ದೇವರ ಹೆಸರಿನಲ್ಲಿ ಗ್ರಾಮದ ತೊರೆದ ನೂರಾರು ಗ್ರಾಮಸ್ಥರು.

ಚಳ್ಳಕೆರೆ

     ಕಳೆದ ಹಲವಾರು ವರ್ಷಗಳಿಂದ ಬುಡಕಟ್ಟು ಕಾಡುಗೊಲ್ಲರ ಸಮುದಾಯ ತನ್ನದೇಯಾದ ಮೂಲ ಸಿದ್ದಾಂತಗಳಿಗೆ ಆಚರಣೆ ಮಾಡಿಕೊಂಡು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲೇ ನಡೆಯುತ್ತಿದ್ದು, ತಮ್ಮ ಗ್ರಾಮಕ್ಕೆ ಬರುವ ದೇವರಿಗೋಸ್ಕರ ಇಡೀ ಗ್ರಾಮವನ್ನೇ ತೊರೆದು ಒಂದು ದಿನ ಊರ ಹೊರಗೆ ತಮ್ಮ ಸಾಮಾಗ್ರಿ, ಸಾಕು ಪ್ರಾಣಿ, ಪಕ್ಷಿ, ಆಹಾರ ಧಾನ್ಯಗಳನ್ನು ಹೊರಗಿಟ್ಟು ಗ್ರಾಮಕ್ಕೆ ಕಳ್ಳೆ ಬೇಲಿ ಹಾಕುವ ಮೂಲಕ ಗ್ರಾಮದ ಶುದ್ದೀಕರಣ ಕಾರ್ಯದಲ್ಲಿ ದೊಡ್ಡೇರಿ ಗೊಲ್ಲರಹಟ್ಟಿಯ ಇಡೀ ಸಮುದಾಯ ಈ ಆಚರಣೆಯಲ್ಲಿ ಪಾಲ್ಗೊಂಡಿದ್ದು, ವಿಶೇಷವಾಗಿತ್ತು.

      ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಗ್ರಾಮದ ಮುಖಂಡರಾದ ಡಿ.ಟಿ.ಕರಿಯಪ್ಪ, ತಿಪ್ಪೇರುದ್ರಪ್ಪ, ಸಿರಿಯಣ್ಣ, ಅಜ್ಜಣ್ಣ ಮುಂತಾದವರು ನಮ್ಮ ಗ್ರಾಮಕ್ಕೆ ಪ್ರತಿ ಐದು ವರ್ಷಗಳಿಗೊಮ್ಮೆ ಮಹದೇವಪುರದಿಂದ ರಂಗನಾಥಸ್ವಾಮಿ ದೇವರ ಉತ್ಸವ ಮೂಲಕ ಆಗಮಿಸಿ ಇಲ್ಲಿನ ಭಕ್ತರನ್ನು ಹರಿಸುವುದು ವಾಡಿಕೆ. ದೇವರ ಆಗಮನದ ಹಿನ್ನೆಲೆಯಲ್ಲಿ ನಮ್ಮ ಮೂಲ ಪದ್ದತಿಯಂತೆ ನಾವೆಲ್ಲರೂ ಸೇರಿ ಗ್ರಾಮ ಶುದ್ದೀಕರಣ ಹಿನ್ನೆಲೆಯಲ್ಲಿ ಇಡೀ ಗ್ರಾಮದ ನಮ್ಮ ಎಲ್ಲಾ ಮನೆಗಳಿಗೂ ಬೀಗ ಹಾಕಿ ಒಂದು ದಿನ ಮಾತ್ರ ಗ್ರಾಮದಿಂದ ಹೊರಭಾಗದಲ್ಲಿ ನಮ್ಮೆಲ್ಲಾ ಸಾಮಾಗ್ರಿ ಹಾಗೂ ಪ್ರಾಣಿಗಳೊಂದಿಗೆ ವಾಸಿಸುತ್ತೇವೆ. ಸಂಜೆ ವೇಳೆಗೆ ದೇವರ ಪೂಜಾರರು ಐದು ದೇವರ ತೀರ್ಥ ತಂದು ಗ್ರಾಮದ ಸುತ್ತೆಲ್ಲಾ ಹಾಕುವ ಮೂಲಕ ಶುದ್ದೀಕರಣಗೊಳಿಸುತ್ತಾರೆ. ನಂತರ ನಾವೆಲ್ಲರೂ ನಮ್ಮ ನಮ್ಮ ಮನೆಗಳಿಗೆ ಪ್ರವೇಶ ಮಾಡುತ್ತೇವೆ. ಈ ಸಂದರ್ಭದಲ್ಲಿ ಶುದ್ದೀಕರಣವಾಗುವವರೆಗೂ ಯಾರೂ ಗ್ರಾಮದಲ್ಲಿ ಇರುವುದಿಲ್ಲ. ಇದು ಕಳೆದ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪದ್ದತಿಯಾಗಿದೆ.

     ತಾಲ್ಲೂಕಿನ ಪುರ್ಲಹಳ್ಳಿಯ ಅಕ್ಕಳಬಾವಿ ನೀರು, ತಳುಕಿನ ಎತ್ತಪ್ಪ ದೇವರ ದೋಣಿ ನೀರು, ಮಹದೇವಪುರದ ರಂಗನಾಥಸ್ವಾಮಿ ದೇವರ ತೀರ್ಥ, ಹೊಳೆ ನೀರು, ಗೋಮೂತ್ರದಿಂದ ತೀರ್ಥ ತಯಾರಿಸಿ ಗ್ರಾಮಕ್ಕೆ ಮತ್ತು ಜನರಿಗೆ ಸಿಂಪಡಣೆ ಮಾಡುವ ಮೂಲಕ ಶುದ್ದೀಕರಣ ಗೊಳಿಸಲಾಗುತ್ತದೆ. ಒಂದು ದಿನದ ಮಟ್ಟಿಗೆ ಗ್ರಾಮದಲ್ಲಿ ಯಾರೂ ಓಡಾಡುವಂತಿಲ್ಲ, ರಸ್ತೆಗಳಿಗೆ ಅಡ್ಡಲಾಗಿ ಜಾಲಿ ಕಳ್ಳಯನ್ನು ಕಡಿದು ಹಾಕಲಾಗುತ್ತದೆ. ಎಲ್ಲರಿಗೂ ಮೊದಲೇ ಮಾಹಿತಿಯನ್ನು ಸಹ ನೀಡಲಾಗಿರುತ್ತದೆ. ಈ ಕಾರ್ಯಕ್ರಮದಲ್ಲಿ ಇಲ್ಲಿನ ಎಲ್ಲಾ ಕಾಡುಗೊಲ್ಲ ಸಮುದಾಯದವರೂ ಸಂತೋಷದಿಂದಲೇ ಪಾಲ್ಗೊಳ್ಳುತ್ತಾರೆ. ಗ್ರಾಮದಲ್ಲಿ ಇರುವ ಎಲ್ಲಾ ದೇವರನ್ನೂ ಗ್ರಾಮದಿಂದ ಹೊರಗಿಟ್ಟು ಪೂಜಿಸಲಾಗುತ್ತದೆ. ಮತ್ತೆ ಶುದ್ದೀಕರಣ ನಂತರ ದೇವಾಲಯಕ್ಕೆ ಕರೆದ್ಯೊಯಲಾಗುತ್ತದೆ ಎನ್ನುತ್ತಾರೆ ಗ್ರಾಮದ ಮುಖಂಡ ವೆಂಕಟೇಶ್.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link