ತುಮಕೂರು
ಮಕ್ಕಳನ್ನು ಸಾಕಿದಂತೆ ತೋಟ ಸಾಕಿದ್ವಿ, ಈಗ ನೀರಿಲ್ಲದೆ ತೋಟ ನಮ್ಮ ಕಣ್ಣು ಮುಂದೆಯೇ ಒಣಗುತ್ತಿದೆ, ಹಿಂಗಾದ್ರೆ ಮುಂದೆ ನಮ್ಮ ಬದುಕು ಹೆಂಗೆ? ಚುನಾವಣೆಯಲ್ಲಿ ಯಾರೇ ಗೆಲ್ಲಲಿ ಅವರು ನಮ್ಮೂರಿನ ಕೆರೆಗೆ ನೀರು ತುಂಬಿಸಿ, ರೈತರನ್ನು ಬದುಕಿಸಲಿ…ತುಮಕೂರು ಗ್ರಾಮಾಂತರ ಕ್ಷೇತ್ರದ ಬಹುತೇಕ ಊರುಗಳ ಜನರÀ ಬೇಡಿಕೆ ಇದು.
ಮೊನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ಇತರೆ ವಿಧಾನಸಭಾ ಕ್ಷೇತ್ರಗಳಿಗಿಂತಾ ಹೆಚ್ಚಿನ ಪ್ರಮಾಣದ ಮತ ಚಲಾಯಿಸಿರುವ (ಶೇಕಡ 81.87) ಗ್ರಾಮಾಂತರ ಕ್ಷೇತ್ರದ ಮತದಾರು ಹೊಸ ಸಂಸದರಿಂದ ಹೆಚ್ಚಿನದ್ದನ್ನು ನಿರೀಕ್ಷಿಸುತ್ತಿಲ್ಲ, ಕೆರೆಗಳಿಗೆ ನೀರು ತುಂಬಿಸಿ, ಕುಡಿಯಲು, ವ್ಯವಸಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
ನಗರ, ಪಟ್ಟಣವಿಲ್ಲದ ಹಳ್ಳಿಗಳೇ ಇರುವ ಕ್ಷೇತ್ರವಿದು. ಏಳು ಜಿಲ್ಲಾ ಪಂಚಾಯ್ತಿ ಕ್ಷೇತ್ರ, 35 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 363 ಹಳ್ಳಿಗಳನ್ನು ಒಳಗೊಂಡಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಜನರದ್ದು ವ್ಯವಸಾಯವೇ ವ್ಯವಹಾರ. ಹೀಗಾಗಿ ನೀರಿಲ್ಲದೆ ಇವರಿಗೆ ಬದುಕಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು, ಯಾರು ಸೋಲಬಹುದು ಎಂಬ ಲೆಕ್ಕಾಚಾರ ಎಲ್ಲಾ ಹಳ್ಳಿಗಳಲ್ಲೂ ಕುತೂಹಲ ಮೂಡಿಸಿದೆ. ಯಾರೇ ಗೆಲ್ಲಲಿ ಅವರಿಂದ ತಮ್ಮ ಕ್ಷೇತ್ರಕ್ಕೆ, ಊರಿಗೆ ಏನು ಅನುಕೂಲ ಆಗಬಹುದು ಎಂಬ ವಿಚಾರಗಳೂ ಹಳ್ಳಿ ಕಟ್ಟೆಯ ಚರ್ಚೆಗಳಾಗಿವೆ.
ಹೊಸ ನಿರೀಕ್ಷೆ ಜೊತೆಗೆ, ಯಾರು ಗೆದ್ದರೂ ಅಷ್ಟೇ ಅನ್ನುವ ನಿರಾಶಾ ಭಾವನೆಯೂ ಇದೆ. ಗೆದ್ದವರು ನಮ್ಮ ಬದುಕನ್ನು ಬದಲಾಯಿಸಿಬಿಡುತ್ತಾರೆ ಎಂಬ ಭ್ರಮೆ ಯಾರಿಗೂ ಇದ್ದಂತಿಲ್ಲ. ಗೆದ್ದವರು ಕಾಳಜಿವಹಿಸಿ ನೀರು ಕೊಟ್ಟರೆ ಸಾಕು ಎನ್ನುವ ಭಾವ ಎಲ್ಲರದು.
ಮಳೆ ಇಲ್ಲ, ಕೆರೆಗಳಲ್ಲಿ ನೀರಿಲ್ಲ. ಕೊಳವೆ ಬಾವಿ ಬತ್ತಿಹೋಗಿವೆ. ಅಷ್ಟೂ ವರ್ಷಗಳಿಂದ ಸಂಸಾರ ಸಾಕುತ್ತಿರುವ ತೋಟತುಡಿಕೆ ಒಣಗುತ್ತಾ ಬದುಕು ಆತಂಕಕಾರಿಯಾಗುತ್ತಿದೆ.
ಹೇಮಾವತಿ ಹರಿಸುತ್ತೇವೆ, ಎತ್ತಿಹೊಳೆ ನೀರು ತಂದು ಕೆರೆಗೆ ಬಿಡುತ್ತೇವೆ ಎಂದೆಲ್ಲಾ ರಾಜಕಾರಣಿಗಳ ಆಶ್ವಾಸನೆ ಕೇಳಿಕೇಳಿ ಜನರಿಗೂ ಸಾಕಾಗಿದೆ, ಯಾವ ಹೊಳೆಯದಾದರೂ ಸರಿ ಕೆರೆ ತುಂಬಿಸಿದರೆ ಸಾಕು. ಸಾವಿರ ಅಡಿ ನೆಲ ಕೊರೆದರೂ ನೀರು ಸಿಗುತ್ತಿಲ್ಲ ಎಂದು ಜನ ವಾಸ್ತವ ಸ್ಥಿತಿ ಹೇಳುತ್ತಾರೆ. ಬೆಳ್ಳಾವಿ ಕೆರೆಗೆ ನೀರು ಹರಿಸಲಿಲ್ಲ, ಗೂಳೂರು-ಹೆಬ್ಬೂರು ಏತ ನೀರಾವರಿಯ 48 ಕೆರಗಳು ನೀರು ಕಾಣಲಿಲ್ಲ. ಊರ್ಡಿಗೆರೆ, ಬೆಳಗುಂಬ ಪಂಚಾಯ್ತಿಗಳಲ್ಲಿ ನೀರಿಗೆ ಕಣ್ಣೀರು ಬರುವ ಪರಿಸ್ಥಿತಿ. ಈವರೆಗಿನ ಯಾವ ಭರವಸೆಗಳೂ ಈಡೇರಿಲ್ಲ, ಹೊಸದನ್ನು ನಿರೀಕ್ಷಿಸುವ ನಂಬಿಕೆ ಇಲ್ಲ ಎನ್ನುವ ಭಾವನೆ ಬಹುತೇಕರದ್ದು.
ವ್ಯವಸಾಯ ಈಗ ನಷ್ಟದ ಬಾಬ್ತು ಆಗಿರುವಾಗ ನೀರು ಇಲ್ಲದಿದ್ದರೆ ಏನು ಮಾಡುವುದು, ರೈತರು ಹೇಗೆ ಬದುಕುವುದು ಎಂಬುದು ಎಲ್ಲಾ ಹಳ್ಳಿಗಳ ಜನ ಸರ್ಕಾರಕ್ಕೆ, ಚುನಾಯಿತ ಪ್ರತಿನಿಧಿಗಳಿಗೆ ಕೇಳುವ ಸಾಮಾನ್ಯ ಪ್ರಶ್ನೆ. ಮುಂದಿನ ತಲೆಮಾರಿಗೆ ವ್ಯವಸಾಯ ಸಾಧ್ಯವಿಲ್ಲ ಎಂದು ರೈತರ ಮಕ್ಕಳು ಉದ್ಯೋಗ ಅರಸಿ ನಗರ ಸೇರುತ್ತಿದ್ದಾರೆ.
ಗ್ರಾಮಾಂತರ ಕ್ಷೇತ್ರದಲ್ಲಿ ಕೃಷಿಗೆ ನೀರು ಕೊಟ್ಟು ಸರ್ಕಾರ ರೈತರಿಗೆ ನೆರವಾಗಬೇಕು, ಆಯ್ಕೆಯಾಗುವ ಹೊಸ ಲೋಕಸಭಾ ಸದಸ್ಯರು ನೀರಾವರಿಯ ಇಚ್ಛಾಶಕ್ತಿ ಹೊಂದಬೇಕು ಎಂದು ಜನ ಬಯಸಿದ್ದಾರೆ.ಕೃಷಿ ನಷ್ಟ ಮಾಡುತ್ತಿದೆ. ರೈತರು, ಕೃಷಿ ಕಾರ್ಮಿಕರು ಕೆಲಸವಿಲ್ಲದಂತಾಗಿದ್ದಾರೆ. ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪನೆ ಮಾಡಿ ಸ್ಥಳಿಯರಿಗೆ ಉದ್ಯೋಗ ನೀಡಿದರೆ ಹಳ್ಳಿ ಜನ ಹಳ್ಳಿಗಳಲ್ಲೇ ಬದುಕು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೊನ್ನುಡಿಕೆಯ ರುದ್ರಮೂರ್ತಿ ಹೇಳುತ್ತಾರೆ.
ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಯಿಂದ ಉದ್ಯೋಗ ದೊರೆಯಬಹುದಾದರೂ, ಇಲ್ಲಿ ವ್ಯವಸಾಯ ನಾಶವಾಗುತ್ತದೆ. ಕೈಗಾರಿಕೆ ಸ್ಥಾಪಿಸಿ ರೈತರ ಮಕ್ಕಳಿಗೆ ಉದ್ಯೋಗ ನೀಡುವುದಲ್ಲ, ಅವರಿಗೆ ಅಗತ್ಯ ನೀರು, ವಿದ್ಯುತ್ ಕೊಟ್ಟು ನಿರಾತಂಕವಾಗಿ ವ್ಯವಸಾಯ ಮಾಡಲು ಅವಕಾಶ ಮಾಡಬೇಕು ಎಂಬುದು ಊರ್ಡಿಗೆರೆ ಹೋಬಳಿ ಕೊಡಿಗೆಹಳ್ಳಿಯ ಕಲಾವಿದ ನಾರಾಯಣಗೌಡರು ಅಭಿಪ್ರಾಯಪಡುತ್ತಾರೆ.
ಜಿಲ್ಲಾ ಕೇಂದ್ರ ತುಮಕೂರು ನಗರವನ್ನು ಸುತ್ತುವರೆದಿರುವ ಗ್ರಾಮಾಂತರ ಕ್ಷೇತ್ರದ ಪ್ರತಿ ಹಳ್ಳಿ ಜನ ತಮ್ಮ ವ್ಯವಹಾರ, ಮಕ್ಕಳ ವಿದ್ಯಾಭ್ಯಾಸಕ್ಕೆ ತುಮಕೂರನ್ನು ಅವಲಂಬಿಸಿದ್ದಾರೆ. ಪ್ರಮುಖ ಹಳ್ಳಿಗಳನ್ನು ಬಿಟ್ಟರೆ ಹೆಚ್ಚಿನ ಹಳ್ಳಿಗಳಿಗೆ ಬಸ್ ಸೌಕರ್ಯವಿಲ್ಲ. ಸಂಚಾರಯೋಗ್ಯ ಸಂಪರ್ಕ ರಸ್ತೆಗಳಿಲ್ಲ. ಈ ಹಳ್ಳಿಗಳ ವಿದ್ಯಾರ್ಥಿಗಳು ನಿತ್ಯ ಕಾಲೇಜಿಗೆ ಹೋಗಿಬರಲು ಬಸ್ ಅನುಕೂಲಗಳಿಲ್ಲ. ಒಂದೆರಡು ಹೋಬಳಿ ಕೇಂದ್ರ ಬಿಟ್ಟರೆ ಪದವಿ ಕಾಲೇಜಿಗೆ ವಿದ್ಯಾರ್ಥಿಗಳು ತುಮಕೂರಿಗೇ ಬರಬೇಕು. ಬೆಳ್ಳಾವಿಯಲ್ಲಿ ಈ ಶೈಕ್ಷಣಿಕ ವರ್ಷದಿಂದ ಪದವಿ ಕಾಲೇಜು ಆರಂಭವಾಗುತ್ತಿದೆ.
ಕ್ಷೇತ್ರದ ಏಳೂ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಯಲ್ಲಿ ತಲಾ ಐದರಂತೆ 35 ಹೊಸ ಮಾಗಗಳಲ್ಲಿ ಕೆಎಸ್‍ಆರ್‍ಟಿಸಿ ಬಸ್ ಸೇವೆ ಒದಗಿಸಲು ಮಂಜೂರಾತಿ ದೊರಕಿದ್ದು, ಶೀಘ್ರ ಈ ಮಾರ್ಗಗಳಲ್ಲಿ ಬಸ್‍ಗಳು ಸಂಚಾರ ಆರಂಭಿಸಲಿವೆ. ತುಮಕೂರು ಸುತ್ತಮುತ್ತಲ ಹಳ್ಳಿಗಳಿಗೆ ನಗರದ ಖಾಸಗಿ ಶಾಲೆಗಳ ಬಸ್‍ಗಳು ನುಗ್ಗಿವೆ. ಹಳ್ಳಿ ಮಕ್ಕಳನ್ನು ಕಾನ್ವೆಂಟ್ ಸ್ಕೂಲ್‍ಗಳಿಗೆ ಸೆಳೆಯುತ್ತಿವೆ. ಕಾನ್ವೆಂಟ್ ಶಾಲೆ ಆಕರ್ಷಣೆಗೊಳಗಾಗಿ ಪೋಷಕರು ತಮ್ಮ ಮಕ್ಕಳನ್ನು ಗ್ರಾಮದ ಸರ್ಕಾರಿ ಶಾಲೆ ಬಿಟ್ಟು ದುಬಾರಿ ಖಾಸಗಿ ಶಾಲೆಗೆ ಸೇರಿಸುತ್ತಿದ್ದಾರೆ, ಈ ಸ್ಥಿತಿಯಲ್ಲಿ ಪೋಷಕರು ಒಪ್ಪುವ ಹೈಟೆಕ್ ಸರ್ಕಾರಿ ಶಾಲೆಗಳು ಗ್ರಾಮಾಂತರ ಪ್ರದೇಶದಲ್ಲಿ ಆರಂಭಿಸಿ, ಸರ್ಕಾರಿ ಶಾಲೆಗಳನ್ನು ಉಳಿಸಲಿ ಎಂಬುದು ಹಲವರ ಅಭಿಪ್ರಾಯ.
ಕುಡಿಯುವ ನೀರಿಗೆ ಎಲ್ಲಾ ಕಡೆ ಅಭಾವವಿದೆ. ನೀರು ಹೊಂಚಲು ಗ್ರಾಮ ಪಂಚಾಯ್ತಿಗಳು ಹೆಣಗಾಡುತ್ತಿವೆ. ಒಂದು ಒಣಗಿದರೆ ಇನ್ನೊಂದು ಎಂಬಂತೆ ಆಳಕ್ಕೆ ಕೊಳವೆ ಬಾವಿ ಕೊರೆದು ನೀರು ಹುಡುಕಿ ತೆಗೆದು ವಿತರಿಸುತ್ತಿವೆ. ಈ ನೀರು ಕುಡಿಯಲು ಯೋಗ್ಯವೊ ಅಲ್ಲವೊ ಗೊತ್ತಿಲ್ಲ, ಹೇಗೋ ನೀರು ವಿತರಿಸಿ ಸಮಸ್ಯೆ ನಿವಾರಿಸಿದರೆ ಸಾಕು ಎನ್ನುವಂತಹ ಸ್ಥಿತಿ. ಹೀಗಾಗಿ ಅನೇಕ ಹಳ್ಳಿಗಳಲ್ಲಿ ಶುದ್ಧ ಕುಡಿಯುವ ನೀರು ಮರೀಚಿಕೆ.
ಹಳ್ಳಿಗಳಲ್ಲಿ ಆರೋಗ್ಯ ಸೇವೆ ದುರ್ಲಭ. ಹೋಬಳಿ ಕೇಂದ್ರಗಳ ಆಸ್ಪತ್ರೆಗಳಲ್ಲೂ ಅಗತ್ಯ ಸೌಕರ್ಯಗಳಿಲ್ಲ. ತುರ್ತು ಸಂದರ್ಭಗಳಲ್ಲಿ ತುಮಕೂರು ಆಸ್ಪತ್ರೆಗಳಿಗೇ ಬರಬೇಕಾಗುತ್ತದೆ. ಹೋಬಳಿ ಕೇಂದ್ರದ ಆಸ್ಪತ್ರೆಗಳನ್ನು ಸುಸಜ್ಜಿತಗೊಳಿಸಿ ದಿನದ 24ಗಂಟೆ ಆರೋಗ್ಯ ಸೇವೆ ದೊರೆಯುವಂತೆ ಮಾಡಬೇಕೆಂಬ ಬೇಡಿಕೆ ಇದೆ. ಸದ್ಯ, ಬೆಳ್ಳಾವಿ ಆಸ್ಪತ್ರೆಯನ್ನು 10 ಹಾಸಿಗೆಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಹಾಸಿಗೆ, ಸಿಬ್ಬಂದಿ ಸಂಖ್ಯೆ ಏರಿದರೂ ಆಸ್ಪತ್ರೆಗಳಲ್ಲಿ ತಜ್ಞ ವೈದ್ಯರಿಲ್ಲ,ಅಗತ್ಯ ಸಿಬ್ಬಂದಿಗಳ ಕೊರತೆ ಇದೆ. ಗ್ರಾಮೀಣ ಭಾಗದಲ್ಲಿ ಆರೋಗ್ಯ ಸೇವೆ ಸಮರ್ಪಕವಾಗಿಲ್ಲ ಎಂಬುದು ಹಲವರ ದೂರು.
ಹಳ್ಳಿಗಳಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರು, ಬಸ್ ಸೌಕರ್ಯ, ವಿದ್ಯುತ್ ಸರಬರಾಜಿನಂತಹ ಮೂಲಭೂತ ಸೌಲಭ್ಯಗಳನ್ನು ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ ಒದಗಿಸಬೇಕು. ಇದರ ಜೊತೆಗೆ, ಹೊಸದಾಗಿ ಸಂಸದರಾಗಿ ಆಯ್ಕೆಯಾಗುವವರು ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳನ್ನು ಗ್ರಾಮಾಂತರ ಕ್ಷೇತ್ರಕ್ಕೆ ತಂದು ತಮ್ಮ ಪ್ರಾತಿನಿಧ್ಯವನ್ನು ಸಾರ್ಥಕಪಡಿಸಿಕೊಂಡು ಸಹಕರಿಸಲಿ ಎಂಬುದು ಕ್ಷೇತ್ರದ ಜನರ ಆಶಯ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ