ಅದೊಂದು ಶುಭಸಂಜೆ ಕೆಲಸದ ಒತ್ತಡಗಳಿಂದ ಮಧ್ಯಾಹ್ನವೇ ಮನೆಗೆ ಹೋಗಬೇಕಾಗಿದ್ದ ನಾನು ಆರೂವರೆಯಾದರೂ ಆಫೀಸಿನಲ್ಲೇ ಇದ್ದು ತಿಂಗಳ ಕೊನೆಯ ಕೆಲಸಗಳನ್ನು ಮುಗಿಸುವ ಹರಿಬರಿಯಲ್ಲಿದ್ದೆ. ಆದರೆ ಹೊಟ್ಟೆಯು ತಾಳ ಹಾಕುವುದನ್ನು ಸಹಿಸಲಾಗದೆ ಏನಾದರೂ ತಿನ್ನೋಣವೆಂದು ಗೆಳೆಯ ಶಿವನೊಂದಿಗೆ ತಳ್ಳುಗಾಡಿಗಳ ಕಡೆಗೆ ಹೊರಟೆ. ಸಿಕ್ಕಾಪಟ್ಟೆ ಸೆಕೆ ಇದ್ದಿದ್ದರಿಂದ ಜ್ಯೂಸ್ ಕುಡಿಯೋಣವೆಂದು ಆರ್ಡರ್ ಮಾಡಿದೆವು.
ಹಾಗೆ ನಾನು ಮತ್ತು ಶಿವ ಹರಟುತ್ತಾ ಇದ್ದೆವು. ಜ್ಯೂಸ್ನಿಂದ ಹೊಟ್ಟೆ ತಣ್ಣಗಾದರೆ, ಕಣ್ಣೆದುರು ಸುಳಿದ ಆ ಸುಂದರಿಯಿಂದ ಮೈಮನವೆಲ್ಲಾ ತಂಪಾಯಿತು. ಹಿಂದೆಂದೂ ನೋಡಿರದ ಆ ಸೌಂದರ್ಯವತಿಯನ್ನು ಬ್ರಹ್ಮ ನನ್ನ ಸಂಗಾತಿಯಾಗಲೆಂದೇ ಕಳಿಸಿರುವನೇನೋ ಎಂದು ಮನಸ್ಸು ಹೇಳುತ್ತಿತ್ತು. ಆದರೆ ಇಷ್ಟು ಸುಂದರ ಹುಡುಗಿಗೆ ನನ್ನತ್ತ ಎಲ್ಲಿ ಪ್ರೀತಿಯ ಒರತೆ ಹರಿಯುತ್ತದೆ? ನನ್ನ ಆಸೆ ಗಗನಕುಸುಮವೇ ಸರಿಯೆಂದು ಹಠಾತ್ತಾನೆ ಎದ್ದ ಭಾವನೆಗಳನ್ನು ಒಂದೊಂದಾಗಿ ಚಿವುಟಿಹಾಕಿದೆ.
ತಿಳಿ ನೀಲಿ ಬಣ್ಣದ ಮನಮೋಹಕ ಚೂಡಿದಾರ್ ಹಾಕಿ ಬಲಗೈಗೆ ಒಂದು ಮ್ಯಾಚಿಂಗ್ ಬಳೆ ಹಾಕಿದ್ದಳವಳು, ಮತ್ತೊಂದು ಕೈಗೆ ವಾಚ್ ಹಾಕಿದ್ದು ಆ ಡ್ರೆಸ್ ಜೊತೆಗೆ ಅವಳ ಅಂದವನ್ನು ಮತ್ತಷ್ಟು ಹೆಚ್ಚಿಸಿತ್ತು. ಜೊತೆಗೆ ಹೈಹೀಲ್ಡ್ ಹಾಕಿದ್ದಳು. ಹಠಾತ್ತನೆ ಸ್ಕೂಟಿಯಲ್ಲಿ ಬಂದು ನಿಲ್ಲಿಸಿ, ಹೆಲ್ಮೆಟ್ ತೆಗೆದು ಆ ಕೆದರಿದ ಮುಂಗುರುಳ ಸರಿಮಾಡಿಕೊಂಡಳು.
ನೀಳವಾಗಿ ತೀಡಿದ್ದ ಹುಬ್ಬುಗಳು, ದೃಷ್ಟಿಯಾಗದಂತೆ ಹಚ್ಚಿದ್ದ ಕಣ್ಕಪ್ಪುಗಳು ತಿಳಿ ನೀಲಿಯ ಅದರಗಳು, ಜೊತೆಗೆ ಹಣೆಯಲ್ಲಿಟ್ಟ ಪುಟ್ಟದಾದ ಸಿಂಧೂರ ಥೇಟ್ ಭಾರತ ಮಾತೆಯ ಹೆಮ್ಮೆಯ ಪುತ್ರಿಯೆಂಬ ಗರ್ವ ಬೀರುತ್ತಿತ್ತು. ಜನಜಂಗುಳಿಯಿರುವ ಈ ಬೆಂಗಳೂರಿನಲ್ಲಿ ದಾರಿ ಸರಿಯಾಗಿ ಗೊತ್ತಿಲ್ಲದೆ ಕೇಳಿ ತಿಳಿದುಕೊಳ್ಳುವ ಸಲುವಾಗಿ ನಾವು ನಿಂತಿದ್ದ ಅಂಗಡಿಯ ಪಕ್ಕಕ್ಕೆ ಬಂದು ನಿಂತಳು. ಅಲ್ಲಿದ್ದ ಅಂಗಡಿಯವನ ಬಳಿ ಬೈಯ್ಯಾ!! “ಮೈ ಮಯೋ ರೋಡ್ ಕೈಸೆ ಜಾ ಸಕ್ತಿ ಹುಂ” ಎಂದು ಕೇಳಿದಳು. ನಾನು ಅವಳ ಅಂದಕ್ಕೆ ಬೆಕ್ಕಸ ಬೆರಗಾಗಿದ್ದೆ. ಈಗ ಆ ಮುಗ್ದ ಸ್ವರಕ್ಕೆ ಕಳೆದುಹೋದೆ. ಅವಳ್ಯಾರಿರಬಹುದು ಎಂದು ನನ್ನ ಮನ ಯೋಚಿಸುವ ಸಮಯಕ್ಕೆ ಸರಿಯಾಗಿ ಅವಳ ಮೊಬೈಲ್ ರಿಂಗಣಿಸಿತು. ಪೋನೆತ್ತಿ “ಹಲೋ ಹೇಳಪ್ಪ” ಎಂದು ಅಚ್ಚ ಕನ್ನಡದಲ್ಲಿ ಸ್ವಚ್ಛಂದವಾಗಿ ಮಾತನಾಡಲಾರಂಭಿಸಿದಳು. ಆ ಬೆಡಗಿ ಕನ್ನಡದ ಕನ್ಯಯೆಂದು ತಿಳಿದ ಮೇಲೆ ನನ್ನ ಖುಷಿಗೆ ಪಾರವಿಲ್ಲದಂತಾಯಿತು.
ಅವಳ ಅಂದದ ಬಗ್ಗೆ ಶಿವನ ಬಳಿ ಹೇಳುತ್ತಾ ಆ ಇಂಪಾದ ಧ್ವನಿ ಕೇಳೋಣವೆಂದು ಅವಳತ್ತ ಹೊರಟಾಗ ತಿಳಿಯಿತು. ಅವಳು ನಮ್ಮದೇ ಭಾಷೆಯಲ್ಲಿ ಮಾತನಾಡುತ್ತಿದ್ದಾಳೆಂದು. ನನಗೋ ಅವಳೊಂದಿಗೆ ಮಾತನಾಡುವ ತವಕ ಆದರೆ ಶಿವನ ಒತ್ತಾಯದ ಮೇರೆಗೆ ಮಾತನಾಡಿಸದೆ ಆಫೀಸಿಗೆ ಬಂದೆ.
ಆಫೀಸಿನಿಂದ ಮನೆಗೆ ಹೋದರೂ ಅವಳ ಮೊಗ ಕಣ್ಣಿಗೆ ಕಟ್ಟಿತ್ತು. ಇಂಪಾದ ಅವಳ ಕಿವಿಯಲ್ಲಿ ಸಪ್ತಸ್ವರಗಳು ಹಾಡುತ್ತಿತ್ತು. ಅವಳೊಂದಿಗೆ ಖುಷಿಯಾಗಿರುವ ಹಗಲುಗನಸು ಕಾಣುತ್ತಿದ್ದೆ. ಯಾರೊಂದಿಗೂ ಸರಿಯಾಗಿ ಮಾತನಾಡದೆ ಹಾಸಿಗೆಯ ಮೇಲೆ ಹೊರಳಾಡುತ್ತಾ ಇದ್ದೆ. ಪ್ರೀತಿಯ ಅಮ್ಮ ನನ್ನೆಲ್ಲಾ ಚಟುವಟಿಕೆ ಗಮನಿಸಿ ಮಗನ ಮನಸಿನಲ್ಲೇನೋ ಕಸಿವಿಸಿಯಿದೆಯೆಂದು ಅರಿತು ನನ್ನ ಕೇಳಿದಳು. ಅದಕ್ಕೆ ನಾನು ಅಂತಹ ಯಾವುದೇ ಭಾವನೆಗಳಿಲ್ಲ. ಆದರೆ ದೂರದ ಊರಲ್ಲಿ ಕನ್ನಡತಿಯನ್ನೊಬ್ಬಳನ್ನು ನೋಡಿ ಮನಸ್ಸು ಸಂತೋಷಗೊಂಡಿದೆ ಎಂದೆ.
ಮರುದಿನ ಆಫೀಸಿನ ಸುತ್ತಮುತ್ತ ಅವಳ ಶೋಧನೆಯಲ್ಲೇ ಕಾಲ ಕಳೆಯುತ್ತಿದ್ದೆ. ಒಂದು ವಾರದ ನಂತರ ಮತ್ತೆ ಅವಳ ದರ್ಶನವಾಯಿತು. ಅಂದು ನಾನೇ ಹೋಗಿ ಮಾತನಾಡಿಸಿದೆ. ನೀವು ಕನ್ನಡದವರೆಂದು ತಿಳಿದು ನಿಮ್ಮೊಂದಿಗೆ ಮಾತನಾಡಲು ಉತ್ಸುಕತೆಯಿಂದ ಕಾದಿದ್ದೆ. ಎಂದು ಹೇಳುತ್ತಾ ಅವಳ ಖುಷಲೋಪರಿ ವಿಚಾರಿಸಿದೆ. ಕಾಣದ ಊರಿನಲ್ಲಿ ಕನ್ನಡಿಗರೊಬ್ಬರು ಸಿಕ್ಕರೆಂಬ ಸಂತೋಷ ಧೈರ್ಯ ಅವಳ ಮೊಗದಲ್ಲಿ ಎದ್ದು ಕಾಣುತ್ತಿತ್ತು.
ಹೀಗೆ ಹಾಗೆ ಮಾತನಾಡುತ್ತಾ ನಾನು ಮತ್ತು ಅವಳು ತುಂಬಾ ಹತ್ತಿರದ ಸ್ನೇಹಿತರಾದೆವು. ಮೊದಮೊದಲು ನನಗದು ಬರಿ ಸ್ನೇಹವೆಂದೆನಿಸಿದರೂ ತದನಂತರ ಸ್ನೇಹಕ್ಕೂ ಮೀರಿದ ಭಾವನೆಯೊಂದು ಹೃದಯದಲ್ಲಿ ಮನೆಮಾಡುತ್ತಿದೆ ಎಂದರಿಯುತ್ತಾ ಬಂದಿತ್ತು.
ದಿನಕಳೆದಂತೆ ಶಿವ ತನ್ನ ಆಫೀಸಿನ ಕೆಲಸ ಮತ್ತಿತರ ಕೆಲಸಗಳೆಂದು ಬಿಡುವಿಲ್ಲದೆ ಇರುತ್ತಿದ್ದ ಹಾಗಾಗಿ ನಾನು ಮತ್ತೆ ಅವಳು ಮಾತ್ರ ಸಮಯ ಕಳೆಯುವುದು ಜಾಸ್ತಿಯಾಯಿತು.
ಒಬ್ಬರಿಗೊಬ್ಬರು ಬಹಳ ಹೊಂದಿಕೊಂಡೆವು. ಅವಳ ಇಷ್ಟಗಳು ನನಗೂ ಇಷ್ಟವಾಗತೊಡಗಿತು. ನನ್ನ ಮತ್ತವಳ ಕೆಲಸದ ಸಮಯವು ಒಂದೇ ಆಗಿತ್ತು. ಮತ್ತು ಅವಳ ಆಫೀಸು ನನ್ನ ಆಫೀಸಿನ ಪಕ್ಕಕ್ಕೆ ಇದ್ದಿದ್ದರಿಂದ ದಿನ ಸಂಜೆ ನಮ್ಮ ಭೇಟಿಯಾಗುತ್ತಿದ್ದುದ್ದು ಮಾಮೂಲಿಯಾಯ್ತು.
ಬೆಂಗಳೂರಿನಲ್ಲಿ ನಾವು ನೋಡದೆ ಇರುವ ಯಾವ ಸ್ಥಳವೂ ಇರಲಿಲ್ಲ, ಅಲ್ಲಿನ ಗಲ್ಲಿ ಗಲ್ಲಿಯನ್ನೂ ತಿರುಗಿದ್ದೆವು. ಪ್ರತಿ ಫಿಲಂಗೂ ಹೋಗಿದ್ದೆವು. ನಮ್ಮ ಮನೆಗೂ ಅವಳನ್ನು ಕರೆದುಕೊಂಡು ಹೋಗಿದ್ದೆ. ಅವಳ ಸಂಸ್ಕಾರಕ್ಕೆ ನನ್ನಮ್ಮ ಕೂಡ ಕ್ಲೀನ್ ಬೋಲ್ಡ್ ಆಗಿದ್ದರು.
ನನ್ನ ಬೆಂಗಳೂರು ಜೀವನದ ಪ್ರತಿಕ್ಷಣ ಅವಳೊಂದಿಗೆ ಕಳೆಯುತ್ತಿತ್ತು. ನನ್ನೆಲ್ಲಾ ಇಷ್ಟ ಕಷ್ಟಕ್ಕೆ ಅವಳೇ ಬೇಕಿದ್ದರಿಂದ ನಾನು ಅವಳನ್ನು ಪ್ರೀತಿಸುತ್ತಿರುವುದನ್ನು ಅರಿಯಲು ಬಹಳ ಸಮಯ ಬೇಕಾಗಲಿಲ್ಲ. ಆದರೆ ನನ್ನ ಮನದಿಂಗಿತವನ್ನು ಅವಳಿಗೆ ಹೇಳುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಶಿವನೊಂದಿಗೆ ನನ್ನ ಮನದ ಭಾವನೆಯ ತೆರೆದಿಟ್ಟೆ. ಅದಕ್ಕವನು ಸೂಪರ್ ಐಡಿಯಾವೊಂದನ್ನು ಕೊಟ್ಟ.
ಅವನ ಐಡಿಯಾದಂತೆ ಮರುದಿನ ನಾನವಳನ್ನು “ಕಬ್ಬನ್ ಪಾರ್ಕ್”ಗೆ ಕರೆದೊಯ್ದೆ. ಅದು ನಮ್ಮಿಬ್ಬರ ಇಷ್ಟದ ಜಾಗವಾಗಿತ್ತು. ನಾನು ಅವಳಿಗೆ ಚೆಂದದ ಗುಲಾಬಿ ಹೂಗಳ ಗುಚ್ಛ ಕೊಟ್ಟು ಪ್ರೀತಿ ಮಾತುಗಳ ಮಳೆಗೆರೆದೆ. ತನ್ನವನ ಪ್ರೀತಿಗೆ ಕರಗಿ ಅವಳೂ ಗ್ರೀನ್ ಸಿಗ್ನಲ್ ಸೂಚಿಸಿದಳು. ಪ್ರೀತಿಯೆಂಬುದು ಗಗನ ಕುಸುಮವಾಗುವುದೇನೋ ಎಂಬ ಭಯದಿಂದ ಬೆಂದಿದ್ದ ನನಗೆ ಅವಳ ಒಪ್ಪಿಗೆಯಿಂದ ಈ ಪ್ರಪಂಚದ ಒಡೆಯನೇ ನಾನಾದೆನೆಂಬಂತೆ ಭಾಸವಾಯಿತು.
ಪ್ರೀತಿಯ ಪ್ರಿಯನಾಗಿ, ಪ್ರೀತಿಗೆ ಸಾರಥಿಯಾಗಿ, ಪ್ರೀತಿಯಿಂದ ಇನಿಯನಾಗಿ , ಪ್ರೀತಿಗೊಸ್ಕರ ಹುಟ್ಟಿದವ ನಾನು ಎಂಬಂತಿತ್ತು ನಮ್ಮ ಪ್ರೇಮ. ಒಟ್ಟಾರೆಯಾಗಿ ಪ್ರೇಮ ಸಾಗರದಲ್ಲಿ ಈಜಿ ದಡ ಸೇರಲು ಬಯಸುತ್ತಿದ್ದ ಪ್ರೀತಿಯ ಮೀನುಗಳಾಗಿದ್ದೆವು ನಾವು.
ಆದಿನ ಮನೆಗೆ ಬಂದ ನಂತರ ಅಮ್ಮನ ಬಳಿ ನಡೆದ ಘಟನೆಯನ್ನೆಲ್ಲಾ ಹೇಳಿ ನನ್ನ ಪ್ರೀತಿಗೆ ಅವಳು ಸಮ್ಮತಿಸಿದಳು ಎಂಬ ಖುಷಿಯಲ್ಲಿ ಅಮ್ಮನೊಂದಿಗೆ ಕುಣಿದಾಡಿದೆ. ಈ ಖುಷಿಯ ಕೊನೆಯಲ್ಲಿ ಅಮ್ಮನ ಕಣ್ಣಂಚಿನಿಂದ ಬಂದ ನೀರು ಯಾವುದೋ ದುಃಖಕ್ಕೆ ರಾಯಭಾರಿ ಯಾಗಿದ್ದನ್ನು ನಾನು ಗಮನಿಸದೆ ಇರಲಿಲ್ಲ. ಅದೇನೆಂದು ಅಮ್ಮನ ಬಳಿ ಕೇಳಿದಾಗ ನನ್ನಪ್ಪ ನೆನಪಾಗಿದ್ದರು ಅಮ್ಮನಿಗೆ.
ನನ್ನಪ್ಪ ಅಮ್ಮನದು ಪ್ರೇಮ ವಿವಾಹವಾಗಿತ್ತು. ಅಮ್ಮನ ಮನೆಯಲ್ಲಿ ತಾತ ಒಪ್ಪದ ಕಾರಣ ಅಮ್ಮ ಓಡಿ ಹೋಗಿ ಅಪ್ಪನನ್ನ ವರಿಸಿ ಸುಖದಿಂದಿದ್ದರು. ಕಾಲ ಕಳೆದಂತೆ ಮುದ್ದಾದ ಗಂಡು ಮತ್ತು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆದರೆ ಅವರಿಬ್ಬರ ಅನ್ಯೋನ್ಯತೆ ಸಹಿಸಲಾಗದ ನನ್ನ ಸೋದರ ಮಾವ ತನ್ನ ಸ್ವಂತ ತಂಗಿ ಎಂದೂ ಯೋಚಿಸದೆ ನಿಯೋಜಿತವಾಗಿ ಅವರಿಬ್ಬರ ನಡುವೆ ಮನಸ್ತಾಪದ ವಿಷಬೀಜ ಬಿತ್ತಿ ಮಾಯವಾಗಿದ್ದ.
ನನಗೆ ಆಗ ಮೂರು ವರ್ಷವಿದ್ದರೆ ನನ್ನ ತಂಗಿ ಒಂದು ವರ್ಷದವಳಾಗಿದ್ದಳು. ಈ ಸಮಯದಲ್ಲಿ ಅವರಿಬ್ಬರ ವಿಚ್ಛೇದನ ನಿಶ್ಚಿತವಾಗಿತ್ತು. ಅತ್ತ ತವರು ಮನೆಯೂ ಇಲ್ಲದೆ ಇತ್ತ ಗಂಡನ ಮನೆಯೂ ಇಲ್ಲದ ಅಮ್ಮಳಿಗೆ ನನ್ನನ್ನು ಕಂಕಳಲ್ಲಿ ಕಟ್ಟಿಕೊಳ್ಳಬೇಕಾದ್ದು ಕೋರ್ಟಿನಿಂದ ಬಂದ ತೀರ್ಪಾಗಿತ್ತು. ಅಸಹಾಯಕಳಾದ ನನ್ನ ಅಮ್ಮ ಪರಿಸ್ಥಿತಿಗೆ ಎದೆಗುಂದದೆ ನನ್ನನ್ನು ಕರೆದುಕೊಂಡು ಬೆಂಗಳೂರು ನಗರ ಸೇರಿದ್ದಳು. ಹೊಟ್ಟೆ ಪಾಡಿಗೊಂದು ಕೆಲಸ ಮಾಡಿ ಅಪ್ಪನ ಕೊರತೆ ಬರದಂತೆ ನನ್ನ ಸಾಕಿ ಸಲುಹಿದ್ದಳು.
ದಿನಗಳು ಕಳೆದಂತೆ ನನ್ನ ಮತ್ತವಳ ಪ್ರೀತಿ ಬಲವಾಗುತ್ತಾ ಬಂತು. ಅವಳೂ ಆಗಾಗ ನನಗೆ ಅಮ್ಮ ಇಲ್ಲ ಕಣೋ ಎಂದಾಗ ನನಗೂ ಅಪ್ಪನಿಲ್ಲವೆಂದು ನೆನಪಾಗುತ್ತಿತ್ತು. ಇನ್ನು ತಡ ಮಾಡಬೇಡಿ ಅವಳಪ್ಪನ ಒಪ್ಪಿಗೆ ಪಡೆದು ಇಬ್ಬರೂ ಮದುವೆಯಾಗಿ ಎಂದು ನನ್ನಮ್ಮ ಹೇಳುತ್ತಿದ್ದಳು. ಅದೇ ರೀತಿ ನಾವು ಮೂವರು ಅವಳಪ್ಪನ ಬಳಿ ಮಾತನಾಡಲು ನಿರ್ಧರಿಸಿ ಅವರಪ್ಪನಿದ್ದ ಊರಾದ ತುಮಕೂರಿಗೆ ಬಂದಿಳಿದೆವು .
ಅವರು ಮೈಸೂರಿನಿಂದ ತುಮಕೂರಿಗೆ ಬಂದು ಅಲ್ಲಿ ಶಾನುಭೋಗ ವೃತ್ತಿ ಮಾಡಿಕೊಂಡು ವಾಸವಾಗಿದ್ದರು. ಮಗಳು ಅವಳ ಪ್ರೇಮ ಕಥೆಯನ್ನು ಅವಳಪ್ಪನಿಗೆ ಹೇಳುವ ತವಕದಲ್ಲಿದ್ದಳು. ತಾಯಿಯಿಲ್ಲದ ಒಬ್ಬಳೇ ಮಗಳೆಂದು ಬಹಳ ಮುದ್ದಿನಿಂದ ಸಾಕಿದ್ದ ಭರತೇಶಪ್ಪ ಅವಳ ಇಷ್ಟಕ್ಕೆಲ್ಲಾ ಹೂ ಗುಟ್ಟುತ್ತಿದ್ದರು. ನಾವು ಮೂವರು ಮನೆಗೆ ಹೋದಾಗ ಭರತೇಶಪ್ಪ ಮನೆಯಲ್ಲಿ ಇರಲಿಲ್ಲ. ನಾವು ಟೀ ಕುಡಿಯುತ್ತಿದ್ದಾಗ ಅವರು ಬಂದರು. ನಮ್ಮನ್ನು ನೋಡಿ ಅವರ ಮುಖದಲ್ಲಿ ವಿಚಿತ್ರ ಭಾವನೆಯೊಂದಿಗೆ ಅಚ್ಚರಿ ಮೂಡಿತ್ತು.
ನನ್ನಮ್ಮ ಮತ್ತು ಭರತೇಶಪ್ಪ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡ ಪರಿಗೆ ನಾವು ನಿಬ್ಬೆರಗಾದೆವು. ನಾನು ಅಲ್ಲಿ ಹೆಪ್ಪುಗಟ್ಟಿದ್ದ ಮೌನವನ್ನು ಮುರಿದು ಅಮ್ಮಾ ಬಂದ ವಿಚಾರ ತಿಳಿಸಮ್ಮಾ ಎಂದೆ. ಎಂಜಲು ನುಂಗುತ್ತಾ ಸುಮ್ಮನೆ ಕುಳಿತ ಅಮ್ಮನ ಮುಖದಲ್ಲಿ ದುಗುಡವಿತ್ತು. ಮಾತು ಮುಂದುವರೆಸಿದ ಭರತೇಶಪ್ಪ. “ನನ್ನ ತಪ್ಪನ್ನು ಕ್ಷಮಿಸಿಬಿಡು ಪಾರ್ವತಿ, ಹಳೆಯ ವೈಮನಸ್ಸನ್ನು ಇನ್ನಾದರೂ ಮರೆತು, ಕೂಡಿ ಬಾಳೋಣ” ಎನ್ನುತ್ತಾ ನನ್ನಮ್ಮಳನ್ನು ಬಾಚಿ ಎದೆಗೆ ಅಪ್ಪಿಕೊಂಡ. ನನಗೆ ಪರಿಸ್ಥಿತಿ ಅರಿವಾಗಿತ್ತು. ಆಗ ಒದ್ದೆಯಾದ ನನ್ನ ಕಣ್ಣಂಚಲ್ಲಿನ ಸಂತೋಷದ ಪಾಲೆಷ್ಟಿತ್ತೋ ಅಷ್ಟೇ ಸಾಂತ್ವಾನವೂ ಅಗತ್ಯವಿತ್ತು!!
ಕಥಾ ಬರಹಗಾರರು :ಯೋಗೇಶ್ ಮಲ್ಲೂರು