ತುಮಕೂರು:
ಕಳೆದ 40 ವರ್ಷಗಳಿಂದ ಮಕ್ಕಳ ಲಾಲನೆ ಮತ್ತು ಕಲಿಕೆ ಎರಡನ್ನೂ ಮಾಡಿಕೊಂಡು ಬಂದಿರುವ ಅಂಗನವಾಡಿ ನೌಕರರು ಮತ್ತು ಕಾರ್ಯಕರ್ತರ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಸುತ್ತಾರೆ ಎಂದು ಗಾಂಧಿವಾದಿ ಪ್ರಸನ್ನ ಎಚ್ಚರಿಕೆ ನೀಡಿದರು.
ನಗರದ ಅಮಾನಿಕೆರೆ ಆವರಣದಲ್ಲಿರುವ ಗಾಜಿನಮನೆಯಲ್ಲಿ ಸೇರಿಕೊಂಡಿದ್ದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರನ್ನುದ್ದೇಶಿಸಿ ಮಾತನಾಡಿದ ಅವರು, ಅಂಗನವಾಡಿ ನೌಕರರ ಬೇಡಿಕೆಗಳು ವೈಜ್ಞಾನಿಕವಾಗಿವೆ ಅವುಗಳನ್ನು ಈಡೇರಿಸುವ ಕೆಲಸವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಮಾಡಬೇಕು. ಇಲ್ಲದಿದ್ದರೆ ಸರ್ಕಾರವನ್ನು ಬೀಳಿಸುವ ಶಕ್ತಿ ಮಹಿಳಾ ನೌಕರರಿಗೆ ಇದ್ದು, ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮಿ ಮಾತನಾಡಿ, ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರು ಹಮ್ಮಿಕೊಂಡಿರುವ ಪಾದಯಾತ್ರೆಯನ್ನು ಹತ್ತಿಕ್ಕಲು ಮುಂದಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಪಾದಯಾತ್ರೆಗೆ ಆಗಮಿಸುತ್ತಿದ್ದ ಕಾರ್ಯಕರ್ತೆಯರನ್ನು ಪೋಲೀಸರು ತಡೆಯುತ್ತಿದ್ದಾರೆ. ನಮ್ಮ ಬೇಡಿಕೆಗಳು ಈಡೇರಿಸುವವರೆಗೂ ಯಾವುದೇ ಕಾರಣಕ್ಕೂ ನಮ್ಮ ಪಾದಯಾತ್ರೆಯನ್ನು ಕೈಬಿಡುವುದಿಲ್ಲ ಎಂದು ಹೇಳಿದರು.
ಅಂಗನವಾಡಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಬೇಕು. ಬರಿ ಮನವಿ ಕೊಟ್ಟು ಹೋಗಲು ನಾವು ಇಲ್ಲಿಗೆ ಸೇರಿಲ್ಲ್ಲ. ಕೇವಲ ಮನವಿ ಕೊಡುವುದಾದರೆ ಆಯಾ ಜಿಲ್ಲೆಗಳಲ್ಲೆ ಕೊಡುತ್ತಿದ್ದೆವು. ಈಗಾಗಲೇ ಹಲವು ವರ್ಷಗಳಿಂದ ಕೇಳಿಕೊಳ್ಳುತ್ತಿದ್ದೇವೆ. ಮನವಿ ಮಾಡುತ್ತಿದ್ದೇವೆ ಆದರೆ ಇಲ್ಲಿಯವರೆಗೆ ಯಾವುದೇ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ.
ರಾಜ್ಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೆಲಸಗಳನ್ನು ಬಿಟ್ಟು ಇತರೆ ಬೇರೆ ಎಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಅದರಲ್ಲಿ ಭಾಗ್ಯಲಕ್ಷ್ಮಿ, ಮಾತೃ ಪೂರ್ಣ ಯೋಜನೆ, ಪಲ್ಸ್ ಪೋಲಿಯೊ ಸೇರಿದಂತೆ ಇತರೆ ಬೇರೆಲ್ಲಾ ಕೆಲಸಗಳನ್ನು ಮಾಡುತ್ತಿದ್ದಾರೆ. ಸರ್ಕಾರ ಅಂಗನವಾಡಿ ನೌಕರರಿಂದ ಬೇರೆ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದೆ. ಅವರಿಗೆ ಸೂಕ್ತ ಮತ್ತು ಸಮಾನ ಕೆಲಸಕ್ಕೆ ಸಮಾನ ವೇತನವನ್ನು ನೀಡುತ್ತಿಲ್ಲ. ಎಂದು ದೂರಿದರು.
ಫರಿಯಾಡಿಕಲ್ ಲೇಬರ್ ಫೋರ್ಸ್ ಸರ್ವೇ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಮಹಿಳಾ ನಿರುದ್ಯೋಗಿಗಳು ಹೆಚ್ಚಾಗುತ್ತಿದ್ದಾರೆ. ನಿಗದಿತ ಸಂಬಳ ತೆಗೆದುಕೊಂಡು ಜೀವನ ಮಾಡುತ್ತಿರುವವರು ಕೇವಲ 26% ಮಾತ್ರ ಇದ್ದಾರೆ. ಉಳಿದವರು ಸ್ವಯಂ ಉದ್ಯೋಗ, ಅರೆಕಾಲಿಕ, ಸಾಂದರ್ಭಿಕ, ಗುತ್ತಿಗೆ ಅರೆಗುತ್ತಿಗೆ ಕೆಲಸಗಳನ್ನು ಮಾಡುತ್ತಿದ್ದಾರೆ.
ಇಂದಿನ ಸರ್ಕಾರದ ಉದಾರೀಕರಣ ನೀತಿಯಿಂದ ಎಲ್ಲಾ ಕ್ಷೇತ್ರಗಳು ಖಾಸಗಿಯಾಗುತ್ತಿದ್ದು, ಆಹಾರ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗಾಗಿ ಇರುವ ಯೋಜನೆಗಳ ಪ್ರಮುಖ ಜವಾಬ್ದಾರಿಗಳನ್ನು ಬೇರೆಡೆಗೆ ವರ್ಗಾಯಿಸುವ ಮುಖಾಂತರ ಬಲಹೀನಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಸಾವಿರಾರು ಮಹಿಳೆಯರು ಕೆಲಸ ಕಳೆದುಕೊಳ್ಳುವುದಲ್ಲದೆ, ಐಸಿಡಿಸ್ ಯೋಜನೆಯು ಕೂಡ ತನ್ನ ಉದ್ದೇಶವನ್ನು ಕಳೆದುಕೊಳ್ಳಲಿದೆ ಎಂದರು.
ಪೋಲಿಸರ ಮೂಲಕ ಪಾದಯಾತ್ರೆಯನ್ನು ತಡೆದು ಪ್ರತಿಭಟನಾನಿರತರ ಜೊತೆ ಚರ್ಚಿಸದೆ ಸರ್ಕಾರ ದೌರ್ಜನ್ಯ ಎಸಗುತ್ತಿದೆ. ಶಾಂತಿಯುತವಾಗಿ ಪಾದಯಾತ್ರೆ ಮಾಡಲು ಅವಕಾಶ ನೀಡದೆ ನಿರಂಕುಶ ಧೋರಣೆ ಅನುಸರಿಸಲಾಗುತ್ತಿದೆ. ಅಧಿಕಾರಿಗಳಿಂದ ಮಾಹಿತಿ ತರಿಸಿಕೊಂಡ ಮುಖ್ಯಮಂತ್ರಿಗಳು ನಿರ್ಧಾರ ಪ್ರಕಟಿಸದೆ ಲಕ್ಷಾಂತರ ಮಂದಿ ಕಾರ್ಯಕರ್ತೆಯರನ್ನು ಬೀದಿಯಲ್ಲಿ ನಿಲ್ಲುವಂತೆ ಮಾಡಿರುವುದು ವಿಷಾದನೀಯ ಎಂದು ಬೇಸರ ವ್ಯಕ್ತಪಡಿಸಿದರು.
ನಾವೇನು ಕ್ರೂರಿಗಳಲ್ಲ. ಉಗ್ರಗಾಮಿಗಳು ಅಲ್ಲ. ಅಂಗನವಾಡಿ ನೌಕರರ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ದೊರಕಿಸಿಕೊಡಿ ಎಂದರೆ ಪೋಲೀಸರಿಂದ ನಮ್ಮ ಮೇಲೆ ದೌರ್ಜನ್ಯ ಮಾಡಲು ಮುಂದಾಗಿದ್ದಾರೆ. ಸರ್ಕಾರ ಮಾತುಕತೆಗೆ ಆಹ್ವಾನಿಸಿ ಸಮಯ ನೀಡಿದರೆ ಮತ್ತು ಸಕಾರಾತ್ಮಕವಾಗಿ ಸ್ಪಂದಿಸಿದರೆ ಮಾತ್ರ ಪಾದಯಾತ್ರೆ ಕೈ ಬಿಡಲು ಮುಖಂಡರು ನಿರ್ಧರಿಸಿದ್ದಾರೆ. ಒಂದು ವೇಳೆ ಸಕಾರಾತ್ಮಕ ಭರವಸೆ ದೊರೆಯದಿದ್ದರೆ ಯಾವುದೇ ಕಾರಣಕ್ಕೆ ಪಾದಯಾತ್ರೆ, ಹೋರಾಟ ಹಿಂಪಡೆಯುವುದಿಲ್ಲ ಪಾದಯಾತ್ರೆ ನಡೆಸಿಯೆ ತೀರುತ್ತೇವೆ ಎಂದು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧು ತಿಳಿಸಿದ್ದಾರೆ.
ಸಹಸ್ರಾರು ಸಂಖ್ಯೆ ಕಾರ್ಯಕರ್ತೆಯರು
ರಾಜ್ಯದ ಮೂಲೆ ಮೂಲೆಗಳಿಂದ ತುಮಕೂರಿಗೆ ಅಂಗನವಾಡಿ ಕಾರ್ಯಕರ್ತೆಯರು ಧಾವಿಸುತ್ತಿದ್ದು, ತುಮಕೂರಿನ ಹಾದಿ ಬೀದಿ ಎಲ್ಲಿ ನೋಡಿದರೂ ಕೆಂಪು ಬಣ್ಣದ ಉಡುಪುಗಳನ್ನು ಧರಿಸಿದ ಮಹಿಳೆಯರೆ ಕಂಡು ಬರುತ್ತಿದ್ದಾರೆ. ಸಹಸ್ರಾರು ಸಂಖ್ಯೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಟೌನ್ ಹಾಲ್ ಸರ್ಕಲ್, ಎಸ್.ಪಿ. ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿ, ಗಾಜಿನ ಮನೆ ಸೇರಿದಂತೆ ನಗರದ ಎಲ್ಲೆಡೆ ಗುಂಪು ಗುಂಪಾಗಿ ನೆರೆದಿದ್ದಾರೆ.
ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿ:
ಪ್ರತಿಭಟನೆಗೂ ಮುನ್ನ ಪತ್ರಿಕಾಗೋಷ್ಠಿ ನಡೆಸಿದ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಮುಖಂಡರು, ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿ ಇತ್ತೀಚೆಗೆ ಮಾಡಿರುವ ಶಿಫಾರಸ್ಸಿನಲ್ಲಿ 3 ರಿಂದ 8 ವರ್ಷದ ಒಂದು ವರ್ಗೀಕರ ಮಾಡಿ ಮಾಧ್ಯಮವನ್ನು ಶಿಕ್ಷಣ ಇಲಾಖೆಯಡಿ ತೆರೆಯಬೇಕೆಂದ ಶಿಫಾರಸ್ಸು ಮಾಡಿದೆ. ಮಾತ್ರವಲ್ಲದೆ ರಾಜ್ಯದಲ್ಲಿ 2019 ಮೇ ತಿಂಗಳಲ್ಲಿ ಮೂರುವರೆ ವರ್ಷ ಮೇಲ್ಪಟ್ಟ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲ್ಲೂ ಎಲ್‍ಕೆಜಿ ಯುಕೆಜಿ ಗಳನ್ನು ಪ್ರಾರಂಭಿಸಲಾಗಿದೆ. ಶಿಕ್ಷಣ ಇಲಾಖೆಯಲ್ಲಿ ತಂದಿರುವ ಈ ಸುತ್ತೋಲೆ ಐಸಿಡಿಸಿ ಯೋಜನೆಯ ತದ್ರೂಪಿ ಕಾರ್ಯಕ್ರಮವಾಗಿದೆ ಎಂದು ಆರೋಪಿಸಿದರು.
ಈಗಾಗಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 4200 ಕೋಟಿ ರೂಗಳನ್ನು ಪೂರಕ ಪೌಷ್ಠಿಕ ಆಹಾರ, ಪೂರ್ವಪ್ರಾಥಮಿಕ ಶಿಕ್ಷಣವನ್ನೊಳಗೊಂಡಂತೆ ಖರ್ಚು ಮಾಡಲಾಗುತ್ತಿದೆ. ಆದರೆ ಸರ್ಕಾರ ಈ ಹಣವನ್ನು ಸದ್ಬಳಕೆ ಮಾಡುವ ಬದಲು ಶಿಕ್ಷಣ ಇಲಾಖೆಯ ಮುಖಾಂತರ ಒಂದೆ ಮಗುವಿಗೆ ಡಬಲ್ ಹಣವನ್ನು ಖರ್ಚು ಮಾಡಲು ಹೊರಟಿದೆ ಎಂದು ರಾಜ್ಯಾಧ್ಯಕ್ಷೆ ಎಸ್.ವರಲಕ್ಷ್ಮೀ ಆರೋಪಿಸಿದರು.
ಇಂದು ಅಂಗನವಾಡಿ ಕೇಂದ್ರಗಳು ಹಳೆಯ ರೀತಿಯಲ್ಲಿಯೆ ಕಾರ್ಯನಿರ್ವಹಿಸುತ್ತಿವೆ. ಬದಲಾಗುತ್ತಿರುವ ಸಮಾಜದಲ್ಲಿ ಅಂಗನವಾಡಿ ಕೇಂದ್ರಗಳು ಕೂಡ ಮಕ್ಕಳನ್ನು ಆಕರ್ಷಿಸುವ ಕೇಂದ್ರಗಳಾಗಬೇಕು. ಈ ನಿಟ್ಟಿನಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪಾಲನೆಯೊಟ್ಟಿಗೆ ಎಲ್‍ಕೆಜಿ ಯುಕೆಜಿ ಶಿಕ್ಷಣ ನೀಡಬೇಕು. ಅಂಗನವಾಡಿ ಕೇಂದ್ರ ವೇಳಾಪಟ್ಟಿಯಲ್ಲಿ 3 ಗಂಟೆ ಶಾಲಾಪೂರ್ವ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಾತೃಪೂರ್ಣ ಯಶಸ್ವಿ ಮಾಡಲು ಹೆಚ್ಚುವರಿ ಸಹಾಯಕರಿಯನ್ನು ಕೊಡಬೇಕು.
ಈಗಾಗಲೇ ಸರ್ಕಾರಿ ಶಾಲೆಗಳಲ್ಲಿ ಪ್ರಾರಂಭವಾಗುತ್ತಿರುವ ಎಲ್‍ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸದಂತೆ ಇಲಾಖೆಯಿಂದ ತಡೆಯೊಡ್ಡಿ, ಅಂಗನವಾಡಿಯಲ್ಲಿ ನಡೆಸುವಂತೆ ಸೂಚಿಸಬೇಕು. ಐಸಿಡಿಎಸ್ 6 ಉದ್ದೇಶಗಳಿಗೆ ಬಿಟ್ಟು ಉಳಿದ ಯಾವುದೇ ಕೆಲಸಗಳನ್ನು ಅಂಗನವಾಡಿ ನೌಕರರಿಂದ ಮಾಡಿಸಬಾರದು. ಹೊಸ ಶಿಕ್ಷಣ ನೀತಿಯ ಶಿಫಾರಸ್ಸಿನಲ್ಲಿರುವ 3 ರಿಂದ 9 ವರ್ಷದ ವರ್ಗೀಕರಣವನ್ನು ವಿರೋಧಿಸಬೇಕು. ಈಗಿರುವ ನಿವೃತ್ತಿ ಸೌಲಭ್ಯವನ್ನು ಬದಲಾಯಿಸಿ ಎಲ್‍ಐಸಿ ಆಧಾರಿತ ಪಿಂಚಣಿ ನೀಡಬೇಕು. ಸೇವಾ ಜೇಷ್ಠತೆಯ ಆಧಾರದಲ್ಲಿ ಕನಿಷ್ಠ ವೇತನ ಜಾರಿ ಮಾಡಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆ ಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು .ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಎಚ್.ಎಸ್.ಸುನಂದಾ, ಖಜಾಂಚಿ ಕಮಲ, ತುಮಕೂರು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್, ಗುಲ್ಜಾರ್‍ಬಾನು, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎ.ಆರ್.ಸಿಂಧು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ