ಕೊರಟಗೆರೆ :
ಯುಗಾದಿ ಹಬ್ಬಕ್ಕಾಗಿ ದಿನಸಿ ಕೊಳ್ಳಲು ಅಣ್ಣ-ತಮ್ಮಂದಿರು ಮಾರುಕಟ್ಟೆಗೆ ಬರುತ್ತಿರುವಾಗ ದ್ವಿಚಕ್ರ ವಾಹನ ಹಾಗೂ ಆಟೋದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ತಮ್ಮನು ಸ್ಥಳದಲ್ಲೇ ಮೃತಪಟ್ಟು ಅಣ್ಣನಿಗೆ ಗಂಭೀರ ಗಾಯಗಳಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಘಟನೆ ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಕೊರಟಗೆರೆ ತಾಲ್ಲೂಕಿನ ಇರಕಸಂದ್ರ ಕಾಲನಿಯ ಬಳಿ ಈ ದುರ್ಘಟನೆ ಜರುಗಿದ್ದು, ಇದೇ ತಾಲ್ಲೂಕಿನ ನೀಲಗೊಂಡನಹಳ್ಳಿ ಬಳಿಯ ಯರಪನಹಳ್ಳಿ ಗ್ರಾಮದ ಕಾಂತರಾಜು ಎಂಬುವರ ಮಗ ಶಶಿ (19 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಅಣ್ಣ ಗಿರೀಶ್ ತೀವ್ರ ಪೆಟ್ಟಾಗಿ ತುಮಕೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎನ್ನಲಾಗಿದೆ.
ಮೃತ ಶಶಿ ಅವರ ತಂದೆಯ ಊರು ಮೂಲತಃ ಮಧುಗಿರಿ ತಾಲ್ಲೂಕಿನ ಪುರವರ ಹೋಬಳಿ ಗೊಂದಿಹಳ್ಳಿ ಬಳಿಯ ಎತ್ತಿನಹಳ್ಳಿ ಎನ್ನಲಾಗಿದೆ. ಇವರ ತಂದೆ ಸುಮಾರು 15 ವರ್ಷಗಳಿಂದ ಹೆಂಡತಿ ಮನೆಯ ಯರಪ್ಪನಹಳ್ಳಿಯಲ್ಲಿ ವಾಸವಿದ್ದರು. ಹಬ್ಬದ ಸಡಗರದಲ್ಲಿ ದಿನಸಿ ಹಾಗೂ ಬಟ್ಟೆ ತರಲು ಮಾರುಕಟ್ಟೆಗೆ ತೆರಳುತ್ತಿರುವಾಗ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.
ಈ ಸಂಬಂಧ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊರಟಗೆರೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಕೋಳಾಲ ಪಿಎಸ್‍ಐ ನವೀನ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ