ನವದೆಹಲಿ
ಸಾಲ ವಿತರಣೆ ಸಾಮಾನ್ಯವಾಗಿಸಲು ಮತ್ತು ಲಾಭದತ್ತ ಮತ್ತೆ ಕೊಂಡೊಯ್ಯುವ ನಿಟ್ಟಿನಲ್ಲಿ ಐಡಿಬಿಐ ಬ್ಯಾಂಕಿನಲ್ಲಿ ಸರ್ಕಾರ 4,557 ಕೋಟಿ ರೂ. ಹೂಡಿಕೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.
‘ ಬ್ಯಾಂಕ್‍ಗೆ ಅಗತ್ಯವಿರುವ 9,300 ಕೋಟಿ ರೂ ಪೈಕಿ ಎಲ್ಐಸಿ ಶೇ. 51ರಷ್ಟು (4,743 ಕೋಟಿ ರೂ.) ಮತ್ತು ಉಳಿದ ಶೇ.49ರಷ್ಟು (4,557 ಕೋಟಿ ರೂ) ಸರ್ಕಾರದಿಂದ ಹೂಡಿಕೆ ಮಾಡಲಾಗುವುದು.’ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.ಹಣಕಾಸಿನ ನೆರವು ಐಡಿಬಿಐ ಬ್ಯಾಂಕಿನ ವಹಿವಾಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ನೆರವಾಗಲಿದೆ. ಅಲ್ಲದೆ, ಲಾಭದತ್ತ ಸಾಗಲು ಮತ್ತು ಸಾಲ ವಿತರಣೆಯಲ್ಲಿ ಸಾಮಾನ್ಯ ಸ್ಥಿತಿಗೆ ಮರಳಲು ಅನುವು ಮಾಡಿಕೊಡಲಿದೆ. ಮುಖ್ಯಾವಾಗಿ ಸರ್ಕಾರಕ್ಕೆ ತನ್ನ ಹೂಡಿಕೆಯನ್ನು ಸಕಾಲದಲ್ಲಿ ಮರುಪಡೆಯುವ ಆಯ್ಕೆಯನ್ನು ಒದಗಿಸಲಿದೆ.
ಐಡಿಬಿಐ ಬ್ಯಾಂಕ್ ತನ್ನ ಮೂಲ ವಹಿವಾಟು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಒಂದು ಬಾರಿಯ ಬಂಡವಾಳ ಹೂಡಿಕೆಯ ಅಗತ್ಯವಿದೆ. ಬ್ಯಾಂಕ್ ಈಗಾಗಲೇ ಕೆಲ ಗಣನೀಯ ಸುಧಾರಣೆಗಳನ್ನು ಕಂಡಿದೆ. ಜೂನ್ 2018 ರಲ್ಲಿದ್ದ ಗರಿಷ್ಠ ಶೇ 18.8ರಷ್ಟು ನಿವ್ವಳ ಎನ್‌ಪಿಎ (ವಸೂಲಾಗದ ಸಾಲದ ಪ್ರಮಾಣ) 2019 ರ ಜೂನ್‌ನಲ್ಲಿ ಶೇ. 8ಕ್ಕೆ ಇಳಿದಿದೆ.
ಆಗಸ್ಟ್ 2018 ರಲ್ಲಿ ಸಚಿವ ಸಂಪುಟ ಸಭೆ ಅನುಮೋದನೆ ನಂತರ, ಐಡಿಬಿಐ ಬ್ಯಾಂಕಿನಲ್ಲಿ ಎಲ್ಐಸಿ ಶೇ.51 ರಷ್ಟು ಪಾಲು ಹೊಂದಿದೆ. ಸರ್ಕಾರ ಪ್ರವರ್ತಕನಾಗಿ ಮುಂದುವರೆದಿದ್ದು ಶೇ. 46.46ರಷ್ಟು ಪಾಲು ಹೊಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








