ಬೆಂಗಳೂರು
ಹೊಂಬಾಳೆ ಪ್ರೊಡಕ್ಷನ್ಸ್ ಸಂಸ್ಥೆಯಡಿಯಲ್ಲಿ ವಿಜಯ್ ಕಿರಗಂದೂರು ನಿರ್ಮಾಣ ಮಾಡಿರೋ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಚಿತ್ರ ಕೆಜಿಎಫ್. ಕನ್ನಡ, ಹಿಂದಿ ತೆಲುಗು, ಮಲಯಾಳಂ ಮತ್ತು ತಮಿಳಿನಲ್ಲಿ ಏಕಕಾಲಕ್ಕೆ ತಯಾರಾಗಿರುವ ಈ ಬಹುಕೋಟಿ ವೆಚ್ಚದ ಚಿತ್ರದ ಬಗ್ಗೆ ದೇಶಾದ್ಯಂತ ಕುತೂಹಲ ಮೂಡಿಕೊಂಡಿದೆ. ಬಾಲಿವುಡ್ ಚಿತ್ರಗಳನ್ನೇ ಹಿಂದಿಕ್ಕಿ ಕ್ರೇಜ್ ಹುಟ್ಟು ಹಾಕಿರೋ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇದೇ ತಿಂಗಳ 9ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರ್ಯಕ್ರಮ ಕನ್ನಡ ಚಿತ್ರರಂಗದ ಇತಿಹಾಸದಲ್ಲಿಯೇ ದಾಖಲೆಯಾಗಿ ಮೂಡಿಬರುವಂತಾಗಲು ಹೊಂಬಾಳೆ ಸಂಸ್ಥೆ ಅಣಿಗೊಂಡಿದೆ.
ಸಾಮಾನ್ಯವಾಗಿ ಬಹು ನಿರೀಕ್ಷೆ ಮೂಡಿಸಿದ ಬೇರೆ ಭಾಷೆಗಳ ಚಿತ್ರದ ಪ್ರಚಾರಕ್ಕೆ ಕನ್ನಡದ ಮಾಧ್ಯಮಗಳನ್ನೂ ಆಹ್ವಾನಿಸೋದು ಇದುವರೆಗೂ ನಡೆದುಕೊಂಡು ಬಂದಿರುವ ರೂಢಿ. ಆದರೆ ಕೆಜಿಎಫ್ ಚಿತ್ರದ ಈ ಸಮಾರಂಭಕ್ಕೆ ಮುಂಬೈ, ಕೇರಳ, ಅಂಧ್ರ ಮತ್ತು ತಮಿಳುನಾಡು ಸೇರಿದಂತೆ ಭಾರತದ ಎಲ್ಲ ರಾಜ್ಯಗಳ ಮಾಧ್ಯಮದವರನ್ನೇ ಬರುವಂತೆ ಮಾಡಿರೋದು ಹೊಂಬಾಳೆ ಸಂಸ್ಥೆಯ ನಿಜವಾದ ಹೆಗ್ಗಳಿಕೆ. ಇದು ಇಡೀ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಕನ್ನಡ ಚಿತ್ರರಂಗದ ಘನತೆಯನ್ನು ಉತ್ತುಂಗಕ್ಕೇರಿಸುವ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಮೂಲಕ ಇಡೀ ಭಾರತೀಯ ಚಿತ್ರರಂಗವೇ ಕನ್ನಡದತ್ತ ಕಣ್ಣರಳಿಸಿ ನೋಡುವಂಥಾ ಕೆಲಸ ಹೊಂಬಾಳೆ ಪ್ರೊಡಕ್ಷನ್ ಸಂಸ್ಥೆಯ ಕಡೆಯಿಂದ ನಡೆದಿದೆ. ಕನ್ನಡದಲ್ಲಿ ಸಾಲು ಸಾಲಾಗಿ ಹಿಟ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಲೇ ವಿತರಣೆಯನ್ನೂ ಮಾಡುತ್ತಾ ಬಂದಿರುವ ಸಂಸ್ಥೆ ಹೊಂಬಾಳೆ. ಕನ್ನಡ ಚಿತ್ರರಂಗದ ಏಳಿಗೆಯ ದೃಷ್ಟಿಯಿಂದಲೇ ಕಾರ್ಯ ನಿರ್ವಹಿಸುತ್ತಾ ಬಂದಿರುವ ಈ ಸಂಸ್ಥೆ ಇದೀಗ ತನ್ನ ವ್ಯವಹಾರ, ಕಾರ್ಯ ವ್ಯಾಪ್ತಿಗಳನ್ನು ವಿಸ್ತಾರವಾಗಿಸಿಕೊಂಡಿದೆ. ಪ್ರತಿಭಾವಂತ ಯುವ ನಿರ್ದೇಶಕರು ಸೇರಿದಂತೆ ಎಲ್ಲರಿಗೂ ಅವಕಾಶ ಕೊಡುತ್ತಾ, ಹಿಟ್ ಚಿತ್ರಗಳನ್ನು ನೀಡುತ್ತಾ ಬಂದಿರೋ ಈ ಸಂಸ್ಥೆ ಕೆಜಿಎಫ್ ಚಿತ್ರದ ಮೂಲಕ ಭಾರತೀಯ ಚಿತ್ರರಂಗದಲ್ಲಿಯೂ ತನ್ನ ಛಾಪು ಮೂಡಿಸಿಕೊಂಡಿದೆ.
ಈವತ್ತಿಗೆ ಯಶ್ ಅಭಿನಯದ ಕೆಜಿಎಫ್ ಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿದೆಯೆಂದರೆ ಅದರ ಹಿಂದೆ ಹೊಂಬಾಳೆ ಎಂಬ ಶಕ್ತಿ ಇದೆ. ವೈಯಕ್ತಿಕ ಗೆಲುವು, ಲಾಭಗಳಾಚೆಗೆ ಭಾರತೀಯ ಚಿತ್ರರಂಗಕ್ಕೆ ಕನ್ನಡ ಚಿತ್ರರಂಗದ ಘನತೆಯನ್ನು ಪರಿಚಯ ಮಾಡಿಕೊಡಬೇಕೆಂಬ ಮಹದಾಸೆ ಹೊಂಬಾಳೆ ಸಂಸ್ಥೆಯದ್ದು. ಅದು ಕೆಜಿಎಫ್ ಚಿತ್ರದ ಮೂಲಕ ಸಾಕಾರಗೊಂಡಿದೆ.
ಹೊಂಬಾಳೆ ಫಿಲ್ಮ್ಸ್ ಲಾಂಛನದಲ್ಲಿ ನಿರ್ಮಾಪಕ ವಿಜಯ್ ಕಿರಗಂದೂರ್ ನಿರ್ಮಿಸಿರುವ ಕೆ.ಜಿ.ಎಫ್. ಚಿತ್ರವನ್ನು ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ, ಛಾಯಾಗ್ರಹಣ ಭುವನ ಗೌಡ, ಸಂಗೀತ ರವಿ ಬಸ್ರೂರು, ಸಂಕಲನ ಶ್ರೀಕಾಂತ್, ಕಲಾ ನಿರ್ದೇಶನ, ಶಿವಕುಮಾರ್ ಸಾಹಸ ವಿಜಯ್, ರಾಜನ್ ಧ್ವನಿಗ್ರಹಣ, ಆನಂದ್ ಸೌಂಡ್ ಡಿಸೈನ್ ಮಾಡಿರುವ ಈ ಚಿತ್ರಕ್ಕೆ ಅನ್ಬು ಅರಿವು, ವಿಕ್ರಂ ಕಾರ್ಯಕಾರಿ ನಿರ್ಮಾಪಕರು. ಕಾರ್ತಿಕ್ ಗೌಡ, ರಾಮರಾವ್, ನಿರ್ಮಾಣ ನಿರ್ವಹಣೆ ಕೆ ಎಸ್ ಚಂಪಕಧಾಮ, ಎಸ್ ಕುಮಾರ್, ಕೀರ್ತನ್, ತಿಮ್ಮೇಗೌಡ, ಅಭಿಶೇಕ್ ಸಹ ನಿರ್ದೇಶನವಿರುವ ಈ ಚಿತ್ರಕ್ಕೆ ಸುಧೀಂದ್ರ ವೆಂಕಟೇಶ್ ಮಾಧ್ಯಮ ಪ್ರಚಾರಕರ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರಾಕಿಂಗ್ ಸ್ಟಾರ್ ಯಶ್, ಶ್ರೀನಿಧಿ ಶೆಟ್ಟಿ, ಅನಂತ್ ನಾಗ್, ಮಾಳವಿಕಾ, ನಾಗಾಭರಣ ,ಬಿ ಸುರೇಶ್, ಅಯ್ಯಪ್ಪ, ನೀನಾಸಂ ಅಶ್ವಥ್, ಅಚ್ಯುತ್ ಕುಮಾರ್, ರಾಮ್, ಅವಿನಾಶ್, ಲಕ್ಕಿ, ಹರೀಶ್ ರಾಯ್, ದಿನೇಶ್ ಮಂಗಳೂರ್, ಮುನಿ ಸೇರಿದಂತೆ ಇನ್ನೂ ಹಲವರ ತಾರಾಗಣ ಕೆ.ಜಿ.ಎಫ್. ಚಿತ್ರಕ್ಕಿದೆ.