ದತ್ತು ಪಡೆಯುವ ಮುನ್ನ ಒಮ್ಮೆ ಇದನ್ನು ಓದಿ….

ಅನಧಿಕೃತವಾಗಿ ಮಕ್ಕಳನ್ನು ಪಡೆದರೆ ಶಿಕ್ಷೆ ಖಚಿತ
    ಸರ್ಕಾರ ಜಾರಿಗೆ ತಂದಿರುವ ದತ್ತು ನಿಯಮಾವಳಿ ಹೊರತುಪಡಿಸಿ ಬೇರಾವುದೇ ರೀತಿಯಲ್ಲಿ ಮಕ್ಕಳನ್ನು ಸಾಕಿದರೆ ಅಥವಾ ದತ್ತು ಪಡೆಯುವ ಕ್ರಮ ಕೈಗೊಂಡರೆ ಅದು 2017ರ ದತ್ತು ನಿಯಮಾವಳಿ ಅನ್ವಯ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂಬುದು ತಜ್ಞರ ಅಭಿಮತ.
   `ಪ್ರಗತಿ ವಾಹಿನಿ’ಯಲ್ಲಿ ಆಯೋಜಿಸಿದ್ದ ದತ್ತು ಮತ್ತು ದತ್ತು ಪಡೆಯಲು ಇರುವ ನಿಯಮಾವಳಿಗಳು ಕುರಿತ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ರಾಜ್ಯ ದತ್ತು ಸಂಪನ್ಮೂಲ ಕೇಂದ್ರ ಕಾರ್ಯಕ್ರಮ ವ್ಯವಸ್ಥಾಪಕಿ ಶೈಲಜಾ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಾಸಂತಿ ಉಪ್ಪಾರ್ ಅವರು ದತ್ತು ಪ್ರಕ್ರಿಯೆಯಲ್ಲಿ ಇರುವ ನಿಯಮಾವಳಿಗಳ ಬಗ್ಗೆ ಚರ್ಚೆಯಲ್ಲಿ ವಿವರಿಸಿದರು.
     ಯಾರದೋ ಮಕ್ಕಳನ್ನು ತಂದು ಸಾಕಿಕೊಳ್ಳುವುದು, ದತ್ತು ನಿಯಮ ಅನುಸರಿಸದೆ ಬೇರೊಂದು ಪ್ರಕ್ರಿಯೆ ಮೂಲಕ ಮಕ್ಕಳು ಎಂದು ಘೋಷಿಸಿಕೊಳ್ಳುವುದು, ಆಸ್ಪತ್ರೆಗಳಲ್ಲಿ ಮಕ್ಕಳನ್ನು ತರುವುದು, ಅನಾಥ ಕುಟೀರಗಳಿಂದ ತಂದು ಸಾಕಿಕೊಳ್ಳುವುದು ಇವೆಲ್ಲವೂ ಕಾನೂನಿಗೆ ವಿರುದ್ಧವಾಗಿರುವ ನಿಯಮಗಳು. ಕಾನೂನು ಮೀರಿ ನಡೆದುಕೊಂಡರೆ ನಿಯಮಾವಳಿ ಪ್ರಕಾರ ದತ್ತು ಪಡೆದವರು ಮತ್ತು ಕೊಟ್ಟವರು ಇಬ್ಬರಿಗೂ 5 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸುವ ಅವಕಾಶವಿದೆ. 
     2015 ರ ದತ್ತು ಕಾರ್ಯಕ್ರಮ ಮಾರ್ಗಸೂಚಿ ಬದಲಾಗಿದ್ದು, ಹೊಸ ಮಾರ್ಗಸೂಚಿ ಪ್ರಕಾರ ದತ್ತು ಮಕ್ಕಳನ್ನು ಬಯಸುವ ಪೋಷಕರು ಇದಕ್ಕಾಗಿಯೇ ಇರುವ ವೆಬ್‍ಸೈಟ್ ಮೂಲಕ ಆನ್‍ಲೈನ್‍ನಲ್ಲಿಯೇ ಮಕ್ಕಳಿಗಾಗಿ ನೋಂದಾವಣಿ ಮಾಡಿಕೊಳ್ಳಬೇಕು. ಇದಕ್ಕಾಗಿ ಪಾನ್‍ಕಾರ್ಡ್ ಸೇರಿದಂತೆ ಕೆಲವು ದಾಖಲೆಗಳು ಕಡ್ಡಾಯ. ಮೊದಲು ಆನ್‍ಲೈನ್‍ನಲ್ಲಿ ರಿಜಿಸ್ಟ್ರೇಷನ್ ಮಾಡಿಕೊಂಡ ನಂತರ ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ. ಇದಕ್ಕಾಗಿ ಹೆಚ್ಚಿನ ವಿವರಗಳಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ದತ್ತು ಏಜೆನ್ಸಿಯನ್ನು ಸಂಪರ್ಕಿಸಬಹುದು. 
    ವಯಸ್ಸಿನ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ವಾಸಸ್ಥಳ ದೃಢೀಕರಣ, ಮದುವೆ ನೋಂದಣಿ ಪ್ರಮಣ ಪತ್ರ, ಭಾವಚಿತ್ರ ಇತ್ಯಾದಿ ದಾಖಲೆಗಳನ್ನು ಪರಿಶೀಲನೆಗೆ ಸಲ್ಲಿಸಬೇಕು. ಪೋಷಕರು ಹೋಂ ಸ್ಟಡಿ ರಿಪೋರ್ಟ್ ತಯಾರಿಸಲು ಸಹಕರಿಸಬೇಕು. ದಾಖಲೆಗಳನ್ನು ಅಪ್‍ಲೋಡ್ ಮಾಡಿದ ನಂತರ ಪೋಷಕರಿಗೆ ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗುತ್ತದೆ. ಒಮ್ಮೆ ನೋಂದಣಿ ಮಾಡಿಕೊಂಡ ನಂತರ ತಮ್ಮ ಮೊಬೈಲ್ ಸಂದೇಶಗಳನ್ನು ಅಥವಾ ಇ-ಮೇಲ್‍ಗಳನ್ನು ಪರಿಶೀಲಿಸುತ್ತಿರಬೇಕು. ಅಲ್ಲಿಗೆ ಮಾಹಿತಿ ಬಂದಾಗ ಪೋಷಕರು ತಮಗೆ ತೋರಿಸಲಾಗುವ ಮಕ್ಕಳಲ್ಲಿ ಒಂದು ಮಗುವನ್ನು 48 ಗಂಟೆಗಳೊಳಗೆ ಆಯ್ಕೆ ಮಾಡಿ 15 ದಿನಗಳಲ್ಲಿ ಒಪ್ಪಿಗೆ ನೀಡಬೇಕಾಗುತ್ತದೆ. ಒಂದು ವೇಳೆ ನಿರ್ಲಕ್ಷ್ಯ ಮಾಡಿದರೆ ನೋಂದಣಿಯ ಸರದಿ ಮುಕ್ತಾಯಗೊಂಡು ಮತ್ತೆ ಹೊಸದಾಗಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. 
     ಒಮ್ಮೆ ಮಗು ಆಯ್ಕೆ ಮಾಡಿಕೊಂಡ ನಂತರ ಉಳಿದ ಪ್ರಕ್ರಿಯೆಗಳು ದತ್ತು ಏಜೆನ್ಸಿ ಮತ್ತು ಮಗು ಪಡೆಯುವ ಪೋಷಕರ ನಡುವೆ ಆರಂಭವಾಗುತ್ತದೆ. ಮಗುವಿನ ಜನನ ಪ್ರಮಾಣ ಪತ್ರ, ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ದತ್ತು ಆದೇಶ ಪಡೆಯುವ ಪ್ರಕ್ರಿಯೆ ಇವೆಲ್ಲವೂ ನಡೆಯಬೇಕು. 
 
     ಅನಾಥ, ನಿರ್ಗತಿಕ, ಪರಿತೆಕ್ತ ಮಕ್ಕಳನ್ನು ಬಾಲ ಮಂದಿರದಲ್ಲಿ ಸರ್ಕಾರ ನೋಡಿಕೊಳ್ಳುತ್ತದೆ. ಸಿಕ್ಕಿದ ಮಕ್ಕಳನ್ನು ಅಥವಾ ಬಿಟ್ಟು ಹೋದ ಮಕ್ಕಳನ್ನು ಇಲ್ಲಿ ನೋಂದಣಿ ಮಾಡಲಾಗುತ್ತದೆ. ಇಲ್ಲಿರುವ ಮಕ್ಕಳನ್ನೂ ಸಹ ದತ್ತು ಪ್ರಕ್ರಿಯೆಗೆ ಒಳಪಡಿಸಲಾಗುತ್ತದೆ. ಇದಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿಯಿಂದ ದತ್ತು ಕೊಡಲು ಮಗು ಅರ್ಹವಾಗಿದೆ ಎಂಬ ಘೋಷಣೆ ಪಡೆಯಬೇಕು. ಇದಲ್ಲದೆ ಸಂಬಂಧಿಕರ ಮಗುವನ್ನು ಪರಸ್ಪರ ಒಪ್ಪಿಗೆ ಮೂಲಕ ಕಾನೂನು ಬದ್ಧವಾಗಿ ದತ್ತು ಪಡೆಯಲು ಅವಕಾಶವಿದೆ. ಈ ಪ್ರಕ್ರಿಯೆ ಸ್ವಲ್ಪ ಮಟ್ಟಿಗೆ ಸರಳವಾಗಿದೆ. 
    ಯಾರೇ ವ್ಯಕ್ತಿ ದತ್ತು ಪಡೆಯಲು ಹೋದಾಗ ನಮಗೆ ವಯಸ್ಸಾಗಿದೆ, ನಮ್ಮನ್ನು ನೋಡಿಕೊಳ್ಳಲು ಮಕ್ಕಳು ಬೇಕು ಎಂಬ ಕಾರಣ ಮುಂದಿಟ್ಟರೆ ಮಕ್ಕಳನ್ನು ದತ್ತು ಕೊಡಲಾಗುವುದಿಲ್ಲ. ಬದಲಾಗಿ ಮಕ್ಕಳಿಗಾಗಿ ಮತ್ತು ಮಕ್ಕಳ ಹಿತದೃಷ್ಟಿಯಿಂದ ಮಾತ್ರವೇ ದತ್ತು ನೀಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತದೆ. ಇದಕ್ಕಾಗಿ ವಯಸ್ಸಿನ ಮಿತಿಯನ್ನು ಹಾಕಲಾಗಿದೆ. ಮೂರು ವರ್ಷ ಒಳಗಿನ ಮಕ್ಕಳನ್ನು ದತ್ತು ಪಡೆಯಲು ದಂಪತಿಗಳ ಒಟ್ಟು ವಯಸ್ಸು 90 ವರ್ಷಗಳ ಒಳಗಿರಬೇಕು. ಇವರಲ್ಲಿ ಒಬ್ಬರ ವಯಸ್ಸು 25 ವರ್ಷದ ಒಳಗೆ ಅಥವಾ 50 ವರ್ಷ ಮೇಲ್ಪಟ್ಟು ಇರಬಾರದು. 3 ವರ್ಷದ ಮೇಲ್ಪಟ್ಟ ಮಕ್ಕಳನ್ನು ದತ್ತು ಪಡೆಯಲು ಒಟ್ಟಾರೆ ವಯಸ್ಸು 105 ವರ್ಷಗಳಿಗೆ ಮೀರಿರಬಾರದು. 
   ಕರ್ನಾಟಕ ರಾಜ್ಯದಲ್ಲಿ ಮಕ್ಕಳನ್ನು ದತ್ತು ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಈಗಾಗಲೇ 1700 ಮಂದಿ ಮಕ್ಕಳಿಗಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ವಿಶೇಷತೆ ಏನೆಂದರೆ, ಹೆಣ್ಣು ಮಕ್ಕಳು ಬೇಡ ಎಂದು ಕೆಲವರು ಮಕ್ಕಳನ್ನು ಅಲ್ಲಲ್ಲಿ ತ್ಯಜಿಸಿ ಹೋಗುವ ಉದಾಹರಣೆಗಳನ್ನು ಕಂಡರೆ ದತ್ತು ಪಡೆಯುವ ಪೋಷಕರಲ್ಲಿ ಇದಕ್ಕೆ ವಿರುದ್ಧದ ನಡವಳಿಕೆ ಕಂಡುಬರುತ್ತದೆ. ಸಾಮಾನ್ಯವಾಗಿ ದತ್ತು ಪಡೆಯುವ ಪೋಷಕರು ಹೆಣ್ಣು ಮಕ್ಕಳನ್ನೇ ಹೆಚ್ಚು ಇಷ್ಟ ಪಡುತ್ತಿದ್ದಾರೆ. 
    ದತ್ತು ಪ್ರಕ್ರಿಯೆಯ ಮಾನದಂಡಗಳು ಜನತೆಗೆ ತಿಳಿಯದೇ ಇರುವ ಕಾರಣ ಯಾರದೋ ಮಾತನ್ನು ಕೇಳಿಕೊಂಡು ಮೋಸ ಹೋಗುತ್ತಿದ್ದಾರೆ. ಆದಕಾರಣ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಅಥವಾ ದತ್ತು ಏಜೆನ್ಸಿ, ಮಕ್ಕಳ ಕಲ್ಯಾಣ ಸಮಿತಿ ಇಂತಹವರ ಸಲಹೆ ಪಡೆದು ಮುಂದಿನ ಪ್ರಕ್ರಿಯೆ ಕೈಗೊಳ್ಳುವುದು ಒಳಿತು. ಅನಧಿಕೃತವಾಗಿ ಮಕ್ಕಳನ್ನು ಸಾಕಿಕೊಂಡರೆ ಆ ಮಕ್ಕಳು ಕಾನೂನುಬದ್ಧ ಮಕ್ಕಳಾಗುವುದಿಲ್ಲ. ಹೀಗಾಗಿ ಆ ಮಕ್ಕಳಿಗೆ ವಾರಸುದಾರಿಕೆಯ ಯಾವುದೇ ಹಕ್ಕುಗಳು ಲಭ್ಯವಾಗುವುದಿಲ್ಲ.
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap