ಅಗ್ನಿಪತ್ ಯೋಜನೆ ವಿರೋಧಿಸಿ 27ರಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ: ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ

ಬೆಂಗಳೂರು: ಭಾರತೀಯ ಯೋಧರನ್ನು ಗುತ್ತಿಗೆ ಕಾರ್ಮಿಕರನ್ನಾಗಿ ಮಾಡಲು ಹೊರಟಿರುವ ಕೇಂದ್ರ ಸರ್ಕಾರದ ಅಗ್ನಿಪತ್ ಯೋಜನೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇದೇ ತಿಂಗಳು 27ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1 ಗಂಟೆವರೆಗೂ ರಾಜ್ಯಾದ್ಯಂತ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಆಯಾ ಶಾಸಕರು, ಪರಾಜಿತ ಅಭ್ಯರ್ಥಿಗಳು, ಸಂಸದರು, ಇತರೆ ನಾಯಕರ ನೇತೃತ್ವದಲ್ಲಿ ಶಾಂತಿಯುತ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾ ರೆಡ್ಡಿ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದರು, ಮೋದಿ ಅವರು ಅಧಿಕಾರಕ್ಕೆ ಬರುವ ಮುನ್ನ ಬಣ್ಣ ಬಣ್ಣದ ಮಾತುಗಳ ಮೂಲಕ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೇವೆ ಎಂದಿದ್ದರು. ಕಳೆದ 8 ವರ್ಷಗಳಲ್ಲಿ 16 ಕೋಟಿ ಉದ್ಯೋಗ ನೀಡಬೇಕಿತ್ತು. ಆದರೆ ನೀಡಲಿಲ್ಲ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲೇ 60 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ಭರ್ತಿ ಮಾಡುತ್ತಿಲ್ಲ. ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾಗಿರುವ ಹಿನ್ನೆಲೆ ಈಗ 10 ಲಕ್ಷ ಉದ್ಯೋಗ ಭರ್ತಿ ಮಾಡುವುದಾಗಿ ಹೇಳಿದ್ದಾರೆ.

ಬಿಜೆಪಿ ದೇಶ ಹಾಳು ಮಾಡುತ್ತಿದೆ : ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಈ ದೇಶವನ್ನು ಹಂತ ಹಂತವಾಗಿ ನಾಶ ಮಾಡಲು ಹೊರಟಿದೆ. ನೋಟು ರದ್ದತಿ, ಅವೈಜ್ಞಾನಿಕ ಜಿ ಎಸ್ ಟಿ, ತರಾತುರಿ ಲಾಕ್ ಡೌನ್ ಮೂಲಕ ದೇಶದ ಆರ್ಥಿಕತೆಗೆ ಹಾನಿ. ಕರಾಳ ಕೃಷಿ ಕಾಯ್ದೆ ತಂದು ರೈತರ ಭವಿಷ್ಯ ನಾಶ ಮಾಡಲು ಮುಂದಾದರು. ನಂತರ ವ್ಯಾಪಕ ವಿರೋಧದಿಂದ ಹಿಂಪಡೆದರು. ಇನ್ನು ದೇಶದಲ್ಲಿ ಕೋಮುದ್ವೇಷ ಹಚ್ಚಿಸಿ ದೇಶದ ಐಕ್ಯತೆ ನಾಶ ಮಾಡಿದರೆ, ಅಧಿಕಾರ, ಸಂವಿಧಾನ ಸಂಸ್ಥೆಗಳ ದುರ್ಬಳಕೆ ಯಿಂದ ಪ್ರಜಾಪ್ರಭುತ್ವ ವ್ಯವಸ್ಥೆ ನಾಶ ಮಾಡಿದ್ದಾರೆ. ಈಗ ಆಗ್ನಿಪತ್ ಯೋಜನೆ ಹೆಸರಲ್ಲಿ ದೇಶದ ಭದ್ರತೆ ನಾಶ ಮಾಡಲು ಹೊರಟಿದ್ದಾರೆ.

ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದರು. ಆದರೆ ಬಿಜೆಪಿ ರೈತರು ಹಾಗೂ ಯೋಧರನ್ನು ಫುಟ್ಬಾಲ್ ಆಟವಾಡುತ್ತಿದ್ದಾರೆ. ದೇಶ ಕಾಯುವ ಯೋಧರನ್ನು ಗುತ್ತಿಗೆ ಕಾರ್ಮಿಕರಂತೆ ಮಾಡುತ್ತಿದ್ದಾರೆ. ಆಮೂಲಕ ಭವಿಷ್ಯದ ಜತೆ ಆಟವಾಡುತ್ತಿರುವುದು ದುರಂತ. ಇವರು 23 ವರ್ಷದ ನಂತರ ಏನು ಮಾಡಬೇಕು?

ಈ ವಿಚಾರವಾಗಿ ವ್ಯಾಪಕ ಟೀಕೆ ವ್ಯಕ್ತವಾದ ನಂತರ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ ಅವರು ಅಗ್ನಿವೀರರನ್ನು ಬಿಜೆಪಿ ಕಚೇರಿಯಲ್ಲಿ ಗಾರ್ಡ್ ಕೆಲಸ ಕೊಡುವುದಾಗಿ ಹೇಳಿದ್ದಾರೆ. ಇದು ದೇಶದ ಸೈನಿಕರ ಕುರಿತು ಬಿಜೆಪಿ ನಾಯಕರ ಮನಸ್ಥಿತಿಗೆ ಸಾಕ್ಷಿ. ಬಿಜೆಪಿಯ ನಾಯಕರ ಮಕ್ಕಳು ಅಗ್ನಿವೀರರಾಗಿ ಬಿಜೆಪಿ ಕಚೇರಿಯ ಗಾರ್ಡ್ ಆಗುತ್ತಾರಾ? ಬಿಜೆಪಿಯವರು ಕಂಡವರ ಮಕ್ಕಳನ್ನು ಬಾವಿಗೆ ಇಳಿಸಿ ಆಳ ನೋಡುವ ಕೆಲಸ ಮಾಡುತ್ತಿದ್ದಾರೆ.

ಈ ಯೋಜನೆಯಲ್ಲಿ ಸೇನೆ ಸೇವಾ ಅವಧಿ ಕೇವಲ 4 ವರ್ಷ ಮಾತ್ರ. ಯೋಧರಿಗೆ ಸೇನೆಯಲ್ಲಿ ಶ್ರೇಣಿ ಇಲ್ಲ, ಪಿಂಚಣಿ ಇಲ್ಲ, ಉದ್ಯೋಗ ಭದ್ರತೆ ಇಲ್ಲವಾಗಿದೆ. ಸೇವೆ ನಂತರ 11 ಲಕ್ಷ ನೀಡುವುದಾಗಿ ತಿಳಿಸಿದ್ದು, ಅದರ ಜತೆಗೆ ಬ್ಯಾಂಕುಗಳಲ್ಲಿ ಸಾಲ ನೀಡುತ್ತಾರಂತೆ. ಈ ಸರ್ಕಾರ ಎಲ್ಲರನ್ನು ಸಾಲಗಾರರನ್ನಾಗಿ ಮಾಡಲು ಪಣ ತೊಟ್ಟಿದೆಯೇ? ರಾಜ್ಯಗಳು ಜಿ ಎಸ್ ಟಿ ಪಾಲು ಕೇಳಿದರೆ ಸಾಲ ಕೊಡುತ್ತೇವೆ ಎನ್ನುತ್ತಾರೆ, ಕೇಂದ್ರ ಸರ್ಕಾರ 8 ವರ್ಷಗಳಲ್ಲಿ 100 ಕೋಟಿ ಸಾಲ ಮಾಡಿ ಎಲ್ಲಾ ಜನರನ್ನು ಸಾಲಗಾರರನ್ನಾಗಿ ಮಾಡಿದೆ. ಸ್ವಾತಂತ್ರ್ಯ ಬಂದ ನಂತರ ದೇಶದ ಸಾಲ 52 ಲಕ್ಷ ಕೋಟಿ ರೂಪಾಯಿಯಷ್ಟಿತ್ತು. ಆದರೆ ಕಳೆದ ಎಂಟು ವರ್ಷಗಳಲ್ಲಿ ಮೋದಿ ಅರು 103 ಲಕ್ಷ ಕೋಟಿ ಸಾಲ ಮಾಡಿ, ದೇಶದ ಸಾಲದ ಪ್ರಮಾಣವನ್ನು 155 ಲಕ್ಷ ಕೋಟಿಗೆ ಕೊಂಡೊಯ್ದಿದ್ದಾರೆ. ಆ ಮೂಲಕ ಪ್ರತಿ ಪ್ರಜೆಯ ಮೇಲೆ 1.75 ಲಕ್ಷ ಸಾಲ ಹೊರಿಸಿದ್ದಾರೆ. ಇದೆಲ್ಲದರ ನಂತರ ಈಗ ಯೋಧರನ್ನು ಸಾಲಗಾರರನ್ನಾಗಿ ಮಾಡಲು ಹೊರಟಿದೆ.

ಇಂತಹ ಪರಿಸ್ಥಿತಿಯಲ್ಲಿ ಸೇನೆಗೆ ಸೇರುವವರು ಯಾವ ಮನಸ್ಥಿತಿಯಲ್ಲಿ ಗಡಿ ಕಾಯುವರು? ಅರೆಕಾಲಿಕ ಸೈನಿಕರನ್ನು ನೇಮಿಸಿಕೊಂಡರೆ ದೇಶಕ್ಕೆ ಭದ್ರತೆ ಇರುತ್ತದೆಯೇ? ಮಕ್ಕಳು ಓದಿ ವಿದ್ಯಾವಂತರಾಗಿ ಭವಿಷ್ಯ ಕಟ್ಟಿಕೊಳ್ಳುವ ಸಮಯದಲ್ಲಿ ಸೇನೆಯಲ್ಲಿ ದೇಶ ಕಾಯಬೇಕು ನಂತರ ಅಲ್ಲಿಂದ ಹೊರ ಬಂದಮೇಲೆ ನಿರುದ್ಯೋಗಿಗಳಾಗಬೇಕಾ?

ವ್ಯಾಪಕ ವಿರೋಧಗಳು ವ್ಯಕ್ತವಾದ ನಂತರ ರಕ್ಷಣಾ ಇಲಾಖೆ ಹುದ್ದೆಗಳಲ್ಲಿ 10% ಮೀಸಲಾತಿ, ಕೇಂದ್ರೀಯ ಸಶಸ್ತ್ರ ಪಡೆ, ಅಸ್ಸಾಂ ರೈಫಲ್ಸ್ ಪಡೆಗಳಲ್ಲಿ 10% ಮೀಸಲಾತಿ. ಈ ಎರಡು ಪಡೆಗಳ ನೇಮಕಾತಿಯ ವಯೋಮಿತಿಯಲ್ಲಿ 3 ವರ್ಷ ಸಡಿಲಿಕೆ. ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಉದ್ಯೋಗ ಅವಕಾಶ, ಮಚೆರ್ಂಟ್ ನೇವಿಯಲ್ಲಿ ಸೇರಲು ಅಗತ್ಯವಿರುವ ತರಬೇತಿ ನೀಡಲಾಗುವುದು ಎಂದು ಹೇಳಲಾಗಿದೆ. ಈಗಾಗಲೇ ನಿವೃತ್ತ ಯೋಧರಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿ ನೀಡಲಾಗಿದ್ದು, ಅದರಲ್ಲೇ ಸರಿಯಾಗಿ ಅವರಿಗೆ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ. ಇನ್ನು ಸರ್ಕಾರ ಎಷ್ಟು ನಿವೃತ್ತ ಯೋಧರಿಗೆ ಸರ್ಕಾರ ಇಲಾಖೆಗಳಲ್ಲಿ ಕೆಲಸ ನೀಡಲಾಗಿದೆ ಎಂದು ಶ್ವೇತಪತ್ರ ಹೊರಡಿಸಲಿ. ಆದರೆ ಸರ್ಕಾರ ಕಳೆದ 3 ವರ್ಷಗಳಿಂದ ಸರಿಯಾಗಿ ಸೇನಾ ನೇಮಕಾತಿ ನಡೆಸಿಲ್ಲ. ಆದರೆ ರಕ್ಷಣಾ ಇಲಾಖೆಯಲ್ಲಿ 10% ಮೀಸಲಾತಿಯ ಪ್ರಕಾರ ಅಗ್ನಿವೀರ ಯೋಧರಿಗೆ ಎಷ್ಟು ಉದ್ಯೋಗ ನೀಡಲು ಸಾಧ್ಯ? ಇದಕ್ಕೂ ಮೊದಲು ನಾಗರೀಕ ವಿಮಾನಯಾನ ಸಚಿವಾಲಯದಲ್ಲಿ ಎಷ್ಟು ನಿವೃತ್ತ ಯೋಧರಿಗೆ ಸಚಿವಾಲಯದಲ್ಲಿ ಕೆಲಸ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು?

ಸರ್ಕಾರ ಪೂರ್ಣಾವಧಿಗೆ ಯೋಧರನ್ನು ನೇಮಕಮಾಡಿಕೊಳ್ಳಬೇಕೇ ಹೊರತು, ಕೇವಲ ನಾಲ್ಕು ವರ್ಷಕ್ಕೆ ನೇಮಕಮಾಡಿಕೊಂಡು ನಂತರ ಅವರನ್ನು ಮನೆಗೆ ಕಳುಹಿಸಬಾರದು. ಇದರಿಂದ ಯುವಕರ ಭವಿಷ್ಯ ನಾಶವಾಗಲಿದೆ.

ಈ ಹಿಂದೆ ಕನಿಷ್ಠ 15 ವರ್ಷಗಳ ಕಾಲ ಯೋಧರಿಗೆ ಸೇವಾ ಅವಧಿ ಮಾಡಿ ನಿವೃತ್ತಿ ಪಡೆಯಬಹುದಾಗಿತ್ತು. ಇಲ್ಲದಿದ್ದರೆ 60 ವರ್ಷದವರೆಗೂ ಸೇವೆ ಸಲ್ಲಿಸಬಹುದಾಗಿತ್ತು. ಹೀಗಾಗಿ ಯುವಕರ ಭವಿಷ್ಯ ದೇಶದ ರಕ್ಷಣೆ, ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸರಿಯಾಗಿಲ್ಲ. ಹೀಗಾಗಿ ಇದುವರೆಗೂ ಹೇಗೆ ಸೇನಾ ಯೋಧರನ್ನು ಯಾವ ರೀತಿ ನೇಮಕ ಮಾಡಲಾಗುತ್ತಿತ್ತೋ ಅದೇರೀತಿ ಮುಂದುವರಿಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು.

ಚುನಾವಣೆ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಪ್ರಣಾಳಿಕೆ ನೀಡುತ್ತವೆ. ನಾವು ಕೊಟ್ಟ 165 ಭರವಸೆಗಳನ್ನು ಈಡೇರಿಸಿದ್ದು, ಮೋದಿ ಅವರ ಸರ್ಕಾರದ ಪ್ರಣಾಳಿಕೆ ಇಟ್ಟುಕಂಡು ಎಷ್ಟು ಈಡೇರಿವೆ ಎಂಬುದನ್ನು ಪಟ್ಟಿ ಮಾಡಲಿ. ಬೆಲೆ ಏರಿಕೆ ಇಳಿಸಿ ಪೆಟ್ರೋಲ್ ಅನ್ನು 50 ರೂ.ಗೆ, ಅಡುಗೆ ಅನಿಲವನ್ನು 100 ರೂ.ಗೆ ನೀಡುತ್ತೇವೆ ಎಂದರು. ಕಪ್ಪು ಹಣ ತರುತ್ತೇವೆ ಎಂದರು, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದರು. ಎಲ್ಲರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು.

ಈ ಸಂದರ್ಭದಲ್ಲಿ ರಾಮಲಿಂಗಾರೆಡ್ಡಿ, ಮನೋಹರ್, ರಾಮಚಂದ್ರಪ್ಪ ಹಾಗೂ ಮಂಜುನಾಥ್ ಅವರು ಇದ್ದರು.

Recent Articles

spot_img

Related Stories

Share via
Copy link
Powered by Social Snap