ತುರುವೇಕೆರೆ
ಕಲಾವಿದರು ಎಂದಿಗೂ ಅಮರರು. ಅವರ ಕಲೆಯ ಅಭಿನಯದ ರಸದೌತಣ ಕಾಲಾತೀತವಾದ ಶಕ್ತಿ ಚೈತನ್ಯದ ದರ್ಶನವನ್ನು ಪಡೆದುಕೊಂಡಿರುತ್ತದೆ ಎಂದು ಶಿವಶಕ್ತಿ ಕಲಾವಿದರು ಮತ್ತು ರಂಗ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ ಅಮಾನಿಕೆರೆ ಮಂಜಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ಬಿ.ಇ.ಒ ಕಚೇರಿ ಮುಂಭಾಗದ ನಮ್ಮ ಕನ್ನಡ ಭವನದಲ್ಲಿ ಗುರುವಾರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶಿವಶಕ್ತಿ ಕಲಾವಿದರ ಸಂಘ ಇವುಗಳ ಸಹಯೋಗದಲ್ಲಿ ಡಾ.ರಾಜ್‍ಕುಮಾರ್ ಅವರ 91 ಜನ್ಮ ದಿನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ಡಾ.ರಾಜ್‍ಕುಮಾರ್ ನೆನಪು’ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನು ನುಡಿದು ಮಾತನಾಡಿದರು.
ರಾಜ್‍ಕುಮಾರ್ ಅವರ ವ್ಯಕ್ತಿ ಎಲ್ಲ ಕಲಾವಿದರಿಗೂ ಅನುಕರಣೀಯ. ರಾಜ್ ಅಭಿನಯ ಇಂದಿಗೂ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ. ದೇಶದ ಜನತೆ ರಾಜಕಾರಣಿ ಅಥವಾ ಇನ್ನಿತರ ಯಾವುದೇ ವರ್ಗದ ವ್ಯಕ್ತಿಗಳನ್ನು ಸುಲಭವಾಗಿ ಮರೆತು ಬಿಡಬಹುದು. ಆದರೆ ಕಲಾವಿದರನ್ನು ಎಂದಿಗೂ ಮರೆತಿರಲಾರರು. ರಾಜ್ ಅವರು ನಾಡಿನ ಕಲೆಯನ್ನು ದೇಶವಿದೇಶಗಳಲ್ಲಿಯೂ ಪ್ರಚುರಪಡಿಸಿದ ಗಟ್ಟಿಗ. ಯಾವುದೇ ಕಲಾವಿದ ರಾಜ್‍ಕುಮಾರ್ ಅವರ ಅಭಿನಯ ನೋಡಿ ಪರಿಪಕ್ವವಾಗ ಬೇಕಿದೆ. ಇವರು ಕಲಾವಿದರಷ್ಟೆ ಅಲ್ಲಾ ಹಲವು ಕನ್ನಡಪರ ಚಳವಳಿಗಳಲ್ಲೂ ತನ್ನನ್ನು ತೊಡಿಗಿಸಿಕೊಂಡವರು ಎಂದರು.
ಕಸಾಪ ತಾಲ್ಲೂಕು ಅಧ್ಯಕ್ಷ ನಂ.ರಾಜು ಮಾತನಾಡಿ ನಾಡಿನ ಕಲೆ, ಸಂಸ್ಕತಿ ಉಳಿಸಿ ಬೆಳೆಸುವಲ್ಲಿ ಕಲಾವಿದರ ಪಾತ್ರ ಹಿರಿದು. ಪ್ರತಿಯೊಬ್ಬ ಕಲಾವಿದರೂ ರಾಜ್‍ಕುಮಾರ್ ನಡೆದು ಬಂದ ದಾರಿಯಲ್ಲಿ ಸಾಗಬೇಕು. ತಾಲ್ಲೂಕಿನ ಯುವ ಕಲಾವಿದರು ತಿಂಗಳಿಗೊಂದು ಕಾರ್ಯಕ್ರಮ ಮಾಡುವ ಮೂಲಕ ಹಿರಿಯ ಕಲಾವಿದರನ್ನು ಸ್ಮರಿಸುವ ಕೆಲಸವಾಗಬೇಕು ಎಂದರು.
ಹಿರಿಯ ಕಲಾವಿದ ಟಿ.ಎನ್.ಸತೀಶ್ ಮಾತನಾಡಿ, ಸ್ಥಳೀಯ ಕಲಾವಿದರು ನಾಡಿನಾದ್ಯಂತ ತಮ್ಮದೆ ಆದ ಚಾಪು ಮೂಡಿಸುತ್ತಾ ತುರುವೇಕೆರೆ ಕಲೆಯ ತವರೂರು ಎಂಬುದನ್ನು ಸಾಬೀತುಪಡಿಸಿದ್ದಾರೆ. ರಾಜ್‍ಕುಮಾರ್ ಅವರ ವ್ಯಕ್ತಿತ್ವವೆ ಒಂದು ಮಿರಾಕಲ್ ಇದ್ದಂತೆ. ಅದು ಇಂದಿನ ಕಲಾವಿದರಿಗೆ ಮಾರ್ಗದರ್ಶನ ಎಂದರೆ ತಪ್ಪಾಗಲಾರದು ಎಂದರಲ್ಲದೆ, ತಾಲ್ಲೂಕಿನ ಮಾಯಸಂದ್ರಕ್ಕೆ ರಾಜ್‍ಕುಮಾರ್ ಆಗಮಿಸಿ ಕಾರ್ಯಕ್ರಮ ನಡೆಸಿಕೊಟ್ಟ ಪ್ರಸಂಗವೊಂದನ್ನ ಮೆಲುಕು ಹಾಕಿದರು.
ಇದಕ್ಕೂ ಮುನ್ನಾ ಕಲಾವಿದ ಶಂಕರೇಗೌಡ ಮತ್ತು ಮಂಜಣ್ಣ ರಂಗಗೀತೆ ಹಾಡುವ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡಿದರು. ನಂತರ ಹಲವು ಕಲಾವಿದರು ರಾಜ್‍ಕುಮಾರ್ ಅವರ ಹಾಡುಗಳನ್ನು ಹಾಡುವ ಮೂಲಕ ಸಭಿಕರನ್ನು ರಂಜಿಸಿದರು. ತಾಲ್ಲೂಕು ಕಸಾಪ ವತಿಯಿಂದ ಕಲಾವಿದರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಲಾವಿದರುಗಳಾದ ಟಿ.ಎಸ್.ಬೋರೇಗೌಡ, ಕೆಂಪರಾಜು, ಸಾಹಿತಿ ಪ್ರಸಾದ್, ಕಾವಲು ಸಮಿತಿಯ ತಾಲ್ಲೂಕು ಅಧ್ಯಕ್ಷ ಎಚ್.ಎನ್.ವೆಂಕಟೇಶ್, ಲಯನ್ ಸುನಿಲ್‍ಬಾಬು, ಕುಮಾರಸ್ವಾಮಿ, ದಿನೇಶ್, ವಿರೂಪಾಕ್ಷ ಗ್ರಂಥಾಲಯದ ರಾಮಚಂದ್ರು ಇದ್ದರು. ಅಶೋಕ್ ಸ್ವಾಗತಿಸಿ, ಭೋಜರಾಜ ನಿರೂಪಿಸಿ, ವಂದಿಸಿದರು.