ಸುಬ್ರಹ್ಮಣ್ಯ:
ಕರ್ನಾಟಕದ ಪ್ರಸಿದ್ಧ ಯಾತ್ರಾ ಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲ ಮತ್ತು ಶ್ರೀ ಸಂಪುಟ ಮಠದ ನಡುವೆ ತಲೆದೋರಿರುವ ಸಂಘರ್ಷಕ್ಕೆ ಅಂತ್ಯ ಹಾಡಿ ಕ್ಷೇತ್ರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಇದೇ ಜೂ. 10ರ ಒಳಗಾಗಿ ಸಂಧಾನ ಸಭೆ ನಡೆಸಲು ನಿಶ್ಚಯಿಸಿದ್ದೇವೆ ಎಂದು ಪೇಜಾವರ ಮಠದ ಶ್ರೀಗಳ ತಿಳಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಮತ್ತು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠ ಇವೆರಡರ ನಡುವೆ ನಡೆದ ಸಂದಾನ ಸಭೆಗೆ ಭೇಟಿ ನೀಡಿದ ವೇಳೆ ಅವರು ಮಾತನಾಡಿದರು. ದೇವಸ್ಥಾನ ಮತ್ತು ಮಠಗಳ ನಡುವೆ ಹಿಂದಿನಿಂದ ಕೆಲವು ವಿಚಾರಗಳಲ್ಲಿ ಸಂಘರ್ಷವಿದ್ದರೂ ಉತ್ತಮ ಬಾಂಧವ್ಯವಿತ್ತು. ಇತ್ತೀಚಿನ ದಿನಗಳಲ್ಲಿ ಗೊಂದಲ ಅತಿರೇಕದ ಹಂತಕ್ಕೆ ತಲುಪುತ್ತಿದೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಡಬಾರದು.ಶ್ರೀ ಕ್ಷೇತ್ರ ದಲ್ಲಿ ಶಾಂತಿ ನೆಲೆಸಬೇಕು. ಹಿಂದೂಗಳ ಶ್ರದ್ಧಾ ಕೇಂದ್ರದಲ್ಲಿ ಎದ್ದಿರುವ ಸಂಘರ್ಷವನ್ನು ಮಾತುಕತೆ ಮೂಲಕ ಇತ್ಯರ್ಥ ಪಡಿಸುವುದು ಸೂಕ್ತ. ಇದೇ ಉದ್ದೇಶದಿಂದ ದೇವಸ್ಥಾನ ಮತ್ತು ಮಠದ ಮಧ್ಯೆ ಒಮ್ಮತ ತರಲು ಪ್ರಯತ್ನಿಸುತ್ತಿದ್ದೇನೆ. ಎರಡೂ ಕಡೆಗೆ ಭೇಟಿ ನೀಡಿ ಅಭಿಪ್ರಾಯ ಸಂಗ್ರಹಿಸಿದ್ದೇನೆ. ಜೂ.10ರೊಳಗೆ ಸಂಧಾನ ಸಭೆ ನಡೆಸಲು ನಿರ್ಧರಿಸಿದ್ದೇನೆ. ಸಭೆಗೆ ಸೂಕ್ತ ಸ್ಥಳವನ್ನು ಶೀಘ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಸಭೆಯಲ್ಲಿ ಎರಡೂ ಕಡೆಯ ಪ್ರಮುಖರು ಇರುತ್ತಾರೆ. ಯಾರೆಲ್ಲ ಇರಬೇಕು ಅನ್ನುವುದನ್ನು ಶೀಘ್ರ ಪಟ್ಟಿ ಮಾಡುತ್ತೇವೆ, ಧಾರ್ಮಿಕ ಕ್ಷೇತ್ರಗಳ ನಡುವೆ ಅನ್ಯೋ ನ್ಯತೆ ಸೃಷ್ಟಿಸುವ ರೀತಿಯಲ್ಲಿ ಆ ಸಂಧಾನ ಸೂತ್ರ ಇರುತ್ತದೆ ಎಂದರು.ಭೇಟಿ ವೇಳೆ ಶ್ರೀಗಳು ಎರಡೂ ಕಡೆಯವರಿಂದ ಪ್ರತ್ಯೇಕ ಅಭಿಪ್ರಾಯ ಪಡೆದುಕೊಂಡರು.
ಆರಂಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದ ಅವರು ಬಳಿಕ ಸಂಪುಟ ಶ್ರೀ ನರಸಿಂಹ ದೇವಸ್ಥಾನಕ್ಕೆ ತೆರಳಿ ದೇವರ ದರ್ಶನ ಪಡೆದರು. ಮಠದ ಕೊಠಡಿಯಲ್ಲಿ ಯತಿಗಳಾದ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಗಳು, ಮಠದ ಪ್ರಮುಖರು ಮತ್ತು ಹಿಂದೂ ಮುಖಂಡರ ಸಮ್ಮುಖ ಮಾತು ಕತೆ ನಡೆಸಿದರು. ಮಠದ ಕೆಲವು ಕಡತಗಳನ್ನು ಪರಿಶೀಲಿ ಸಿದರು.
ಮಠದ ಸರ್ಪಸಂಸ್ಕಾರ ಯಾಗ ಶಾಲೆ ವೀಕ್ಷಿಸಿ ದರು. ಇದೇ ವೇಳೆ ಯತಿಗಳಿಬ್ಬರು ಗುಪ್ತವಾಗಿ ಸ್ವಲ್ಪ ಹೊತ್ತು ಮಾತುಕತೆ ನಡೆಸಿದರು. ಅನಂತರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಕಚೇರಿಯ 2ನೆೇ ಮಹಡಿಯಲ್ಲಿ ದೇಗುಲದ ಆಡಳಿತ ಮಂಡಳಿ, ಪ್ರಮುಖರ ಜತೆ ಮಾತುಕತೆ ನಡೆಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಶ್ರೀಗಳನ್ನು ತುಳಸಿ ಮಾಲೆ ಹಾಕಿ ಫಲಪುಷ್ಪ ನೀಡಿ ಸ್ವಾಗತಿಸಿದರು.