ಹೊಳಲ್ಕೆರೆ:
ಸ್ವಾತಂತ್ರ್ಯ ಬಂದ ನಂತರ 60 ವರ್ಷಗಳು ಕಳೆದರು ಹೊಳಲ್ಕೆರೆ ತಾಲ್ಲುಕು ಮಟ್ಟದ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಾಪನೆ ಆಗಿರಲಿಲ್ಲ. 2011ರಲ್ಲಿ ಹೊಸದುರ್ಗ ಎ.ಪಿ.ಎಂ.ಸಿ ಮಾರುಕಟ್ಟೆ ಆಡಳಿತದಿಂದ ಬೇರ್ಪಟ್ಟು ಈಗ ಸ್ವಾತಂತ್ರ್ಯವಾಗಿ ತಾಲ್ಲುಕು ಮಾರುಕಟ್ಟೆ ಸಮಿತಿ ಅಸ್ತಿತ್ವಕ್ಕೆ ಬಂದಿದೆ.
8 ವರ್ಷ ಕಳೆದರು ಈ ಮಾರುಕಟ್ಟೆ ಕಾಯಕಲ್ಪ ಕೈಗೊಳ್ಳುವುದರಲ್ಲಿ ಇನ್ನು ವಿಳಂಬವಾಗುತ್ತಿದೆ. ಪಟ್ಟಣದ ಆಸುಪಾಸಿನಲ್ಲಿ ಮಾರುಕಟ್ಟೆ ಸ್ಥಾಪನೆಗೆ 10 ಎಕರೆ ಖಾಸಗಿ ಜಮೀನು ಆಗಲಿ ಅಥವಾ ಸರ್ಕಾರದ ಜಮೀನು ಲಭ್ಯವಾಗಲಿಲ್ಲ. ಆಗ ಮಾರುಕಟ್ಟೆ ಸ್ಥಾಪನೆ ತಾಲ್ಲುಕಿಗೆ ಅನಿವಾರ್ಯವಾಗಿ ರೈತರ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ದೃಷ್ಟಿಯಿಂದ ಶಾಸಕ ಎಂ.ಚಂದ್ರಪ್ಪ ರಾಷ್ಟ್ರೀಯ ಹೆದ್ದಾರೆ-13ರಲ್ಲಿ 9 ಎಕರೆ ಸರ್ಕಾರಿ ಅಧೀನಕ್ಕೆ ಒಳಪಟ್ಟ ಜಮೀನನ್ನು ಸಮತಟ್ಟು ಮಾಡಿ ವ್ಯವಸ್ಥಿತ ಮಾರುಕಟ್ಟೆಯನ್ನು ಸ್ಥಾಪನೆ ಮಾಡಲು ತುಂಬಾ ಮುತುವರ್ಜಿ ತೆಗೆದುಕೊಂಡರು.
ಬಹಳ ವರ್ಷಗಳ ಕಾಲ ಹೊಸದುರ್ಗ ಹೊಳಲ್ಕೆರೆ 2 ತಾಲ್ಲುಕಿಗೆ ಒಂದೆ ಎ.ಪಿ.ಎಂ.ಸಿ ಮಾರುಕಟ್ಟೆ ಕಾರ್ಯನಿರ್ವಹಿ ಸುತ್ತಿತ್ತು .ಹೊಸದುರ್ಗದಿಂದ ಬೇರ್ಪಡಿಸಿ ಹೊರತುಪಡಿಸಿ ಹೊಳಲ್ಕೆರೆಯಲ್ಲಿ ಪ್ರತ್ಯೇಕ ಎ.ಪಿ.ಎಂ.ಸಿ ಮಾರುಕಟ್ಟೆ ಸ್ಥಾಪನೆಗೆ ಹಾಲಿ ಶಾಸಕ ಎಂ.ಚಂದ್ರಪ್ಪ ತುಂಬಾ ಮುತುವರ್ಜಿ ವಹಿಸಿದ್ದಾರೆ. ಪಟ್ಟಣಕ್ಕೆ 5 ಕಿ.ಮೀ., ದೂರದಲ್ಲಿರುವ ಹನುಮಂತದೇವರ ಕಣಿವೆಯಲ್ಲಿ ಮೊದಲು 9 ಎಕರೆ ಜಮೀನನ್ನು ಸಮತಟ್ಟು ಮಾಡಿಸಿ ಆ ಜಾಗದಲ್ಲಿ ಸುವ್ಯವಸ್ಥಿತ ಮಾರುಕಟ್ಟೆ ಸ್ಥಾಪಿಸಲು ಸನ್ನಧ್ದರಾಗಿದ್ದಾರೆ. ಈ ಗಾಗಲೆ 9 ವರ್ಷ ಕಳೆದರು ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡಲು ವರ್ತಕರಿಗೆ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲ.
ವ್ಯಾಪಾರ ವಹಿವಾಟಿಗೆ ವರ್ತಕರುಗಳಿಗೆ, ದಲ್ಲಾಲರಿಗೆ, ಸ್ವಂತಕ್ಕೆ ನಿವೇಶನವಾಗಲಿ ಅಥವಾ ಎ.ಪಿ.ಎಂ.ಸಿ ವತಿಯಿಂದ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿಲ್ಲ. ಈ ವ್ಯವಸ್ಥೆಯನ್ನು ಕಲ್ಪಿಸಿರುವುದರಿಂದ ಯಾವ ವರ್ತಕರು ಅಲ್ಲಿ ಬರುತ್ತಿಲ್ಲ. ಸದ್ಯಕ್ಕೆ ಹರಾಜು ಮಾರುಕಟ್ಟೆ ಕಟ್ಟಡ ಮತ್ತು ಗೋದಾಮು ಕಟ್ಟಡಗಳನ್ನು ನಿರ್ಮಿಸಲಾಗಿದೆ ಮಾರುಕಟ್ಟೆ ಚಲಾವಣೆ ಆಗಲು ವರ್ತಕರಿಗೆ ಅಗತ್ಯವಿರುವ ನಿವೇಶನ ಅಥವಾ ಮಳಿಗೆಗಳನ್ನು ನಿರ್ಮಿಸಿಕೊಟ್ಟರೆ ತಾಲ್ಲೂಕಿನಲ್ಲಿರುವ ಖರೀದಿದಾರರು ಅಲ್ಲಿ ಶಾಶ್ವತವಾಗಿ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ.
ಎ.ಪಿ.ಎಂ.ಸಿ ಮಾರುಕಟ್ಟೆ ಆಡಳಿತ ಕಚೇರಿ ಕಾರ್ಯನಿರ್ವಹಿಸುತ್ತಿದ್ದು ವರ್ಷಕ್ಕೆ ಎರಡುವರೆ ಕೋಟಿ ರೂ. ತೆರಿಗೆ ಬರುತ್ತಿದೆ ಎಂದು ಕಾರ್ಯದರ್ಶಿ ವಿ.ಕೆ.ರಾಮಮೂರ್ತಿ ತಿಳಿಸಿದ್ದಾರೆ.ತಾಲ್ಲುಕಿನಲ್ಲಿ ಒಟ್ಟು 43 ಖರೀದಿದಾರರು ಎ.ಪಿ.ಎಂ.ಸಿಯಲ್ಲಿ ವ್ಯವಹಾರದ ಬಗ್ಗೆ ತಮ್ಮ ಹೆಸರುಗಳನ್ನು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 10 ದಲ್ಲಾಲಿಗಳು ಚಾಲ್ತಿಯಲ್ಲಿದ್ದು ಅವರು ರೈತರ ಕೃಷಿ ಉತ್ಪನ್ನಗಳನ್ನು ರೈತರ ಮನೆ ಬಾಗಿಲಿಗೆ ಹೋಗಿ ಖರೀದಿ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ಈಗಿರುವ ಮಾರುಕಟ್ಟೆ ಅಭಿವೃಧ್ದಿಯ ವೈಜ್ಞಾನಿಕ ನೀಲಿ ನಕ್ಷೆಯನ್ನು ತಯಾರಿಸಲಾಗಿದ್ದು ಕೇಂದ್ರ ಸರ್ಕಾರದ ನಬಾರ್ಡ್ ಯೋಜನೆಯಲ್ಲಿ ಮಾರುಕಟ್ಟೆಗೆ ಅವಶ್ಯಕವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲು ಅನುದಾನದ ಪ್ರಸ್ತಾವನೆಯನ್ನು ಶಾಸಕ ಎಂ.ಚಂದ್ರಪ್ಪ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಈ ಪ್ರಸ್ತಾವನೆ ಅನುಮೋದನೆ ಆಗಿ ಬಂದ ಕೂಡಲೆ ಮಾರುಕಟ್ಟೆಯ ವಿನ್ಯಾಸವನ್ನು ರೂಪಿಸಿ ವರ್ತಕರಿಗೆ ವ್ಯವಹಾರಕ್ಕೆ ಅನುಕೂಲ ಮಾಡಿಕೊಡುವ ತರಾತುರಿಯಲ್ಲಿ ಇದ್ದೇವೆ. 9 ಎಕರೆ ಜೊತೆಗೆ ಹೆಚ್ಚುವರಿಯಾಗಿ 5 ಎಕರೆ ಜಮೀನನ್ನು ಪಡೆಯಲಾಗಿದೆ ಎಂದು ಕಾರ್ಯದರ್ಶಿ ರಾಮಮೂರ್ತಿ ತಿಳಿಸಿದ್ದಾರೆ.
ತಾಲ್ಲುಕಿನಲ್ಲಿ ರೈತರು ಅಡಿಕೆ, ತೆಂಗು, ಕೊಬ್ಬರಿ, ಶೇಂಗ, ಮೆಕ್ಕೆಜೋಳ, ರಾಗಿ, ಈರುಳ್ಳಿ, ಮೆಣಸಿನಕಾಯಿ, ಕೊತ್ತಂಬರಿ ಮುಂತಾದ ವಾಣಿಜ್ಯ ಮತ್ತು ಆಹಾರ ಬೆಳೆಗಳನ್ನು ಯತೇಚ್ಚವಾಗಿ ಬೆಳೆದು ಮಾರಾಟ ಮಾಡಲು ದೂರದ ದಾವಣಗೆರೆ ಚಿತ್ರದುರ್ಗ ಬೆಂಗಳೂರು ಶಿವಮೊಗ್ಗ ಚನ್ನಗಿರಿ ಚಳ್ಳಕೆರೆ ಭೀಮಸಮುದ್ರ ಮುಂತಾದ ಮಾರುಕಟ್ಟೆಗಳಿಗೆ ದುಬಾರಿ ವೆಚ್ಚವನ್ನು ಭರಿಸಿ ತುಂಬಾ ಸಂಕಟವನ್ನು ಅನುಭವಿಸುತ್ತಿದ್ದಾರೆ.
ಸರ್ಕಾರದ ನಿಯಮದಂತೆ ಪ್ರತಿ ತಾಲ್ಲುಕಿನಲ್ಲಿ ರೈತರು ಬೆಳೆದ ಕೃಷಿ ಉತ್ಪನ್ನಗಳನ್ನು ಆಯಾ ತಾಲ್ಲುಕಿನಲ್ಲಿ ಮಾರಾಟ ಮಾಡಲು ವ್ಯವಸ್ಥಿತ ಮಾರುಕಟ್ಟೆಯ ಸೌಲಭ್ಯಗಳನ್ನು ರೂಪಿಸಿದ್ದರು ಬಹಳ ವರ್ಷಗಳಿಂದ ರೈತರು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಅನಾನುಕೂಲ ಸ್ಥಿತಿಯನ್ನು ಅನುಭವಿಸುತ್ತಿದ್ದು ಕೆಲವೇ ದಿನಗಳಲ್ಲಿ ಮಾರುಕಟ್ಟೆಯನ್ನು ಪ್ರಾರಂಭ ಮಾಡುವ ಕಾಯಕಲ್ಪಕ್ಕೆ ಅಣಿಯಾಗಿದ್ದೇವೆ ಎಂದು ಎ.ಪಿ.ಎಂ.ಸಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಭರವಸೆ ನೀಡುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ