ಕೇಂದ್ರ ಬಜೆಟ್ ಯಾರಿಗೆಷ್ಟು ಲಾಭ : ಸಂವಾದ

 ತುಮಕೂರು :

      ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಮಂಡನೆಯಾದ 2020-21ನೇ ಸಾಲಿನ ಕೇಂದ್ರ ಬಜೆಟ್ ಕುರಿತಂತೆ ಪ್ರಜಾಪ್ರಗತಿ -ಪ್ರಗತಿ ವಾಹಿನಿಯಿಂದ ಸೋಮವಾರ ಸಂಜೆ ವಿಶೇಷ ಸಂವಾದ ಏರ್ಪಡಿಸಲಾಗಿತ್ತು.

ಸಂವಾದದಲ್ಲಿ ಹಿರಿಯ ತೆರಿಗೆ ಸಮಾಲೋಚಕರಾದ ಪ್ರಕಾಶ್, ರೈತಮೋರ್ಚಾ ರಾಜ್ಯ ಪ್ರಧಾನಕಾರ್ಯದರ್ಶಿ ಎಸ್.ಶಿವಪ್ರಸಾದ್, ಕಾಂಗ್ರೆಸ್ ವಕ್ತಾರ ಹಾಗೂ ಪಟ್ಟಣ ಸಹಕಾರ ಬ್ಯಾಂಕ್‍ಗಳ ಮಹಾಮಂಡಲದ ನಿರ್ದೇಶಕ ಟಿ.ಎಸ್.ನಿರಂಜನ್ ಹಾಗೂ ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ದೀಪಕ್ ಅವರು ಪಾಲ್ಗೊಂಡು ಬಜೆಟ್‍ನ ಸಾಧಕ-ಬಾಧಕಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

      ಹಲವು ಯೋಜನೆಗಳನ್ನು ಘೋಷಿಸಿ, ಹೊಸ ತೆರಿಗೆಗಳನ್ನು ಪರಿಚಯಿಸಿರುವ ಕುರಿತು ಆರ್ಥಿಕ, ರಾಜಕೀಯ, ಸಾಮಾಜಿಕ ದೃಷ್ಟಿಕೋನದಲ್ಲಿ ವಿಶ್ಲೇಷಿಸಿದ ಮುಖಂಡರ ಚರ್ಚೆ ಬಜೆಟ್‍ನಲ್ಲಿ ಪ್ರಸ್ತಾಪಿಸಿದ ಅಂಶಗಳಿಂದ ಬದುಕು ಹೊರೆಯಾಗುವ ಆತಂಕವನ್ನು ವ್ಯಕ್ತಪಡಿಸುವ ರಾಷ್ಟ್ರ ಆತ್ಮನಿರ್ಭರತೆಯಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

50 ಪುಟದ ಜಿಎಸ್‍ಟಿ ಸಮಸ್ಯೆಗೆ 5 ಸಾಲಿನ ಉತ್ತರ:

      ಸಂವಾದದಲ್ಲಿ ವಿಶ್ಲೇಷಿಸಿದ ಹಿರಿಯ ತೆರಿಗೆ ಸಮಾಲೋಚಕರಾದ ಪ್ರಕಾಶ್ ಅವರು ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರತೆಯನ್ನು ಪ್ರತಿಪಾದಿಸುತ್ತಾ ಬಂದ ಕೇಂದ್ರ ಸರಕಾರ ಬಜೆಟ್‍ನಲ್ಲಿ ಅದರ ಅನುಷ್ಟಾನಕ್ಕೆ ತಂದ ಕ್ರಮಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ನಿರಾಶೆ ಮೂಡಿಸುತ್ತದೆ. ಜಿಲ್ಲೆ,ರಾಜ್ಯಕ್ಕೆ ಸಂಬಂಧಿಸಿದಂತೆ ಸಂಸತ್ ಸದಸ್ಯರು ಹೇಳಿದ್ದ ಬೇಡಿಕೆಗಳು ಏನಾದವೂ ಎಂಬ ಪ್ರಶ್ನೆ ಮೂಡುತ್ತದೆ. ಇದರಾಚೆಗೆ ಆದಾಯ ತೆರಿಗೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣಕ್ಕೆ ಫೇಸ್‍ಲೆಸ್ ಪಾವತಿ, ದಂಡ ವಿಧಿಸುವಿಕೆಯನ್ನು ಜಾರಿಗೊಳಿಸಿರುವುದು ಒಳ್ಳೆಯ ಬೆಳವಣಿಗೆ. ಕೋವಿಡ್ ಸಂದರ್ಭದಲ್ಲಿ ಜಾರಿಗೆ ತಂದ ತೆರಿಗೆಗೆ ಸಂಬಂಧಿಸಿದ 9 ಮತ್ತು 9(ಸಿ) ನಮೂನೆ ಸಲ್ಲಿಕೆಯನ್ನು ಅವಶ್ಯಕವಿಲ್ಲವೆಂದು ರದ್ದು ಮಾಡಿರುವುದು ಈಗಾಗಲೇ ನಮೂನೆ ಸಲ್ಲಿಸಿ ಹಣ ಪಾವತಿಸುವವರಿಗೆ ನಷ್ಟಕ್ಕೆ ಕಾರಣವಾಗಿದೆ. 75 ವರ್ಷ ದಾಟಿದ ಹಿರಿಯ ನಾಗರಿಕರ ಪಿಂಚಣಿ ತೆರಿಗೆ ರದ್ದು ಮಾಡಿರುವುದು ಸ್ವಾಗತಾರ್ಹ. ಜಿಎಸ್‍ಟಿ ಅವ್ಯವಸ್ಥೆಗೆ ಸಂಬಂಧಿಸಿದಂತೆ 50 ಪುಟಗಳ ಸಮಸ್ಯೆಯನ್ನು ಹಣಕಾಸು ಸಚಿವರಿಗೆ ಸಲ್ಲಿಸಿದರೆ, 5 ಸಾಲುಗಳ ಬಗೆಹರಿಯದ ಉತ್ತರವನ್ನು ಬಜೆಟ್‍ನಲ್ಲಿ ಕೊಟ್ಟಿದ್ದಾರೆ. ತೆರಿಗೆದಾರರು, ತೆರಿಗೆ ಸಮಾಲೋಚಕರ ಸಮಸ್ಯೆಯ ಪರಿಹಾರದ ಕಡೆ ಹೆಚ್ಚು ಒತ್ತು ಕೊಟ್ಟಿಲ್ಲದಿರುವುದು ಕಂಡುಬರುತ್ತಿದ್ದು, ತೆರಿಗೆದಾರರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ ಎಂಬುದು ಬರೀ ಅಂಕಿ-ಅಂಶದ ಆಟವಷ್ಟೇ. ಯಾವುದೇ ಸರಕಾರವಿರಲಿ ವಾಸ್ತವತೆ ಹತ್ತಿರವಾಗಿರದ ಅಂಕಿ-ಅಂಶದ ಹೆಸರಲ್ಲಿ ಜನರ ದಿಕ್ಕುತಪ್ಪಿಸಲಾಗುತ್ತದೆ. ತೆರಿಗೆ ಲೋಪ, ಆರ್ಥಿಕ ಅಶಿಸ್ತನ್ನು ಸರಿಪಡಿಸುವಲ್ಲಿ ವ್ಯವಸ್ಥೆಯ ಲೋಪ ಎದ್ದು ಕಾಣುತ್ತಿದೆ. ಇದಕ್ಕೆ ಬರೀ ಸರಕಾರವನ್ನು ಹೊಣೆ ಮಾಡಲಾಗದು. ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷಿಸುವ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

ಒಂದು ದೇಶ, ಒಂದು ತೆರಿಗೆ ಎನ್ನುವವರು ಅನುದಾನ ಹಂಚಿಕೆಯಲ್ಲಿ ಸಮಾನತೆ ಪಾಲಿಸಿಲ್ಲವೇಕೆ?

       ಕಾಂಗ್ರೆಸ್ ಮುಖಂಡ ಹಾಗೂ ಪಟ್ಟಣ ಸಹಕಾರ ಬ್ಯಾಂಕುಗಳ ಮಹಾಮಂಡಲದ ನಿರ್ದೇಶಕ ಟಿ.ಎಸ್.ನಿರಂಜನ್ ಪ್ರತಿಕ್ರಿಯಿಸಿ ಕೇಂದ್ರ ಬಜೆಟ್ ರಾಷ್ಟ್ರದ ಜ್ವಲಂತ ಸಮಸ್ಯೆಗಳಿಗೆ ಉತ್ತರದಾಯಿತ್ವವಿಲ್ಲದ ಬೋಗಸ್ ಬಜೆಟ್ ಎಂದು ಕಟುವಾಗಿ ಖಂಡಿಸಿದರು. ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು ಹಾಗೂ ಅಸ್ಸಾಂ ವಿಧಾನಸಭೆ ಚುನಾವಣೆ ದೃಷ್ಟಿಯಲ್ಲಿರಿಸಿಕೊಂಡು ಆರಾಜ್ಯಗಳಿಗೆ ಹೆಚ್ಚಿನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಒಂದು ದೇಶ, ಒಂದು ತೆರಿಗೆ ಎನ್ನುವ ಬಿಜೆಪಿ ಸರಕಾರ ತೆರಿಗೆ ಸಂಗ್ರಹದ ಅನುದಾನ ಹಂಚಿಕೆಯಲ್ಲಿ ಮಾತ್ರ ರಾಜ್ಯಗಳಿಗೆ ತಾರತಮ್ಯ ಮಾಡಿದ್ದಾರೆ. ಇದಕ್ಕೇನಾ ಕರ್ನಾಟಕದಿಂದ 25 ಬಿಜೆಪಿ ಜನ ಸಂಸದರನ್ನು ಆರಿಸಿ ಕಳುಹಿಸಿದ್ದು ಎಂದು ಪ್ರಶ್ನಿಸಿ, ಈ ದೇಶದ ಆರ್ಥಿಕತೆ ಉತ್ತಮಪಡಿಸಲು ನೆಹರು, ಇಂದಿರಾ ಅವರ ಕೊಡುಗೆಯನ್ನು ಬಿಜೆಪಿ ಸಂಘಪರಿವಾರದವರು ಮೊದಲು ಅರಿಯಬೇಕಿದೆ. ತೈಲ ಬೆಲೆ ಗಗನಕ್ಕೇರಿದೆ. ಅಗತ್ಯ ಎಣ್ಣೆಕಾಳುಗಳು, ಧಾನ್ಯಗಳು ದುಬಾರಿಯಾಗುತ್ತಿದ್ದು, ಕೃಷಿಕರ ಸಮಸ್ಯೆಗಳಿಗೆ ಸ್ಪಂದನೆಯಿಲ್ಲ. ಜಿಎಸ್‍ಟಿ ತೆರಿಗೆ ಸ್ಲ್ಯಾಬ್‍ಗಳು ಶೇ.12, 15, 18.., ಹೀಗೆ ಜನಸಾಮಾನ್ಯರನ್ನು ಹೊರೆಯಾಗಿಸುವಂತಹುದಾಗಿದೆ. ಜಿಲ್ಲೆ,ರಾಜ್ಯಕ್ಕೆ ಮಹತ್ವದ ಕೊಡುಗೆಗಳನ್ನು ಬಜೆಟ್ ನೀಡಲ್ಲ. ಇದೊಂದು ಜನವಿರೋಧಿ ಬಜೆಟ್ ಎಂದು ಟೀಕಿಸಿದರು.

ಸಮಗ್ರ ಅಭಿವೃದ್ಧಿಯ ದೂರದೃಷ್ಟಿಯ ಬಜೆಟ್

      ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಶಿವಪ್ರಸಾದ್ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಘೋಷಿಸಿದ ಆತ್ಮನಿರ್ಭರತೆಯ ಪ್ಯಾಕೇಜ್‍ಗಳ ಮುಂದುವರಿದ ಭಾಗವಾಗಿ ಕೃಷಿ, ಆರೋಗ್ಯ, ಶಿಕ್ಷಣ, ಕೈಗಾರಿಕೆ. ಮೂಲಸೌಕರ್ಯ, ಸಂಶೋಧನೆ, ಕೌಶಲ್ಯಾಭಿವೃದ್ಧಿ ಹೀಗೆ ಎಲ್ಲಾ ವಲಯಗಳಿಗೆ ಆದ್ಯತೆ ಕೊಟ್ಟು ಸಮಗ್ರ ಅಭಿವೃದ್ಧಿ ದೃಷ್ಟಿಕೋನದ ಬಜೆಟ್ ಅನ್ನು ಕೇಂದ್ರ ಸರಕಾರ ನೀಡಿದೆ.

     ಪೊಳ್ಳು ಭರವಸೆಗಳ ಮೂಲಕ, 60 ವರ್ಷಗಳ ಕಾಲ ಜನಸಾಮಾನ್ಯರನ್ನು ಯಾಮಾರಿಸಿಕೊಂಡು ಬಂದಿದ್ದ ಕಾಂಗ್ರೆಸ್‍ನವರು ವಿಪಕ್ಷಗಳು ಭ್ರಮ ನಿರಸನಗೊಂಡು ಬಜೆಟ್‍ಅನ್ನು ಟೀಕಿಸುತ್ತಿದ್ದು, ಕ್ಯೋಟ್ಯಾಂತರ ಜನ ರೈತರಿಗೆ ಅನುಕೂಲವಾಗುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಮುಂದುವರಿಸಿದರುವುದು, ರಸಗೊಬ್ಬರಕ್ಕೆ ಹಾಹಾಕಾರ ತಪ್ಪಿಸಿರುವುದು ಆಯುಷ್ಮಾನ್‍ಭಾರತ್ ಯೋಜನೆ ಮೂಲಕ 1 ಕೋಟಿ 20 ಲಕ್ಷ ಬಡ ಫಲಾನುಭವಿಗಳಿಗೆ ಆರೋಗ್ಯ ರಕ್ಷಣೆ ಕಲ್ಪಿಸಿರುವುದೆಲ್ಲ ಬಿಜೆಪಿ ಸರಕಾರದ ಕೊಡುಗೆಗಳಲ್ಲಿವೆ.

      ಪ್ರಸಕ್ತ ಬಜೆಟ್‍ನಲ್ಲಿ ಈ ಸೌಲಭ್ಯಗಳನ್ನು ಒಳಗೊಂಡಂತೆ ರೈತರಿಗೆ ಸಾಲಸೌಲಭ್ಯ ನೀಡಲು ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಅನುದಾನ, ಎಪಿಎಂಸಿಗಳಿಗೆ ಮೂಲಸೌಕರ್ಯ, ರಾಷ್ಟ್ರದ ರಕ್ಷಣೆ, ಕುಡಿಯುವ ನೀರಿನ ಸೌಲಭ್ಯದ ಯೋಜನೆಗಳನ್ನು ಪ್ರಕಟಿಸಿದ್ದು, ಕೃಷಿ ಮೂಲ ಸೌಕರ್ಯ ಸೆಸ್ ಹಾಕುವ ಮೂಲಕ ಕೃಷಿ ರಂಗದಲ್ಲಿ ಮತ್ತಷ್ಟು ಸೌಲಭ್ಯ ಒದಗಿಸಲು ಯೋಜನೆ ರೂಪಿಸಲಾಗಿದೆ. ಕೋವಿಡ್‍ನಿಂದ ಕಂಗೆಟ್ಟ ದೇಶದ ಜನರ ಆರೋಗ್ಯ ಸುರಕ್ಷತೆಗಾಗಿ ಲಸಿಕೆ ಹಾಕಲು ಅನುದಾನ, 2014 ರಿಂದ ಇಲ್ಲಿಯವರೆಗೆ ಗೋಧಿ, ಭತ್ತ,ರಾಗಿ, ಎಣ್ಣೆಕಾಳುಗಳು, ಬೆಳೆಗಳ ಬೆಂಬಲ ಬೆಲೆಯಲ್ಲಿ ಶೇ.50 ರಿಂದ 70ರವರೆಗೆ ಹೆಚ್ಚಳ ಮಾಡಲಾಗಿದ್ದು, ಖರೀದಿ ಪ್ರಕ್ರಿಯೆಯಲ್ಲೂ ದಾಖಲೆ ಬರೆಯಲಾಗಿದೆ. ದೇಶವನ್ನು ಆತ್ಮನಿರ್ಭರ ಭಾರತವಾಗಿಸುವ ಮಹತ್ ಸಂಕಲ್ಪ ಬಜೆಟ್‍ನಲ್ಲಿ ವ್ಯಕ್ತವಾಗಿದೆ ಎಂದರು.

ಕೃಷಿಕರಿಗೆ ಹತ್ತು ಹಲವು ಪ್ರಯೋಜನ: ಎಸ್.ಶಿವಪ್ರಸಾದ್

     ಬಜೆಟ್‍ನಲ್ಲಿ ಸಂಶೋಧನೆಗೆ 50 ಸಾವಿರ ಕೋಟಿ, ಮೂಲಸೌಕರ್ಯ ನಿರ್ಮಾಣಕ್ಕೆ ಅನುದಾನ, ಕೃಷಿಕರಿಗೆ ಅನುಕೂಲವಾಗುವಂತಹ ಬೆಂಬಲ ಬೆಲೆ ಘೋಷಣೆ, ರೈತರ ಉತ್ಪನ್ನಗಳ ಖರೀದಿ ಖಾತ್ರಿ, ಆರೋಗ್ಯ ಕ್ಷೇತ್ರದ ಸುಧಾರಣೆ, ಮೆಟ್ರೊ ವಿಸ್ತರಣೆ, ಹೆದ್ದಾರಿಗಳ ಅಭಿವೃದ್ಧಿ.., ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಅಭಿವೃದ್ಧಿಯ ದಾಪುಗಾಲಿಡುವಯೋಜನೆಗಳನ್ನು ಪ್ರಕಟಿಸಲಾಗಿದೆ. ಬರೀ ಘೋಷಣೆಗೆ ಸೀಮಿತವಾಗಿದ್ದ ವಿಪಕ್ಷಗಳು ಮತದಾರರಿಂದ ಚುನಾವಣೆಯಲ್ಲಿ ಬಹಿಷ್ಕøತಗೊಂಡು, ಅಭಿವೃದ್ಧಿಯೋಜನೆಗಳನ್ನು, ಬಜೆಟ್‍ಅನ್ನು ಟೀಕಿಸುವುದನ್ನೇ ಪರಿಪಾಠ ಮಾಡಿಕೊಂಡಿವೆ ಎಂದು ಎಸ್.ಶಿವಪ್ರಸಾದ್ ತಿರುಗೇಟು ನೀಡಿದರು.

ಗ್ರಾಹಕ ನ್ಯಾಯಲಯದ ದೂರುಗಳನ್ನು ಒಮ್ಮೆ ಪರಿಶೀಲಿಸಲಿ : ಟಿ.ಎಸ್.ನಿರಂಜನ್

      ಕನಿಷ್ಠ ಬೆಂಬಲ ಬೆಲೆ ಭರವಸೆ ನೀಡಿರುವ ಕೇಂದ್ರ ಸರಕಾರ ತಾವೇ ಪ್ರಣಾಳಿಕೆಯಲ್ಲಿ ಘೋಷಿಸಿದ ಸ್ವಾಮಿನಾಥನ್ ವರದಿ ಜಾರಿಗೆ ಏಕೆ ತಯಾರಿಲ್ಲ ಎಂದು ಪ್ರಶ್ನಿಸಿದ ನಿರಂಜನ್ ಅವರು ಸಾಮಾಜಿಕ ನ್ಯಾಯದ ಪರಿಕಲ್ಪನೆಯೇ ಇಲ್ಲದೆ ವಿಮಾ ಕಂಪನಿಗಳನ್ನು ಖಾಸಗೀಕರಣP ಮಾಡಲು ಹೊರಟಿರುವುದು ಬೆಳೆವಿಮೆ ನೆಚ್ಚಿಕೊಂಡ ರೈತರನ್ನು ಬೀದಿಪಾಲು ಮಾಡಿದಂತೆ. ಬಿಜೆಪಿ ಗೆಳೆಯರು ಒಮ್ಮೆ ಗ್ರಾಹಕ ನ್ಯಾಯಾಲಯಗಳಲ್ಲಿ ರೈತರು ಖಾಸಗಿ ವಿಮಾ ಕಂಪನಿಗಳ ವಿರುದ್ಧ ಕೊಟ್ಟಿರುವ ಸಾವಿರಾರು ದೂರುಗಳನ್ನು ಒಮ್ಮೆ ಪರಿಶೀಲಿಸಿ ನಂತರ ವಿಮೆ ಖಾಸಗೀಕರಣವನ್ನು ಸಮರ್ಥಿಸಿಕೊಳ್ಳಲಿ ಎಂದು ಟಿ.ಎಸ್.ನಿರಂಜನ್ ಸವಾಲೆಸೆದರು.

ಅನುಕೂಲ-ಅನಾನುಕೂಲ ಎರಡೂ ಇದೆ: ಟಿ.ಜೆ.ಗಿರೀಶ್

      ತುಮಕೂರು ಜಿಲ್ಲಾ ಛೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಟಿ.ಜೆ.ಗಿರೀಶ್ ಸಂವಾದದಲ್ಲಿ ಪ್ರತಿಕ್ರಿಯಿಸಿ ಕೇಂದ್ರ ಬಜೆಟ್‍ನಲ್ಲಿ ಅನುಕೂಲ-ಅನಾನೂಕೂಲ ಎರಡೂ ಇದೆ. ಕರ್ನಾಟಕ, ತುಮಕೂರು ಜಿಲ್ಲೆಗೆ ಸಂಬಂಧಿಸಿದಂತೆ ವಸಂತಾ ನರಸಾಪುರದಲ್ಲಿ ವಿಮಾನನಿಲ್ದಾಣ ಇರಬಹುದು, ಕೈಗಾರಿಕೆಗಳ ಮೂಲಸೌಕರ್ಯಕ್ಕೆ ಸಂಬಂದಿಸಿದಂತೆ ಯಾವುದೇ ಪ್ರಸ್ತಾಪವಿಲ್ಲ.

     ವಾಹನಗಳ ಬಳಕೆಗೆ 15 ವರ್ಷ 20 ವರ್ಷ ಮಿತಿ ಹೇರಿರುವುದು ಆಟೊ ಮೊಬೈಲ್ ಕ್ಷೇತ್ರಗಳ ಬಿಡಿಭಾಗಗಳ ಕೈಗಾರಿಕೆಗಳಿಗೆ ದೊಡ್ಡ ಹೊಡೆತ ನೀಡಿದೆ. ಇದರ ಹೊರತಾಗಿ ಕ್ಯಾಶ್‍ಲೆಸ್ ಮಾಡುವ ವ್ಯಾಪಾರಸ್ಥರಿಗೆ ತೆರಿಗೆ ವಿನಾಯಿತಿಯನ್ನು 5 ಲಕ್ಷದಿಂದ 10 ಲಕ್ಷಕ್ಕೆ ಏರಿಸಿರುವುದು, ಹಿರಿಯ ನಾಗರಿಕರ ಪಿಂಚಣಿ ಮೊತ್ತಕ್ಕೆ ತೆರಿಗೆ ರದ್ದುಮಾಡಿರುವುದು ಸ್ವಾಗತಾರ್ಹ ಸಂಗತಿ. ಉತ್ಪಾದನ ವಲಯದ ಮೇಲೆ ಕೃಷಿ ಮೂಲಸೌಕರ್ಯದ ಸೆಸ್ ಹಾಕಿರುವುದು ಎಷ್ಟು ಹೊರೆಯಾಗುತ್ತದೆ ಎಂಬುದು ಮುಂದಿನ ದಿನದಲ್ಲಿ ಕಾದು ನೋಡಬೇಕಿದೆ. ಸ್ಮಾರ್ಟ್‍ಸಿಟಿ,ಅಮೃತ್ ಸಿಟಿ ಯೋಜನೆಯಡಿ ನಗರ -ಪಟ್ಟಣ ಪ್ರದೇಶಗಳ ಅಭಿವೃದ್ಧಿ ಕೈಗೊಂಡಿರುವುದು ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಒಳ್ಳೆಯ ಬೆಳವಣಿಗೆ ಎಂದರು.

ಆರ್ಥಿಕ ದುರ್ಬಲ ವರ್ಗದವರ ಸಾಲ ನೀಡಿಕೆಗೆ ಉತ್ತೇಜನ: ದೀಪಕ್

      ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ದೀಪಕ್ ಸಂವಾದದಲ್ಲಿ ಪ್ರತಿಕ್ರಿಯಿಸಿ ಆರ್ಥಿಕ ದುರ್ಬಲವರ್ಗದವರಿಗೆ ಸಾಲ ನೀಡಿಕೆಗೆ ಉತ್ತೇಜಿಸಲು ದುಡಿಮೆಯ ಮೂಲ ಬಂಡವಾಳವನ್ನು ಶೇ.25ರಷ್ಟಿಂದ ಶೇ.15ಕ್ಕೆ ಬಜೆಟ್‍ನಲ್ಲಿ ಇಳಿಸಲಾಗಿದೆ. ವಿಶೇಷವಾಗಿ ರೈತಾಪಿ ವರ್ಗಗಳಿಗೆ ಖಾಸಗಿ ಬ್ಯಾಂಕ್‍ಗಳಲ್ಲಿ ಸಾಲ ಪಡೆಯುವುದು ಕಷ್ಟ, ಅಧಿಕ ಬಡ್ಡಿಯಾಗಿರುವ ಸಂದರ್ಭದಲ್ಲಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿ ಕೃಷಿ ಸಾಲ ನೀಡಲು ಹೆಚ್ಚಿನ ಅನುದಾನ ಒದಗಿಸಲಾಗಿದೆ. ಕೌಶಲ್ಯ ತರಬೇತಿ, ಸಂಶೋಧನೆಗೆ ಹೆಚ್ಚಿನ ಒತ್ತು ನೀಡಿರುವುದು ಯುವ ಜನರ ಪ್ರಗತಿಗೆ ಪೂರಕವಾಗಿದೆ. ಸಾರ್ವಜನಿಕ ಸ್ವಾಮ್ಯದ ಉದ್ದಿಮೆಗಳನ್ನು ಸರಕಾರದಲ್ಲೆ ಉಳಿಸಿಕೊಳ್ಳಬೇಕೆನ್ನುವುದು ವೈಯಕ್ತಿಕ ಅನಿಸಿಕೆಯಾಗಿದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap