ಚಿಕ್ಕನಾಯಕನಹಳ್ಳಿ :
ತಾಲ್ಲೂಕಿನಲ್ಲಿ ಕಳೆದ ವಾರದಿಂದ ಉತ್ತಮ ಮಳೆ ಬರುತ್ತಿರುವುದರಿಂದ ರೈತರು ತಮ್ಮ ಕೃಷಿ ಜಮೀನಿಗೆ ಯೂರಿಯಾ ಹೊಲಗಳಿಗೆ ಚೆಲ್ಲಲು ಗೊಬ್ಬರದ ಅಂಗಡಿ ಮುಂದೆ ಉದ್ದುದ್ದ ಕ್ಯೂ ನಿಂತು ಕೊಂಡು ಕೊಳ್ಳುತ್ತಿದ್ದಾರೆ.
ಯೂರಿಯಾ ಗೊಬ್ಬರ ಲಾರಿ ಲೋಡ್ ಗಳಲ್ಲಿ ಅಂಗಡಿಗಳ ಮುಂದೆ ಬರುತ್ತಿದೆ, ದಾಸ್ತಾನುವಿಗಿಂತ ಹೆಚ್ಚಾಗಿ ರೈತರು ಯೂರಿಯಾ ಗೊಬ್ಬರ ಪಡೆಯುತ್ತಾರೆ ಎಂಬ ಕಾರಣದಿಂದ ಅಂಗಡಿ ಮಾಲೀಕರು ಎಲ್ಲಾ ರೈತರಿಗೆ ಗೊಬ್ಬರ ಸಿಗಲೆಂದು ಒಬ್ಬ ರೈತರಿಗೆ ಒಂದು ಚೀಲ ಗೊಬ್ಬರವನ್ನು ವಿತರಿಸುತ್ತಿದ್ದಾರೆ.
ಗೊಬ್ಬರವು 280 ರೂಪಾಯಿಗೆ ಮಾರಾಟವಾಗುತ್ತಿದ್ದು, ಪಟ್ಟಣದಲ್ಲಿ ಕುರುಬರಹಳ್ಳಿಗೆ ಹೋಗುವ ರಸ್ತೆ ಬಳಿಯ ಖಾಸಗಿ ಅಂಗಡಿಯೊಂದರಲ್ಲಿ ಹಾಗೂ ಪೋಲಿಸ್ ಠಾಣೆಯ ಸೊಸೈಟಿ ಬಳಿಯ ಹಿಂಭಾಗದಲ್ಲಿ ಯೂರಿಯಾ ಗೊಬ್ಬರವನ್ನು ವಿತರಿಸಲಾಯಿತು.
ಕುಪ್ಪೂರು ಸೊಸೈಟಿ, ಕಂದಿಕೆರೆ ಸೊಸೈಟಿ, ದೊಡ್ಡೆಣ್ಣೆಗೆರೆ ಸೊಸೈಟಿ, ಹಂದನಕೆರೆ ಸೊಸೈಟಿ, ಹುಳಿಯಾರು ಸೊಸೈಟಿಗಳಲ್ಲಿ ಗೊಬ್ಬರವನ್ನು ವಿತರಿಸಲಾಯಿತು. ವಿತರಿಸುತ್ತಿದ್ದ ಎಲ್ಲಾ ಕೇಂದ್ರಗಳಲ್ಲೂ ರೈತರು ಉದ್ದುದ್ದ ಕ್ಯೂ ನಿಂತು, ಒಂದೊಂದೇ ಚೀಲ ಪಡೆದುಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಜೋಗಿಹಳ್ಳಿ ರೈತ ರವಿ ಮಾತನಾಡಿ, ರಾಗಿ ಬಿತ್ತನೆ ಮಾಡಿದ್ದೇವೆ, ಉತ್ತಮ ಮಳೆಯಾಗುತ್ತಿದೆ, ಈಗಾಗಲೇ ಎರಡು ಅಡಿ ರಾಗಿ ಬೆಳೆಯು ಬಂದಿದ್ದು ಯೂರಿಯಾ ಗೊಬ್ಬರವನ್ನು ಹಾಕಿದರೆ ಕೆಲವೇ ದಿನಗಳಲ್ಲಿ ಬೆಳೆ ಐದಾರು ಅಡಿ ಎತ್ತರ ಬೆಳೆದು ಉತ್ತಮ ಫಸಲು ದೊರೆಯುತ್ತದೆ, ಹಾಗಾಗಿ ಯೂರಿಯಾ ಗೊಬ್ಬರಕ್ಕಾಗಿ ಕ್ಯೂ ನಿಲ್ಲುತ್ತಿದ್ದೇವೆ ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ