ನೀರಿನ ಕೊರತೆ : ಎಂ.ಸಿ.ಎಫ್ ಕಾರ್ಯಚರಣೆ ಸ್ಥಗಿತ

ಮಂಗಳೂರು :

        ರಾಜ್ಯದ ಏಕೈಕ ರಸಗೊಬ್ಬರ ಕಾರ್ಖಾನೆ ಮಂಗಳೂರು ಪಣಂಬೂರಿನಲ್ಲಿರುವ ಎಂಸಿಎಫ್ ನೀರಿನ ಕೊರತೆಯಿಂದಾಗಿ ತನ್ನ ಕಾರ್ಯಚರಣೆಯನ್ನು ಇಂದಿನಿಂದ ಸ್ಥಗಿತಗೊಳಿಸಿದೆ .

         ವಾರ್ಷಿಕ ನಿರ್ವಹಣೆಗಾಗಿ ಮಾರ್ಚ್‌ನಿಂದ ಸುಮಾರು 40 ದಿನಗಳ ಕಾಲ ಶಟ್‌ಡೌನ್ ಆಗಿದ್ದ ಮಂಗಳೂರು ಕೆಮಿಕಲ್ ಫರ್ಟಿಲೈಸರ್ ಕಂಪನಿ ಒಂದೇ ತಿಂಗಳಲ್ಲಿ ಮತ್ತೆ ನೀರಿಲ್ಲದ ಕಾರಣದಿಂದ ಮಂಗಳವಾರ ಬೆಳಗ್ಗಿನಿಂದ ಸ್ಥಗಿತಗೊಂಡಿದೆ.
ನೀರಿನ ಪೂರೈಕೆ ಸರಿಯಾಗಿ ಆಗುವ ವರೆಗೂ ಈ ಶಟ್ ಡೌನ್ ಮುಂದುವರಿಯಲಿದೆ.

       ಎಂಸಿಎಫ್‌ನ ಪ್ರಮುಖ ಉತ್ಪನ್ನ ವಾದ ಯೂರಿಯಾ. ರಸಗೊಬ್ಬರವನ್ನು ಕೇಂದ್ರ ರಸಗೊಬ್ಬರ ಸಚಿವಾಲಯ ಎಂಸಿಎಫ್‌ನಿಂದ ಖರೀದಿಸಿ ವಿವಿಧ ರಾಜ್ಯಗಳಿಗೆ ವಿತರಣೆ ಮಾಡುತ್ತದೆ. ಅದರಂತೆ ರಾಜ್ಯದ ಬಹುತೇಕ ಕೃಷಿಕರಿಗೆ ಎಂಸಿಎಫ್‌ನಿಂದಲೇ ಯೂರಿಯಾ ಪೂರೈಕೆಯಾಗುತ್ತದೆ. ಎಂಸಿಎಫ್ ಸರಾಸರಿ ದಿನಕ್ಕೆ 1600 ಟನ್ ಯೂರಿಯಾ ಉತ್ಪಾದನೆ ಮಾಡುತ್ತದೆ. 800 ಟನ್‌ನಷ್ಟು ಡಿಎಪಿ ಗೊಬ್ಬರ ಉತ್ಪಾದನೆ ಮಾಡುತ್ತದೆ. 700 ಟನ್‌ನಷ್ಟು ಅಮೋನಿಯಾ ಉತ್ಪಾದನೆಯಾಗುತ್ತದೆ.

        ಪ್ರತಿದಿನ ಎಂಸಿಎಫ್ ಕಾರ್ಖಾನೆ ಕೆಲಸ ಮಾಡಲು 1.6 ಮಿಲಿಯನ್ ಗ್ಯಾಲನ್ ನೀರು ಬೇಕಾಗುತ್ತದೆ. ಅದರಲ್ಲಿ 1.5 ಎಂಜಿಡಿ ನೇತ್ರಾವತಿಯಿಂದ ಕಂಪನಿಗೆ ಪೂರೈಕೆ ಮಾಡಲಾಗುತ್ತದೆ. ಶೌಚಾಲಯ ಸೇರಿದಂತೆ ಇತರ ತ್ಯಾಜ್ಯ ನೀರನ್ನು ಎಂಬಿಆರ್(ಮೆಂಬ್ರೇನ್ ಬಯೊರಿಯಾಕ್ಟರ್) ಯುನಿಟ್ ಮೂಲಕ ಸಂಸ್ಕರಿಸಿ ಬಳಕೆ ಮಾಡಲಾಗುತ್ತದೆ. ಕಳೆದ ಕೆಲ ದಿನಗಳಿಂದ ಮಂಗಳೂರು ಪಾಲಿಕೆಯಿಂದ ಪೂರೈಕೆಯಾಗುವ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಬಂದಿದೆ. 1.5 ಎಂಜಿಡಿ ಬದಲು, 1 ಎಂಜಿಡಿಗಿಂತಲೂ ಕಡಿಮೆ ನೀರು ಬರುತ್ತಿದೆ. ನೀರಿನ ರೇಷನಿಂಗ್ ಶುರುವಾದ ಕಾರಣ ನಮ್ಮಲ್ಲಿದ್ದ ನೀರಿನ ಸಂಗ್ರಹವೂ ಖಾಲಿಯಾಗುತ್ತಾ ಬಂದಿದೆ. ಹಾಗಾಗಿ ಶಟ್‌ಡೌನ್ ಮಾಡದೆ ವಿಧಿಯಿಲ್ಲ ಎಂದು ಎಂಸಿಎಫ್ ನಿರ್ದೇಶಕ ಪ್ರಭಾಕರ ರಾವ್ ಹೇಳಿದ್ದಾರೆ.

       ನೀರಿನ ಪೂರೈಕೆ ಸಮರ್ಪವಾಗುವ ತನಕ ಕಂಪೆನಿ ಶಟ್ ಡೌನ್ ಮುಂದುವರಿಯಲಿದೆ. ಇನ್ನೂ ಮಳೆಗಾಲ ಆರಂಭಗೊಂಡ ಬಳಿಕವಷ್ಟೇ ನೀರಿನ ಪೂರೈಕೆ ಸಾಧ್ಯವಾಗಲಿದೆ. ಮಂಗಳೂರಿಗೆ ನೀರು ಪೂರೈಸುವ ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದ್ದು, , ಇಂದು ನೀರಿನ ಮಟ್ಟ 3.85 ಮೀಟರ್ ಇದೆ.

      ಕಳೆದ ವರ್ಷ ಇದೇ ದಿನದಂದು ತುಂಬೆ ಜಲಾಶಯದಲ್ಲಿ 5.93 ಮೀಟರ್ ನೀರು ಇತ್ತು . ಈ ಬಾರೀ ದೊಡ್ಡ ಪ್ರಮಾಣದಲ್ಲಿ ನೀರಿನ ಕೊರತೆ ಎದುರಾಗಿದೆ. ಈ ಹಿನ್ನೆಲೆಯಲ್ಲಿ ನಗರಕ್ಕೆ ಕುಡಿಯುವ ನೀರನ್ನು ವಾರದಲ್ಲಿ ನಾಲ್ಕು ದಿನವಷ್ಟೇ ಪೂರೈಕೆ ಮಾಡಲಾಗುತ್ತಿದೆ . ಎಂ.ಸಿ.ಎಫ್. ಕಾರ್ಯಚರಣೆ ಸ್ಥಗಿತಗೊಳಿಸಿರುವದರಿಂದ ಈ ಬಾರಿ ರಸಗೊಬ್ಬರ ಪೂರೈಕೆಯಲ್ಲಿ ಕೊರತೆ ಎದುರಾಗಲಿದೆ ಎಂದು ಅಂದಾಜಿಸಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link