ಅಧಿವೇಶನ : ಆಡಳಿತ ಪಕ್ಷವನ್ನು ಕಟ್ಟಿಹಾಕಲು ಯತ್ನಿಸಿದ ಕೋಟಾ ಶ್ರೀನಿವಾಸ್‌ ಪೂಜಾರಿ

ಬೆಂಗಳೂರು

    ಮೇಲ್ಮನೆ ಕಲಾಪದ ಮೊದಲ ದಿನವೇ ಗ್ಯಾರೆಂಟಿ ಯೋಜನೆಗಳನ್ನು ಷರತ್ತು ರಹಿತವಾಗಿ ವಿಳಂಬವಿಲ್ಲದೇ ಜಾರಿಗೊಳಿಸಬೇಕು. ಈ ಕುರಿತು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಪಟ್ಟು ಹಿಡಿದಿದ್ದು, ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷ ಕಾಂಗ್ರೆಸ್ ಪ್ರತಿಪಕ್ಷ ನಾಯಕರಿಲ್ಲದೇ ಬಿಜೆಪಿ ಸೊರಗಿದೆ ಎಂದು ತೀವ್ರ ವಾಗ್ದಾಳಿ ನಡೆಸಿತು. ಇದರಿಂದ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಗದ್ದಲದ ವಾತಾವರಣ ನಿರ್ಮಾಣವಾಯಿತು. ಗದ್ದಲದಿಂದಾಗಿ ಕಲಾಪವನ್ನು ಕೆಲ ಕಾಲ ಮುಂದೂಡುವ ಪರಿಸ್ಥಿತಿಯೂ ನಿರ್ಮಾಣವಾಯಿತು.

ಪ್ರತಿಪಕ್ಷ ನಾಯಕನಿಲ್ಲದೇ ಬಿಜೆಪಿ ಹಿರಿಯ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಆಡಳಿತ ಪಕ್ಷವನ್ನು ಕಟ್ಟಿಹಾಕುವ ನಾಯಕತ್ವ ವಹಿಸಿದರು. ಸದನ ಆರಂಭವಾಗುತ್ತಿದ್ದಂತೆ ಕೋಟಾ ಪೂಜಾರಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಇದಕ್ಕೆ ಆಡಳಿತ ಪಕ್ಷದವರು ಸಹ ತಿರುಗೇಟು ನೀಡಿದರು.

ಒಂದು ಹಂತದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ಕೆಂಡಾಮಂಡಲವಾದರು. ಬಿಜೆಪಿ ಆರೋಪಕ್ಕೆ ಪ್ರತಿಕ್ರಯಿಸಿ, ಇತಿಹಾಸದಲ್ಲೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಕಲಾಪವನ್ನು ನಡೆಸುವ ದುಸ್ಥಿತಿಗೆ ಬಿಜೆಪಿ ಬಂದಿದೆ. ಮೊದಲು ದೆಹಲಿಗೆ ಹೋಗಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಿ. ನಮ್ಮ ಸರ್ಕಾರಕ್ಕೆ ಸಲಹೆ ಕೊಡಬೇಕಾದ ಅಗತ್ಯವಿಲ್ಲ ಎಂದು ಕಿಡಿಕಾರಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೋಲಾಹಲ ನಡೆಯಿತು. ಆಗ ಸದನದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದು ಗೊತ್ತಾಗಲಿಲ್ಲ.

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸದಸ್ಯರು ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಇದಕ್ಕೆ ತಿರುಗೇಟು ನೀಡಿದ ಕಾಂಗ್ರೆಸ್ ಸದಸ್ಯರು, ಮೊದಲು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಕೊಳ್ಳಿ. ಫಲಿತಾಂಶ ಬಂದು ಒಂದೂವರೆ ತಿಂಗಳು ಕಳೆದರೂ ಈಗಲೂ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಇವರಿಗೆ ಸದನದಲ್ಲಿ ಚರ್ಚೆ ನಡೆಯಬಾರದು. ಪುಕ್ಕಟ್ಟೆ ಪ್ರಚಾರ ಬೇಕು ಎಂದು ತರಾಟೆಗೆ ತೆಗೆದುಕೊಂಡರು.

ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಸ್ಥಾನದಲ್ಲಿದ್ದ ಉಪಸಭಾಪತಿ ಪ್ರಾಣೇಶ್ ಅವರು ಕಲಾಪವನ್ನು ಪ್ರಾರಂಭಿಸಲು ಮುಂದಾದರು. ಆಗ ಕೋಟಾ ಶ್ರೀನಿವಾಸ್ ಪೂಜಾರಿಯವರು ವಿಷಯ ಪ್ರಸ್ತಾಪಿಸಿ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ವಿಳಂಬ ಮಾಡುತ್ತಿರುವ ಕುರಿತು ಚರ್ಚೆಗೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.

ಆಗ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಪ್ರತಿಪಕ್ಷಗಳ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಸದನವು ನಿಯಮಗಳ ಅನುಸಾರವಾಗಿ ನಡೆಯಬೇಕು. ಮೊದಲು ಪ್ರಶ್ನೋತ್ತರ, ಶೂನ್ಯವೇಳೆ, ಬಳಿಕ ಉಪಸಭಾಪತಿಗಳು ಬಯಸಿದರೆ ನಿಲುವಳಿ ಸೂಚನೆ ಗಮನಕ್ಕೆ ತರಬೇಕು. ಅದು ಎಷ್ಟರಮಟ್ಟಿಗೆ ನಡೆಯಬೇಕು. ಇದು ಆಡಳಿತ ನಡೆಸಿದ ಬಿಜೆಪಿಯವರಿಗೆ ಗೊತ್ತಿಲ್ಲವೇ ಎಂದು ಪ್ರಶ್ನಿಸಿದರು.

ಮಾತು ಮುಂದುವರೆಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಸದನದಲ್ಲಿ ಅನೇಕ ಬಾರಿ ಪ್ರಶ್ನೋತ್ತರ ಕಲಾಪವನ್ನು ಬದಿಗೊತ್ತಿ ನಿಲುವಳಿ ಸೂಚನೆ ಕೈಗೆತ್ತಿಕೊಂಡಿರುವ ನಿದರ್ಶನಗಳು ಸಾಕಷ್ಟಿವೆ. ಇದು ಅತ್ಯಂತ ಮಹತ್ವಪೂರ್ಣದ ವಿಷಯವಾಗಿರುವುದರಿಂದ ಉಪಸಭಾಪತಿಗಳು ಪ್ರಶ್ನೋತ್ತರವನ್ನು ಬದಿಗೊತ್ತಿ ಚರ್ಚೆಗೆ ನಿಲುವಳಿ ಸೂಚನೆಗೆ ಅವಕಾಶ ಮಾಡಿಕೊಡುವಂತೆ ಒತ್ತಾಯಿಸಿದರು.

ಗದ್ದಲದ ನಡುವೆಯೇ ಮಾತು ಮುಂದುವರೆಸಿದ ಪೂಜಾರಿ, ಅಧಿಕಾರಕ್ಕೆ ಬಂದ ಮೊದಲ ದಿನವೇ 5 ಗ್ಯಾರಂಟಿಗಳನ್ನು ಯಾವುದೇ ಷರತ್ತುಗಳಿಲ್ಲದೆ ಅನುಷ್ಠಾನ ಮಾಡುವುದಾಗಿ ಕಾಂಗ್ರೆಸ್‌ನವರು ಜನತೆಗೆ ಭರವಸೆ ಕೊಟ್ಟಿದ್ದರು. ಇದೀಗ ಅಧಿಕಾರಕ್ಕೆ ಬಂದ ಬಳಿಕ ಒಂದೊAದು ಯೋಜನೆಗಳನ್ನು ಅನುಷ್ಠಾನ ಮಾಡಲು ಷರತ್ತು ವಿಧಿಸುತ್ತಿದೆ. ಇದು ಜನತೆಗೆ ಮಾಡಿದ ವಂಚನೆಯಲ್ಲವೇ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಆಕ್ಷೇಪಿಸಿದ ಕೃಷ್ಣಭೈರೇಗೌಡ ಹಾಗೂ ಕೆಲ ಕಾಂಗ್ರೆಸ್ ಸದಸ್ಯರು, ಬಿಜೆಪಿಯವರಿಗೆ ಸದನ ನಡೆಯಬೇಕಿಲ್ಲ. ಅವರಿಗೆ ಗದ್ದಲ ನಡೆದರೆ ಸಾಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಇಂತಹ ನಾಟಕ ಮಾಡಿದ್ದಕ್ಕೇ ರಾಜ್ಯದ ಜನತೆ ಸರಿಯಾದ ಪಾಠ ಕಲಿಸಿದ್ದಾರೆ ಎಂದು ತಿರುಗೇಟು ನೀಡಿದರು.ಮಾತು ಮುಂದುವರೆಸಿದ ಪೂಜಾರಿ, ನೀವು ಆಡಳಿತದಲ್ಲಿದ್ದಾಗ ಒಂದು ರೀತಿ, ವಿರೋಧ ಪಕ್ಷದಲ್ಲಿದ್ದಾಗ ಮತ್ತೊಂದು ರೀತಿ ಇರಬಾರದು . ಯೋಜನೆಗಳನ್ನು ಷರತ್ತು ವಿಸದೆ ಜಾರಿಗೆ ತನ್ನಿ ಸುಮ್ಮನೆ ಕಥೆ ಹೇಳಬೇಡಿ ಎಂದು ಎದುರೇಟು ಕೊಟ್ಟರು.

ನಿಮಗೆ ರಾಜ್ಯದ ಜನತೆಗೆ ಅಷ್ಟೊಂದು ಕಳಕಳಿ ಇದ್ದರೆ ಕೇಂದ್ರಕ್ಕೆ ನೀವೇ ಹೋಗಿ. ಪ್ರಧಾನಿಯವರನ್ನು ಭೇಟಿ ಮಾಡಿ ರಾಜ್ಯಕ್ಕೆ ಅಕ್ಕಿ ಕೊಡಿಸಿ. ನಾವು ಹಣ ಕೊಡುತ್ತೇವೆ ಎಂದು ಹೇಳಿದರೂ ಅಕ್ಕಿ ಏಕೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಆಗ ಬಿಜೆಪಿ ಸದಸ್ಯರು ಎದ್ದುನಿಂತು, ಕೇಂದ್ರ ಸರ್ಕಾರ ನಿಮಗೆ ಅಕ್ಕಿ ಕೊಡುತ್ತೇನೆ ಎಂದು ಹೇಳಿತ್ತಾ? ನೀವು ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದ್ದೀರಿ ಅದರಂತೆ ನಡೆದುಕೊಳ್ಳಿ. ಇಲ್ಲದಿದ್ದರೆ ಇದೊಂದು ಸುಳ್ಳಿನ ಸರ್ಕಾರ, ವಚನಭ್ರಷ್ಟ ಸರ್ಕಾರವಾಗುತ್ತದೆ ಎಂದರು.

ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ, ಗದ್ದಲ, ಕೋಲಾಹಲ, ಆರೋಪ-ಪ್ರತ್ಯಾರೋಪ ನಡೆಯಿತು. ಸಭಾಪತಿಯವರು ಪ್ರಶ್ನೋತ್ತರ ಆರಂಭಿಸಲಿ ಎಂದು ಕಾಂಗ್ರೆಸ್ ಸದಸ್ಯರು ಹೇಳಿದರೆ, ನಿಲುವಳಿ ಸೂಚನೆ ಕೈಗೆತ್ತಿಕೊಳ್ಳಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಉಪಸಭಾಪತಿ ಪ್ರಾಣೇಶ್ ಅವರು ಸದನವನ್ನು ಸಹಜ ಸ್ಥಿತಿಗೆ ತರಲು ಯತ್ನಿಸಿದರೂ ಪ್ರಯೋಜನವಾಗದ ಕಾರಣ ಕಲಾಪವನ್ನು ಕೆಲ ಕಾಲ ಮುಂದೂಡಿದರು. ಬಳಿಕ ಸದನ ಸಮಾವೇಶಗೊಂಡಾಗ ಬಿಜೆಪಿ ಸದಸ್ಯರು ಯಥಾಪ್ರಕಾರವಾಗಿ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಅತ್ತ ಕಾಂಗ್ರೆಸ್ ಸದಸ್ಯರು ಬಿಜೆಪಿ ವಿರುದ್ಧ ಮುಗಿಬಿದ್ದು ಏಟಿಗೆ ಎದುರೇಟು ಎಂಬAತೆ ಟೀಕಾಪ್ರಹಾರ ನಡೆಸಿದರು. ಹೀಗೆ ಸದನದಲ್ಲಿ ಗದ್ದಲ ಉಂಟಾಗಿದ್ದರಿಂದ ಸಭಾಪತಿಗಳು ಅನಿವಾರ್ಯವಾಗಿ ಕಲಾಪವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣವಾಯಿತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap