ಕಾವೇರುತ್ತಿರುವ ನಗರಸಭಾ ಚುನಾವಣೆ..!!!

ತಿಪಟೂರು
        ಮೇ 29 ರಂದು ನಡೆಯಲಿರುವ ನಗರಸಭಾ ಚುನಾವಣೆಗೆ ತಾಲ್ಲೂಕು ಆಡಳಿತ ಸಕಲ ಸಿದ್ದತೆ ನಡೆಸಿದೆ ಎಂದು ತಹಸೀಲ್ದಾರ್ ಬಿ. ಆರತಿ ತಿಳಿಸಿದ್ದಾರೆ.

        ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 2 ರಂದೇ ಜಾರಿಯಾಗಿರುವ ಚುನಾವಣಾ ನೀತಿ ಸಂಹಿತೆ ಮೇ 31 ರವರೆಗೂ ಜಾರಿಯಲ್ಲಿರಲಿದೆ. ಮೇ 9 ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದ್ದು, ಮೇ 16 ಕಡೇ ದಿನ, 17 ರಂದು ನಾಮಪತ್ರ ಪರಿಶೀಲನೆ ಮತ್ತು ಮೇ 18 ನಾಮಪತ್ರ ವಾಪಸ್ ಪಡೆಯಲು ಕಡೇ ದಿನ. ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಪಕ್ಷದ ವತಿಯಿಂದ ಸೂಕ್ತ ಬಿ ಫಾರಂ ಸಲ್ಲಿಸಬೇಕು, ಅರ್ಜಿ ಶುಲ್ಕ ಸಾಮಾನ್ಯ ವರ್ಗಕ್ಕೆ ರೂ 2 ಸಾವಿರ ಹಾಗೂ ಇತರರಿಗೆ ರೂ.1 ಸಾವಿರ ಎಂದರು.

       31 ವಾರ್ಡುಗಳಿಂದ ಒಟ್ಟು 48 ಸಾವಿರ ಮತದಾರರು ಮತ ಚಲಾಯಿಸಲು 41 ಮತದಾನ ಕೇಂದ್ರಗಳನ್ನು ಗುರುತಿಸಲಾಗಿದೆ. ಈ ಚುನಾವಣೆಯಲ್ಲಿ ವಿ.ವಿ.ಪ್ಯಾಟ್ ಸೌಲಭ್ಯ ಇಲ್ಲ. ಕೇವಲ ಇ.ವಿ.ಎಂ. ಮಾತ್ರ ಇರಲಿದೆ. ಚುನಾವಣೆಗೆ ಸ್ಪರ್ಧಿಸ ಬಯಸುವ ಆಕಾಂಕ್ಷಿಗಳಿಗೆ ಜಾತಿ ಪ್ರಮಾಣ ಪತ್ರವನ್ನು 2 ದಿನಗಳ ಒಳಗೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, ಇದು ಚುನಾವಣಾ ಉದ್ದೇಶಕ್ಕೆ ಮಾತ್ರ ಬಳಸಬಹುದು ಎಂದು ಸ್ಪಷ್ಟಪಡಿಸಿದ ಅವರು, ಒಬ್ಬ ಅಭ್ಯರ್ಥಿ ನಾಲ್ಕು ನಾಮಪತ್ರಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸರ್ಕಾರಿ ರಜಾ ದಿನದಂದು ನಾಮ ಪತ್ರ ಸ್ವೀಕರಿಸುವುದಿಲ್ಲ ಎಂದರು.

ಕಂಟ್ರೋಲ್ ರೂಂ ಸ್ಥಾಪನೆ:

        ಚುನಾವಣಾ ದೃಷ್ಟಿಯಿಂದ ಕಂಟ್ರೋಲ್ ರೂಂ ತೆರೆಯಲಾಗಿದ್ದು, ಯಾವುದೇ ರೀತಿಯ ಚುನಾವಣಾ ಅಕ್ರಮ, ಹಣ, ಹೆಂಡ, ಹಂಚಿಕೆ, ಕುರಿತಾದ ದೂರುಗಳಿಗೆ ದೂರವಾಣಿ ಸಂಖ್ಯೆ 0934251039 ಗೆ ಕರೆ ಮಾಡಬಹುದು ಮತ್ತು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆಗೆ ಸಂಬಂಧಿಸಿದ ಎಲ್ಲಾ ಪ್ರಕ್ರಿಯೆಗಳು ನಡೆಯಲಿವೆ. ಇದಕ್ಕಾಗಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸ್ಟ್ರಾಂಗ್ ರೂಂ ಅನ್ನೂ ಸಹ ಇಲ್ಲಿಯೇ ತೆರೆಯಲಾಗಿದ್ದು, ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಲಿದೆ ಎಂದರು.


          ಕಳೆದ ಲೋಕಸಭಾ ಚುನಾವಣೆಯಲ್ಲಿ, ಗುರುತಿನ ಚೀಟಿ ಜೊತೆಗೆ ಆನ್‍ಲೈನ್‍ನಲ್ಲಿ ಮಾಹಿತಿ ಇದ್ದರೂ ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದೆ ಕೆಲವರು ಮತದಾನದಿಂದ ವಂಚಿತರಾಗಿದ್ದರು. ಈ ಬಾರಿ ಇದನ್ನು ಸರಿಪಡಿಸಲಾಗಿದೆ. ಸಪ್ಲಿಮೆಂಟರಿ ಮತದಾರರ ಪಟ್ಟಿಯಲ್ಲಿ ಕೈ ಬಿಟ್ಟಿದ್ದ ಹೆಸರುಗಳನ್ನು ಸೇರಿಸಲಾಗಿದೆ. ಆದರೆ ಈ ಪಟ್ಟಿಯಲ್ಲಿ ಮತದಾರರ ಫೋಟೋ ಮಾತ್ರ ಇರುವುದಿಲ್ಲ.
ಬಿ. ಆರತಿ. ತಹಸೀಲ್ದಾರ್, ತಿಪಟೂರು.


   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link