ಚಿತ್ರದುರ್ಗ
ಜಾಗತಿಕ ಮಟ್ಟದಲ್ಲಿ ಭಾರತದ ಯೋಗ ಹೇಗೆ ಮನ್ನಣೆ ಪಡೆದಿದೆಯೋ ಅದೇ ರೀತಿ, ಶೌಚಾಲಯ ನಿರ್ಮಾಣಕ್ಕೆ ರೂಪಿಸಿದ ಆಂದೋಲನವೂ ಜಗತ್ತಿನ ಪ್ರಶಂಸೆಗೆ ಪಾತ್ರವಾಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು
ನಗರದ ಮೆದೆಹಳ್ಳಿ ರಸ್ತೆಯ ಅಯ್ಯಪ್ಪ ಸ್ವಾಮಿ ದೇವಸ್ಥಾನ ಬಳಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಹಾಗೂ ಮೆದೆಹಳ್ಳಿ ಗ್ರಾ.ಪಂ. ಸಹಯೋಗದಲ್ಲಿ ಸೋಮವಾರದಂದು ಆಯೋಜಿಸಿದ್ದ ವಿಶ್ವ ಶೌಚಾಲಯ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೆಹಲಿಯ ಕೆಂಪುಕೋಟೆಯ ಮೇಲೆ, ವಿದೇಶಿ ಗಣ್ಯರ ಸಮಕ್ಷಮದಲ್ಲಿ ನಿಂತು ಪ್ರಧಾನಮಂತ್ರಿಗಳು ದೇಶದ ಸ್ವಚ್ಛತೆಗೆ, ಶೌಚಾಲಯ ನಿರ್ಮಾಣಕ್ಕೆ ಕರೆ ಕೊಟ್ಟಾಗ, ಇಂತಹ ಮಹತ್ವದ ವೇದಿಕೆಯಲ್ಲಿ ಶೌಚಾಲಯದ ಮಾತನ್ನಾಡುವುದೇ ಎಂದು ಕೆಲವರು ಟೀಕೆ ಮಾಡಿದರು. ಆದರೆ ಅಂದು ಪ್ರಧಾನಮಂತ್ರಿಗಳು ಕೊಟ್ಟ ಕರೆ, ಇಂದು ಆಂದೋಲನವಾಗಿ ಪರಿವರ್ತನೆಯಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಮಹತ್ವ ಬಂದಿದೆ ಎಂದು ಹೇಳಿದರು
ಸಾರ್ವಜನಿಕರು ತಮ್ಮ ಮನೆ, ಸುತ್ತಮುತ್ತಲ ವಾತಾವರಣ, ಗ್ರಾಮ ಹೀಗೆ ಎಲ್ಲವನ್ನೂ ಸ್ವಚ್ಛವಾಗಿರಿಸಿಕೊಂಡಲ್ಲಿ, ಆರೋಗ್ಯಪೂರ್ಣ ಸಮಾಜ ನಿರ್ಮಿಸಲು ಸಾಧ್ಯ. ಸಾರ್ವಜನಿಕರು ಕೂಡ ಸ್ವಚ್ಛತೆ ಕಾಯ್ದುಕೊಳ್ಳುವಲ್ಲಿ ಸ್ಥಳೀಯ ಸಂಸ್ಥೆಗಳೊಂದಿಗೆ ಸಹಕರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಸ್ವಚ್ಛತೆ ಹಾಗೂ ಗ್ರಾಮೀಣ ಉದ್ಯೋಗ ಸೃಜನೆ ಇವೆರಡೂ ಗಾಂಧೀಜಿಯವರ ಕನಸಾಗಿತ್ತು. ಎಲ್ಲ ಕುಟುಂಬಗಳೂ ವೈಯಕ್ತಿಕ ಶೌಚಾಲಯ ಹೊಂದಿ, ಅದನ್ನು ಬಳಸುವ ಮೂಲಕ ಗಾಂಧೀಜಿಯವರ ಕನಸನ್ನು ನನಸಾಗಿಸೋಣ ಎಂದು ಕರೆ ನೀಡಿದರು
ವೈಯಕ್ತಿಕ ಸ್ವಚ್ಛತೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಜಿಸುವುದು ಮಹಾತ್ಮಾ ಗಾಂಧೀಜಿಯವರ ಆಶಯವಾಗಿತ್ತು. ಈಗಿನ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕೂಡ, ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ, ಪ್ರತಿಯೊಂದು ಕುಟುಂಬ ಶೌಚಾಲಯ ಹೊಂದಬೇಕು ಎನ್ನುವ ವಿಷಯವನ್ನು ಆಂದೋಲನವಾಗಿ ರೂಪಿಸಿದರು. ಈಗಿನ ದಿನಮಾನಕ್ಕೆ ಇದು ಅತ್ಯಂತ ಅಗತ್ಯವೂ ಆಗಿದೆ ಎಂದರು
ಇಂದಿನ ಜೀವನ ಪದ್ಧತಿಯಲ್ಲಿ ಎಲ್ಲವೂ ಕಲಬೆರಕೆಯಾಗಿದೆ. ಹಿಂದಿನ ಕಾಲದಲ್ಲಿ ಆಹಾರ ಮತ್ತು ನೀರು ಕಲುಷಿತವಾಗಿರಲಿಲ್ಲ. ಹೀಗಾಗಿ ಆರೋಗ್ಯವೂ ಉತ್ತಮವಾಗಿರುತ್ತಿತ್ತು. ಆದರೆ ಈಗ ತಿನ್ನುವ ಆಹಾರ, ನೀರು ಎಲ್ಲದರಲ್ಲಿಯೂ ನಮಗರಿವಿಲ್ಲದಂತೆ ವಿಷಕಾರಿ ಅಂಶಗಳನ್ನು ನಾವು ಸೇವನೆ ಮಾಡುತ್ತಿದ್ದೇವೆ.
ಜನಸಂಖ್ಯೆ ಹೆಚ್ಚಳದಿಂದಾಗಿ ಪರಿಸರದ ನಾಶದ ಜೊತೆಗೆ ಸ್ವಚ್ಛತೆಯ ಕೊರತೆಯೂ ಉಂಟಾಗಿದೆ. ಬಯಲು ಶೌಚ ಮಾಡುವುದರಿಂದ ರೋಗ ರುಜಿನಗಳು ಹೆಚ್ಚಾಗಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಇವೆಲ್ಲ ಅಂಶಗಳನ್ನು ಗಮನಿಸಿಯೇ, ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಸಹಾಯಧನವನ್ನೂ ನೀಡುತ್ತಿದೆ ಎಂದರು
ಜನತೆಗೆ ಒಳಿತಾಗಲಿ ಎನ್ನುವ ಉದ್ದೇಶವನ್ನಿಟ್ಟುಕೊಂಡು, ಸರ್ಕಾರ ರೂಪಿಸುವ ಇಂತಹ ಯೋಜನೆಗಳ ಮಹತ್ವವನ್ನು ಅರಿತು, ಜನರು ಕೈಜೋಡಿಸಬೇಕು. ಶೌಚಾಲಯವನ್ನು ತಪ್ಪದೆ ಕಟ್ಟಿಸಿಕೊಂಡು ಬಳಸಬೇಕು. ಶಾಲಾ ಮಕ್ಕಳು ತಮ್ಮ ಮನೆಯಲ್ಲಿ ಇನ್ನೂ ಶೌಚಾಲಯ ಕಟ್ಟಿಸಿಕೊಳ್ಳದಿದ್ದಲ್ಲಿ, ಹಠ ಹಿಡಿದು, ತಂದೆ ತಾಯಿಯನ್ನು ಒತ್ತಾಯಿಸಿಯಾದರೂ ಶೌಚಾಲಯ ನಿರ್ಮಿಸಿಕೊಳ್ಳಲು ಮುಂದಾಗಬೇಕು ಎಂದು ಸಂಸದ ಬಿ.ಎನ್.ಚಂದ್ರಪ್ಪ ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎನ್. ರವೀಂದ್ರ ಮಾತನಾಡಿ, ಮನುಷ್ಯನಿಗೆ ಗಾಳಿ, ಬೆಳಕು, ನೀರು ಹೇಗೆ ಮುಖ್ಯವೋ, ಶೌಚಾಲಯವೂ ಕೂಡ ಅಷ್ಟೇ ಪ್ರಮುಖ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಬಯಲು ಮಲವಿಸರ್ಜನೆಯಿಂದ ರೋಗ ರುಜಿನ ಹರಡಿ, ಇಡೀ ಗ್ರಾಮಕ್ಕೆ ಗ್ರಾಮವೇ ಸಾಂಕ್ರಾಮಿಕ ರೋಗಕ್ಕೆ ತುತ್ತಾದ ಘಟನೆಗಳು ಅದೆಷ್ಟೋ ನಡೆದು ಹೋಗಿವೆ.
2012-13 ರಲ್ಲಿ ಜಿಲ್ಲೆಯಲ್ಲಿ ನಡೆದ ಬೇಸ್‍ಲೈನ್ ಸರ್ವೆ ಪ್ರಕಾರ ಜಿಲ್ಲೆಯಲ್ಲಿ 1.83 ಲಕ್ಷ ಶೌಚಾಲಯ ನಿರ್ಮಾಣ ಆಗಬೇಕಿತ್ತು. ಈಗಾಗಲೆ ಶೇ. 95 ರಷ್ಟು ಶೌಚಾಲಯ ನಿರ್ಮಾಣ ಪೂರ್ಣಗೊಂಡಿದೆ. ಸಾರ್ವಜನಿಕರ ಸಹಕಾರ ಹಾಗೂ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ, ಸಿಬ್ಬಂದಿಗಳ ಪ್ರಾಮಾಣಿಕ ಪ್ರಯತ್ನದಿಂದಾಗಿ, ಜಿಲ್ಲೆಯಲ್ಲಿ ಸದ್ಯ ಬಾಕಿ ಉಳಿದಿದ್ದ ಗ್ರಾಮೀಣ ಪ್ರದೇಶದ ಎಲ್ಲ ಶೌಚಾಲಯ ರಹಿತ ಕುಟುಂಬಗಳಿಗೂ, ಶೌಚಾಲಯ ನಿರ್ಮಾಣಕ್ಕಾಗಿ ಕಾರ್ಯಾದೇಶ ನೀಡಲಾಗಿದ್ದು, ಶೀಘ್ರದಲ್ಲಿಯೇ ಎಲ್ಲ ಕುಟುಂಬಗಳೂ ಶೌಚಾಲಯ ನಿರ್ಮಿಸಿಕೊಳ್ಳುವ ಮೂಲಕ, ಜಿಲ್ಲೆ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಘೋಷಣೆಯಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಗುರುಮೂರ್ತಿ, ನರಸಿಹಂರಾಜು, ತಾ.ಪಂ. ಅಧ್ಯಕ್ಷ ಡಿ.ಎಂ. ಲಿಂಗರಾಜು, ಮೆದೆಹಳ್ಳಿ ಗ್ರಾ.ಪಂ. ಅಧ್ಯಕ್ಷ ಉಜನಿಸ್ವಾಮಿ ಸೇರಿದಂತೆ ವಿವಿಧ ಗಣ್ಯರು, ಅಧಿಕಾರಿಗಳು ಪಾಲ್ಗೊಂಡಿದ್ದರು. ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣನಾಯಕ್ ಸ್ವಾಗತಿಸಿದರು. ಪಿಡಿಒ ಪಾತಣ್ಣ ಸ್ವಚ್ಛತೆಯ ಪ್ರತಿಜ್ಞಾವಿಧಿ ಬೋಧಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
