ವಿದ್ಯಾರ್ಥಿಗಳ ಭವಿಷ್ಯದ ಬದುಕಿಗೆ ಶಿಕ್ಷಣವೇ ತಳಹದಿ

ಚಳ್ಳಕೆರೆ

         ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಪ್ರಗತಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಪರಿಣಾಮಕಾರಿಯಾಗಿ ಬೋಧನೆ ಮಾಡುವ ಮೂಲಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ತಮ್ಮ ಬುದ್ದಿ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವಲ್ಲಿ ಕುವೆಂಪು ಶಾಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ನಗರಸಭೆ ಸದಸ್ಯೆ ಪಾಲಮ್ಮತಿಪ್ಪೇಸ್ವಾಮಿ ತಿಳಿಸಿದರು.

         ಅವರು, ಶನಿವಾರ ಸಂಜೆ ಇಲ್ಲಿನ ವಾಲ್ಮೀಕಿ ನಗರದಲ್ಲಿರುವ ಕುವೆಂಪು ವಿದ್ಯಾಸಂಸ್ಥೆಯಲ್ಲಿ ಶಾಲಾ ಆಡಳಿತ ಮಂಡಳಿ ಹಮ್ಮಿಕೊಂಡಿದ್ದ ಶಾಲಾ ವಾರ್ಷಿಕೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು. ಕುವೆಂಪು ವಿದ್ಯಾಸಂಸ್ಥೆ ಇನ್ನೂ ಹೆಚ್ಚಿನ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.

           ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಪ್ರಾಂಶುಪಾಲ ಡಾ.ಸಿ.ಶಿವಲಿಂಗಪ್ಪ, ಬರಗಾಲದ ಈ ನಾಡಿನಲ್ಲಿ ಶಿಕ್ಷಣಕ್ಕೆ ಬರದ ನೆರಳು ಸೋಕದಂತೆ ಈ ಶಿಕ್ಷಣ ಸಂಸ್ಥೆ ಜಾಗೃತಿವಹಿಸಿದೆ. ಕಳೆದ ಸುಮಾರು 19 ವರ್ಷಗಳಿಂದ ನಗರ ಹಾಗೂ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಯಲ್ಲಿ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ. ವಿದ್ಯಾಸಂಸ್ಥೆಗಳು ಹಣ ಮಾಡುವ ಕೇಂದ್ರಗಳು ಎಂಬ ಮಾತನ್ನು ಸುಳ್ಳಾಗಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರಾಥಮಿಕ ಶಾಲೆಯಿಂದ ಪ್ರೌಢಶಾಲೆಯ ತನಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆಯನ್ನು ನೀಡುತ್ತಾ ಬಂದಿದೆ.

            ಕ್ರೀಡಾ ಕ್ಷೇತ್ರದಲ್ಲೂ ಸಹ ಈ ಸಂಸ್ಥೆ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಕನ್ನಡದ ಶ್ರೇಷ್ಠ ದಾರ್ಶನಿಕ ಕವಿ ಕುವೆಂಪುರವರ ಹೆಸರಿನಲ್ಲಿ ಪ್ರಾರಂಭವಾದ ಈ ಸಂಸ್ಥೆ ಸಾಹಿತ್ಯಾತ್ಮಕ ಚಟುವಟಿಕೆಯಲ್ಲೂ ಸಹ ಕ್ರಿಯಾಶೀಲವಾಗಿದೆ. ಶಾಲೆಯ ಆಡಳಿತ ಮಂಡಳಿ ಮತ್ತು ಬೋಧಕ ವರ್ಗವನ್ನು ಪ್ರಶಂಸಿಸಿದ ಅವರು ಮುಂದಿನ ದಿನಗಳಲ್ಲೂ ಸಹ ಈ ಶಿಕ್ಷಣ ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.

            ಶಾಲೆಯ ವರದಿ ವಾಚನ ಮಾಡಿದ ಶಿಕ್ಷಣ ಚಂದ್ರಶೇಖರ್, ಶಾಲೆಯಲ್ಲಿ ಎಲ್ಲಾ ರಾಷ್ಟ್ರೀಯ ಹಬ್ಬಗಳು, ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಎಸ್‍ಎಸ್‍ಎಲ್‍ಸಿ ಫಲಿತಾಂಶವೂ ಸಹ ಉತ್ತಮವಾಗಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಲು ಪೋಷಕರು ಸಹಕಾರ ನೀಡಬೇಕಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಪ್ರತಿಯೊಬ್ಬ ಶಿಕ್ಷಕರು ಗಮನ ನೀಡುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಕಾರಣರಾಗಿದ್ಧಾರೆಂದರು.

          ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ವೆಂಕಟಪ್ಪ, ಆರ್.ಕೃಷ್ಣಮೂರ್ತಿ ಮುಂತಾದವರು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ವಿ.ಶ್ರೀರಾಮರೆಡ್ಡಿ ಸ್ವಾಗತಿಸಿದರು, ಮುಖ್ಯ ಶಿಕ್ಷಕ ವಿ.ತಿಪ್ಪೇಸ್ವಾಮಿ ನಿರೂಪಿಸಿ ವಂದಿಸಿದರು. ಶಾಲೆಯ ವಿವಿಧ ತರಗತಿ ವಿದ್ಯಾರ್ಥಿಗಳಿಂದ ಮನೋರಂಜನಾ ಕಾರ್ಯಕ್ರಮ ಜನರ ಮನಸೆಳೆದವು. ಶಾಲೆಯ ಎಲ್ಲಾ ಶಿಕ್ಷಕ, ಶಿಕ್ಷಕಿಯರು ಹಾಗೂ ಸಿಬ್ಬಂದಿ ವರ್ಗ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap