ಕುತಂತ್ರ ಮಾಡದೇ ಇದ್ದರೆ ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಿಲ್ಲ : ಜಿ ಎಸ್ ಬಸವರಾಜು

ತುಮಕೂರು
     ಉಪ ಚುನಾವಣೆಯಲ್ಲಿ  15 ಕ್ಷೇತ್ರಗಳಲ್ಲಿ ಕೊನೆ ಪಕ್ಷ 13 ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ. ಯಡಿಯೂರಪ್ಪ ಅವರು ಹದಿನೈದಕ್ಕೆ ಹದಿನೈದು ಗೆಲ್ಲುತ್ತೇವೆ ಎನ್ನುತ್ತಾರೆ. ಒಂದೋ ಎರಡೋ ಲೋಪವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನೂರಕ್ಕೆ ನೂರು ಬರಲು ಸಾಧ್ಯವಿಲ್ಲ. ಆದರೂ ಹದಿಮೂರು ಸ್ಥಾನ ಖಚಿತ. ಸರಕಾರ ಇನ್ನೂ ಮೂರು ವರ್ಷ ಸುಭದ್ರವಾಗಿರುತ್ತದೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ತಿಳಿಸಿದರು.
      ನಗರದ ಕನ್ನಡ ಭವನದಲ್ಲಿ ಜಿ.ಎಸ್.ಬಸವರಾಜು ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಲಾಗಿದ್ದ ಸಂಸದರಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಿಎಂ ಇನ್ನೂ ಮೂರುವರೆ ವರ್ಷಗಳ ಕಾಲ ಅಧಿಕಾರದಲ್ಲಿ ರುತ್ತಾರೆ. ಸರ್ಕಾರ ಉರುಳುವ ಮಾತೆ ಇಲ್ಲ. ಕಾಂಗ್ರೆಸ್‍ನಲ್ಲಿ ಮೂರು ಗುಂಪುಗಳಾಗಿವೆ. ಹಾಗಾಗಿ ಅವರು ಗೆಲ್ಲುವು ಅವಕಾಶ ಇಲ್ಲ. ದೇವೇಗೌಡರು ಜೆಡಿಎಸ್ ಪಕ್ಷದಿಂದ ಮೂರು ನಾಲ್ಕು ಜನರನ್ನು ಮಾತ್ರ ನಿಲ್ಲಿಸಿದ್ದಾರೆ.  ಆದರೆ ನಮ್ಮ ಪಕ್ಷದಲ್ಲಿ ಒಗ್ಗಟ್ಟಿನ ಮಂತ್ರ ಇದೆ ಹಾಗಾಗಿ ನಾವು ಖಂಡಿತ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತ ಪಡಿಸಿದರು.
     ಒಬ್ಬ ವ್ಯಕ್ತಿ ಎಷ್ಟು ಸಾರಿ ಸಂಸದನಾಗಬಹುದೋ ಅದಕ್ಕಿಂತ ಹೆಚ್ಚು ಬಾರಿ ಸಂಸದನಾಗಿದ್ದೇನೆ. ಎಂಟರಲ್ಲಿ ಐದು ಬಾರಿ ಗೆದ್ದಿದ್ದೇನೆ. ನಮ್ಮವರೇ ನನಗೆ ಚೂರಿ ಹಾಕಿದ್ದರಿಂದ ಸೋಲು ಅನುಭವಿಸಬೇಕಾಯಿತು. ಲೋಕಸಭೆ ಚುನಾವಣೆಯಲ್ಲಿ ಅಚಾತುರ್ಯದಿಂದ ಎರಡು ಬಾರಿ ಸೋತಿದ್ದೇನೆ. ಒಂದು ಬಾರಿ ಮಾತ್ರ ನಿಜವಾದ ಸೋಲನ್ನು ಕಂಡಿದ್ದೇನೆ. ಕಳೆದ ಬಾರಿ ಬೇರೆಯವರ ಹೊಡೆತಕ್ಕೆ ಸಿಲುಕಿ ಸೋತೆ. ಅದರ ಹಿಂದೆ ವೈಯಕ್ತಿಕ ಕಾರಣದಿಂದ ಸೋತೆ. ಮೂರನೇ ಬಾರಿಯ ಸೋಲು ಅಚಾತುರ್ಯ. 14,500 ಮತಗಳಿಂದ ಸೋತೆ. ನಮ್ಮವರೇ ನನಗೆ ಚೂರಿ ಹಾಕಿದರು. ಇಲ್ಲದಿದ್ದರೆ ಸೋಲುವ ಅವಕಾಶವೇ ಇರಲಿಲ್ಲ ಎಂದರು.
 
     ರಾಜಕೀಯಕ್ಕೆ ಬಂದ ಮೇಲೆ ಅಸಹ್ಯಕರ ಘಟನೆಗಳನ್ನು ಕಂಡಾಗ ಬಹಳ ನೋವಾಗುತ್ತದೆ. ರಾಜಕೀಯದಲ್ಲಿ ಅಸೂಹೆ, ಅಗೆತನ ಇತ್ಯಾದಿ ನಿರಂತವಾಗಿರುತ್ತದೆ. ಅವುಗಳನ್ನೆಲ್ಲ ಆಲೋಚಿಸಿ ಮುಂದೆ ಹೋಗಬೇಕು. ಕುತಂತ್ರ ಮಾಡದೇ ಇದ್ದರೆ ರಾಜಕೀಯದಲ್ಲಿ ಮೇಲೆ ಬರಲು ಸಾಧ್ಯವಿಲ್ಲ. ಜತೆಗೆ ರಾಜಕೀಯ ಜ್ಞಾನ ಇರಬೇಕು. ಪ್ರಾಮಾಣಿಕವಾಗಿರಬೇಕು. ನನಗೆ ಸನ್ಮಾನ ಮಾಡಿಸಿಕೊಳ್ಳುವ ಶಕ್ತಿ ಬಂದಿಲ್ಲ. ನಿಮ್ಮ ಒಡನಾಡಿಯಾಗಿ, ಯೋಗಕ್ಷೇಮ ನೋಡಿಕೊಳ್ಳುವ ಕರ್ತವ್ಯ ನನ್ನದು ಎಂದರು.
    ಮಧುಗಿರಿ, ಕೊರಟಗೆರೆ ಕ್ಷೇತ್ರ ನನಗೆ ಹೊಸದು. ಆ ಕ್ಷೇತ್ರದ ಜನರ ಬವಣೆ ಕಂಡರೆ ಕಣ್ಣಲ್ಲಿ ನೀರು ಬರುತ್ತದೆ. ಕುಡಿಯಲು ನೀರಿಲ್ಲ. ವ್ಯವಸಾಯ ಮಾಡಲು ಶಕ್ತಿಇಲ್ಲ. ಸರಕಾರ ನೀಡುವ ಏಳು ಕಿಲೋ ಅಕ್ಕಿಯಲ್ಲೇ ಜೀವನ ನಡೆಸುತ್ತಿದ್ದಾರೆ. ಶೇ.90 ರಷ್ಟು ಜಮೀನಿನಲ್ಲಿ ಬಳ್ಳಾರಿ ಜಾಲಿ ಬೆಳೆದಿದೆ. ಅದನ್ನು ತೆಗೆಸಲು ವಿಚಾರಿಸಿದರೆ ಎಂಜಿನಿಯರೊಬ್ಬರು ಸುಮಾರು 350 ಕೋಟಿ ರೂ. ಬೇಕು ಎಂದು ಹೇಳಿದ್ದಾರೆ. ಈ ಭಾಗಕ್ಕೆ ನೀರು ಹರಿಸುವ ಪಣ ತೊಟ್ಟಿದ್ದೇನೆ. ನನ್ನ ಅಧಿಕಾರ ಮುಗಿಯುವದರೊಳಗೆ ನೀರು ಹರಿಸಿ ಇಲ್ಲಿನ ಜನರ ಋಣ ತೀರಿಸುತ್ತೇನೆ ಎಂದರು.
    ಕೊರಟಗೆರೆಯಲ್ಲಿ ಎತ್ತಿನಹೊಳೆ ಯೋಜನೆ ಬರುತ್ತಿದ್ದು, ಇದರಿಂದ ಇಲ್ಲಿನ ಕೆರೆಗಳನ್ನು ತುಂಬಿಸಲು ಸಾಧ್ಯವಿಲ್ಲ. ಕುಮಾರದ್ವಾರ ಮತ್ತು ನೇತ್ರಾವತಿ ನದಿಗಳೆರಡೂ ಉಪ್ಪಿನಂಗಡಿ ಹತ್ತಿರ ಸೇರಿ ಸಮುದ್ರಕ್ಕೆ ನೀರು ಹರಿಯುತ್ತಿದೆ. ಅಲ್ಲಿ 4 ಅಡಿ ಎತ್ತರಕ್ಕೆ ಅಣೆಕಟ್ಟು ನಿರ್ಮಿಸಿ ನೀರನ್ನು ಲಿಫ್ಟ್ ಮಾಡಿದರೆ, ತುಮಕೂರು, ಕೋಲಾರ, ಬೆಂಗಳೂರು, ಚಿತ್ರದುರ್ಗ, ಬೇಲೂರು, ಕಡೂರು, ಅರಸೀಕೆರೆ, ತರೀಕೆರೆ ಭಾಗಕ್ಕೆ 220 ಟಿಎಂಸಿ ನೀರು ಪೂರೈಸ ಬಹುದಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಲಾಗಿದೆ. ಅದಕ್ಕೆ 90 ರಷ್ಟು ಒಪ್ಪಿಗೆ ಸಿಕ್ಕಿದೆ ಎಂದು ತಿಳಿಸಿದರು.
     ನಾನು ಸೋಲು ಗೆಲುವು ಎರಡನ್ನು ಸಮಾನವಾಗಿ ತೆಗೆದುಕೊಳ್ಳುತ್ತೇನೆ. ಗೆದ್ದರೂ, ಸೋತರು ನಾನು ಅದೇ ಎಂಪಿ. ಸೋತಾಗ ನನ್ನನ್ನು ಯಾರು ಎಕ್ಸ್ ಎಂಪಿ ಎಂದು ಕರೆಯಲಿಲ್ಲ. ನಾನು ಬಂದರೆ ಎಂಪಿ ಬರುತ್ತಿದ್ದಾರೆ ಎಂದೇ ಕರೆಯುತ್ತಿದ್ದರು. ಸೋತಾಗ ನಾವು ವಿಮುಖರಾಗಬಾರದು, ಗೆದ್ದಾಗ ದುರಹಂಕಾರ ಪಡಬಾರದು ಎಂದು ಹೇಳಿದರು.
     ಕಳೆದ ಎಂಎಲ್‍ಎ ಚುನಾವಣೆಯಲ್ಲಿ ಗಂಗಹನುಮಯ್ಯ ಅವರು ಆರು ತಿಂಗಳ ಮುಂಚೆ ಬಂದಿದ್ದರೆ ಅವರೇ ಕೊರಟಗೆರೆ ಕ್ಷೇತ್ರದ ಅಭ್ಯರ್ಥಿಯಾಗುತ್ತಿದ್ದರು. ಅವರು ತಡವಾಗಿ ಬಂದರು. ಆದರೆ, ನೀನು ಮನಸ್ಸು ಮಾಡಿದ್ದರೆ ಕೊಡಬಹುದಿತ್ತು ಎಂದು ಒಂದು ವಾರ ನನಗೆ ಬೈದರು. ಆದರೆ ಅದಕ್ಕೂ ಮುಂಚೆನೆ ಯಡಿಯೂರಪ್ಪ ಅವರು ಟಿಕೆಟ್ ನಿಮಗೆ ಕೆಲಸ ಪೂರ್ವಭಾವಿ ಕೆಲಸಗಳನ್ನು ಮಾಡಿಕೊಳ್ಳಿ ಎಂದು ಹೇಳಿದ್ದರು. ಒಮ್ಮೆ ಯಡಿಯೂರಪ್ಪ ಹೇಳಿದರೇ, ಅದನ್ನು ಚಾಚು ತಪ್ಪದೇ ಪಾಲಿಸುತ್ತಾರೆ. ಅದಕ್ಕಾಗಿ ಈ ಬಾರಿ ಅವರಿಗೆ ಅವಕಾಶ ಸಿಗಲಿಲ್ಲ. ಸಮುದಾಯದವರೆಲ್ಲಾ ಛಲದಿಂದ ಹೋರಾಟ ಮಾಡಬೇಕು. ಎಲ್ಲರೂ ಒಟ್ಟಾಗಿ ಗಂಗಹನುಮಯ್ಯ ಅವರಿಗೆ ಸಹಕಾರ ಕೊಡಬೇಕು. ಗಂಡ ಹೆಂಡತಿ ಇಬ್ಬರೂ ರಾಜಕಾರಣಿಗಳು. ಆದಷ್ಟು ಜನರ ಹಿತ ಕಾಪಾಡುವ ಕೆಲಸ ಮಾಡಬೇಕು. ಜನರೇ ಗಂಗಹನುಮಯ್ಯ ಅವರನ್ನು ಅಭ್ಯರ್ಥಿ ಮಾಡಬೇಕು ಎಂದರೆ ನಿಮ್ಮನ್ನು ಯಾರು ಅಲ್ಲಾಡಿಸಲು ಸಾಧ್ಯವಿಲ್ಲ. ಅದನ್ನು ಬಿಟ್ಟು ಬಸವರಾಜ್ ಇದ್ದಾರೆ, ಇನ್ನೊಬ್ಬರಿದ್ದಾರೆ. ಅವರೇ ಟಿಕೆಟ್ ಕೊಡಿಸುತ್ತಾರೆ ಎನ್ನಬಾರದು ಎಂದು ಹೇಳಿದರು.
      ಹಿಂದುಳಿದ ಸಮುದಾಯಗಳು ಅಭಿವೃದ್ಧಿಯಾಗಬೇಕಾದರೆ ಪ್ರತಿಯೊಬ್ಬರು ವಿದ್ಯಾವಂತರಾಗಬೇಕು. ಮಕ್ಕಳಿಗೆ ವಿದ್ಯೆಯೇ ಆಸ್ತಿ. ಈ ಆಸ್ತಿಯನ್ನು ಯಾರು ಕದಿಯಲು ಆಗುವುದಿಲ್ಲ. ವಿದ್ಯಾಭ್ಯಾಸ ಇಲ್ಲದೆ ಇದ್ದರೆ ಯಾವ ಜನಾಂಗದ ವ್ಯಕ್ತಿಯೂ ಮುಂದುವರೆಯುವುದಿಲ್ಲ. ಐಎಎಸ್, ಕೆಎಎಸ್ ಮಾಡಿದವರ ಸಂಖ್ಯೆ ತುಂಬಾ ಕಡಿಮೆ ಇದೆ. ವಿದ್ಯಾವಂತರಾಗದವರನ್ನು ಯಾರು ಮನೆಯೊಳಗೂ ಸೇರಿಸುವುದಿಲ್ಲ. ಇಂದು ಸರಕಾರಿ ಶಾಲೆಗಳು ಬೇಕಾಬಿಟ್ಟಿ ಯಾಗಿವೆ ಎಂಬ ಭಾವನೆ ಜನರಲ್ಲಿ ಬಂದಿದೆ. ಉಪಾಧ್ಯಾಯರಾದವರು ಬೇರೆ ಕೆಲಸಗಳಲ್ಲಿ ತೊಡಗುತ್ತಾರೆ.
 
      ಸರಿಯಾಗಿ ಪಾಠ ಮಾಡುವುದಿಲ್ಲ. ಆದರೆ ಖಾಸಗಿ ಶಾಲೆಯಲ್ಲಿ ಉತ್ತಮ ಶಿಕ್ಷಣ ನೀಡಲಾಗುತ್ತದೆ ಎಂಬ ಭಾವನೆ ಬಂದಿದೆ. ಏನಾದರೂ ಮಾಡಿ ಮಕ್ಕಳನ್ನು ವಿದ್ಯಾವಂತರನ್ನು ಮಾಡಿದರೆ ಸ್ವಂತ ಶಕ್ತಿಯಲ್ಲಿ ಸಾಧನೆ ಮಾಡುತ್ತಾರೆ. ಇದಕ್ಕಾಗಿ ಸರಕಾರ ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ ಅದನ್ನು ಬಳಸಿಕೊಳ್ಳಿ ಎಂದರು.
     ಶ್ರೀ ಅಠವೀ ಜಂಗಮ ಕ್ಷೇತ್ರದ ಪೀಠಾಧ್ಯಕ್ಷ ಶ್ರೀ ಅಟವೀ ಶಿವಲಿಂಗ ಸ್ವಾಮೀಜಿ ಮಾತನಾಡಿ, ದೇಶದಲ್ಲಿ ಎಲ್ಲಿಯೂ ಸುಖವಿಲ್ಲ. ಹಲವೆಡೆ ನೆರೆ ಪ್ರವಾಹ ಇದ್ದರೆ, ಕೆಲವೆಡೆ ಬರ ಪ್ರವಾಹವಿದೆ. ಸರಕಾರಕ್ಕೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ಸಾಲಮನ್ನಾ ಮಾಡಿ ಎನ್ನಲು ಸಾಧ್ಯವಿಲ್ಲ. ಸರಕಾರದ ಸೌಲಭ್ಯ ನಮಗೆ ಬೇಕಿಲ್ಲ. ನಮಗೆ ಬೇಕಾದಷ್ಟು ನೀರು ಕೊಟ್ಟರೆ ಸಾಕು ತುಮಕೂರು ಸಮೃದ್ಧವಾಗುತ್ತದೆ. ನೀರು, ವಿದ್ಯುತ್, ರಸ್ತೆ ಸಮೃದ್ಧವಾಗಬೇಕು ಎಂದರು.
     ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರದಲ್ಲಿದೆ. ಅವರ ಭರವಸೆ ರಾಜಕೀಯಕ್ಕೆ ಸೀಮಿತವಾಗಬಾರದು. ಪ್ರತಿಷ್ಠೆಗೋಸ್ಕರ ಭಾಷಣ ಮಾಡಬಾರದು. ಮಹದಾಯಿ ನೀರು ಹರಿಸುವ ಭರವಸೆ ಉಳಿಸಿಕೊಳ್ಳಬೇಕು. ನದಿ ಜೋಡಣೆಯ ಮೂಲಕ ರಾಜ್ಯದ ಕೆರೆ, ಕಟ್ಟೆ, ಕಾಲುವೆಗಳಿಗೆ ನೀರು ಹರಿಸಬೇಕು ಎಂದು ಹೇಳಿದರು.
     ಕಾರ್ಯಕ್ರಮದಲ್ಲಿ ಸಂಸದ ಜಿ.ಎಸ್.ಬಸವರಾಜ್ ಅವರನ್ನು ಸನ್ಮಾನಿಸಲಾಯಿತು. ಜಿ.ಎಸ್.ಬಸವರಾಜï ಜಿಲ್ಲಾ ಅಭಿಮಾನಿಗಳ ಬಳಗದ ಗೌರವಾಧ್ಯಕ್ಷ ಮತ್ತು ಮಾಜಿ ಶಾಸಕ ಗಂಗಹನುಮಯ್ಯ ಅಧ್ಯಕ್ಷೀಯ ಭಾಷಣ ಮಾಡಿದರು. ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ಪರಮಶಿವಮೂರ್ತಿ ಅಭಿನಂದನಾ ನುಡಿಗಳನ್ನಾಡಿದರು. ಉಪಾಧ್ಯಕ್ಷ ಆರ್.ನಾಗೇಂದ್ರ, ನರಸಯ್ಯ, ಟಿ.ಎ.ನಟರಾಜ್, ನಾಗರಾಜು, ಅಂಜನಮೂರ್ತಿ, ಟಿ.ಎ.ನಾಟರಾಜ್, ನರಸಿಂಹಮೂರ್ತಿ, ಗೋವಿಂದರಾಜು, ಫಯಾಜ್‍ಉಲ್ಲಾಖಾನ್ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link