ಹೊಸದುರ್ಗ:
ವಿಧಾನಸಭೆ ಚುನಾವಣೆ ಸಮಯದಲ್ಲಿ ವಾಲ್ಮೀಕಿ ಸಮಾಜದ ಮುಖಂಡ ಬಿ.ಶ್ರೀರಾಮುಲು ಅವರನ್ನು ಉಪಮುಖ್ಯ ಮಂತ್ರಿಯನ್ನಾಗಿ ಮಾಡುತ್ತೇವೆಂದು ಬಿಂಬಿಸಿದ್ದ ಬಿಜೆಪಿ ನಾಯಕರು ಇದೀಗ ಮಾತಿಗೆ ತಪ್ಪಿ ನಡೆದುಕೊಂಡಿರುವುದು ವಾಲ್ಮೀಕಿ ಜನಾಂಗಕ್ಕೆ ಅವಮಾನವಾಗಿದೆ ಎಂದು ತಾಲೂಕು ವಾಲ್ಮೀಕಿ ನಾಯಕ ಸಮಾಜದ ಮುಖಂಡರು ಮಂಗಳವಾರ ಪ್ರತಿಭಟನೆ ನಡೆಸಿದರು.
2018 ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೇಸ್‍ನ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಾದಾಮಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಬಿಜೆಪಿ ಮುಖಂಡರ್ಯಾರು ಧೈರ್ಯ ಮಾಡಲಿಲ್ಲ. ಅಂತಹ ಸಂದರ್ಭದಲ್ಲಿ ಪಕ್ಷದ ಹಿತದೃಷ್ಠಿಯಿಂದ ಸಿದ್ದರಾಮಯ್ಯ ವಿರುದ್ದ ಸ್ಪರ್ಧಿಸಿ ಕೇವಲ 2000 ಸಾವಿರ ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಕಡಿಮೆ ಅವಯಲ್ಲಿ ತೀವ್ರ ಪೈಪೋಟಿ ನೀಡಿದರು. ಪಕ್ಷ ಅಕಾರಕ್ಕೆ ಬಂದರೇ ಬಿ.ಶ್ರೀರಾಮುಲು ಉಪಮುಖ್ಯಮಂತ್ರಿಯಾಗುತ್ತಾರೆಂದು ಇಡೀ ಸಮುದಾಯ ಬಿಜೆಪಿಗೆ ಮತ ನೀಡಿತ್ತು. ಇತ್ತಿಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲೂ ಸಮುದಾಯ ಬೆಂಬಲಿಸಿದೆ. ಇದರಿಂದಾಗಿಯೇ ಬಿಜೆಪಿ ಹೆಚ್ಚಿನ ಸ್ಥಾನ ಗಳಿಸಲು ಸಾಧ್ಯವಾಗಿದೆ ಎಂಬುದನ್ನು ಪಕ್ಷ ಮನಗಾಣಬೇಕು ಎಂದರು.
ವಾಲ್ಮೀಕಿ ಯುವ ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ತುಂಬಿನಕೆರೆ ಬಸವರಾಜ್ ಮಾತನಾಡಿ, ಬಿ.ಶ್ರೀರಾಮುಲು ಅವರಿಗೆ ಡಿಸಿಎಂ ಖಾತೆ ನೀಡದೆ ಸಮುದಾಯವನ್ನು ಅವಮಾನಿಸಲಾಗಿದೆ. ನಾಯಕ ಜನಾಂಗವನ್ನು ತುಳಿಯಲು ಹುನ್ನಾರ ನಡೆಯುತ್ತಿದ್ದು, ಸಮುದಾಯ ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ.
ಇನ್ನಾದರೂ ಬಿಜೆಪಿ ನಾಯಕರು ಎಚ್ಚೆತ್ತುಕೊಂಡು ಸಂಪುಟದಲ್ಲಿ ಅವರಿಗೆ ಉಪಮುಖ್ಯಮಂತ್ರಿ ಜತೆಗೆ ಪ್ರಮುಖ ಖಾತೆ ನೀಡಿ ಸಮುದಾಯದ ಮುಖಂಡನಿಗೆ ಗೌರವ ನೀಡಬೇಕು. ಇಲ್ಲದಿದ್ದಲ್ಲಿ ನಾಯಕ ಜನಾಂಗ ಉಗ್ರ ಹೋರಾಟ ಮಾಡುವುದರೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತನು ಬಿಜೆಪಿಗೆ ರಾಜೀನಾಮೆ ನೀಡಿ ಹೊರಬರುವ ತೀರ್ಮಾನ ಕೈಗೊಂಡರು ಅಚ್ಚರಿ ಪಡಬೇಕಾಗಿಲ್ಲ ಎಂಬುದಾಗಿ ತಿಳಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ದೇವರಾಜ್, ಕಾರ್ಯದರ್ಶಿ ಗಾದ್ರಪ್ಪ, ಮುಖಂಡರಾದ ತಾರೀಕೆರೆ ರಮೇಶ್, ಏಕಾಂತಪ್ಪ, ಮಂಜುನಾಥ್, ತಿಪ್ಪೇಸ್ವಾಮಿ, ರಾಜಪ್ಪ, ಸಿದ್ದೇಶ್, ಗವಿರಂಗನಾಥ್,ಸೋಮಸಂದ್ರ ರಾಮು, ಕರ್ಣ, ಹನುಮಂತಪ್ಪ ., ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ