ಚಳ್ಳಕೆರೆ
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ದಲಿತ ಸಮುದಾಯದ ಹಿರಿಯ ಮುಖಂಡ, ಮಾಜಿ ಸಚಿವ ಎ.ನಾರಾಯಣಸ್ವಾಮಿ ಮಾರ್ಚ್ 26ರ ಮಂಗಳವಾರ ಚಿತ್ರದುರ್ಗದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದು, ಕ್ಷೇತ್ರದ ಸಾವಿರಾರು ಕಾರ್ಯಕರ್ತರು ನಾಮಪತ್ರ ಸಲ್ಲಿಕೆ ಕಾರ್ಯದಲ್ಲಿ ಭಾಗವಹಿಸಬೇಕೆಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿ ರಾಮದಾಸ್ ಮನವಿ ಮಾಡಿದ್ಧಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಾರ್ಚ್ 26ರ ಮಂಗಳವಾರ ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕರುಗಳಾದ ಗೋವಿಂದ ಕಾರಜೋಳ, ಬಿ.ಶ್ರೀರಾಮುಲು, ಜಿ.ಎಚ್.ತಿಪ್ಪಾರೆಡ್ಡಿ, ಪೂರ್ಣಿಮಾಶ್ರೀನಿವಾಸ್ ಸೇರಿದಂತೆ ಹಲವಾರು ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವರು. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಗೆಲುವು ಸಾಧಿಸಲು ಎಲ್ಲಾ ಕಾರ್ಯಕರ್ತರು ಪರಿಶ್ರಮದಿಂದ ಕಾರ್ಯನಿರ್ವಹಿಸಬೇಕು. ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ಕ್ಷೇತ್ರದ ಪ್ರತಿ ಗ್ರಾಮದಿಂದಲೂ ಕಾರ್ಯಕರ್ತರು ಆಗಮಿಸುವಂತೆ ರಾಮದಾಸ್ ಮನವಿ ಮಾಡಿದ್ಧಾರೆ.