರಾಟ ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದೆ. ಈ ನಡುವೆ ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಸಹ ಯಶಸ್ವಿಯಾಗಿದೆ.
ಪ್ರತಿಭಟನೆಯ ನಡುವೆಯೂ ಸರ್ಕಾರ ಮತ್ತು ರೈತ ಹೋರಾಟಗಾರರ ನಡುವೆ ಈವರೆಗೆ ಐದು ಬಾರಿ ಮಾತುಕತೆ ನಡೆದಿದೆ. ಆದರೆ, ಈವರೆಗೆ ಯಾವ ಮಾತುಕತೆಯೂ ಫಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಸ್ವತಃ ಗೃಹ ಸಚಿವ ಅಮಿತ್ ಶಾ ಇಂದು ಸಂಜೆ ರೈತರನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ.
ಅಮಿತ್ ಷಾ ಅವರಿಂದ ಕರೆ ಬಂದಿದ್ದು, ಡಿಸೆಂಬರ್ 8ರ ಸಂಜೆ 7ಕ್ಕೆ ಸಭೆ ಸೇರಲು ಕೋರಲಾಗಿದೆ ಎಂದು ರೈತ ಮುಖಂಡ ರಾಕೇಶ್ ಟಿಕೈಟ್ ಅವರು ತಿಳಿಸಿದ್ದಾರೆ. ವಿವಿಧ ರೈತ ಸಂಘಟನೆಗಳ ಮುಖಂಡರು ಈ ಸಭೆಯಲ್ಲಿ ಭಾಗವಹಿಸುವುದಾಗಿ ಅವರು ಮಾಹಿತಿ ನೀಡಿದ್ದಾರೆ.
ಭಾರತ್ ಬಂದ್ ಬೆನ್ನಿಗೆ ಸಚಿವ ಅಮಿತ್ ಶಾ ಅವರ ಈ ನಡೆ ಇದೀಗ ಸಾಕಷ್ಟು ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ