ಬೆಂಗಳೂರು
ಅರ್ಹರಲ್ಲದವರಿಗೆ ಪರಿಶಿಷ್ಟ ವರ್ಗದ ಪ್ರಮಾಣ ಪತ್ರ ನೀಡುವುದನ್ನು ತಡೆಯಬೇಕು ಎಂದು ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಗುರುಪೀಠ ಟ್ರಸ್ಟ್‍ನ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪುರಭವನದ ಮುಂಭಾಗ ಗುರುವಾರ ಸೇರಿದ ಟ್ರಸ್ಟ್‍ನ ನೂರಾರು ಸದಸ್ಯರು ಪರಿಶಿಷ್ಟ ವರ್ಗದವರ ಹಲವು ವರ್ಷಗಳ ಬೇಡಿಕೆಯಾದ ಪ್ರತ್ಯೇಕ ಪರಿಶಿಷ್ಟ ವರ್ಗದ ಸಚಿವಾಲಯವನ್ನು ಕೂಡಲೇ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಕೆಲವು ಮುಂದುವರೆದ ವರ್ಗದವರು ಪರಿಶಿಷ್ಟ ವರ್ಗದ ಪಟ್ಟಿಯಲ್ಲಿನ ಹೆಸರುಗಳನ್ನು ಬಳಸಿಕೊಂಡು ಜಾತಿ ಪ್ರಮಾಣ ಪತ್ರ ನೀಡುವ ಪ್ರಾಧಿಕಾರವಾದ ತಹಸೀಲ್ದಾರ್‍ಗಳಿಂದ ಜಾತಿ ಪ್ರಮಾಣ ಪತ್ರಗಳನ್ನು ಅಸಂವಿಧಾನಾತ್ಮಕವಾಗಿ ಪಡೆದುಕೊಂಡು ಪರಿಶಿಷ್ಟ ವರ್ಗದವರಿಗೆ ಮೀಸಲಿರುವ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿರುವುದನ್ನು ಕೂಡಲೇ ತಡೆಯುವಂತೆ ಒತ್ತಾಯಿಸಿದರು.
ಶೈಕ್ಷಣಿಕ ಸಂಸ್ಥೆಗಳ ಪ್ರವೇಶಗಳಲ್ಲಿ ಶೇ. 3 ರಷ್ಟು ಮಾತ್ರ ಮೀಸಲಾತಿಯನ್ನು ನಿಗದಿ ಮಾಡಿ ಪರಿಶಿಷ್ಟ ವರ್ಗದವರಿಗೆ ಅನ್ಯಾಯ ಮಾಡಿಕೊಂಡು ಬರುಲಾಗುತ್ತಿದೆ. ಇದನ್ನು ಹೋಗಲಾಡಿಸಲು ರಾಜ್ಯದಲ್ಲಿ ಪರಿಶಿಷ್ಟ ವರ್ಗದವರಿಗೆ ನಿಗದಿ ಪಡಿಸಿರುವ ಮೀಸಲಾತಿ ಪ್ರಮಾಣವನ್ನು ಶೇ. 3 ರಿಂದ 7ಕ್ಕೆ ಹೆಚ್ಚಿಸಬೇಕೆಂದು ಆಗ್ರಹಿಸಿದರು. ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುವವರ ಮೇಲೆ ಕಠಿಣ ಕ್ರಮ ಕೈಗೊಂಡು ಯಾವ ವರ್ಗದವರಿಗೂ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ಅನ್ಯಾಯವಾಗುವಂತೆ ಎಚ್ಚರಿಕೆ ವಹಿಸಬೇಕೆಂದು ಅವರು ಆಗ್ರಹಿಸಿದರು.