ತುಮಕೂರು
ಶಾಲೆ ಬಿಟ್ಟು ಜಿಲ್ಲೆಯಿಂದ ವಲಸೆ ಹೋಗುವ ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲು ಪ್ರಥಮಾದ್ಯತೆ ನೀಡಬೇಕೆಂದು ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಮ್ಮ ಕಛೇರಿಯಲ್ಲಿಂದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 6 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಒದಗಿಸುವುದು ನಮ್ಮ ಜವಾಬ್ದಾರಿ. ಈ ನಿಟ್ಟಿನಲ್ಲಿ ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳು ಪರಸ್ಪರ ಸಹಕಾರದಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮುಖ್ಯ ವಾಹಿನಿಗೆ ತರುವಲ್ಲಿ ಶ್ರಮಿಸಬೇಕು ಎಂದು ನಿರ್ದೇಶನ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಮಾತನಾಡಿ ಪೋಷಕರು ತಮ್ಮ ಮಕ್ಕಳೊಂದಿಗೆ ವಲಸೆ ಹೋಗದಂತೆ ಗ್ರಾಮ ಸಭೆಗಳನ್ನು ನಡೆಸುವ ಮೂಲಕ ಜನಜಾಗೃತಿ ಮೂಡಿಸಲಾಗುತ್ತಿದೆ. ಜಿಲ್ಲೆಯಿಂದ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶಗಳಿಗೆ ವಲಸೆ ಹೋಗಿರುವ ಮಕ್ಕಳನ್ನು ಶಾಲೆಗೆ ದಾಖಲಿಸಲು ಆಯಾ ರಾಜ್ಯದ ಶಿಕ್ಷಣ ಇಲಾಖೆಯನ್ನು ಸಂಪರ್ಕಿಸಿ ಸಮನ್ವಯತೆ ಸಾಧಿಸಲಾಗಿದೆ ಹಾಗೂ ರಾಜ್ಯದ ಇತರೆ ಜಿಲ್ಲೆಗಳಿಗೆ ವಲಸೆ ಹೋಗಿರುವ ಮಕ್ಕಳನ್ನು ಶಾಲೆಗೆ ದಾಖಲಿಸಲು ಆಯಾ ಜಿಲ್ಲಾ ಶಿಕ್ಷಣ ಇಲಾಖೆಗೆ ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕೆಲವು ಮುಸ್ಲಿಂ ಪೋಷಕರು ತಮ್ಮ ಮಕ್ಕಳನ್ನು ಮದರಸಾಗಳಿಗೆ ದಾಖಲಿಸಿದ್ದು, ಶಾಲೆಗೆ ದಾಖಲಿಸಲು ಒಪ್ಪುತ್ತಿಲ್ಲ. ಮದರಸಾಗಳಲ್ಲಿ ಧಾರ್ಮಿಕ ಶಿಕ್ಷಣ ಮಾತ್ರ ಕಲಿಸಲಾಗುತ್ತಿರುವುದರಿಂದ ಈ ಮಕ್ಕಳನ್ನು ಸಹ ಶಾಲೆಯಿಂದ ಹೊರಗಳಿದ ಮಕ್ಕಳೆಂದು ಪರಿಗಣಿಸಲಾಗುತ್ತದೆ. ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ 540 ಮಕ್ಕಳನ್ನು ಪತ್ತೆ ಹಚ್ಚಲಾಗಿದ್ದು, ಬಡತನ, ಅನಕ್ಷರತೆ, ಅರಿವಿನ ಕೊರತೆ, ವಲಸೆ ಹೋಗುವಿಕೆಯಿಂದ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಪ್ರಮಾಣ ಹೆಚ್ಚಾಗಿ ತೋರುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ಎಲ್ಲಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯರೊಂದಿಗೆ ಮನೆ-ಮನೆಗೆ ಭೇಟಿ ನೀಡಿ ಮಕ್ಕಳನ್ನು ಶಾಲೆಗೆ ಕಳುಹಿಸದ ಪೋಷಕರಿಗೆ ಅರಿವು ಮೂಡಿಸಬೇಕು. ಒಪ್ಪದಿದ್ದಲ್ಲಿ ಅಂಥ ಪೋಷಕರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ನಿರ್ದೇಶನ ನೀಡಿದರು.
ಶಾಲೆಯಿಂದ ಹೊರಗುಳಿದ ಮಕ್ಕಳ ಪ್ರಮಾಣವನ್ನು ಶೂನ್ಯಕ್ಕಿಳಿಸುವಲ್ಲಿ ಅಧಿಕಾರಿಗಳು ಶ್ರಮಿಸಬೇಕು. ಮುಖ್ಯವಾಹಿನಿಗೆ ಬಾರದ ಮಕ್ಕಳ ಸಂಪೂರ್ಣ ವಿವರವನ್ನು ಕೂಡಲೇ ತಮಗೆ ಸಲ್ಲಿಸಬೇಕೆಂದು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮಗಳಲ್ಲಿ ಮಕ್ಕಳ ವಿಶೇಷ ಗ್ರಾಮಸಭೆಯನ್ನು ನಡೆಸಲು ಆಯಾ ತಾಲ್ಲೂಕಿನ ಕಾರ್ಯನಿರ್ವಾಹಣಾಧಿಕಾರಿ ಹಾಗೂ ಗ್ರಾಮ ಪಂಚಾಯತಿಗಳ ಪಿಡಿಓಗಳಿಗೆ ತರಬೇತಿ ನೀಡಲಾಗಿದ್ದು, ಪ್ರತಿ ಮಾಹೆಯಲ್ಲಿ ಮಕ್ಕಳ ಗ್ರಾಮಸಭೆಗಳನ್ನು ನಡೆಸಿ ಅವರ ಬೇಡಿಕೆಗಳನ್ನು ಈಡೇರಿಸಬೇಕೆಂದು ತಿಳಿಸಿದರು.
ಕಳೆದ ತ್ರೈಮಾಸಿಕದಲ್ಲಿ ಮಾಹಿತಿ ಸಲ್ಲಿಸದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದರೂ ಸಹ ಶಿರಾ ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಈವರೆಗೂ ಅನುಪಾಲನಾ ವರದಿ ಸಲ್ಲಿಸಿರುವುದಿಲ್ಲ. ಶಿರಾ ಸಿಡಿಪಿಓ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಪದವಿಪೂರ್ವ ಕಾಲೇಜು/ ಹಾಸ್ಟೆಲ್‍ಗಳಲ್ಲಿ ಪೋಸ್ಟರ್‍ಗಳನ್ನು ಪ್ರದರ್ಶಿಸಿ ಅರಿವು ಮೂಡಿಸಬೇಕು. ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಶಾಲೆಗೆ ದಾಖಲಿಸಿರುವ ಹುಲಿಯೂರುದುರ್ಗದ ಬಾಲಕಿಯ ಮೇಲೆ ನಿಗಾ ಇಡಬೇಕಲ್ಲದೆ ಬಾಲಕಿಗೆ ಆತ್ಮಸ್ಥೈರ್ಯ ತುಂಬಬೇಕೆಂದರು.
ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆಯಡಿ ಕಾರ್ಯ ನಿರ್ವಹಿಸುತ್ತಿರುವ/ ನೋಂದಾಯಿತ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಗೇಟ್ ರಿಜಿಸ್ಟರ್, ಸಾಮಾಜಿಕ ತನಿಖಾ ವರದಿ ತಯಾರಿಕೆ, ವೈಯಕ್ತಿಕ ಪಾಲನಾ ಯೋಜನೆಯನ್ನು ಸಿದ್ಧಪಡಿಸಬೇಕು. ಖಾಸಗಿ/ಸರ್ಕಾರಿ ವಸತಿ ನಿಲಯಗಳಲ್ಲಿ ಹೆಣ್ಣು ಮಕ್ಕಳ ಸುರಕ್ಷತೆ ಸಂಪೂರ್ಣ ಜವಾಬ್ದಾರಿಯ ಸಂಬಂಧಿಸಿದ ಇಲಾಖೆ/ ಸಂಸ್ಥೆಯ ಮೇಲಿರುತ್ತದೆ. ಸಬೂಬು ಹೇಳಿಕೊಂಡು ನಿಯಮ ಉಲ್ಲಂಘಿಸುವ ವಸತಿ ನಿಲಯಗಳ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದೆಂದರು.
ವಾಸಂತಿ ಉಪ್ಪಾರ್ ಮಾತನಾಡಿ, 2019-20ನೇ ಸಾಲಿನ 2ನೇ ತ್ರೈಮಾಸಿಕದಲ್ಲಿ ಪರಿತ್ಯಕ್ತ ಹಾಗೂ ಇಲಾಖೆ ವಶದಲ್ಲಿರುವ 15 ಮಕ್ಕಳನ್ನು ದತ್ತುಕೇಂದ್ರದಲ್ಲಿ ಪೋಷಿಸಲಾಗುತ್ತಿದೆ. ಈ ಪೈಕಿ 5 ಮಕ್ಕಳು ಹೃದಯ ಸಂಬಂಧಿ ಹಾಗೂ ವಿವಿಧ ಸೋಂಕಿಗೆ ಒಳಗಾಗಿದ್ದು, 4 ಮಕ್ಕಳಿಗೆ ಪಾಲನೆ ಮತ್ತು ಪೋಷಣೆ ಅವಶ್ಯಕತೆಯಿರುತ್ತದೆ. ಉಳಿದ 6 ಮಕ್ಕಳು ಮಾತ್ರ ದತ್ತು ನೀಡಲು ಅರ್ಹರಿರುತ್ತಾರೆ ಎಂದು ಸಭೆಗೆ ಮಾಹಿತಿ ನೀಡಿದರಲ್ಲದೆ, ಏಪ್ರಿಲ್-19 ರಿಂದ ಜೂನ್-19ರವರೆಗಿನ ತ್ರೈಮಾಸಿಕದಲ್ಲಿ ಪೋಕ್ಸೋ ಕಾಯ್ದೆಯಡಿ ಹೊಸದಾಗಿ 11 ಪ್ರಕರಣ ಸೇರಿ ಒಟ್ಟು 122 ಪ್ರಕರಣಗಳು ದಾಖಲಾಗಿವೆ. ಈ ಪೈಕಿ 20 ಪ್ರಕರಣಗಳು ಖುಲಾಸೆ, 3 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಉಳಿದಂತೆ 99 ಪ್ರಕರಣಗಳು ಬಾಕಿ ಇವೆ ಎಂದು ತಿಳಿಸಿದರು.
ಅದೇ ರೀತಿ ಜಿಲ್ಲೆಯಲ್ಲಿ 2019ರ ಮೇ ಮಾಹೆಯಿಂದ ಅಕ್ಟೋಬರ್‍ವರೆಗೆ ಮಕ್ಕಳ ಸಹಾಯವಾಣಿ 1098 ಮೂಲಕ ಬಾಲ್ಯವಿವಾಹ, ವೈದ್ಯಕೀಯ ನೆರವು, ಆಶ್ರಯಕೋರಿ, ಬಾಲಕಾರ್ಮಿಕತೆ, ಮಾನಸಿಕ ಕಿರುಕುಳ, ದೈಹಿಕ ದೌರ್ಜನ್ಯ, ವಿದ್ಯಾಭ್ಯಾಸ, ಭಿಕ್ಷಾಟನೆ, ರ್ಯಾಗಿಂಗ್, ಅಂಗನವಾಡಿ ಸಮಸ್ಯೆ, ಠಾಣೆ ಪ್ರಕರಣ, ಜೀತಪದ್ಧತಿ, ಲೈಂಗಿಕ ಕಿರುಕುಳ, ಅಪಹರಣ, ಮತ್ತಿತರ ಪ್ರಕರಣ ಸೇರಿದಂತೆ ಒಟ್ಟು 445 ಪ್ರಕರಣಗಳು ದಾಖಲಾಗಿವೆ. ದಾಖಲಾದ ಪ್ರಕರಣಗಳಲ್ಲಿ 60 ಪ್ರಕರಣ ತಪ್ಪು ಮಾಹಿತಿಯಿಂದ ಕೂಡಿರುತ್ತವೆ ಎಂದು ಮಕ್ಕಳ ಸಹಾಯವಾಣಿ ಸಹಾಯಕಿ ರಾಧಾಮಣಿ ಮಾಹಿತಿ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಎಸ್.ನಟರಾಜು, ಎಲ್ಲಾ ತಾಲ್ಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮತ್ತಿತರ ಅಧಿಕಾರಿಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ