ಆಮಿಷ ತೋರಿಸುವ ಬಿಜೆಪಿಗೆ ತಕ್ಕ ಪಾಠ

ದಾವಣಗೆರೆ:

      ಭ್ರಷ್ಟಾಚಾರ ನಡೆಸುವ ಮೂಲಕ ಹಣ ಗಳಿಸಿ, ಚುನಾವಣೆಯಲ್ಲಿ ಮತದಾರರಿಗೆ ಹಣದ ಆಮಿಷ ತೋರಿಸಿ, ಅಧಿಕಾರಕ್ಕೆ ಬರಲು ಯತ್ನಿಸುತ್ತಿರುವ ಬಿಜೆಪಿಗೆ 2019ರ ಲೋಕಸಭಾ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆಂದು ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಕೀಶ್ ಬಾನು ತಿಳಿಸಿದ್ದಾರೆ.

      ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ತಡೆಯುವುದಾಗಿ ಹೇಳಿ ಅಧಿಕಾರಕ್ಕೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಈಗ ತಾವೇ ಭ್ರಷ್ಟರಾಗಿದ್ದಾರೆ. ಇವರು ಭ್ರಷ್ಟಾಚಾರ ನಡೆಸುವ ಮೂಲಕ ಹಣ ಗಳಿಸಿ, ಚುನಾವಣೆಯಲ್ಲಿ ಜನರಿಗೆ ಹಣದ ಆಮಿಷ ಒಡ್ಡುವ ಮುಳಕ ಬಿಜೆಪಿ ಅಧಿಕಾರಕ್ಕೆ ಬರಲು ಯತ್ನಿಸಿದ್ದು, ಜನರು 2019ರ ಲೋಕಸಭಾ ಚುನಾವಣೆಯಲ್ಲಿ ತಕ್ಕ ಉತ್ತರ ಕೊಡಲಿದ್ದಾರೆಂದು ಹೇಳಿದರು.

      ಕಳೆದ ಚುನಾವಣೆಯಲ್ಲಿ ಯುವಕರಿಗೆ ಉದ್ಯೋಗ ನೀಡುವ ಆಮಿಷ ಒಡ್ಡಿದ್ದರು. ಕೊಟ್ಟ ಮಾತಿನಂತೆ ಉದ್ಯೋಗ ಸೃಷ್ಟಿಸಲು ಸಾಧ್ಯವಾಗದ ನರೇಂದ್ರ ಮೋದಿ ಈಗ ಇಂಜಿನಿಯರ್‍ಗಳಿಗೆ ಪಕೋಡಾ ಮಾರಿ ಸ್ವಯಂ ಉದ್ಯೋಗ ಕಂಡುಕೊಳ್ಳಿ ಎಂಬುದಾಗಿ ಹೇಳುತ್ತಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

       ಕೇಂದ್ರದಲ್ಲಿ ಬಿಜೆಪಿ ಬಂದಾಗಿನಿಂದ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ನೀಡಿದ ಭರವಸೆಗಳಲ್ಲಿ ಒಂದೂ ಸಕಾರಗೊಂಡಿಲ್ಲ. ಬ್ಯಾಂಕ್ ಖಾತೆಗೆ ಹಣವೂ ಬರಲಿಲ್ಲ, ವಿದೇಶದಿಂದ ಕಪ್ಪು ಹಣವೂ ತರಲಿಲ್ಲ.

        ಮೋದಿ ಸರ್ಕಾರದಲ್ಲಿ ಆರ್ಥಿಕ ವ್ಯವಸ್ಥೆ ಹಿಂದೆಂದೂ ಕಾಣದಷ್ಟು ಕುಸಿದಿದೆ. ನೋಟು ರದ್ದತಿಯಿಂದ ಔದ್ಯಮಿಕ ಕ್ಷೇತ್ರದಲ್ಲೂ ಗಣನೀಯವಾಗಿ ಕುಸಿತ ಕಂಡಿದೆ ಎಂದು ಆರೋಪಿಸಿದರು.

        ಶಕ್ತಿ ಪ್ರಾಜೆಕ್ಟ್ ಎಂಬುದು ಎಲ್ಲರ ನಡುವಿನ ಸಂಪರ್ಕ ಕೊಂಡಿಯಾಗಿದೆ. ಶಕ್ತಿ ಯೋಜನೆಯಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ನಿಮ್ಮ ಸಮಸ್ಯೆ, ಪಕ್ಷ ಬಲವರ್ಧನೆಗೆ ಬೇಕಾದ ಸಲಹೆ, ಸರ್ಕಾರದಿಂದ ಬಳಕೆ ಮಾಡಿಕೊಳ್ಳಬೇಕಾದ ಅನುದಾನ, ಸವಲತ್ತುಗಳ ಮಾಹಿತಿ ಸೇರಿದಂತೆ ನಿಮ್ಮ ಕೂಗು ನೇರವಾಗಿ ರಾಹುಲ್ ಗಾಂಧಿಗೆ ಮುಟ್ಟಿಸಲು ಸಹಾಯವಾಗಲಿದೆ. ಒಂದು ಬೂತ್‍ಗೆ ಕನಿಷ್ಠ 50 ಜನರನ್ನಾದರೂ ನೋಂದಣಿ ಮಾಡಿಸಬೇಕು. ಅತೀ ಹೆಚ್ಚು ನೋಂದಣಿ ಮಾಡಿಸಿದ ಸದಸ್ಯರಿಗೆ ಸೂಕ್ತ ಬಹುಮಾನ ನೀಡಲಾಗುವುದು ಎಂದು ಅವರು ಘೋಷಿಸಿದರು.

         ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ.ಮಂಜಪ್ಪ, ರಾಷ್ಟ್ರಾದ್ಯಂತ ಪ್ರತಿಯೊಬ್ಬ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನನ್ನು ಬಲಗೊಳಿಸಲು ಮತ್ತು ಅವರ ಅಭಿಪ್ರಾಯ, ಸಮಸ್ಯೆ ಆಲಿಸಿ ಸಕಾರಗೊಳಿಸುವ ಮಾಧ್ಯಮವಾಗಿ ‘ಶಕ್ತಿ’ ಪ್ರಾಜೆಕ್ಟ್ ಆರಂಭಿಸಲಾಗಿದೆ. ಪ್ರತಿಯೊಬ್ಬರೂ ಈ ಪ್ರಾಜೆಕ್ಟ್‍ಗೆ ಚಾಲನೆ ನೀಡಿ ಮುಂದಿನ ಹತ್ತು ದಿನಗಳಲ್ಲಿ ಜಿಲ್ಲೆಯಲ್ಲಿ ಕನಿಷ್ಠ 2 ಲಕ್ಷ ಜನರನ್ನು ನೋಂದಾಯಿಸಬೇಕೆಂದು ಸಲಹೆ ನೀಡಿದರು.

          ಶಕ್ತಿ ಪ್ರಾಜೆಕ್ಟ್‍ನಲ್ಲಿ ನೋಂದಣಿಗೊಳ್ಳಲು ಒಂದು ಮೊಬೈಲ್‍ನಿಂದ ಮೊ: 70450 06100 ನಂಬರ್‍ಗೆ ನಿಮ್ಮ ಮತದಾರ ಗುರುತಿನ ಚೀಟಿಯಲ್ಲಿರುವ ಎಪಿಕ್ ನಂಬರ್ ರವಾನಿಸಿದರೆ ಸಾಕು ನೋಂದಣಿಯಾದ ಸಂದೇಶ ಬರಲಿದೆ.

        ಆದ್ದರಿಂದ ಕಾಂಗ್ರೆಸ್‍ನ ಎಲ್ಲಾ ತಾಲೂಕು, ಬೂತ್ ಮಟ್ಟದ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕರ್ತರು ತಪ್ಪದೇ ಎಲ್ಲರಿಂದ ಸಂದೇಶ ರವಾನಿಸುವ ಕೆಲಸ ಮಾಡಬೇಕು. ಇದಕ್ಕೆ ಆಸಕ್ತಿ ತೋರಿಸದ ಪದಾಧಿಕಾರಿಗಳನ್ನು ಅವರ ಸ್ಥಾನದಿಂದ ಬದಲಾಯಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

       ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಇಕ್ಬಾಲ್ ಅಹಮದ್, ಜಿಪಂ ಸದಸ್ಯರಾದ ಕೆ.ಎಸ್.ಬಸವಂತಪ್ಪ, ಕೆ.ಹೆಚ್. ಓಬಳೇಶಪ್ಪ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮುಖಂಡರಾದ ಬಿ.ಹೆಚ್.ವೀರಭದ್ರಪ್ಪ, ಎ.ನಾಗರಾಜ್, ನಂಜಾನಾಯ್ಕ, ಆಕಾಶ್ ಪಾಟೀಲ್ ಸೇರಿದಂತೆ ಪಕ್ಷದ ಜಿಲ್ಲಾ ಘಕಟದ ಸದಸ್ಯರು, ಎನ್‍ಎಸ್‍ಯುಐ, ಯುವ ಕಾಂಗ್ರೆಸ್, ಮಹಿಳಾ ಕಾಂಗ್ರೆಸ್, ಜಿಲ್ಲಾ ಸೇವಾದಳ, ಕಾರ್ಮಿಕ ವಿಭಾಗ, ಓ.ಬಿ.ಸಿ., ಪ. ಜಾತಿ ಮತ್ತು ಪಂಗಡಗಳ ವಿಭಾಗ, ಬ್ಲಾಕ್ ಕಾಂಗ್ರೆಸ್, ಎಪಿಎಂಸಿ, ಜಿಪಂ, ತಾಪಂ, ಗ್ರಾಪಂ ಸದಸ್ಯರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link