ಬೆಂಗಳೂರು
ನಗರದ ಜನತೆಯನ್ನು ಬೆಚ್ಚಿ ಬೀಳಿಸಿದ್ದ ಅಲಯನ್ಸ್ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಶಿಕ್ಷಣ ತಜ್ಞ ಡಾ. ಅಯ್ಯಪ್ಪದೊರೆ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ ಕೃತ್ಯವನ್ನು ಕೇವಲ 24 ಗಂಟೆಯೊಳಗೆ ಬೇಧಿಸಿರುವ ಉತ್ತರ ವಿಭಾಗದ ಪೊಲೀಸರು ಶಿಕ್ಷಣ ತಜ್ಞ ಸುಧೀರ್ ಅಂಗೂರ್ ಸೇರಿ ಇಬ್ಬರನ್ನು ಬಂಧಿಸಿ ಮತ್ತೊಂದು ಕೊಲೆಯನ್ನು ವಿಫಲಗೊಳಿಸಿ ಪ್ರತಿಷ್ಠಿತ ವಕೀಲರೊಬ್ಬರ ಪಾತ್ರವಿರುವುದನ್ನು ಪತ್ತೆಹಚ್ಚಿದ್ದಾರೆ.
ಅಲೆಯನ್ಸ್ ವಿಶ್ವವಿದ್ಯಾನಿಲಯದ ವಿವಾದದ ಹಿನ್ನೆಲೆಯಲ್ಲಿ ಅಯ್ಯಪ್ಪದೊರೆ ಅವರನ್ನು ಕೊಲೆ ಮಾಡಲು ಶಿಕ್ಷಣ ತಜ್ಞ ಸುಧೀರ್ ಅಂಗೂರ್ ೧ ಕೋಟಿ ಸುಪಾರಿ ನೀಡಿದ್ದರಲ್ಲದೆ ತಮ್ಮ ಸಹೋದರನಾಗಿದ್ದ ಮಧುಕರ್ ಅಂಗೂರ್ ಅವರ ಕೊಲೆಗೂ ಸಂಚು ರೂಪಿಸಿದ್ದನ್ನು ವಿಫಲಗೊಳಿಸಿರುವ ಉತ್ತರ ವಿಭಾಗದ ಪೊಲೀಸರು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಬಿಟಿಎಂ ಲೇಔಟ್‌ನ ಸುಧೀರ್ ಅಂಗೂರ್ (೫೭) ಕೃತ್ಯದ ಸೂತ್ರಧಾರನಾಗಿದ್ದು, ಅಲಯನ್ಸ್ ವಿವಿಯಲ್ಲಿ ಎಕ್ಸಿಕ್ಯೂಟಿವ್ ಆಗಿದ್ದ ಜೆಸಿ ನಗರದ ಸೂರಜ್ ಸಿಂಗ್ (೨೯) ಬಂಧಿತ ಆರೋಪಿಯಾಗಿದ್ದು, ಕೃತ್ಯದಲ್ಲಿ ಭಾಗಿಯಾಗಿದ್ದ ಇನ್ನು ನಾಲ್ವರ ಬಂಧನಕ್ಕೆ ಶೋಧ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಲಯನ್ಸ್ ವಿವಿಯ ವಿವಾದದ ಕಾನೂನು ಸಮರದಲ್ಲಿ ಮೇಲುಗೈ ಸಾಧಿಸುತ್ತಿದ್ದ ಡಾ. ಅಯ್ಯಪ್ಪದೊರೆ ಹಾಗೂ ಮಧುಕರ್ ಅಂಗೂರ್ ಅವರನ್ನು ಕೊಲೆ ಮಾಡಲು ನಗರದ ಪ್ರತಿಷ್ಠಿತ ವಕೀಲರೊಬ್ಬರು ಸಲಹೆ ನೀಡಿರುವುದು ಅಲ್ಲದೇ ಅಯ್ಯಪ್ಪ ಕೊಲೆ ಕೃತ್ಯದಲ್ಲಿ ಅವರ ಪಾತ್ರವಿರುವುದು ತನಿಖೆಯಲ್ಲಿ ಪತ್ತೆಯಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ತನಿಖೆಯಿಂದ ಮತ್ತಷ್ಟು ಮಾಹಿತಿ ಸಂಗ್ರಹಿಸಿ ಪ್ರತಿಷ್ಠಿತ ವಕೀಲರೊಬ್ಬರನ್ನು ಬಂಧಿಸಲು ಕ್ರಮಕೈಗೊಳ್ಳಲಾಗುವುದು.ಕೊಲೆಗೆ ಸಂಚು ರೂಪಿಸಿದ್ದ ಸುಧೀರ್ ಅಂಗೂರ್ ಹಾಗೂ ಅವರ ಸಹೋದರ ಮಧುಕರ್ ಅಂಗೂರ್ ನಡುವೆ ೨೫ಕ್ಕೂ ಹೆಚ್ಚು ಪ್ರಕರಣಗಳಿರುವುದು ತನಿಖೆಯಲ್ಲಿ ಕಂಡು ಬಂದಿದೆ ಎಂದು ಅವರು ಹೇಳಿದರು.
ಎಕ್ಸಿಕ್ಯೂಟಿವ್ ನೇಮಕ
ಅಲಯನ್ಸ್ ವಿವಿಯ ವಿವಾದದಲ್ಲಿ ಎದುರಾಳಿಗಳಾಗಿದ್ದ ಡಾ. ಅಯ್ಯಪ್ಪದೊರೆ ಅವರನ್ನು ಮುಗಿಸಲು ನಾಲ್ಕೈದು ತಿಂಗಳಿಂದ ಹೊಂಚು ಹಾಕಲಾಗಿತ್ತು. ಆರೋಪಿ ಸೂರಜ್ ಸಿಂಗ್ ವಿಶ್ವವಿದ್ಯಾನಿಲಯದಲ್ಲಿ ನೆಪ ಮಾತ್ರಕ್ಕೆ ಪ್ರತಿನಿಧಿ(ಎಕ್ಸಿಕ್ಯೂಟಿವ್)ಯಾಗಿದ್ದು, ಆತ ಅಯ್ಯಪ್ಪದೊರೆ ಅವರ ಚಲನ-ವಲನ ಗಮನಿಸುವುದಕ್ಕೆ ನಿಯೋಜಿಸಲಾಗಿತ್ತು.
ಒಂದೂವರೆ ತಿಂಗಳ ಹಿಂದೆ ಬಿಟಿಎಂ ಲೇಔಟ್‌ನ ತನ್ನ ಕಚೇರಿಗೆ ಸೂರಜ್ ಸಿಂಗ್‌ನನ್ನು ಕರೆಸಿಕೊಂಡಿದ್ದ ಸುಧೀರ್ ಅಂಗೂರ್, ಅಲಯನ್ಸ್ ವಿವಿಯು ನಮಗೆ ಉಳಿಯಬೇಕಾದರೆ ಅಯ್ಯಪ್ಪದೊರೆಯನ್ನು ಕೊನೆಗಾಣಿಸಬೇಕು. ಅಲ್ಲದೆ ನನ್ನ ಸಹೋದರ ಮಧುಕರ್ ಅಂಗೂರ್‌ನನ್ನು ಮುಗಿಸಬೇಕೆಂದು ಮಾತುಕತೆ ನಡೆಸಿದ್ದರು.
ಕೋಟಿ ಸುಪಾರಿ
ಇಬ್ಬರನ್ನು ಮುಗಿಸುವ ಸಂಬಂಧ ಪ್ರತಿಷ್ಠಿತ ವಕೀಲರೊಬ್ಬರ ಸಲಹೆ ಪಡೆಯಲಾಗಿತ್ತು. ಅವರೇ ಕೃತ್ಯಕ್ಕೆ ಮಾರ್ಗದರ್ಶಕರಾಗಿದ್ದರು. ಆಗಲೇ ಸೂರಜ್ ಸಿಂಗ್ ಸೇರಿ ಕೃತ್ಯವೆಸಗಿದ ಇತರ ನಾಲ್ಕು ಮಂದಿಗೆ ತಲಾ ೨೦ ಲಕ್ಷ ನೀಡಲಾಗಿತ್ತು.ಆರ್‌ಟಿ ನಗರದ ಹೆಚ್‌ಎಂಟಿ ಮೈದಾನದ ಬಳಿ ವಾಸಿಸುತ್ತಿದ್ದ ಅಯ್ಯಪ್ಪ ದೊರೆ ಅವರು ಪ್ರತಿದಿನ ರಾತ್ರಿ ಊಟ ಮುಗಿದ ನಂತರ ವಾಯು ವಿಹಾರಕ್ಕೆ ಹೋಗುತ್ತಿದ್ದರು. ಅದನ್ನು ಗಮನಿಸಿದ ಸೂರಜ್‌ಸಿಂಗ್, ಕೊಲೆಗೆ ಸಂಚು ರೂಪಿಸಿದ್ದ, ಇತರ ನಾಲ್ವರು ಆರೋಪಿಗಳ ಜತೆ ಸೇರಿ ಅ. ೧೫ರ ರಾತ್ರಿ ಮುಹೂರ್ತ ನಿಗದಿಪಡಿಸಿದ್ದ.
ಮಧ್ಯರಾತ್ರಿ ಕೊಲೆ
ಮಂಗಳವಾರ ಮಧ್ಯರಾತ್ರಿ ಊಟ ಮುಗಿಸಿಕೊಂಡು ಸದಾಶಿವನಗರ ಇನ್ನಿತರ ಕಡೆ ಹೋಗಿ ಬಂದ ಅಯ್ಯಪ್ಪದೊರೆ, ರಾತ್ರಿ ೧೨ರ ವೇಳೆ ಟೀ ಶರ್ಚ್, ಬರ್ಮೂಡಾ ಧರಿಸಿ ಹೆಚ್‌ಎಂಟಿ ಮೈದಾನದ ಪಕ್ಕದ ರಸ್ತೆಯಲ್ಲಿ ವಾಯು ವಿಹಾರ ನಡೆಸುತ್ತಿದ್ದಾಗ ಸೂರಜ್ ಸಿಂಗ್ ಸೇರಿ ಐವರು
ಏಕಾಏಕಿ ದಾಳಿ ನಡೆಸಿದ್ದಾರೆ.
ಹರಿತವಾದ ಆಯುಧದಿಂದ ಹಲ್ಲೆ ಮಾಡಲೆತ್ನಿಸಿದಾಗ ಅಯ್ಯಪ್ಪ ದೊರೆ, ಪ್ರತಿರೋಧ ತೋರಿ ಸೂರಜ್ ಸಿಂಗ್‌ನನ್ನು ಹಿಡಿದುಕೊಂಡಿದ್ದು, ಉಳಿದ ನಾಲ್ವರು ಮುಗಿ ಬಿದ್ದು ಅಯ್ಯಪ್ಪದೊರೆ ದೇಹದ ೧೫ಕ್ಕೂ ಹೆಚ್ಚು ಭಾಗಗಳಲ್ಲಿ ಚುಚ್ಚಿ ಹಲ್ಲೆ ನಡೆಸಿ ಮೃತಪಟ್ಟದ್ದನ್ನು ಖಾತ್ರಿಪಡಿಸಿಕೊಂಡು ಪರಾರಿಯಾಗಿದ್ದಾರೆ.
ಆರೋಪಿ ಅಂಗೂರ್ ಭೇಟಿ
ಅಯ್ಯಪ್ಪದೊರೆ ಅವರನ್ನು ಕೊಲೆಗೈದ ಸೂರಜ್‌ಸಿಂಗ್, ಬಿಟಿಎಂ ಲೇಔಟ್‌ನ ಸುಧೀರ್ ಅಂಗೂರ್ ಅವರ ಮನೆಗೆ ಹೋಗಿ ಕೃತ್ಯದಲ್ಲಿ ಯಶಸ್ವಿಯಾಗಿರುವುದನ್ನು ಹೇಳಿಕೊಂಡು ಸಂಭ್ರಮಿಸಿದ್ದಾರೆ. ಒಬ್ಬನ ಕತೆ ಮುಗಿದಿದೆ. ಇನ್ನೊಬ್ಬ (ಮಧುಕರ್ ಅಂಗೂರ್) ಬಾಕಿ ಇದ್ದಾನೆ. ಅವನನ್ನು ಮುಗಿಸಿ ಎಂದು ಫರ್ಮಾನು ಹೊರಡಿಸಿದ್ದಾರೆ.
ಮಧುಕರ್ ಅಂಗೂರ್ ಕೊಲೆಗೆ ಸಂಚು ರೂಪಿಸುವಷ್ಟರಲ್ಲಿ ಅಯ್ಯಪ್ಪದೊರೆ ಕೊಲೆ ಪ್ರಕರಣ ಬೆನ್ನು ಹತ್ತಿದ ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್ ನೇತೃತ್ವದ ತಂಡ ಸೂರಜ್‌ಸಿಂಗ್‌ನನ್ನು ಬಂಧಿಸಿ ಮತ್ತೊಂದು ಕೊಲೆ ಕೃತ್ಯವನ್ನು ವಿಫಲಗೊಳಿಸಿದೆ ಎಂದು ತಿಳಿಸಿದರು.
ನಾಲ್ವರಿಗೆ ಶೋಧ
ಸೂರಜ್‌ಸಿಂಗ್ ಜೆಸಿ ನಗರದಲ್ಲಿ ಸಕ್ರಿಯನಾಗಿದ್ದು, ಇತ್ತೀಚೆಗೆ ನಡೆದ ದಸರಾ ಉತ್ಸವದಲ್ಲಿ ಪಾಲ್ಗೊಂಡಿದ್ದ. ಇಲ್ಲಿಯವರೆಗೆ ಈತನ ಮೇಲೆ ಯಾವುದೇ ಅಪರಾಧ ಕೃತ್ಯಗಳು ದಾಖಲಾಗಿಲ್ಲ. ಈತನ ಜತೆಗೆ ಕೃತ್ಯದಲ್ಲಿ ಭಾಗಿಯಾಗಿದ್ದ ಇತರ ನಾಲ್ವರು ಬೆಂಗಳೂರಿನವರೇ ಆಗಿದ್ದು, ಅವರನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದರು.
ಅಯ್ಯಪ್ಪದೊರೆ ಕೊಲೆ ಪ್ರಕರಣವು ಸಾರ್ವಜನಿಕರಲ್ಲಿ ಆತಂಕವುಂಟು ಮಾಡಿದ್ದು, ಪ್ರಕರಣವನ್ನು ಬೇಧಿಸಲು ಶಶಿಕುಮಾರ್ ಅವರ ನೇತೃತ್ವದಲ್ಲಿ ಮೂವರು ಎಸಿಪಿಗಳು, ಸಿಸಿಬಿ ಘಟಕದ ಅಧಿಕಾರಿಗಳೂ ಸೇರಿದಂತೆ ೮ ವಿಶೇಷ ತಂಡಗಳನ್ನು ರಚಿಸಲಾಗಿತ್ತು. ತಂಡಗಳು ನಿನ್ನೆ ಬೆಳಿಗ್ಗೆ ೬ ರಿಂದ ರಾತ್ರಿ ೧೧ರವರೆಗೆ ಸತತ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.
ಮುಖ್ಯಮಂತ್ರಿ ಮೆಚ್ಚುಗೆ
ನಗರದಲ್ಲಿ ಭಯ-ಭೀತಿವುಂಟು ಮಾಡುವಂತೆ ನಡೆದಿದ್ದ ಶಿಕ್ಷಣ ತಜ್ಞ ಡಾ. ಅಯ್ಯಪ್ಪದೊರೆ ಅವರ ಕೊಲೆ ಕೃತ್ಯವನ್ನು ೨೪ ಗಂಟೆಯೊಳಗೆ ಬೇಧಿಸಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅಭಿನಂದಿಸಿದ್ದಾರೆ. ಗೃಹ ಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ಲೀಲಮಣಿ ರಾಜು ಅವರು ಕೂಡ ತಂಡಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಸೂಕ್ತ ಬಹುಮಾನ ನೀಡಲು ಮುಂದಾಗಿದ್ದಾರೆಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದರು.
ನಗದು ಬಹುಮಾನ
ಅಯ್ಯಪ್ಪದೊರೆ ಕೊಲೆ ಕೃತ್ಯವನ್ನು ಬೇಧಿಸಿದ ಡಿಸಿಪಿ ಶಶಿಕುಮಾರ್ ನೇತೃತ್ವದ ಪೊಲೀಸ್ ತಂಡಗಳಿಗೆ ೧ ಲಕ್ಷ ನಗದು ಬಹುಮಾನವನ್ನು ಭಾಸ್ಕರ್‌ರಾವ್ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಉಮೇಶ್ ಕುಮಾರ್, ಡಿಸಿಪಿ ಶಶಿಕುಮಾರ್ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








