ಗುವಾಹತಿ:
ಅಸ್ಸಾಮ್ನಲ್ಲಿ ಕಳ್ಳಬಟ್ಟಿ ಕುಡಿದು 66 ಜನರು ಸಾವನ್ನಪ್ಪಿದ್ದಾರೆ. ಇನ್ನೂ 20ಕ್ಕೂ ಹೆಚ್ಚು ಜನರು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಸ್ಸಾಮ್ನ ಗೋಲಾಘಟ್ನಲ್ಲಿ 39 ಜನರು, ಜೋರತ್ ಜಿಲ್ಲೆಯಲ್ಲಿ 8 ಮಂದಿ ಹಾಗೂ ಇತರೆಡೆ 19 ಜನರು ಕಳ್ಳಬಟ್ಟಿಯಿಂದ ಸಾವನ್ನಪ್ಪಿರುವ ಮಾಹಿತಿ ತಿಳಿದುಬಂದಿದೆ.
ಗೋಲಾಘಟ್ ಜಿಲ್ಲೆಯಲ್ಲಿರುವ ಹಲ್ಮೀರಾ ಟೀ ಗಾರ್ಡನ್ ಪ್ರದೇಶದಲ್ಲಿ ಮಾರಾಟವಾದ ಕಳ್ಳಬಟ್ಟಿಯಿಂದ ಈ ದುರಂತ ಸಂಭವಿಸಿರುವುದು ತಿಳಿದುಬಂದಿದೆ. ಸಾವನ್ನಪ್ಪಿದವರು ಹಾಗೂ ಅಸ್ವಸ್ಥಗೊಂಡವರೆಲ್ಲರೂ ಇದೇ ಟೀ ಗಾರ್ಡನ್ ಕಾರ್ಮಿಕರೇ ಆಗಿದ್ಧಾರೆ. ಅನೇಕ ಜನರನ್ನು ಪಕ್ಕದ ಜೋರತ್ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಅಕ್ರಮ ಮದ್ಯವನ್ನು ನಿಷೇಧಿಸುವುದಾಗಿ ಹೇಳುವ ಸರಕಾರವೇ ಕಳ್ಳಬಟ್ಟಿಗೆ ಪ್ರೋತ್ಸಾಹ ಕೊಡುತ್ತಿದೆ. ಅಬಕಾರಿ ಅಧಿಕಾರಿಗಳು ಕಳ್ಳಬಟ್ಟಿ ಪೂರೈಕೆಯ ಹಿಂದಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಈ ದುರಂತಕ್ಕೆ ಸರಕಾರವೇ ಕಾರಣ ಎಂದು ಸ್ಥಳೀಯರು ದೂಷಿಸಿದ್ದಾರೆ
ಅಸ್ಸಾಮ್ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಈ ದುರಂತದ ತನಿಖೆಗೆ ಆದೇಶಿಸಿದ್ದಾರೆ. ಅಬಕಾರಿ ಇಲಾಖೆಯು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಇಲಾಖಾ ತನಿಖೆ ನಡೆಸಲು ಸೂಚಿಸಿದೆ ಎಂದು ತಿಳಿದುಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ