ದೊಡ್ಡಬಳ್ಳಾಪುರ:
ಕೈಗಾರಿಕಾ ಪ್ರದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜನಸಂಖ್ಯೆಯ ಇಲ್ಲಿನ ಬಾಶೆಟ್ಟಿಹಳ್ಳಿಯು ಜನಸಂಖ್ಯೆಯ ಆಧಾರದ ಮೇಲೆ ಗ್ರಾಮಪಂಚಾಯಿತಿಯಿಂದ ಮೇಲ್ದರ್ಜೆಗೇರಿ ಪಟ್ಟಣ ಪಂಚಾಯತಿ ಎಂಬ ಕೀರ್ತಿ ಪಡೆದಿದೆ. ನೂರಾರು ಕೈಗಾರಿಕೆಗಳು ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಕೂಗಳತೆ ದೂರವಿರುವ ದೊಡ್ಡಬಳ್ಳಾಪುರದಿಂದ ಲಕ್ಷಾಂತರ ಪ್ರಯಾಣಿಕರು ಸಂಚರಿಸುತ್ತಿರುತ್ತಾರೆ.
ಆದರೆ ಇಲ್ಲಿನ ಮುಖ್ಯ ಸಮಸ್ಯೆ ವಾರಕ್ಕೆ ಕನಿಷ್ಠ ಮೂರರಿಂದ ನಾಲ್ಕು ಅಪಘಾತಗಳು ಬಾಶೆಟ್ಟಿಹಳ್ಳಿ ಹಾಗೂ ಪ್ಯಾಕ್ಟರಿ ಸರ್ಕಲ್ ಭಾಗಗಳಲ್ಲಿ ನೆಡೆಯುತ್ತಿದ್ದು, ಸ್ಥಳೀಯ ಆಡಳಿತ ಇದನ್ನು ತಡೆಗಟ್ಟಲು ಸಂಪೂರ್ಣ ವಿಫಲವಾಗಿದೆ ಎಂದು ಹೇಳಬಹುದಾಗಿದೆ. ರಾಜ್ಯ ಹೆದ್ದಾರಿಯೆಂಬ ನೆಪ ಹೇಳಿಕೊಂಡು ಉಬ್ಬುದಿನ್ನೆಗಳನ್ನು ಆಳವಡಿಸದಿರುವುದೇ ಇದಕ್ಕೆಲ್ಲಾ ಕಾರಣವೆಂದು ಸ್ಥಳೀಯರು ದೂರುತ್ತಿದ್ದು ಮೀತಿ ಮೀರಿದ ವೇಗದಲ್ಲಿ ವಾಹನಗಳ ಚಾಲನೆ ಮಾಡುವ ವಾಹನಗಳ ಮಧ್ಯೆ ಸ್ಥಳೀಯ ಸಾರ್ವಜನಿಕರು ರಸ್ತೆ ದಾಟುವುದೇ ಹರಸಾಹಸ ಕಾರ್ಯವೆಂದು ಸಾಕಷ್ಟು ಸಾರ್ವಜನಿಕರು ದೂರಿದ್ದಾರೆ.
ಶಾಲಾ ಸಮಯದಲ್ಲಿ ಶಾಲಾ ಮಕ್ಕಳ ಪಾಡಂತೂ ಹೇಳತೀರದು. ರಸ್ತೆ ದಾಟುವ ಸಂದರ್ಭದಲ್ಲಿ ಮಕ್ಕಳು ಪರದಾಡುವಂತ ಪರಿಸ್ಥಿತಿ ಬಂದಿರುವುದು ವಿಪರ್ಯಾಸ. ಅದಕ್ಕಾಗಿ ಸ್ಥಳೀಯರು ಹಲವಾರು ಬಾರಿ ಕ್ಷೇತ್ರದ ಶಾಸಕರನ್ನು ಮತ್ತು ಬಾಶೆಟ್ಟಿಹಳ್ಳಿ ಪಂಚಾಯತಿ ಅಧಿಕಾರಿಗಳಿಗೆ ಮೌಖಿಕವಾಗಿ ಕೇಳಿಕೊಂಡಿದ್ದು, ಬಾಶೆಟ್ಟಿಹಳ್ಳಿ ಮತ್ತು ಪ್ಯಾಕ್ಟರಿ ಸರ್ಕಲ್ ಭಾಗಗಳಲ್ಲಿ ಹಂಪ್ಸ್(ರಸ್ತೆ ಉಬ್ಬುದಿನ್ನೆ) ಮತ್ತು ಸ್ಕೈವಾಕರ್ ನಿರ್ಮಿಸಿಕೊಡುವಂತೇ ಜನರ ಜೀವಕ್ಕಿಂತ ರಾಜ್ಯ ಹೆದ್ದಾರಿಗಳಲ್ಲಿ ಹಂಪ್ಸ್ ಹಾಕಬಾರದೆಂಬ ನಿಯಮವೇ ಮುಖ್ಯವೇ? ಎಂದು ಕೇಳುತ್ತಿದ್ದಾರೆ.
