ಶಿರಸಿ :
ಕಾಲೇಜಿನಲ್ಲಿ ಮೊಬೈಲ್ ಬಳಕೆ ನಿಷೇಧವಿದ್ದರೂ ಮೋಹ ಬಿಡದೆ ಕಾಲೇಜಿಗೆ ತಂದ ವಿದ್ಯಾರ್ಥಿಗಳ ಮೊಬೈಲ್‍ನ್ನು ಪ್ರಾಂಶುಪಾಲರು ಸುತ್ತಿಗೆಯಿಂದ ಹೊಡೆದು ಹಾಕಿರುವ ಘಟನೆ ಉತ್ತರ ಕನ್ನಡದ ಶಿರಸಿ ನಡೆದಿದೆ.
ಶಿರಸಿಯ ಎಂ.ಇ.ಎಸ್. ಚೈತನ್ಯ ಪದವಿ ಪೂರ್ವ ಕಾಲೇಜಿನಲ್ಲಿ ಮೊಬೈಲ್ ಫೋನ್ಗಳನ್ನು ನಿಷೇಧಿಸಲಾಗಿದೆ. ಆದರೂ ಕೆಲವು ವಿದ್ಯಾರ್ಥಿಗಳು ಕದ್ದುಮುಚ್ಚಿ ಮೊಬೈಲ್ ಫೋನ್ಗಳನ್ನು ಬಳಸುತ್ತಿದ್ದರು. ಕಾಲೇಜಿನಲ್ಲಿ ಮೊಬೈಲ್ ತಪಾಸಣೆ ನಡೆಸುವ ವೇಳೆ ಪ್ರಾಂಶುಪಾಲರಿಗೆ ಸುಮಾರು 16 ಮೊಬೈಲ್ಗಳು ಸಿಕ್ಕಿದ್ದವು. ಈ ಹಿನ್ನೆಲೆಯಲ್ಲಿ ಮೊಬೈಲ್ಗಳ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿ, ಅವರ ಮುಂದೆಯೇ ಮೊಬೈಲ್ಗಳನ್ನು ಪುಡಿ ಮಾಡಿ, ಮೊಬೈಲ್ ನಿಂದ ಆಗುವ ಪರಿಣಾಮ ಕುರಿತು ವಿವರಿಸಿದ್ದಾರೆ.
ಮೊಬೈಲ್ ಕಳೆದುಕೊಂಡ ವಿದ್ಯಾರ್ಥಿಗಳು ಮಾತ್ರ ಅನಗತ್ಯವಾಗಿ ಒಡೆದು ಹಾಕಿದ್ದಾರೆ. ವಾರ್ನಿಂಗ್ ನೀಡಬಹುದಿತ್ತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದ್ದು, ಪ್ರಾಂಶುಪಾಲರ ನಡೆಗೆ ಮೆಚ್ಚುಗೆ ವ್ಯಕ್ತವಾಗಿದೆ.
ಮೊಬೈಲ್ ಫೋನ್ಗಳ ಬಳಕೆ ಯುವಜನರಲ್ಲಿ ಹೆಚ್ಚಿದೆ. ಅದರಲ್ಲೂ ಕಾಲೇಜು ವಿದ್ಯಾರ್ಥಿಗಳ ಬಳಿ ಮೊಬೈಲ್ ಇದ್ದೇ ಇರುತ್ತದೆ. ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತದೆ ಎಂದು ಹಲವು ಶಾಲೆ ಮತ್ತು ಕಾಲೇಜುಗಳು ಮೊಬೈಲ್ ಬಳಕೆಯನ್ನು ನಿಷೇಧಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ