ಬರಗೂರು :
ನವೆಂಬರ್ ತಿಂಗಳಲ್ಲಿ ಮೊದಲನೆ ಅಲೆಯ ಕೊರೊನಾಗೆ 66 ವರ್ಷದ ಬರಗೂರಿನ ಓರ್ವ ವ್ಯಕ್ತಿ ಮೃತಪಟ್ಟಿದ್ದರು. ಇದರ ಬೆನ್ನ ಹಿಂದೆಯೆ ಇದೇ ಗ್ರಾಮದ ಸುಮಾರು 65 ವರ್ಷದ ಮತ್ತೋರ್ವ ಮಹಿಳೆ ಭಾನುವಾರ ಬೆಳಗ್ಗೆ ಎರಡನೇ ಅಲೆಯ ಕೊರೊನಾಗೆ ಬಲಿಯಾಗಿದ್ದಾರೆ. ಬರಗೂರು ಗ್ರಾಮದಲ್ಲೇ ಇಬ್ಬರು ಕೊರೊನಾಗೆ ಮೃತಪಟ್ಟಿದ್ದು, ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ.
ಶಿರಾ ತಾಲ್ಲೂಕು ಬರಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಂದೀಶ್ ಹೇಳುವಂತೆ ಸೋಮವಾರ ಬೆಳಗ್ಗೆ ಮೃತಪಟ್ಟಿರುವ ಮಹಿಳೆ ಉಸಿರಾಟದ ತೊಂದರೆಯಿಂದಾಗಿ ಖಾಸಗಿ ಕ್ಲಿನಿಕ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ. ಶನಿವಾರ ಮಧ್ಯಾಹ್ನ ನಮ್ಮ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಬಂದಿದ್ದರು. ಉಸಿರಾಟದ ತೀವ್ರತೆಯಿಂದಾಗಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಲಾಗಿತ್ತು. ಸ್ವಾಬ್ ಪರೀಕ್ಷೆಯಲ್ಲಿ ಪಾಸಿಟೀವ್ ಬಂದಿದ್ದು ಮಹಿಳೆಗೆ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದರು.
ಮೃತರ ಅಂತ್ಯ ಸಂಸ್ಕಾರವನ್ನು ಆರೋಗ್ಯ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯ್ತಿ ನೇತೃತ್ವದಲ್ಲಿ ಬರಗೂರು ಗ್ರಾಮದ ಕೆರೆಯಲ್ಲಿ ಸುಮಾರು 8 ಅಡಿಗಳಷ್ಟು ಆಳಕ್ಕೆ ಜೆಸಿಬಿಯಿಂದ ನೆಲವನ್ನು ಅಗೆದು ಶವಕ್ಕೆ ಹಾಗೂ ಸಮಾಧಿಗೆ ಬ್ಲೀಚಿಂಗ್ ಪೌಡರ್ ಹಾಕಿ ಹಾಗೂ ಸ್ಯಾನಿಟೈಸಿಂಗ್ ಮಾಡಿ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಆರೋಗ್ಯ ಇಲಾಖೆಯ ಕಿರಿಯ ಆರೋಗ್ಯ ಸಹಾಯಕ ಮನುಕಿರಣ್, ಆರೋಗ್ಯ ಸಹಾಯಕಿ ಲತಾ, ಗ್ರಾಮ ಪಂಚಾಯ್ತಿ ಪಿಡಿಓ ನಾಗರಾಜಯ್ಯ, ಗ್ರಾಮ ಲೆಕ್ಕಿಗ ಮಂಜು ಜಡೇದಾ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ