ಕೃಷಿ ಆದಾಯ ದುಪ್ಪಟ್ಟಿಗೆ ಸಂಕಲ್ಪಿಸಲು ಪ್ರಧಾನಿ ಮೋದಿ ಕರೆ

ತುಮಕೂರು
      2022 ನೇ ಇಸವಿಗೆ ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳಾಗಲಿವೆ. ಆ ಹೊತ್ತಿಗೆ ಕೃಷಿಕರ ಆದಾಯ ದುಪ್ಪಟ್ಟಾಗಬೇಕು. ಅದುವೇ ನಾವು ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ನಮ್ಮ ಹಿರಿಯರಿಗೆ ನಾವು ಸಲ್ಲಿಸುವ ಕೃತಜ್ಞತೆಯಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಸಂಕಲ್ಪ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರು.
       ಅವರು ಗುರುವಾರ ಮಧ್ಯಾಹ್ನ ತುಮಕೂರು ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಏರ್ಪಡಿಸಲಾಗಿದ್ದ ರಾಷ್ಟ್ರ ಮಟ್ಟದ ಕೃಷಿ ಕರ್ಮಣ್ ಪ್ರಶಸ್ತಿ ಪ್ರದಾನ ಮತ್ತು ಕೃಷಿ ಸಮ್ಮಾನ್ ಯೋಜನೆ ಅನುಷ್ಠಾನ ಸಮಾರಂಭವನ್ನು ಮಹಾಗನಿ ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸುತ್ತ ಬೃಹತ್ ಸಂಖ್ಯೆಯಲ್ಲಿ ಸಮಾವೇಶಗೊಂಡಿದ್ದ ರೈತರನ್ನುದ್ದೇಶಿಸಿ ಮಾತನಾಡುತ್ತಿದ್ದರು.
      ದೇಶದ ಅನ್ನದಾತನನ್ನು ನೆನೆಯುತ್ತ, ಅನ್ನದಾತನಿಗೆ ಸನ್ಮಾನಿಸುವ ಅವಕಾಶ ದೊರೆತದ್ದಕ್ಕೆ ಸಂತಸ ವ್ಯಕ್ತಪಡಿಸುತ್ತ, ಕೃಷಿಕರ ಸಾಧನೆಯನ್ನು ಪ್ರಶಂಸಿಸುತ್ತಲೇ ಮಾತು ಆರಂಭಿಸಿದ ಪ್ರಧಾನಿ, ದೇಶದ 6 ಕೋಟಿ ರೈತರ ಖಾತೆಗಳಿಗೆ ನೇರವಾಗಿ ಕೇಂದ್ರ ಸರ್ಕಾರದ ನೆರವಿನ ರೂಪದಲ್ಲಿ ಒಟ್ಟು 12 ಕೋಟಿ ರೂ. ಈ ಕ್ಷಣ ಜಮಾ ಆಗಿರುವುದೊಂದು ಐತಿಹಾಸಿಕ ಪ್ರಸಂಗ ಎಂದು ಹೇಳಿದರು. 
     ಈ ಹಿಂದೆ ದೇಶದಲ್ಲಿ ಕೇಂದ್ರ ಸರ್ಕಾರವು ಖರ್ಚು ಮಾಡುತ್ತಿದ್ದ ಪ್ರತಿ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಬಡವನ ಕೈಸೇರುತ್ತಿತ್ತು. ಮಿಕ್ಕ 85 ಪೈಸೆ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಆದರೆ  ಈಗ ಹಾಗಾಗುತ್ತಿಲ್ಲ. ಪೂರ್ತಿ ಹಣ ರೈತರಿಗೆ, ಬಡವರಿಗೆ ನೇರವಾಗಿ ತಲುಪುತ್ತಿದೆ. ಇಂತಹುದೊಂದು ಯೋಜನೆ ಸಫಲವಾಗಲು ಈಗ ಕೆಲವು ರಾಜ್ಯಗಳು ಸಹಕರಿಸಿರುವುದು ಅಭಿನಂದನೀಯ. ಈ ಹೊಸವರ್ಷದಲ್ಲಿ ಮಿಕ್ಕ ರಾಜ್ಯ ಸರ್ಕಾರಗಳೂ ಈ ಯೋಜನೆಯನ್ನು ಅಳವಡಿಸಿಕೊಂಡು ರೈತಾಪಿಗಳಿಗೆ ಈ ಸೌಲಭ್ಯ ದೊರಕುವಂತೆ ಮುಂದಡಿಯಿಡಲಿ ಎಂದು ಆಶಿಸಿದರು. 
    ವರ್ತಮಾನದ ಯೋಜನಗಳ ಅನುಷ್ಠಾನದ ಜೊತೆಗೆ ಭವಿಷ್ಯದ ಕಾರ್ಯಕ್ರಮಗಳನ್ನೂ ಯೋಜಿಸಬೇಕು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾರ್ಯೋನ್ಮುಖವಾಗಿದೆ. ಶೈತ್ಯಾಗಾರಗಳನ್ನು ಸ್ಥಾಪಿಸುವ ಮೂಲಕ ರೈತ ಬೆಳೆದ ಆಹಾರೋತ್ಪನ್ನಗಳನ್ನು ಸಂರಕ್ಷಿಸಲು ಯೋಜಿಸಲಾಗಿದೆ. ಇದಕ್ಕಾಗಿ ಇ-ನೆಟ್‍ವರ್ಕ್ ರೂಪಿಸಲಾಗಿದೆ. ರೈತರು ಸಾಮಾನ್ಯವಾಗಿ ಪಶುಸಂಗೋಪನೆಯನ್ನೂ ಮಾಡುತ್ತಿದ್ದು, ಪಶುಗಳ ಆರೋಗ್ಯ ರಕ್ಷಣೆಗೂ ಕ್ರಮ ಕೈಗೊಳ್ಳಲಾಗುತ್ತಿದೆ.
   ರೈತ ಕೇವಲ ಅನ್ನದಾತನಷ್ಟೇ ಆಗದೆ, ತನ್ನ ಜಮೀನುಗಳಲ್ಲಿ ಸೌರಶಕ್ತಿಯನ್ನು ಬಳಸಿಕೊಂಡು ವಿದ್ಯುತ್ ಉತ್ಪಾದನೆ ಮಾಡುವ ಮೂಲಕ ವಿದ್ಯುತ್ ದಾತನೂ ಆಗಬೇಕಿದ್ದು, ಈ ಬಗ್ಗೆಯೂ ಕೇಂದ್ರವು ಯೋಜನೆಗಳನ್ನು ರೂಪಿಸಿದೆ ಎಂದು ಕೇಂದ್ರದ ಒಂದೊಂದೇ ಯೋಜನೆಗಳನ್ನು ಸಭೆಯ ಗಮನಕ್ಕೆ ತಂದರು.
 
   ದೇಶದ ಆರ್ಥಿಕತೆಯ ಅತ್ಯಂತ ದೊಡ್ಡ ಕ್ಷೇತ್ರವಾದ ಕೃಷಿ ಕ್ಷೇತ್ರವು ಮತ್ತಷ್ಟು ಬೆಳೆಯಬೇಕಿರುವುದರಿಂದ ಕೃಷಿ ಉತ್ಪನ್ನಗಳ ರಫ್ತು ವ್ಯವಸ್ಥೆಗೂ ಆದ್ಯ ಗಮನವನ್ನು ನೀಡಲಾಗುತ್ತಿದೆ. ಸಮುದ್ರದಿಂದ ಆವರಿಸಿರುವ ದೇಶದ ದಕ್ಷಿಣ ಭಾಗವು ಪುರಾತನ ಕಾಲದಿಂದಲೂ ರಫ್ತು ಉದ್ಯಮದಲ್ಲಿ ಹೆಸರುವಾಸಿಯಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಈ ಮೂಲವನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಕೃಷಿ, ತೋಟಗಾರಿಕೆ, ಸಾಂಬಾರು ಪದಾರ್ಥಗಳನ್ನು ರಫ್ತು ಮಾಡಲು ಕ್ರಿಯಾ ಯೋಜನೆ ರೂಪಿಸಲಾಗುತ್ತಿದೆ. ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಇವೆಲ್ಲದರ ಲಾಭ ದೊರಕಲಿದೆ ಎಂದು ಮೋದಿ ಹೇಳಿದರು.
    ಕರ್ನಾಟಕದ ಬೆಳಗಾವಿ, ಮೈಸೂರು, ಚಿಕ್ಕಬಳ್ಳಾಪುರ, ಹಾಸನ, ಚಿಕ್ಕಮಗಳೂರು ಮೊದಲಾದ ಸ್ಥಳಗಳಲ್ಲಿ ಆಯಾ ಪರಿಸರಕ್ಕನುಗುಣವಾಗಿ ಗುಲಾಬಿ ಹೂ, ದಾಳಿಂಬೆ, ಕಾಫಿ, ಮೆಣಸಿನಕಾಯಿ ಮತ್ತಿತರ ಬೆಳೆಗಳನ್ನು ರೈತರು ಬೆಳೆಯುತ್ತಿದ್ದು, ಈ ಉತ್ಪನ್ನಗಳನ್ನು ರಫ್ತು ಮಾಡಲು ಅನುಕೂಲವಾಗುವಂತೆ ಒಂದೊಂದು ಕ್ಲಸ್ಟರ್‍ಗಳನ್ನು ತೆರೆಯುವ ಉದ್ದೇಶವನ್ನು ಹೊಂದಲಾಗಿದೆ. ಕಾಫಿ ಬೆಳೆಗಾರರ ಹಿತರಕ್ಷಣೆಗೂ ಯೋಜಿಸಲಾಗುತ್ತಿದೆ ಎಂದರು.  
     ಇವಿಷ್ಟೇ ಅಲ್ಲದೆ ಅರಿಸಿನ ಬೆಳೆಯ ಬಗ್ಗೆಯೂ ಕೇಂದ್ರ ಸರ್ಕಾರ ಗಮನ ಹರಿಸಿದೆ. ಅರಿಸಿನದಿಂದ ಆಗುವ ಪರಿಣಾಮಗಳ ಬಗ್ಗೆ ಸಂಶೋಧನೆಗೆ ಒತ್ತು ಕೊಡಲಾಗಿದೆ. ತೆಲಂಗಾಣ ರಾಜ್ಯದಲ್ಲಿ ಅರಿಸಿನ ಉತ್ಪಾದನೆ ಹೆಚ್ಚಿದ್ದು, ಅದೊಂದು ಹಬ್ ಆಗಲಿದೆ ಎಂದರು. 
ದಕ್ಷಿಣ ಭಾರತದಲ್ಲಿ ತೆಂಗು, ಗೋಡಂಬಿ ಇತ್ಯಾದಿಯನ್ನೂ ಬೆಳೆಯುತ್ತಾರೆ. ತೆಂಗು ಬೆಳೆಗಾರರ ಸಂಘಗಳಿದ್ದು, ತೆಂಗು ಬೆಳೆಗಾರರಿಗೆ ಅನುಕೂಲವಾಗುವಂತೆ ಯೋಜನೆಗಳನ್ನು ರೂಪಿಸಲಾಗುತ್ತಿದೆ.
      ಅದೇ ರೀತಿ ಗೋಡಂಬಿ ಬೆಳೆಗಾರರ ನೆರವಿಗೂ ಕಾರ್ಯಕ್ರಮ ಕೈಗೊಳ್ಳಲಾಗುತ್ತಿದೆ. ದ್ವಿದಳಧಾನ್ಯ, ತೈಲ ಧಾನ್ಯಗಳ ಬೀಜೋತ್ಪಾದನೆಗೆ ಹಾಗೂ ಬೆಳೆಗಾರರ ಹಿತರಕ್ಷಣೆಗೆ ವಿವಿಧ ಕ್ರಮಗಳನ್ನು ರೂಪಿಸಲಾಗುತ್ತಿದೆ. ಇವೆಲ್ಲದರ ಜೊತೆ-ಜೊತೆಗೇ ದೇಶಕ್ಕೆ ಬೇಕಾಗುವ ರಬ್ಬರ್ ಉತ್ಪಾದನೆಯನ್ನೂ ದೇಶವೇ ಭರಿಸುವಂತೆ ಮಾಡುವ ನಿಟ್ಟಿನಲ್ಲೂ ಪ್ರಯತ್ನಗಳಾಗುತ್ತಿವೆ ಎಂದು ಸರ್ಕಾರದ ವಿವಿಧ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು. 
ಮೀನುಗಾರಿಕೆಗೂ ಒತ್ತು
       ಕೃಷಿ ಕ್ಷೇತ್ರದಂತೆಯೇ ಮೀನುಗಾರಿಕಾ ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಕೇಂದ್ರ ಸರ್ಕಾರ ಯೋಜನೆಗಳನ್ನು ರೂಪಿಸಿದೆ. ಹಳ್ಳಿಗಳಲ್ಲೇ ಮೀನು ಸಾಕಾಣಿಕೆ, ಆಳಮೀನುಗಾರಿಕೆಯ ನಾವೆಗಳ ಆಧುನೀಕರಣ, ಆಧುನಿಕ ತಾಂತ್ರಿಕತೆ ಮೂಲಕ ದಿಕ್ಸೂಚಿ ಉಪಕರಣದ ಸೌಲಭ್ಯ ಒದಗಿಸುವ ಮೂಲಕ ಒಟ್ಟಾರೆ ಮೂಲಸೌಕರ್ಯಗಳಲ್ಲಿ ಆಧುನೀಕರಣಕ್ಕೆ ಯತ್ನಿಸಲಾಗುತ್ತಿದೆ. ಮೀನುಗಾರರನ್ನೂ ಕಿಸಾನ್ ಕಾರ್ಡ್ ವ್ಯಾಪ್ತಿಗೆ ಸೇರಿಸಲಾಗುತ್ತಿದೆ ಎಂದು ಮೀನುಗಾರಿಕೆ ಕ್ಷೇತ್ರದ ಬಗ್ಗೆ ಕೇಂದ್ರದ ಕಾಳಜಿಯನ್ನು ವಿವರಿಸಿದರು. 
       ಇದಲ್ಲದೆ ಅಂತರ್ಜಲ ಸಂರಕ್ಷಣೆಗಾಗಿ ವಿಶೇಷ ಹೊಸ ಕಾರ್ಯಕ್ರಮವನ್ನು ಸಹ ರೂಪಿಸಲಾಗಿದ್ದು, ಕರ್ನಾಟಕವೂ ಇದರ ಲಾಭ ಪಡೆಯಲಿದೆ ಎಂದರು. ಕೃಷಿ ಕ್ಷೇತ್ರಕ್ಕೆ ನೆರವು ನೀಡುವುದು, ಕೃಷಿ ಸಾಧಕರನ್ನು ಸನ್ಮಾನಿಸುವಂತೆಯೇ ಪೌಷ್ಠಿಕ ಆಹಾರವನ್ನು ಉತ್ಪಾದಿಸುವವರನ್ನು, ತೋಟಗಾರಿಕಾ ಕ್ಷೇತ್ರದವರನ್ನು, ಸಾವಯವ ಕೃಷಿಕರನ್ನೂ ಈ ವ್ಯಾಪ್ತಿಗೆ ತರುವ ಇಂಗಿತವನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದರು.
 
       ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದ ಕೃಷಿ ಸಚಿವ ನರೇಂದ್ರ ಸಿಂಗ್ ತೋಮಾರ್, ಕೇಂದ್ರ ಸಚಿವರಾದ ಪ್ರಹ್ಲಾದ ಜೋಷಿ, ಸುರೇಶ್ ಅಂಗಡಿ, ಸದಾನಂದ ಗೌಡ, ಉತ್ತರಾಖಂಡ್ ಮುಖ್ಯಮಂತ್ರಿ ದೇವೇಂದ್ರಸಿಂಗ್, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು, ಸಂಸದ ಜಿ.ಎಸ್.ಬಸವರಾಜು, ಸಚಿವ ವಿ.ಸೋಮಣ್ಣ ಮೊದಲಾದ ಗಣ್ಯರುಗಳು ವೇದಿಕೆಯಲ್ಲಿದ್ದರು. ವೇದಿಕೆಯಲ್ಲಿ ಪ್ರಧಾನಿ ಮೋದಿ ಅವರು ಕೃಷಿ ಕರ್ಮಣೆ ಪ್ರಶಸ್ತಿಯನ್ನು ವಿತರಿಸಿದರು. ವಿವಿಧ ರಾಜ್ಯಗಳ ಸಚಿವರು, ಹಿರಿಯ ಅಧಿಕಾರಿಗಳು, ಪ್ರಗತಿಪರ ರೈತರು ಪ್ರಶಸ್ತಿ ಸ್ವೀಕರಿಸಿದರು. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link