ಹನಿ ನೀರಾವರಿಯಲ್ಲಿ ಇಸ್ರೆಲ್ ಸರ್ವ ಶ್ರೇಷ್ಠ: ಶಿಮೋನ್ ರಖ್ಮಿಲವಿಚ್

ಬೆಂಗಳೂರು

ಸಂದರ್ಶನ : ನಂಜುಂಡಪ್ಪ.ವಿ

  ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನ ಬಳಕೆಗೆ ರಾಜ್ಯ ಸರ್ಕಾರ ಆಸಕ್ತವಾದರೆ ಸಾಲದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಇಸ್ರೇಲ್ ಕೃಷಿ ಪದ್ಧತಿ ಅಡಕಗೊಳಿಸಲು ಅಗತ್ಯ ಪ್ರಮಾಣದಲ್ಲಿ ಆರ್ಥಿಕ ಸಂಪನ್ಮೂಲ ಒದಗಿಸಬೇಕು ಎಂದು ಇಸ್ರೇಲ್ ನ ಬೆನ್ ಗೋಯನ್ ವಿಶ್ವವಿದ್ಯಾಲಯದ ಮುಖ್ಯಸ್ಥ ಪ್ರೋಫೆಸರ್ ಶಿಮೋನ್ ರಖ್ಮಿಲವಿಚ್ ಹೇಳಿದ್ದಾರೆ.

   ಐಟಿ ನಗರಿ ಬೆಂಗಳೂರಿನಲ್ಲಿ ಸೋಮವಾರದಿಂದ ನಡೆಯಲಿರುವ ಅಂತಾರಾಷ್ಟ್ರೀಯ ಅನುಶೋಧನೆ ಹಾಗೂ ಸೃಜನಶೀಲತಾ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿರುವ ಅವರು ಯುಎನ್‍ಐ ಕನ್ನಡ ಸುದ್ದಿ ಸಂಸ್ಥೆಗೆ ವಿಶೇಷ ಸಂದರ್ಶನ ನೀಡಿದರು. ಪ್ಲಾಂಟ್ ಫಿಸಿಯೋಲಜಿ ತಜ್ಞರೂ ಆಗಿರುವ ಶಿಮೋನ್, ” ಬೌಗೋಳಿಕವಾಗಿ ಇಸ್ರೇಲ್ ಕರ್ನಾಟಕಕ್ಕಿಂತ ಅತ್ಯಂತ ಚಿಕ್ಕದು.

   ಜನಸಂಖ್ಯೆಯಲ್ಲೂ ಕಡಿಮೆ ಇದ್ದೇವೆ. ಕೃಷಿ, ಜೈವಿಕ ತಂತ್ರಜ್ಞಾನ, ಸೈಬರ್ ಅಪರಾಧ ವಲಯದಲ್ಲಿ ಮಂಚೂಣಿಯಲ್ಲಿದ್ದು, ಹಲವಾರು ರಾಷ್ಟ್ರಗಳು ನಮ್ಮ ತಾಂತ್ರಿಕ ಪರಿಣತಿ ಬಳಸಿಕೊಳ್ಳಲು ಮುಂದಾಗಿವೆ. ಅದರಲ್ಲೂ ನಿರ್ದಿಷ್ಟವಾಗಿ ಕರ್ನಾಟಕ ಇಸ್ರೇಲ್ ತಂತ್ರಜ್ಞಾನ ಬಳಸಿಕೊಳ್ಳಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಭಾರತದಲ್ಲಿ ರಾಜಸ್ತಾನ ಹೊರತುಪಡಿಸಿದರೆ ಅತಿ ಹೆಚ್ಚು ಬಂಜರು ಭೂಮಿ ಹೊಂದಿರುವ ರಾಜ್ಯ ಕರ್ನಾಟಕ. ಇಲ್ಲಿಗೆ ಇಸ್ರೇಲ್ ತಂತ್ರಜ್ಞಾನ ಅತ್ಯುತ್ತಮವಾಗಿ ಒಪ್ಪುತ್ತದೆ” ಎಂದರು.

 ಭಾರತದ ಯಾವ ಕೃಷಿ ಸಮಸ್ಯೆಗಳಿಗೆ ಇಸ್ರೇಲ್ ಪರಿಹಾರ ಒದಗಿಸುತ್ತದೆ?.

    ” ಇಸ್ರೇಲ್ ಕೃಷಿ ತಂತ್ರಜ್ಞಾನದಲ್ಲಿ ಹನಿ ನೀರಾವರಿಗೆ ಪ್ರದಾನ ಆದ್ಯತೆ ನೀಡಲಾಗಿದೆ. ಭಾರತದಲ್ಲಿ ನೀರು ಹೆಚ್ಚಿದ್ದರೂ ಗುಣಮಟ್ಟದ ಕೊರತೆ ಇದೆ. ಆದರೆ ನಮ್ಮಲ್ಲಿ ನೀರಿನ ಕೊರತೆ ಇದೆ. ಹೀಗಾಗಿಯೆ ಹನಿ ನೀರಾವರಿ ನೀರಿನ ಸಮಸ್ಯೆಗೆ ಪರಿಹಾರ ಒದಗಿಸುತ್ತದೆ. ಇಸ್ರೇಲ್ ನ ಹನಿ ನೀರಾವರಿ ತಂತ್ರಜ್ಞಾನ ಮುಂದಿನ ಹಂತಕ್ಕೆ ಬೆಳೆದಿದೆ. ಬೆಳೆಗಳಿಗೆ ಚಮದ ಮಾದರಿಯಲ್ಲಿ ನೀರುಣಿಸಿ ಬೆಳೆ ಬೆಳೆಯಲಾಗುತ್ತಿದೆ.

   ವಿಶೇಷವೆಂದರೆ ಇಂತಹ ಪ್ರಯತ್ನದಿಂದ ನೀರಿನ ಸಂರಕ್ಷಣೆ ಆಗುವ ಜತೆಗೆ ಪರಿಸರ ರಕ್ಷಣೆಗೂ ಸಹಕಾರಿಯಾಗಲಿದೆ. ಕೀಟ ಬಾಧಯೂ ನಿವಾರಣೆಯಾಗಲಿದೆ. ಇನ್ನು ಹನಿ ನೀರಾವರಿ ಕೃಷಿಗೆ ಹೇಗೆ ರಸಗೊಬ್ಬರ ಬಳಸಬೇಕು ಎನ್ನುವ ಕುರಿತಂತೆಯೂ ತರಬೇತಿ ನೀಡಲು ಇಸ್ರೇಲ್ ನಲ್ಲಿ ದೊಡ್ಡ ದೊಡ್ಡ ಕಂಪೆನಿಗಳಿದ್ದು, ಕೀಟ ನಾಶಕಗಳ ಬಳಕೆ ಸೇರಿದಂತೆ ಸಮಗ್ರ ಆರೈಕೆ ಬಗ್ಗೆ ಮಾಹಿತಿ ಒದಗಿಸಲಿದೆ. ಹೇಗೆ ನೀರುಣಿಸಬೇಕು.

   ಎಷ್ಟು ನೀರು ಬಿಡುಗಡೆ ಮಾಡಬೇಕು, ಯಾವ ಕಾಲದಲ್ಲಿ ನೀರು ಒದಗಿಸಬೇಕು ಎನ್ನುವ ಕುರಿತು ಸಾಮಾನ್ಯ ಉತ್ತರ ಇಲ್ಲ. ಆದರೆ ಇದಕ್ಕೆ ವೈಜ್ಞಾನಿಕ ಮಾರ್ಗದಲ್ಲಿ ಉತ್ತರ ಕಂಡುಕೊಳ್ಳಬೇಕು ” ಎಂದು ಮಾಹಿತಿ ನೀಡಿದರು.

ಹನಿ ನೀರಾವರಿ ಪದ್ಧತಿಯಲ್ಲಿ ಬೆಳೆಗಳ ಆರೈಕೆ ಹೇಗೆ ?..

   ಹನಿ ನೀರಾರಿ ಬೆಳೆಯಿಂದ ಕೃಷಿಕರ ಆರ್ಥಿಕತೆ ಬೆಳವಣಿಗೆಗೆ ಸಹಕಾರಿಯಾಗಲಿದ್ದು, ವಿವಿಧ ಹಂತಗಳಲ್ಲಿ ಬೆಳೆಗಳ ಮೇಲೆ ನಿಗಾ ಇಡುವುದು ಅತ್ಯಂತ ಮುಖ್ಯವಾಗಿದೆ. ಇಸ್ರೇಲ ನಲ್ಲಿ ಇದಕ್ಕಾಗಿ ಉಪಗ್ರಹ ಆಧರಿತ ನಿಗಾ ವ್ಯವಸ್ಥೆಯಿದೆ. ದೂರ ಸಂವೇದಿ ತಂತ್ರಜ್ಞಾನವನ್ನೂ ಸಹ ಇದಕ್ಕಾಗಿ ಬಳಕೆಮಾಡಿಕೊಳ್ಳುತ್ತೇವೆ.

   ಹನಿ ನೀರಾವರಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬೆಳೆಯಬಹುದು, ಇಳುವರಿಯೂ ಸಹ ಹೆಚ್ಚಾಗಲಿದೆ. ಬರ ಪರಿಸ್ಥಿತಿಯಲ್ಲೂ ತರಕಾರಿ ಬೆಳೆಯುವ ತಂತ್ರಜ್ಞಾನ ಇಸ್ರೇಲ್ ನಲ್ಲಿ ಅಭಿವೃದ್ಧಿಪಡಿಸಲಾಗಿದೆ. ಜತೆಗೆ ಗುಣಮಟ್ಟಕ್ಕೂ ಒತ್ತು ಕೊಡಲಾಗಿದೆ. ಕೃಷಿ ತಂತ್ರಜ್ಞಾನದಲ್ಲಿ ಇಸ್ರೇಲ್ ಉತ್ತುಂಗದಲ್ಲಿದೆ. ಹನಿ ನೀರಾವರಿಯಲ್ಲೂ ನಾವೇ ಸರ್ವಶ್ರೇಷ್ಠರು “

ಇಸ್ರೇಲ್ ಮತ್ತು ಭಾರತದ ನಡುವೆ ಕೃಷಿ ಶಿಕ್ಷಣ ಕುರಿತ ಬಾಂಧವ್ಯ ಹೇಗಿದೆ?.

  ಕೃಷಿ ತಂತ್ರಜ್ಞಾನದ ಜ್ಞಾನ ವಿನಿಯಮ ಅತ್ಯಂತ ಪ್ರಮುಖವಾದದ್ದು. ಕೃಷಿ ಶಿಕ್ಷಣ ವಿಷಯದಲ್ಲಿ ಉಭಯ ದೇಶಗಳ ನಡುವೆ ಸಹಭಾಗಿತ್ವವಿದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಸುಸ್ಥಿರ ಕೃಷಿ ಎಂಬ ಕೋರ್ಸ್ ಆರಂಭಿಸಲಾಗಿದ್ದು, ಭಾರತದಿಂದಲೂ ಪ್ರತಿವರ್ಷ 15 ರಿಂದ 20 ಮಂದಿ ವಿದ್ಯಾರ್ಥಿಗಳು ಬರುತ್ತಾರೆ.

  ವಿದ್ಯಾರ್ಥಿಗಳ ಎಲ್ಲಾ ಖರ್ಚು ವೆಚ್ಚಗಳನ್ನು ನಮ್ಮ ವಿವಿ ನೋಡಿಕೊಳ್ಳುತ್ತದೆ. ನಮ್ಮ ಬೆನ್ ವಿವಿಯಲ್ಲಿ ಸುಸ್ಥಿರ ಕೃಷಿ ಎನ್ನುವ ಕೋರ್ಸ್ ಆರಂಭಿಸಲಾಗಿದೆ. ಬೇಸಿಗೆ ಸಮಯದಲ್ಲಿ ಪ್ರತಿವರ್ಷ ಈ ಕೋರ್ಸ್ ನಡೆಸುತ್ತೇವೆ. ಇದಕ್ಕಾಗಿ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹ ನೀಡುತ್ತೇವೆ. ಆದರೆ ವಿದ್ಯಾರ್ಥಿಗಳು ಹೋಗಿ ಬರುವ ಪ್ರಯಾಣದ ಖರ್ಚು ಮಾತ್ರ ಭರಿಸಬೇಕಾಗುತ್ತದೆ. ಈ ಕೋರ್ಸ್ ಮುಗಿದ ನಂತರ ವಿದ್ಯಾರ್ಥಿಗಳು ಪದವಿ, ಪಿ.ಎಚ್.ಡಿ. ಸ್ನಾತಕೋತ್ತರ ಪದವಿ ಅಧ್ಯಯನಕ್ಕೂ ಅವಕಾಶಗಳಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ