ನರೇಗಾ ಅಕ್ರಮ : ಕಾಟಾಚಾರದ ತನಿಖೆಯಾಗದಿರಲಿ

 ತುಮಕೂರು :  

      ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಜಿಲ್ಲೆಯ ವಿವಿಧ ಗ್ರಾ.ಪಂ.ಗಳಲ್ಲಿ ನಡೆದಿರುವ ಬಹುತೇಕ ಅಕ್ರಮಗಳು ಮುಚ್ಚಿ ಹೋಗಿವೆ. ಕೆದಕಲಾದ ಪ್ರಕರಣಗಳಿಗೂ ತ್ಯಾಪೆ ಹಾಕಲಾಗಿದೆ.ಈ ಯೋಜನೆ ಜಾರಿಯಾದ ಒಂದೆರಡು ವರ್ಷಗಳ ನಂತರ ಕೆಲವು ಅಕ್ರಮಗಳು ಬಯಲಾಗುತ್ತಾ ಬಂದವಾದರೂ ಕ್ರಮೇಣ ಅವೆಲ್ಲ ಹೇಳ ಹೆಸರಿಲ್ಲದಂತೆ ಮುಚ್ಚಿ ಹೋದವು.

ಕೋವಿಡ್ ಸಂಕಷ್ಟದಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿಗಳಿಗೆ ಅನುಕೂಲವಾಗಲೆಂದು ನರೇಗಾ ಯೋಜನೆಗೆ ಹೆಚ್ಚು ಮಹತ್ವ ನೀಡಲಾಗಿದೆ. ದಿನದ ಕೂಲಿಯ ಹಣವನ್ನೂ ಸಹ ಹೆಚ್ಚಳ ಮಾಡಲಾಗಿದೆ. ನಗರಗಳಿಂದ ಹಳ್ಳಿಗೆ ಬಂದಿರುವವರಿಗೆ ಉದ್ಯೋಗ ಖಾತರಿ ಭರವಸೆಯ ಬೆಳಕಾಗಲಿ ಎಂಬ ಸದಾಶಯ ಇದೆ. ಎಷ್ಟೋ ಮಂದಿ ಇದರಿಂದ ಅನುಕೂಲ ಪಡೆದಿದ್ದಾರೆ. ಆದರೆ ಸದುಪಯೋಗಕ್ಕಿಂತ ದುರುಪಯೋಗ ಆಗಿರುವುದೇ ಹೆಚ್ಚಾಗಿ ಕಂಡುಬರುತ್ತಿದೆ. ಯಾರಿಗೆ ಇದರ ಪ್ರಯೋಜನ ಆಗಬೇಕಿತ್ತೋ ಅವರಿಗಿಂತ ಹೆಚ್ಚಾಗಿ ಮತ್ಯಾರಗೋ ಅನುಕೂಲ ಆಗಿರುವುದೇ ಹೆಚ್ಚು.

      ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಅಕ್ರಮಗಳ ಕುರಿತು ‘ಪ್ರಜಾಪ್ರಗತಿ’ಯಲ್ಲಿ ಸಮಗ್ರ ವರದಿ ಪ್ರಕಟಿಸಿದ ಬೆನ್ನಲ್ಲೇ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಅಕ್ರಮಗಳ ತನಿಖೆಗೆ ವಿಶೇಷ ತಂಡ ರಚಿಸಿದ್ದಾರೆ. ಈಗಾಗಲೇ ಕೆಲವು ಪಂಚಾಯತಿಗಳಿಗೆ ಭೇಟಿ ನೀಡಿದ್ದಾರೆ. ಅಲ್ಲಲ್ಲಿ ಸಂಚಲನವೂ ಉಂಟಾಗಿದೆ.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕ್ರಮಕ್ಕೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಕೆಲವೇ ಅಕ್ರಮಗಳು ಬಯಲಾಗತೊಡಗಿವೆ. ಕುಣಿಗಲ್ ತಾಲ್ಲೂಕಿನಲ್ಲಿ ಓರ್ವ ಪಿಡಿಓ ವಿರುದ್ಧ ಪ್ರಕರಣವೂ ದಾಖಲಾಗಿದೆ. ನರೇಗಾ ಕಾಮಗಾರಿ ಅನುಷ್ಠಾನಗೊಳಿಸದೆ 3.24 ಲಕ್ಷ ರೂ. ಡ್ರಾ ಮಾಡಿದ್ದ ಬೇಗೂರಿನ ಹಿಂದಿನ ಪಿಡಿಓ ಸುದರ್ಶನ ವಿರುದ್ಧ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಜೋಸೆಫ್ ನೀಡಿದ ದೂರಿನ ಮೇರೆಗೆ ಅಲ್ಲಿನ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

      ಜಿ.ಪಂ. ಸಿಇಓ ಸೂಚನೆ ಮೇರೆಗೆ ದೂರು ನೀಡಿರುವ ಇ.ಓ. ಜೋಸೆಫ್ ಅವರು ಸುದರ್ಶನ ಗೊಟ್ಟಿಕೆರೆಯ ಬೊಮ್ಮಲಿಂಗಯ್ಯ ಅವರ ಮನೆಯಿಂದ ಕೆರೆಯವರೆಗೆ ಬಸಿ ಕಾಲುವೆ ನಿರ್ಮಾಣ ಕಾಮಗಾರಿಯನ್ನು ಅನುಷ್ಠಾನ ಮಾಡದೆ 2019-20ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಮಂಜೂರಾತಿ ಪಡೆದಿದ್ದಾರೆ. 2020ರ ಸಾಲಿನಲ್ಲಿಯೂ ಅನುಷ್ಠಾನಗೊಳಿಸದೆ 3.24 ಲಕ್ಷ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.

      ಹೀಗೆ ಹುಡುಕುತ್ತಾ ಹೋದರೆ ಪ್ರತಿ ತಾಲ್ಲೂಕಿನಲ್ಲಿಯೂ ಹಗರಣಗಳು ಹೊರಬರುತ್ತವೆ. ದುರಂತವೆಂದರೆ, ಇಂತಹ ಹಗರಣ ಮತ್ತು ಅಕ್ರಮಗಳಲ್ಲಿ ರಾಜಕಾರಣಿಗಳು ಹಾಗೂ ಪ್ರಭಾವಿಗಳ ಹಿಂಬಾಲಕರೆ ಇದ್ದಾರೆ. ಅಧಿಕಾರಿಗಳು ಜೇಬಿಗೆ ಒಂದಿಷ್ಟು ಇಳಿಸಿಕೊಂಡು ಮೌನವಾಗುತ್ತಾರೆ.

ಅಧಿಕಾರಿಗಳ ನಿಯೋಜನೆ:

NREGS - KARNATAKA

     ಜೂನ್ 26 ರಂದು ‘ಪ್ರಜಾಪ್ರಗತಿ’ ದಿನ ಪತ್ರಿಕೆಯಲ್ಲಿ ಪ್ರಕಟಗೊಂಡ ನರೇಗಾ ಅಕ್ರಮಗಳ ಹಿನ್ನೆಲೆಯಲ್ಲಿ ಜಿ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಕಾಮಗಾರಿ ಪರಿಶೀಲನೆಗೆ ಅಧಿಕಾರಿಗಳ ತಂಡ ರಚಿಸಿದ್ದಾರೆ. ಮಧುಗಿರಿ ತಾಲ್ಲೂಕು ಮಿಡಿಗೇಶಿ ಗ್ರಾ.ಪಂ.ನಲ್ಲಿ ಅನುಷ್ಠಾನಗೊಂಡಿರುವ ಕಾಮಗಾರಿಗಳಲ್ಲಿ ಯಂತ್ರೋಪಕರಣ ಬಳಸಿ ಕಾಮಗಾರಿ ಮಾಡಿರುವುದು, ಅನರ್ಹರು ಮರಣ ಹೊಂದಿರುವವರ ಹೆಸರಿನಲ್ಲಿ ನಕಲಿ ಜಾಬ್‍ಕಾರ್ಡ್‍ಗಳು ಸೃಷ್ಟಿಯಾಗಿರುವುದು ಇತ್ಯಾದಿ ವಿಷಯಗಳನ್ನು ಉಲ್ಲೇಖಿಸಿ ಈ ಬಗ್ಗೆ ಸಮಗ್ರ ವರದಿಗೆ ಸೂಚಿಸಿದ್ದಾರೆ.
ಈ ವರದಿ ನೀಡಲು ಜಿ.ಪಂ. ಯೋಜನಾ ಶಾಖೆಯ ಪಿ.ಎ., ಇ.ಓ., ಮಧುಗಿರಿ ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು, ಪಾವಗಡ ಹಾಗೂ ಕುಣಿಗಲ್ ತಾಲ್ಲೂಕು ಸಹಾಯಕ ನಿರ್ದೇಶಕರು, ಜಿ.ಪಂ. ಎಡಿಪಿಸಿ, ಗುಬ್ಬಿ ತಾಲ್ಲೂಕು ತಾಂತ್ರಿಕ ಸಂಯೋಜಕರು ಈ ತಂಡದಲ್ಲಿದ್ದಾರೆ. ಈಗಾಗಲೇ ಮಿಡಿಗೇಶಿ ಹೋಬಳಿಯ ಕೆಲವು ಗ್ರಾಮ ಪಂಚಾಯತಿಗಳಿಗೆ ಈ ತಂಡ ಭೇಟಿ ನೀಡಿ ಬಂದಿದೆ.

ಇದಕ್ಕೂ ಮುನ್ನ ಜಿ.ಪಂ. ವತಿಯಿಂದ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಕೆಲವು ಯೋಜನೆಗಳ ಪ್ರಗತಿ ವರದಿ ಸಲ್ಲಿಸಲು ಸೂಚಿಸಿಲಾಗಿತ್ತು. ನರೇಗಾ ಯೋಜನೆಯಡಿ ಮಾನವ ದಿನಗಳ ಸೃಜನೆ, ನಿಯಮಾನುಸಾರ ಪಾವತಿ, ಎನ್‍ಎಂಆರ್ ಜನರೇಷನ್ ಮತ್ತು ಕಾಮಗಾರಿಯ ಸ್ಥಿತಿಗತಿ, ಕಾಮಗಾರಿಗಳ ಸ್ಥಳ ಭೇಟಿ, ಕಾಮಗಾರಿಗಳು ಡ್ಯೂಪ್ಲಿಕೇಟ್ ಆಗಿರುವ ಬಗ್ಗೆ, ಸಮರ್ಪಕವಾಗಿ ಕಾಮಗಾರಿ ನಿರ್ವಹಿಸಲಾಗಿದೆಯೇ ಇತ್ಯಾದಿ ವಿಷಯಗಳನ್ನು ಅಧ್ಯಯನ ಮಾಡಿ ಪ್ರಗತಿ ವರದಿ ಸಲ್ಲಿಸಲು ಸೂಚಿಸಲಾಗಿತ್ತು. ಇದಕ್ಕಾಗಿ ಜಿ.ಪಂ. ಶಾಖಾ ಮುಖ್ಯಸ್ಥರನ್ನು ತಾಲ್ಲೂಕು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಇವರು ಪ್ರತಿವಾರ ಎರಡು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಪರಿಶೀಲನಾ ವರದಿ ಸಲ್ಲಿಸಲು ಸೂಚಿಸಲಾಗಿದೆ.

      ಈಗಾಗಲೇ ರಚನೆಯಾಗಿರುವ ಅಧಿಕಾರಿಗಳ ತಂಡ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡುತ್ತಿದೆ. ಹಲವು ಅಕ್ರಮಗಳು ಮೇಲ್ಮೋಟಕ್ಕೆ ಎಂತಹವರಿಗೂ ಕಂಡುಬರುತ್ತವೆ. ಸ್ಥಳೀಯವಾಗಿಯೂ ಮಾಹಿತಿ ಲಭ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ಮುಲಾಜಿಗೆ ಒಳಗಾಗದೆ ಸಮಗ್ರ ವರದಿ ನೀಡಿದ್ದೇ ಆದಲ್ಲಿ ಮತ್ತಷ್ಟು, ಮಗದಷ್ಟು ಹಗರಣಗಳು ಹೊರಬರುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹಿಂದಿನಿಂದಲೂ ಇವೆ ಅಕ್ರಮಗಳು  :

      ಸುಮಾರು ವರ್ಷಗಳಿಂದಲೂ ಎನ್.ಆರ್.ಇ.ಜಿ. ಯೋಜನೆಯಲ್ಲಿ ಬಹಳಷ್ಟು ಅಕ್ರಮಗಳು ನಡೆದಿದ್ದರೂ ಸಹ ತಾಲ್ಲೂಕು ಪಂಚಾಯತಿ ಇ.ಓ.ಗಳಾಗಲಿ, ಓಂಬುಡ್ಸ್‍ಮನ್‍ಗಳಾಗಲಿ ಸ್ಥಳ ಪರಿಶೀಲನೆ ನಡೆಸಿಲ್ಲ. ಕೆಲವು ಪಂಚಾಯತಿಗಳಲ್ಲಿ ಅಕ್ರಮಗಳ ಬಗ್ಗೆ ಸಾಕಷ್ಟು ದೂರು ನೀಡಿದ್ದರೂ ನಾಮಕಾವಸ್ಥೆಗೆಂಬಂತೆ ಪಂಚಾಯತಿಗೆ ಭೇಟಿ ನೀಡಿ ಹೋದರೆ ವಿನಃ ತನಿಖೆಗಾಗಲಿ, ಸೂಕ್ತಕ್ರಮವಾಗಲಿ ನಡೆಸದೆ ಇರುವುದು ಬಹಳಷ್ಟು ಅಕ್ರಮಗಳಿಗೆ ಎಡೆಮಾಡಿಕೊಟ್ಟಂತಾಗಿದೆ.

      ಕೊರಟಗೆರೆ ತಾಲ್ಲೂಕಿನ ಹೊಳವನಹಳ್ಳಿ, ಬಿ.ಡಿ.ಪುರ, ಕ್ಯಾಮೇನಹಳ್ಳಿ, ಬೈಚಾಪುರ, ದೊಡ್ಡಸಾಗ್ಗೆರೆ, ಮತ್ತಿತರ ಕಡೆಗಳಲ್ಲಿ ಅಕ್ರಮಗಳು ನಡೆದಿರುವ ಬಗ್ಗೆ ಅಲ್ಲಿನ ಗ್ರಾಮಸ್ಥರು ದೂರು ನೀಡಿದ್ದಾರೆ. ಇದೇ ರೀತಿ ಜಿಲ್ಲೆಯ ಹಲವು ಕಡೆ ದೂರುಗಳು ಸಲ್ಲಿಕೆಯಾಗಿವೆ.
ಮೊದಮೊದಲಿಗೆ ಜಾಬ್ ಕಾರ್ಡ್‍ಗಳ ಬಗ್ಗೆ ಜನರಿಗೆ ಅರಿವೇ ಇರಲಿಲ್ಲ. ಪಂಚಾಯತಿ ಸಿಬ್ಬಂದಿಗಳೇ ಗ್ರಾಮಸ್ಥರ ಜಾಬ್ ಕಾರ್ಡ್‍ಗಳನ್ನು ಸೃಷ್ಟಿಸಿಕೊಂಡು ತಮಗಿಷ್ಟ ಬಂದ ಕಡೆ ಕಾಮಗಾರಿ ನಡೆಸಿದರು. ಸತ್ತವರ ಹೆಸರಿನಲ್ಲೆಲ್ಲಾ ಎನ್.ಎಂ.ಆರ್. ಸೃಷ್ಟಿ ಮಾಡಿದರು. ಪಂಚಾಯತಿಯ ಸದಸ್ಯರುಗಳು, ವಾಟರ್‍ಮನ್‍ಗಳು ಹಾಗೂ ತಮಗೆ ಬೇಕಾದವರ ಬ್ಯಾಂಕ್ ಅಕೌಂಟ್‍ಗೆ ಹಣ ಹಾಕಿ, ಫಲಾನುಭವಿಗಳಿಗೆ 500 ಇಲ್ಲವೆ 1000 ರೂ.ಗಳನ್ನು ಕೊಟ್ಟು ಹಣ ಡ್ರಾ ಮಾಡಿಕೊಂಡ ಉದಾಹರಣೆಗಳು ಒಂದೇ.. ಎರಡೇ..!. ಅಧಿಕಾರಿಗಳು ವಿವಿಧ ಗ್ರಾಮ ಪಂಚಾಯತಿಗಳಲ್ಲಿ ಆಗಿರುವ ಕಾಮಗಾರಿಯನ್ನು ವೀಕ್ಷಣೆ ಮಾಡಿದರೆ ಅಕ್ರಮಗಳು ಬಟಾಬಯಲಾಗುವುದರಲ್ಲಿ ಎರಡು ಮಾತಿಲ್ಲ.
ಮಾಹಿತಿ ಹಕ್ಕು ದುರುಪಯೋಗ: ಅನೇಕ ಗ್ರಾಮ ಪಂಚಾಯತಿಗಳಲ್ಲಿ ನಡೆದಿರುವ ಕಾಮಗಾರಿಗಳ ಬಗ್ಗೆ ಮಾಹಿತಿ ಹಕ್ಕಿನಡಿ ಕೆಲವರು ಅರ್ಜಿ ಹಾಕಿದರು. ಈಗಲೂ ಹಾಕುತ್ತಿದ್ದಾರೆ. ಇದು ಕೆಲವರಿಗಂತೂ ವರದಾನವಾಗಿ ಪರಿಣಮಿಸಿತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಸಾವಿರಾರು ರೂ. ಪಡೆದು ನುಣ್ಣಗಾಗಿದ್ದೂ ಉಂಟು. ಹಠ ಬಿಡದೆ ಮಾಹಿತಿ ಪಡೆಯಲೇಬೇಕೆಂದು ಹೋದವರು ಅಧಿಕಾರಿಗಳ ಮಾತಿಗೆ ಕಟುಬಿದ್ದು ತೆಪ್ಪಗಾದರು. ಮಾಹಿತಿ ಪಡೆದ ಕೆಲವರು ಮೇಲಧಿಕಾರಿಗಳಿಗೆ ಸತ್ಯಾಸತ್ಯತೆಯನ್ನು ವಿವರಿಸಲು ವಿಫಲರಾಗದೆ ತೆಪ್ಪಗಾದರು. ಅಲ್ಲೂ ಇಲ್ಲೂ ಒಂದೆರಡು ಪ್ರಕರಣಗಳು ಜೀವಂತ ಪಡೆದು ಅಧಿಕಾರಿಗಳು ವಿಧಿಸಿದ ದಂಡ ಕಟ್ಟಿ ಬಂದರೆ ವಿನಃ ಅಕ್ರಮಗಳಿಗೆ ಕಡಿವಾಣ ಹಾಕಲೇ ಇಲ್ಲ.

ಪಿಡಿಓ ವಿರುದ್ಧ ಕ್ರಿಮಿನಲ್ ಪ್ರಕರಣ :

      ನರೇಗಾ ಯೋಜನೆಯಡಿ 3.24 ಲಕ್ಷ ರೂ. ಅವ್ಯವಹಾರವಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಣಿಗಲ್ ತಾಲ್ಲೂಕು ಬೇಗೂರಿನ ಹಿಂದಿನ ಪಿಡಿಓ ಸುದರ್ಶನ ವಿರುದ್ಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಗೊಟ್ಟಿಕೆರೆಯ ವ್ಯಕ್ತಿಯೊಬ್ಬರ ಮನೆಯಿಂದ ಕೆರೆಯವರೆಗೆ ಬಸಿ ಕಾಲುವೆ ನಿರ್ಮಾಣ ಕಾಮಗಾರಿಯನ್ನು ತೋರಿಸಿ ಅನುಷ್ಠಾನ ಮಾಡದೆ ನಿರ್ಲಕ್ಷ್ಯ ವಹಿಸಲಾಗಿದೆ. ಆದರೂ ಕಾಮಗಾರಿ ಹಣ ದುರುಪಯೋಗವಾಗಿದೆ. ಈ ಹಿನ್ನೆಲೆಯಲ್ಲಿ ಜಿಪಂ ಸಿಇಓ ಅವರ ಸೂಚನೆ ಮೇರೆಗೆ ಕುಣಿಗಲ್ ತಾಲ್ಲೂಕು ಇಓ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.

ಗಮನ ಸೆಳೆದಿದ್ದ ಪ್ರಕರಣ :

      2014-15ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಉದ್ಯೋಗ ಖಾತರಿ ಅವ್ಯವಹಾರದ ಪ್ರಕರಣಗಳು ಬಟಾಬಯಲಾಗತೊಡಗಿದವು. ಪ್ರಜಾಪ್ರಗತಿ ದಿನಪತ್ರಿಕೆಯಲ್ಲಿ ನರೇಗಾ ಅಕ್ರಮಗಳು ಒಂದೊಂದಾಗಿ ಬಯಲಾಗುತ್ತಿದ್ದಂತೆ ಜಿಲ್ಲಾ ಪಂಚಾಯತ್ ಸಭೆಯಲ್ಲಿಯೂ ಪ್ರತಿಧ್ವನಿಸತೊಡಗಿದವು. ಸರ್ಕಾರದ ಗಮನಕ್ಕೂ ಹೋದವು. 2014 ರಲ್ಲಿ ಒಂದೇ ಬಾರಿಗೆ ಉದ್ಯೋಗ ಖಾತರಿ ಅವ್ಯವಹಾರಕ್ಕೆ ಸಂಬಂಧಿಸಿದಂತೆ 250 ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿದ್ದು ಒಂದು ಇತಿಹಾಸ. ಆಗ ಕೊರಟಗೆರೆ ತಾಲ್ಲೂಕು ಇಓ ಮಂಜುನಾಥ್ ಅವರನ್ನು 10 ಕೋಟಿ ರೂ. ಅವ್ಯವಹಾರದ ಆರೋಪದ ಮೇರೆಗೆ ಅಮಾನತುಗೊಳಿಸಲಾಗಿತ್ತು. ಸಾಮಾಜಿಕ ಪರಿಶೋಧನಾ ತಂಡವು ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿ ನರೇಗಾ ಯೋಜನೆಯಲ್ಲಿ ನಿಯಮಗಳು ಉಲ್ಲಂಘನೆಯಾಗಿರುವುದು, ಕಾಮಗಾರಿಗಳ ಅವ್ಯವಹಾರ ಇತ್ಯಾದಿಗಳನ್ನು ಬಯಲಿಗೆಳೆದಿದ್ದು ಒಂದು ದೊಡ್ಡ ಇತಿಹಾಸ. ಎನ್‍ಎಂಆರ್ ಸರಿಯಾಗಿ ದಾಖಲಿಸದೆ ಇರುವುದು, ಕೂಲಿ ಕಾರ್ಮಿಕರ ನಕಲಿ ಸಹಿ, ಸಹಿ ಮತ್ತು ಹೆಬ್ಬೆಟ್ಟು ತಾಳೆಯಾಗದೆ ಇರುವುದು, ಬ್ಯಾಂಕ್ ಖಾತೆ ಲೆಕ್ಕದ ಮೋಸ, ಕಾಮಗಾರಿಗಳನ್ನು ಗುತ್ತಿಗೆ ನೀಡಿರುವುದು, ಮಾನವರ ಬದಲು ಯಂತ್ರಗಳ ಬಳಕೆ,ಸಾಮಗ್ರಿಗಳ ಬಿಲ್ ಪಾವತಿಯಲ್ಲಿ ನಿಯಂ ಉಲ್ಲಂಘನೆ, ಹಳೇ ಕಾಮಗಾರಿಗಳನ್ನೇ ಹೊಸ ಕಾಮಗಾರಿಗಳೆಂದು ತೋರಿಸಿರುವುದು… ಹೀಗೆ ಹಲವು ಅವ್ಯವಹಾರಗಳು ಪತ್ತೆಯಾಗಿದ್ದವು. 7 ವರ್ಷಗಳು ಉರುಳಿ ಹೋಗಿವೆ. ಯೋಜನೆಯೂ ಜೀವಂತವಿದೆ. ಸಾಕಷ್ಟು ಹಣವೂ ಇದೆ. ಆದರೆ ದುರುಪಯೋಗ ಮಾತ್ರ ನಿಂತಿಲ್ಲ. ನಿಜವಾದ ಫಲಾನುಭವಿಗಳಿಗೆ ಯೋಜನೆಯ ಹಣ ಹೋಗುತ್ತಿಲ್ಲ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತಾಗಿದೆ ನರೇಗಾ ಯೋಜನೆ.

ಜಲ ಸಂರಕ್ಷಣೆಗೆ ಒತ್ತು ನೀಡಲಿ :

      ನರೇಗಾ ಯೋಜನೆಯಡಿಯಲ್ಲಿ ಸಮುದಾಯ ಆಧಾರಿತ, ಗ್ರಾಮಗಳಿಗೆ ಅನುಕೂಲವಾಗುವಂತಹ ಜಲಸಂರಕ್ಷಣೆ ಯೋಜನೆಗಳಿಗೂ ಅವಕಾಶವಿದೆ. ಕೆರೆಕಟ್ಟೆಗಳಿಗೆ ನೀರು ಸಂಗ್ರಹವಾಗುವಂತಹ ಕಾಮಗಾರಿಗಳಿಗೆ ಆಧ್ಯತೆ ನೀಡುವುದು, ಚೆಕ್ ಡ್ಯಾಂ ಇತ್ಯಾದಿಗಳಿಗೆ ಈ ಯೋಜನೆಯಡಿಯಲ್ಲಿ ಅವಕಾಶವಿದೆ. ಜಿಲ್ಲೆಯ ಬಹಳಷ್ಟು ಕಡೆಗಳಲ್ಲಿ ಇದರ ಸದ್ಬಳಕೆಯಾಗಿದೆ. ಸಮುದಾಯ ಆಧಾರಿತ ಇಂತಹ ಕಾಮಗಾರಿಗಳಿಂದಾಗಿ ನೀರು ಸಂಗ್ರಹವಾಗಲು ಅವಕಾಶವಾಗಿದೆ. ಜನರಿಗೆ ಉದ್ಯೋಗದ ಅವಕಾಶವೂ ದೊರಕಿದೆ. ಅಧಿಕಾರಿಗಳು ಇಂತಹ ಕಾಮಗಾರಿಗಳಿಗೆ ಹೆಚ್ಚಿನ ಆಸಕ್ತಿ ವಹಿಸಿ ಮೇಲ್ವಿಚಾರಣೆ ನಡೆಸಿದರೆ ಯೋಜನೆಯ ಉದ್ದೇಶ ಸಾರ್ಥಕವಾಗುತ್ತದೆ.

ನಾಮಕಾವಸ್ಥೆಗೆ ಲೆಕ್ಕಪರಿಶೋಧನಾ ವರದಿ :

      ಜಿಲ್ಲಾ ಪಂಚಾಯತಿ ವತಿಯಿಂದ ಪ್ರತಿವರ್ಷ ಲೆಕ್ಕ ಪರಿಶೋಧನೆ ನಡೆಯುತ್ತದೆ. ಸೋಷಿಯಲ್ ಆಡಿಟ್ ವರದಿಗಳನ್ನು ಗಮನಿಸುತ್ತಾ ಹೋದರೆ ಪಂಚಾಯತಿಯ ಕರ್ಮಕಾಂಡಗಳು ಬಯಲಾಗುತ್ತವೆ. ಹಣ ದುರುಪಯೋಗದ ಬಗ್ಗೆ ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ವಿವಿಧ ಕಾಮಗಾರಿಗಳಲ್ಲಿ ನಡೆದಿರುವ ಕೆಲಸ, ಪಡೆದಿರುವ ಹಣ, ಬಿಡುಗಡೆಯಾಗಿರುವ ಅನುದಾನ ಇದಕ್ಕೆ ತಾಳೆಯಾಗದೆ ಇರುವುದು, ಕಾಮಗಾರಿಗಳ ಅವ್ಯವಹಾರ ಇವೆಲ್ಲವೂ ಪ್ರತಿವರ್ಷ ನಮೂದಾಗುತ್ತದೆ. ಆದರೆ ಇವೆಲ್ಲವೂ ಪುಸ್ತಕದಲ್ಲಿ ದಾಖಲಾಗುತ್ತವೆಯೇ ಹೊರತು ಕ್ರಮಕ್ಕೆ ಅವಕಾಶ ನೀಡುತ್ತಿಲ್ಲ. ಈ ಸಂಪತ್ತಿಗೆ ಈ ಲೆಕ್ಕ ಪರಿಶೋಧನೆಗಳು ಏಕೆ ಬೇಕು..?

 ಸಾ.ಚಿ.ರಾಜಕುಮಾರ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link