ಸಂವಿಧಾನ ಈ ನೆಲದ ಪವಿತ್ರ ಗ್ರಂಥ.!

ದಾವಣಗೆರೆ:

    ಹಿಂದೂ ಧರ್ಮ ಭಗದ್ಗೀತೆ, ಕ್ರೈಸ್ತ ಧರ್ಮ ಬೈಬಲ್, ಇಸ್ಲಾಂ ಕುರಾನ್‍ಗಳಂತಹ ಪವಿತ್ರ ಗ್ರಂಥ ಹೊಂದಿರುವಂತೆ ಈ ನೆಲಸ ಕಾನೂನು ಆಗಿರುವ ಸಂವಿಧಾನವು ಭಾರತದ ಪವಿತ್ರ ಗ್ರಂಥವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಅಂಬಾದಾಸ್ ಜಿ ಕುಲಕರ್ಣಿ ಅಭಿಪ್ರಾಯಪಟ್ಟರು.

    ಇಲ್ಲಿನ ಆರ್.ಎಲ್ ಕಾನೂನು ಕಾಲೇಜಿನಲ್ಲಿ ಮಂಗಳವಾರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಆರ್.ಎಲ್. ಕಾನೂನು ಕಾಲೇಜು ಇವುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ‘ಸಂವಿಧಾನ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಸಂವಿಧಾನವು ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲ ನಾಗರೀಕರಿಗೆ ಅನ್ವಯವಾಗುವ ಭಾರತ ದೇಶದ ಪವಿತ್ರ ಗ್ರಂಥವಾಗಿದ್ದು, ಸಮಾಜದ ಪ್ರತಿಯೊಬ್ಬ ನಾಗರೀಕರಿಗೆ ಅನ್ವಯವಾಗುವಂತಹ ಹಕ್ಕು ಮತ್ತು ಕರ್ತವ್ಯಗಳನ್ನು ಒಳಗೊಂಡು ಇದು ರಚನೆಯಾಗಿದೆ. ಸಂವಿಧಾನವು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಮೂರು ಅಂಗಗಳಿಂದ ಕೂಡಿದ್ದು, ಪ್ರಜೆಗಳಿಗೆ ಸೂಕ್ತ ಹಕ್ಕು, ಕರ್ತವ್ಯ ಮತ್ತು ನ್ಯಾಯವನ್ನು ಸಂವಿಧಾನ ಒದಗಿಸಲಿದೆ ಎಂದು ಹೇಳಿದರು.

   ಸಂವಿಧಾನ ನಮ್ಮೆಲ್ಲರಿಗೆ ಹಕ್ಕು ಮತ್ತು ಕರ್ತವ್ಯಗಳನ್ನು ನೀಡಿದ್ದು, ಪ್ರಸ್ತುತ ನಾವು ನಮ್ಮ ಹಕ್ಕುಗಳನ್ನು ಮಾತ್ರ ಪಡೆದುಕೊಳ್ಳುತ್ತಿದ್ದೇವೆ. ಆದರೆ, ಕರ್ತವ್ಯ ಪಾಲಿಸುತ್ತಿಲ್ಲ. ಯಾವುದೇ ಸಾಮಾನ್ಯ ಪ್ರಜೆಗೆ ಅವರ ಹಕ್ಕು ಮತ್ತು ಕರ್ತವ್ಯಗಳ ಮಹತ್ವ ಅರಿವಾದಾಗ ಮಾತ್ರ ಅವುಗಳನ್ನು ಆಚರಣೆಗೆ ತರಲು ಸಾಧ್ಯ. ಆದ್ದರಿಂದ ಕಾನೂನು ವಿದ್ಯಾರ್ಥಿಗಳು ಜನಸಾಮಾನ್ಯರಿಗೆ ಸಂವಿಧಾನದಲ್ಲಿನ ಕರ್ತವ್ಯಗಳು ಮತ್ತು ಅದನ್ನು ಪಾಲಿಸುವಂತೆ ಅರಿವು ಮೂಡಿಸಬೇಕೆಂದು ಕಿವಿಮಾತು ಹೇಳಿದರು.

   ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನುನೂ ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಭು ಎನ್. ಬಡಿಗೇರ್ ಮಾತನಾಡಿ, ಸಂವಿಧಾನ ದಿನವನ್ನು ಹಿಂದೆ ಕಾನೂನು ದಿನವನ್ನಾಗಿ ಆಚರಣೆ ಮಾಡಲಾಗುತ್ತಿತ್ತು. ಭಾರತ ಸರ್ಕಾರ 2015ರಲ್ಲಿ ನ.26ನ್ನು ಸಂವಿಧಾನ ದಿನವನ್ನಾಗಿ ಆಚರಿಸುವಂತೆ ಘೋಷಣೆ ಮಾಡಿತು. ಸಂವಿಧಾನವು ಅನೇಕ ಜನರ ಶ್ರಮದ ಫಲವಾಗಿ ರಚನೆಗೊಂಡಿದೆ. ಸಂವಿಧಾನದಲ್ಲಿನ ನೀತಿ ನಿಯಮಗಳನ್ನು ಪ್ರತಿಯೊಬ್ಬ ಪ್ರಜೆಯೂ ಅನುಸರಿಸಬೇಕು ಎಂದರು.

    ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್.ಎಚ್.ಅರುಣ್‍ಕುಮಾರ್ ಮಾತನಾಡಿ, ಜಗತ್ತಿನ ಅತೀ ದೊಡ್ಡ ಸಂವಿಧಾನವೆಂದರೆ ಅದು ನಮ್ಮ ದೇಶದ ಸಂವಿಧಾನ. ಜಗತ್ತಿನ ಎಲ್ಲಾ ರಾಷ್ಟ್ರಗಳ ಸಂವಿಧಾನದ ಅಂಶಗಳನ್ನು ಎರವಲು ಪಡೆದು ನಮ್ಮ ನೆಲಕ್ಕೆ ಸರಿಹೊಂದುವಂತೆ ರಚಿಸಲಾಗಿದೆ. ಸಂವಿಧಾನ ಒಂದು ಕಾದಂಬರಿ, ಕವಿತೆಯಲ್ಲ, ಅದು ಒಂದು ಪವಿತ್ರ ಗ್ರಂಥವಾಗಿದ್ದು ದೇಶದ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎಂದರು.

    ಅಧ್ಯಕ್ಷತೆ ವಹಿಸಿದ್ದ ಆರ್.ಎಲ್. ಕಾನೂನು ಕಾಲೇಜು ಪ್ರಾಂಶುಪಾಲ ಡಾ.ಬಿ.ಎಸ್.ರೆಡ್ಡಿ, ನಮ್ಮ ಸಂವಿಧಾನದಿಂದಾಗಿ ವಿವಿಧತೆಯಲ್ಲಿ ಏಕತೆಯನ್ನು ಕಾಣಲು ಸಾಧ್ಯವಾಗಿದೆ. ಸುಮಾರು ಶೇ.60 ರಿಂದ 70ರಷ್ಟು ಅಂಶವನ್ನು ಬ್ರಿಟಿಷ್‍ರಿಂದ ಪಡೆದಿರುವುದರಿಂದ ಕೆಲವು ಸಮಸ್ಯೆಗಳಿವೆ. ತಿದ್ದುಪಡಿಯ ಮೂಲಕ ಇಂತಹ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿದೆ. ಸಂವಿಧಾನವು ಸುಪ್ರೀಂ ಕೋರ್ಟ್ ಮೂಲಕ ಪ್ರತಿಯೊಬ್ಬರು ನ್ಯಾಯಪಡೆಯಲು ಅವಕಾಶವನ್ನು ಕಲ್ಪಿಸಿದೆ. ಸರ್ಕಾರಗಳು ಕಾನೂನನ್ನು ಉಲ್ಲಂಘಿಸಿದರೆ ಪ್ರಜೆಗಳು ಸರ್ಕಾರವನ್ನು ಬೀಳಿಸುವ ಹಕ್ಕನ್ನು ಸಂವಿಧಾನ ನೀಡಿದೆ ಎಂದು ಹೇಳಿದರು.ವಕೀಲೆ ರೇಖಾ. ಕೆ.ಎಸ್. ಉಪನ್ಯಾಸ ನೀಡಿದರು.ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಟಿ.ಮಂಜುನಾಥ್ ಮಾತನಾಡಿದರು.

    ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎನ್.ಎಂ.ಆಂಜನೇಯ ಗುರೂಜಿ, ಜಿಲ್ಲಾ ಕಾನುನೂ ಸೇವಾ ಪ್ರಾಧಿಕಾರದ ಪ್ಯಾನಲ್ ವಕೀಲರು ಮತ್ತು ಆರ್.ಎಲ್. ಕಾನೂನು ಕಾಲೇಜಿನ ಬೋಧಕ ವರ್ಗವದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಿರಣ್ ಕಾರ್ಯಕ್ರಮ ನಿರೂಪಿಸಿದರು. ಎಂ. ಸೋಮಶೇಖರ್ ಸ್ವಾಗತಿಸಿದರು. ಜಿ.ಎಸ್.ಯತೀಶ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link