ಬೆಂಗಳೂರು
ಬಳ್ಳಾರಿ ಜೈಲಿನಿಂದ ಹೊರಬಂದ 10 ದಿನಗಳಲ್ಲಿ ಒಂದು ಕೊಲೆ ಒಂದು ಹಲ್ಲೆ ಸುಲಿಗೆ ನಡೆಸಿ ಪೊಲೀಸರಿಗೆ ಸವಾಲಾಗಿದ್ದ ಕುಖ್ಯಾತ ರೌಡಿ ಸೈಲೆಂಟ್ ಸುನೀಲ್‍ನ ಸಹಚರ ರೇಣುಕಾ ಪ್ರಸಾದ್ ಅಲಿಯಾಸ್ ಪ್ರಸಾದ್ ಕಾಲಿಗೆ ಮಾಗಡಿ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ.
ನಾಲ್ಕು ಕೊಲೆ.4 ಕೊಲೆಯತ್ನ,ಸುಲಿಗೆ ಬೆದರಿಕೆ ಸೇರಿ 12ಕ್ಕೂ ಹೆಚ್ಚು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಬಂಧಿಸಲು ಬಂದ ಪೊಲೀಸ್ ಪೇದೆ ಮೇಲೆ ಡ್ರಾಗರ್‍ನಿಂದ ಹಲ್ಲೆ ನಡೆಸಿ ಪೆÇಲೀಸರ ಗುಂಡೇಟು ತಗುಲಿ ಗಾಯಗೊಂಡಿರುವ ತಾವರೆಕೆರೆಯ ರೌಡಿ ರೇಣುಕಾ ಪ್ರಸಾದ್ (28) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಂಧಿಸಲು ಬೆನ್ನಟ್ಟಿ ಹೋದಾಗ ರೌಡಿ ಪ್ರಸಾದ್ ಡ್ರಾಗರ್‍ನಿಂದ ಇರಿದಿದ್ದಕ್ಕೆ ಗಾಯಗೊಂಡಿರುವ ಮಾಗಡಿ ಪೊಲೀಸ್ ಠಾಣೆ ಪೇದೆ ಹುಲಿರಾಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಗುರುವಾರ ಮಧ್ಯರಾತ್ರಿ ಈ ಕಾರ್ಯಾಚರಣೆ ನಡೆದಿದೆ.ನಾಲ್ಕು ಕೊಲೆ, 3 ಕೊಲೆಯತ್ನ ಸೇರಿದಂತೆ 10ಕ್ಕೂ ಹೆಚ್ಚು ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೇಣುಕಾಪ್ರಸಾದ್,ಇತ್ತೀಚೆಗೆ ನಂದಿನಿ ಲೇಔಟ್‍ನಲ್ಲಿ ಕೊಲೆ ಕೃತ್ಯ ನಡೆಸಿ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ಆತನ ಅಪರಾಧ ಹಿನ್ನೆಲೆಯನ್ನು ಗಮನಿಸಿ, ಬಳ್ಳಾರಿ ಜೈಲಿಗೆ ಕಳುಹಿಸಲಾಗಿತ್ತು. ಕಳೆದ 10 ದಿನಗಳ ಹಿಂದಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿದ್ದ ರೇಣುಕಾಪ್ರಸಾದ್, ಕಳೆದ ಶನಿವಾರ ರಾತ್ರಿ ಜೆಪಿ ನಗರದಲ್ಲಿ ರೌಡಿ ವಿವೇಕ್ ಜತೆ ಸೇರಿ ಸುನಿಲ್ ಕುಮಾರ್ ಎಂಬಾತನನ್ನು ಕೊಚ್ಚಿ ಕೊಲೆ ಮಾಡಿದ್ದ.
ಅಲ್ಲಿಂದ ತಲೆ ಮರೆಸಿಕೊಂಡಿದ್ದ ರೇಣುಕಾಪ್ರಸಾದ್ ಗುರುವಾರ ರಾತ್ರಿ ಮಾಗಡಿ ಬಳಿಯ ಚಂದ್ರಪ್ಪ ಸರ್ಕಲ್‍ನ ಬಾರ್‍ವೊಂದರಲ್ಲಿ ಕುಡಿದು ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ 70 ಸಾವಿರ ರೂ.ಗಳನ್ನು ದೋಚಿ ಪರಾರಿಯಾಗಿದ್ದ.ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಮಾಗಡಿ ಪೊಲೀಸರು ಪರಾರಿಯಾಗಿದ್ದ ರೇಣುಕಾ ಪ್ರಸಾದ್‍ಗಾಗಿ ಶೋಧ ನಡೆಸಿದಾಗ ಆತ ಮಧ್ಯರಾತ್ರಿ 12ರ ವೇಳೆ ಕುಂಬಳಗೋಡು ಬಳಿಯ ವಿನಾಯಕ ನಗರದ ಶ್ರೀನಿಧಿ ಲಾಡ್ಜ್ ಬಳಿ ಅವಿತಿರುವುದು ಪತ್ತೆಯಾಯಿತು.
ಕೂಡಲೇ ಕಾರ್ಯಾಚರಣೆ ಕೈಗೊಂಡ ಮಾಗಡಿ ಸರ್ಕಲ್ ಇನ್ಸ್‍ಪೆಕ್ಟರ್ ರವಿ ಮತ್ತವರ ಸಿಬ್ಬಂದಿ ಪ್ರಸಾದ್‍ನನ್ನು ಬೆನ್ನಟ್ಟಿ ಬಂಧಿಸಲು ಹೋಗಿದ್ದಾರೆ. ಪ್ರಸಾದ್‍ನನ್ನು ಹಿಡಿಯಲು ಹೋದ ಪೇದೆ ಹುಲಿರಾಯನಿಗೆ ಡ್ರ್ಯಾಗರ್‍ನಿಂದ ಚುಚ್ಚಿ ಪ್ರಸಾದ್ ಓಡಿ ಹೋಗಲು ಯತ್ನಿಸಿದ್ದಾನೆ.
ಡ್ರ್ಯಾಗರ್ ಕೆಳಗೆ ಹಾಕಿ ಶರಣಾಗುವಂತೆ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿ ಸೂಚನೆ ನೀಡಿದರೂ ಮತ್ತೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಪ್ರಸಾದ್ ಮೇಲೆ ಮತ್ತೊಂದು ಗುಂಡು ಹಾರಿಸಿದಾಗ ಅದು ಎಡಗಾಲಿಗೆ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ.ಆತನನ್ನು ಬಂಧಿಸಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸ್ ಪೇದೆ ಹುಲಿರಾಯ ಅವರನ್ನು ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ರಾಮನಗರ ಎಸ್‍ಪಿ ಅನೂಪ್ ಶೆಟ್ಟಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








