ತುಮಕೂರು
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳಂತೆ ಜಲಾನಯನ ಅಭಿವೃದ್ಧಿ ಇಲಾಖೆಯ ಕಾಮಗಾರಿಗಳನ್ನೂ ಸಹ ನರೇಗಾ ಯೋಜನೆಯಡಿ ಕೈಗೊಳ್ಳಬೇಕೆಂದು ಜಲಾನಯನ ಅಭಿವೃದ್ದಿ ಇಲಾಖಾಯುಕ್ತ ಪ್ರಭಾಷ್ ಚಂದ್ರ ರೇ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಪಂಚಾಯತಿಯ ಜಂಟಿ ಆಶ್ರಯದಲ್ಲಿ ಶನಿವಾರ ಬಾಲಭವನದಲ್ಲಿ ನರೇಗಾ ಯೋಜನಾನುಷ್ಠಾನಾಧಿಕಾರಿಗಳು ಹಾಗೂ ತಾಂತ್ರಿಕ ಸಿಬ್ಬಂದಿಗಳಿಗಾಗಿ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ಕಡ್ಡಾಯವಾಗಿ ಉದ್ಯೋಗ ನೀಡಬೇಕು. ಉದ್ಯೋಗ ನೀಡುವಲ್ಲಿ ನಿರ್ಗತಿಕರು, ಕಡು ಬಡವರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಹೆಚ್ಚಿನ ಪ್ರಥಮಾದ್ಯತೆ ನೀಡಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳು ಬರಪೀಡಿತವೆಂದು ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮಾನವ ದಿನಗಳನ್ನು ಸೃಜಿಸುವ ಪ್ರಮಾಣವನ್ನು 100 ರಿಂದ 150ಕ್ಕೆ ಹೆಚ್ಚಿಸಲಾಗಿದ್ದು, ಎಲ್ಲಾ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಉದ್ಯೋಗ ಖಾತ್ರಿ ಯೋಜನೆಯಡಿ ನಿಗಧಿತ ಗುರಿಯನ್ನು ಮೀರಿ ಪ್ರಗತಿ ಸಾಧಿಸಬೇಕೆಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಇಲಾಖೆಗಳು ನರೇಗಾ ಯೋಜನೆಯಡಿ ಕೈಗೆತ್ತಿಕೊಳ್ಳುವ ಕೃಷಿ ಹೊಂಡ, ಗೋಕಟ್ಟೆ, ನಾಲಾಬದು, ಅರಣ್ಯೀಕರಣ, ಗೋಮಾಳ, ನೆಡುತೋಪು, ಬಂಡು ನಿರ್ಮಾಣ, ಬದು, ಕೊಟ್ಟಿಗೆ ನಿರ್ಮಾಣ ಕಾಮಗಾರಿಗಳಂತೆ ನೀರು ಸಂಗ್ರಹವಾಗುವಂತಹ ಉಪ ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ಮಿಸುವ ಮೂಲಕ ಗ್ರಾಮೀಣ ಪ್ರದೇಶದವರಿಗೆ ಕೃಷಿ, ತೋಟಗಾರಿಕೆ ಚಟುವಟಿಕೆಗಳನ್ನು ಅಭಿವೃದ್ಧಿಪಡಿಸಲು ಅನುವಾಗುವಂತೆ ಕಾರ್ಯನಿರ್ವಹಿಸಬೇಕೆಂದರು.
ಗ್ರಾಮೀಣ ಪ್ರದೇಶದವರು ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಡೆಯಲು ಉದ್ಯೋಗ ಖಾತ್ರಿ (ನರೇಗಾ) ಯೋಜನೆಯನ್ನು ಜಾರಿಗೆ ತಂದಿದ್ದು, 2014ರ ನರೇಗಾ ಯೋಜನೆಯ ಮಾರ್ಗಸೂಚಿಯನ್ವಯ ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬವೂ ಉದ್ಯೋಗ ಪಡೆಯುವ ಹಕ್ಕನ್ನು ಹೊಂದಿರುತ್ತದೆ. ಈ ಯೋಜನೆಯಡಿ ಉದ್ಯೋಗ ಚೀಟಿ ಹೊಂದಿದ ಪ್ರತಿ ಫಲಾನುಭವಿಗಳಿಗೂ ಉದ್ಯೋಗ ನೀಡಿ ನಿಗಧಿತ ಅವಧಿಯಲ್ಲಿ ಕೂಲಿ ಪಾವತಿ ಮಾಡಬೇಕು. ನರೇಗಾ ಯೋಜನೆಯ ಅನುದಾನವನ್ನು ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದರು.
ಪ್ರಗತಿ ಸಾಧಿಸುವತ್ತ ಮಾತ್ರ ಒಲವು ತೋರದೆ ಕಾಮಗಾರಿಗಳನ್ನು ನಿರ್ಮಿಸುವ ಮುನ್ನ ಇದರಿಂದ ಜನರಿಗಾಗುವ ಪ್ರಯೋಜನವನ್ನು ಅರಿತು ಕೈಗೆತ್ತಿಕೊಳ್ಳಬೇಕು. ಯೋಜನೆಯ ನಿಯಮವನ್ನು ಉಲ್ಲಂಘಿಸದೆ ಮುಂದಿನ 50 ವರ್ಷಗಳವರೆಗೆ ಬಳಸಲು ಯೋಗ್ಯವಿರುವಂತಹ ಕಾಮಗಾರಿಗಳನ್ನು ನಿರ್ಮಿಸಬೇಕು. ಮಕ್ಕಳು ಹಾಗೂ ಜಾನುವಾರುಗಳು ಬೀಳದಂತೆ ಮುಂಜಾಗ್ರತೆಯಾಗಿ ಹೆಚ್ಚಿನ ಆಳದ ಕೃಷಿ ಹೊಂಡಗಳನ್ನು ನಿರ್ಮಿಸಬೇಡಿ ಎಂದು ಸಲಹೆ ನೀಡಿದರಲ್ಲದೆ ಯಂತ್ರಗಳನ್ನು ಬಳಸಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳುವಂತಿಲ್ಲ ಎಂದು ನಿರ್ದೇಶನ ನೀಡಿದರು.
ನರೇಗಾ ಯೋಜನೆಯಡಿ ಪ್ರತಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕನಿಷ್ಠ 50 ಕೃಷಿ ಹೊಂಡಗಳ ನಿರ್ಮಾಣಕ್ಕೆ ಮುಂದಾಗಬೇಕು. ಇದರಿಂದ ಕೃಷಿ/ತೋಟಗಾರಿಕೆ ಚಟುವಟಿಕೆಗಳಿಗೆ ಪ್ರಯೋಜನವಾಗಲಿದೆ. ನರೇಗಾ ಯೋಜನೆಯಡಿ ಶೇ. 60ರಷ್ಟು ಅನುದಾನವನ್ನು ಕೃಷಿ, ರೇಷ್ಮೆ, ತೋಟಗಾರಿಕೆ, ಅರಣ್ಯೀಕರಣ ಚಟುವಟಿಕೆಗಳಿಗೆ ವಿನಿಯೋಗಿಸಬೇಕು. ಇಲ್ಲದಿದ್ದಲ್ಲಿ ಕೇಂದ್ರದಿಂದ ಬರುವ ಅನುದಾನವನ್ನು ಕಡಿತಗೊಳಿಸುವ ಸಾಧ್ಯತೆಯಿರುತ್ತದೆ ಎಂದು ತಿಳಿಸಿದರು.
ನರೇಗಾ ಯೋಜನೆಯ ಪ್ರಗತಿ ಕುಂಠಿತವಾದಲ್ಲಿ ಸಿಬ್ಬಂದಿ ಕೊರತೆ, ಮತ್ತಿತರ ಸಬೂಬುಗಳನ್ನು ಹೇಳದೆ, ಇರುವ ಮಾನವ ಶಕ್ತಿಯನ್ನು ಬಳಸಿಕೊಂಡು ಪ್ರಗತಿ ಸಾಧಿಸಬೇಕು. ನರೇಗಾ ಯೋಜನೆಯಡಿ ರೈತರಿಗೆ ಹೆಚ್ಚಿನ ಆದಾಯ, ನೀರಾವರಿ ಸೌಲಭ್ಯ, ಅಧಿಕ ಇಳುವರಿ ಲಾಭವಾಗುವಂತಹ ಕಾಮಗಾರಿಗಳನ್ನು ನಿರ್ಮಿಸಬೇಕಲ್ಲದೆ ವಾರ್ಷಿಕವಾಗಿ ಪ್ರತೀ ತಾಲ್ಲೂಕಿನಲ್ಲಿ ಅಂದಾಜು 2 ಕೋಟಿ ರೂ.ಗಳ ಅನುದಾನವನ್ನು ಖರ್ಚು ಮಾಡಬೇಕೆಂದರು.
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ, ನರೇಗಾ ಯೋಜನೆಯಡಿ ಜಲಾನಯನ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲಾನಯನ ಅಭಿವೃದ್ಧಿ ಕಾಮಗಾರಿಗಳನ್ನು ಈಗಾಗಲೇ ಜಿಲ್ಲೆಯ ಚಿಕ್ಕನಾಯನಕಹಳ್ಳಿ ಹಾಗೂ ಗುಬ್ಬಿ ತಾಲ್ಲೂಕಿನಲ್ಲಿ ನಿರ್ಮಿಸಲಾಗಿದ್ದು, ಜಿ.ಪಂ.ಯ ಸಮನ್ವಯ ಇಲಾಖೆಗಳು ಒಗ್ಗೂಡಿ ಕೆಲಸ ಮಾಡಿದರೆ ನಿರೀಕ್ಷಿತ ಪ್ರಗತಿ ಸಾಧಿಸಲು ಸಾಧ್ಯ. ಅಧಿಕಾರಿಗಳು ಈಗಿನಿಂದಲೇ ಕಾರ್ಯಪ್ರವೃತ್ತರಾದಲ್ಲಿ ಮುಂದೆ ಬರ ಪರಿಸ್ಥಿತಿ ಬಂದರೆ ಎದುರಿಸಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು. ಜಿಲ್ಲೆಯ ರೈತರ ಸಂಕಷ್ಟವನ್ನು ಅರಿತು ಇಚ್ಛಾಶಕ್ತಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಿದಲ್ಲಿ ಮಾತ್ರ ಅಭಿವೃದ್ಧಿ ಕಾಣಬಹುದೆಂದು ತಿಳಿಸಿದರು.
ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಹಾಗೂ ಮತ್ತಿತರ ಇಲಾಖೆಗಳು ಅಧಿಕಾರಿಗಳು ನರೇಗಾ ಯೋಜನೆಯ ಪ್ರಗತಿ ಕುರಿತು ಪಿಪಿಟಿ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಜಲಾನಯನ ಅಭಿವೃದ್ಧಿ ಇಲಾಖೆ ಜಂಟಿ ನಿರ್ದೇಶಕಿ ಸುಮಾ, ಜಿ.ಪಂ. ಉಪಕಾರ್ಯದರ್ಶಿ(ಅಭಿವೃದ್ಧಿ) ಮಹಾಂಕಾಳಪ್ಪ, ಮತ್ತಿತರ ಅಧಿಕಾರಿಗಳು ಹಾಜರಿದ್ದರು.