ವಿಧಾನಸಭೆ ಕಲಾಪದ ಮೇಲೂ ತನ್ನ ವಕ್ರ ದೃಷ್ಠಿ ಬೀರಿದ ಕೊರೋನಾ..!

ಬೆಂಗಳೂರು

     ಸೋಮವಾರದಿಂದ ರಾಜ್ಯ ವಿಧಾನ ಮಂಡಲದ ಅಧಿವೇಶನ ಆರಂಭವಾಗುತ್ತಿದೆ. ಹೆಚ್ಚುತ್ತಿರುವ ಕರೋನ ಸೋಂಕು ಪ್ರಕಣಗಳಿಂದಾಗಿ ನಿಗದಿತ ಅವಧಿಯವರೆಗೆ ಕಲಾಪ ನಡೆಯಲಿದೆಯೇ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ.

    ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆಯ ವಿಚಾರ ಬಹಳವಾಗಿ ಕೇಳಿ ಬರುತ್ತಿರುವ ಸಮಯದಲ್ಲೇ ಅಧಿವೇಶನ ನಡೆಯುತ್ತಿರುವ ಕಾರಣ ಆಡಳಿತಾರೂಢ ಬಿಜೆಪಿಯಲ್ಲಿ ಮತ್ತಷ್ಟು ರಾಜಕೀಯ ಚುಟುವಟಿಕೆ ಗರಿಗೆದರಲಿವೆ.8 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ 20 ಹೆಚ್ಚು ಸುಗ್ರಿವಾಜ್ಞೆಗಳು ಮತ್ತು 35 ಕ್ಕೂ ಹೆಚ್ಚು ಮಸೂದೆಗಳು ಮಂಡನೆಯಾಗಲು ಕಾದು ಕುಳಿತಿವೆ. ಇದೇ ಮೊದಲ ಬಾರಿಗೆ ಡಿಜಿಟಲ್ ತಂತ್ರಜ್ಞಾನ ಬಳಕೆಯಾಗುತ್ತಿರುವುದು ಸಹ ವಿಶೇಷವಾಗಿದೆ.

    ಪ್ರವಾಹ ಸಂತ್ರಸ್ತರಿಗೆ ಪರಿಹಾರ ತಲುಪದಿರುವುದು, ಕೇಂದ್ರ ಸರಕಾರದ ನೆರವು ನಿರೀಕ್ಷಿತ ಪ್ರಮಾಣದಲ್ಲಿ ಸಿಗದಿರುವುದು, ಜಿಎಸ್ಟಿ ಪರಿಹಾರ ಬಾರದ ಕಾರಣ ರಾಜ್ಯ ಸರಕಾರದ ಸಾಲ ಪರ್ವತ ರೀತಿಯಲ್ಲಿ ಬೆಳೆಯುತ್ತಿರುವುದು ಆಡಳಿತ ಮತ್ತು ವಿಪಕ್ಷಗಳ ನಡುವೆ ಜಂಗೀಕುಸ್ತಿಗೆ ವೇದಿಕೆಯಾಗಲಿದೆ.

    ಮಳೆಯಿಂದ ಮನೆ-ಮಠ ಕಳೆದುಕೊಂಡವರ ಆಕ್ರಂದನ, ಸಂಬಳವಿಲ್ಲದೆ ಪರಿತಪಿಸುತ್ತಿರುವ ಅತಿಥಿ ಉಪನ್ಯಾಸಕರು, ಪಂಚಾಯಿತಿ ನೌಕರರ ಗೋಳು ಹೇಳ ತೀರದಾಗಿದೆ. ಇದಕ್ಕೆಲ್ಲ ಸದನದಲ್ಲಿ ಪರಿಹಾರ ದೊರಕಲಿದೆ ಎಂಬುದು ಮರೀಚಿಕೆಯೇ ಸರಿ. ಸಂಬಳ ಹೆಚ್ಚು ಮಾಡುವಂತೆ ಆಶಾ ಕಾರ್ಯಕರ್ತೆಯರು, ಸರ್ಕಾರಿ ವೈದ್ಯರು ಬಹಳದ ದಿನಗಳಿಂದ ಒತ್ತಾಯ ಮಾಡುತ್ತಿದ್ದಾರೆ. ಅವರ ಗೋಳು ಸಹ ತೀರದಾಗಿದೆ.

    ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನವನ್ನು ಶೀಘ್ರವೇ ಬಿಡುಗಡೆ ಮಾಡದಿದ್ದರೆ ಆಡಳಿತ ಪಕ್ಷದ ಶಾಸಕನಾಗಿ ಸದನದಲ್ಲಿ ಉನ್ನತ ಶಿಕ್ಷಣ ಸಚಿವರ ವಿರುದ್ಧವೆ ಧ್ವನಿಯೆತ್ತುವುದಾಗಿ ಆಡಳಿತ ಪಕ್ಷದ ಸದಸ್ಯ ಆಯನೂರು ಮಂಜುನಾಥ್ ಎಚ್ಚರಿಸಿರುವುದು ಪರಿಸ್ಥಿತಿ ಗಂಭೀರತೆಗೆ ಕಾರಣವಾಗಿದೆ.

    ಮಾರ್ಚ್ ತಿಂಗಳಿಂದ ಇದುವರೆಗೂ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರ್ಕಾರ ವೇತನ ಬಿಡುಗಡೆ ಮಾಡಿಲ್ಲ. ಲಾಕ್ ಡೌನ್ ಸಂದರ್ಭದಲ್ಲಿ ವೇತನ ಸಿಗದೆ ಜೀವನ ನಿರ್ವಹಣೆಯು ಸಂಕಷ್ಟಕ್ಕೀಡಾಗಿ ನಾಲ್ವರು ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗೆ ನೋವಿನ ಕತೆಗಳು ಬೇಕಾದಷ್ಟಿವೆ. ಆಕ್ರಂದನ, ಗೋಳು ಹೇಳತೀರದಾಗಿದೆ.

    ಕೋವಿಡ್ ಹಿನ್ನೆಲೆಯಲ್ಲಿ ಬಹಳಷ್ಟು ಸಚಿವರು, ಶಾಸಕರು, ಸದನದ ಕಲಾಪಗಳಿಂದ ದೂರ ಉಳಿಯುವುದರಿಂದ ಕಲಾಪ ಕಳೆಕಟ್ಟುವ ಸಾಧ್ಯತೆ ಬಹಳ ಕಡಿಮೆ ಎಂದೇ ಹೇಳಬಹುದು. ಕರೋನ ಉಪಕರಣಗಳ ಖರೀದಿಯಲ್ಲಿ ನಡೆದಿದೆ ಎನ್ನಲಾದ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ, ಅವ್ಯವಹಾರ, ಡಿಜಿಹಳ್ಳಿ ಕೋಮು ಗಲಭೆ, ಸಿನಿಮಾ, ಪೊಲೀಸ್ ರಾಜಕೀಯ ವಲಯವನ್ನು ಆವರಿಸಿಕೊಂಡಿರುವ ಡ್ರಗ್ ದಂಧೆ ಹಾವಳಿ ಸದನದಲ್ಲಿ ಭಾರಿ ಸದ್ದುಗದ್ದಲ ಮಾಡಲಿದೆ.

    ಆದರೆ ಅದರಿಂದ ಹೆಚ್ಚಿನ ಪ್ರಯೋಜನ ಕಂಡು ಬರುವ ಸಾಧ್ಯತೆ ಬಹಳ ವಿರಳ ಎಂದೇ ಹೇಳಬಹುದು. ಭೂಸುಧಾರಣಾ ತಿದ್ದುಪಡಿ ವಿಧೇಯಕ, ಎಪಿಎಂಸಿ ಕಾಯಿದೆ ತಿದ್ದುಪಡಿ, ಕೈಗಾರಿಕಾ ಕಾಯಿದೆ ತಿದ್ದುಪಡಿ ಕಾಯಿದೆಯು ಶ್ರೀಮಂತರ ಪರವಾಗಿದೆ. ಬಡವರು, ರೈತರ ವಿರೋಧಿಯಾಗಿದೆ ಎಂಬುದು ವಿಪಕ್ಷಗಳ ಕಟು ಟೀಕೆಯಾಗಿದೆ.

    ರಾಜ್ಯದ ಅನೇಕ ಜಿಲ್ಲೆಗಳಲ್ಲಿ ತಲೆದೋರಿದ ಮಳೆ ಮತ್ತು ಪ್ರವಾಹದ ವಿಚಾರಗಳು ಸದನದಲ್ಲಿ ಪ್ರಸ್ತಾಪವಾಗಲಿದ್ದರೂ ಪರಿಹಾರ ಎಂಬುದು ಕನಸಿನ ಮಾತೆ ಸರಿ. ಈಗಾಗಲೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಕರೋನ ಬಂದು ಹೋಗಿದೆ.

    ಅಧಿವೇಶನ ಆರಂಭವಾಗುವ ವೇಳೆಗೆ ಮತ್ತೆ ಎಷ್ಟು ಶಾಸಕರಿಗೆ ಕರೋನ ಸೋಂಕು ಅಮರಿಕೊಳ್ಳಲಿದೆಯೋ ಗೊತ್ತಿಲ್ಲ. ಒಂದು ಕಡೆ ನಾಯಕತ್ವ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಆರ್ಭಟ ಉಹಾಪೋಹ, ಮತ್ತೊಂದು ಕಡೆ ಕರೋನ ಕಾಟದ ನಡುವೆ ನಡೆಯಲಿರುವ ಅಧಿವೇಶನದಲ್ಲಿ ಪ್ರಮುಖ ಮತ್ತು ಮಹತ್ವದ ವಿಚಾರಗಳಿಗೆ ಸಮಯ ಸಿಗುವುದೇ ಡೋಲಾಯಮಾನವಾಗಿದೆ.

    ಕಳೆದ ಮಾರ್ಚ್‍ನಲ್ಲಿ ಅಧಿವೇಶನ ನಡೆಯುತ್ತಿದ್ದಾಗ ಕರೋನ ಆರಂಭಿಕ ಹಂತದಲ್ಲಿತ್ತು. ಈಗ ಅದು ಬೆಳೆದು ಹೆಮ್ಮರವಾಗಿದೆ. ಸೋಂಕಿತರ ಸಂಖ್ಯೆ 5 ಲಕ್ಷ ದಾಟಿ ಹೋಗಿದೆ. ರಾಜಧಾನಿ ಬೆಂಗಳೂರಿನಲ್ಲಿ ದಿನಕ್ಕೆ 3 ರಿಂದ 4 ಸಾವಿರ ಕರೋನ ಸೋಂಕು ಪ್ರಕರಣಗಳು ವರದಿಯಾಗುತ್ತಿರುವುದು ಬಹಳ ಆತಂಕಕ್ಕೆ ಕಾರಣವಾಗಿದೆ. ಆಗ ಅಧಿವೇಶನ ಮುಂದೂಡಿ ಜನರ ಜೀವ ಬಹಳ ಮುಖ್ಯ ಎಂದು ವಿರೋಧಪಕ್ಷಗಳು ಬೊಬ್ಬೆ ಹಾಕಿದ್ದವು. ಈಗ ಅಧಿವೇಶವನನ್ನು 8 ದಿನಗಳಿಗೆ ಬದಲಾಗಿ 15 ದಿನ ನಡೆಸಬೇಕೆಂದು ಹೇಳುತ್ತಿರುವುದು ಕಾಟಚಾರಕ್ಕಾಗಿಯೇ ಎಂಬ ಸಂದೇಹವೂ ಕಾಡುತ್ತಿದೆ.

    ಕಾಂಗ್ರೆಸ್- ಜೆಡಿಎಸ್ ಮೈತ್ರಿ ಸರಕಾರವನ್ನು ಡ್ರಗ್ ಮಾಫಿಯಾ ಶಕ್ತಿಗಳಿಂದಲೆ ಉರುಳಿಸಲಾಯಿತು ಎಂಬ ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಗಂಭೀರ, ಗುರುತರ ಆರೋಪವು ಸದನದಲ್ಲಿ ಮಾತಿನ ಚಕಮಕಿಗೆ ಕಾರಣವಾಗಲಿದೆ. ಒಟ್ಟಾರೆ ಈ ಅಧಿವೇಶನ ಹೇಗೆ ಅಳೆದು ತೂಗಿ ನೋಡಿದರೂ ಫಲಪ್ರದವಾಗುವ ಸಾಧ್ಯತೆಗಳೆ ಕಾಣುತ್ತಿಲ್ಲ. ದಿನೆ, ದಿನೆ ಅಮರಿಕೊಳ್ಳುತ್ತಿರುವ ಕರೋನ ಸಹ ಅಧಿವೇಶನವನ್ನು ಸುಸೂತ್ರವಾಗಿ ನಡೆಸಲು ಅವಕಾಶ ಕೊಡುವ ಸಾಧ್ಯತೆಗಳು ಕಡಿಮೆಯಿದೆ. ಸದನಕ್ಕೆ ಬರುವಾಗ ನೆಗೆಟಿವ್ ಇದ್ದರೂ, ಆನಂತರ ಸದನಕ್ಕೆ ಬಂದ ಮೇಲೆ ನಂತರ ಅವರಿಗೆ ಅಪ್ಪಿ-ತಪ್ಪಿ ಪಾಸಿಟಿವ್ ಎಂಬ ವರದಿ ಬಂದುಬಿಟ್ಟರೆ ಅಲ್ಲಿಗೆ ಅಧಿವೇಶನದ ಕತೆ ಗೋವಿಂದ..!.

    ಹೇಗೆ ನೋಡಿದರೂ ಒಂದು ಭಯ, ಆತಂಕದ ಕಾರ್ಮೋಡದ ಸನ್ನಿವೇಶದಲ್ಲೆ ಕಲಾಪ ನಡೆಯಲಿದೆ. ಜ್ವಲಂತ ಸಮಸ್ಯೆಗೆ ಪರಿಹಾರ ದೊರಕಲಿದೆ ಎಂಬುದು ಕಳೆದು ಹೋಗಿ ಎಷ್ಟೋ ವರ್ಷಗಳು ಉರುಳಿ ಹೋಗಿವೆ. ವಿಧಾನಮಂಡಲದ ಅಧಿವೇಶನ ಎಂದರೆ ಅಬ್ಬರ ಆರ್ಭಟ, ಆರೋಪ, ಪ್ರತ್ಯಾರೋಪ, ಮಾತಿನ ಚಕಮಕಿ ಎಂಬುದೇ ಈಗ ಸರ್ವ ವೇದ್ಯವಾಗಿಬಿಟ್ಟಿದೆ..!! ಕರೋನ ಕಾರಣಕ್ಕಾಗಿ ಸಂಸತ್ ಅಧಿವೇಶನ ಮೊಟಕುಗೊಳಿಸಲು ಹೊರಟಿರುವಂತೆ ರಾಜ್ಯದಲ್ಲಿಯೂ ವಿಧಾನಮಂಡಲ ಅಧಿವೇಶನವನ್ನು ಕೇವಲ ಮೂರು ದಿನದಲ್ಲೇ ಪೂರ್ಣಗೊಳಿಸಲು ಸರ್ಕಾರ ಆಸಕ್ತಿವಹಿಸಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಹರಿದಾಡುತ್ತಿದೆ.
     ಮೂರು ಪ್ರಮುಖ ವಿಧೇಯಕಗಳಾದ ಭೂ ಸುಧಾರಣೆ ತಿದ್ದುಪಡಿ, ಎಪಿಎಂಸಿ ತಿದ್ದುಪಡಿ ಹಾಗೂ ಪಂಚಾಯತ್ ರಾಜ್ ತಿದ್ದುಪಡಿ ವಿಧೇಯಕಗಳನ್ನು ಈ ಅಧಿವೇಶನದಲ್ಲಿ ಮಂಡಿಸಲೇಬಾರದು ಎಂಬ ಒತ್ತಡ ಪ್ರತಿಪಕ್ಷಗಳ ಕಡೆಯಿಂದಲೂ ಕೇಳಿ ಬರುತ್ತಿದೆ ಎಂದೂ ಹೇಳಲಾಗುತ್ತಿದೆ. ಕಾಟಾಚಾರಕ್ಕಾಗಿ ನಡೆಯಲಿರುವ ಅಧಿವೇಶನ ಯಾರಿಗೂ ಬೇಡವಾಗಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಸೋಮವಾರ ಮೊದಲ ದಿನವೇ ಕಲಾಪ ಸಲಹಾ ಸಮಿತಿ ಸಭೆ ನಡೆಯಲಿದ್ದು, ಪ್ರಶ್ನೋತ್ತರ ಅವಧಿ ಬೇಕೇ ಬೇಡವೇ ಎಂಬುದು ತೀರ್ಮಾನವಾಗಲಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap