ನವದೆಹಲಿ:
ಆಂಧ್ರ ಪ್ರದೇಶದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗವು ಘಟನೆಗಳನ್ನು ನಿಯಂತ್ರಿಸುವಲ್ಲಿ ಆಡಳಿತದ ವೈಫಲ್ಯವನ್ನು ‘ವೈಯಕ್ತಿಕವಾಗಿ ವಿವರಿಸಲು’ ಗುರುವಾರ ರಾಜ್ಯದ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿಗೆ ಸಮನ್ಸ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಮಾದರಿ ನೀತಿ ಸಂಹಿತೆ ಇನ್ನೂ ಜಾರಿಯಲ್ಲಿದೆ ಎಂದು ರಾಜ್ಯ ಸರ್ಕಾರಕ್ಕೆ ನೆನಪಿಸಿರುವ ಚುನಾವಣಾ ಆಯೋಗ, ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುವಂತೆ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮುಖ್ಯಸ್ಥರಿಗೆ ಸೂಚಿಸಿದೆ.
ಪ್ರಜಾಪ್ರಭುತ್ವದಲ್ಲಿ ಹಿಂಸಾಚಾರಕ್ಕೆ ಅವಕಾಶವಿಲ್ಲ ಎಂದು ಆಯೋಗವು ಪದೇ ಪದೆ ಒತ್ತಿಹೇಳುತ್ತಿದೆ ಮತ್ತು ಲೋಕಸಭೆ ಚುನಾವಣೆ ಘೋಷಣೆಯಾದಾಗಿನಿಂದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಶಾಂತಿಯುತ ಮತ್ತು ಹಿಂಸಾಚಾರ ಮುಕ್ತವಾಗಿ ಚುನಾವಣೆಯನ್ನು ನಡೆಸಲು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳು ಗಮನಸೆಳೆದಿದ್ದಾರೆ.
ಆಂಧ್ರ ಪ್ರದೇಶದ ಉನ್ನತ ಅಧಿಕಾರಿಗಳನ್ನು ಚುನಾವಣೋತ್ತರ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಆಡಳಿತ ವಿಫಲವಾದ ಕಾರಣಗಳನ್ನು ವೈಯಕ್ತಿಕವಾಗಿ ವಿವರಿಸಲು ಕೇಳಲಾಗುತ್ತದೆ. ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದರ ಬಗ್ಗೆಯೂ ಅವರನ್ನು ಕೇಳಲಾಗುವುದು ಎಂದು ಮೂಲಗಳು ತಿಳಿಸಿವೆ.
ಸೋಮವಾರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದ ಆಂಧ್ರ ಪ್ರದೇಶದ ಕೆಲವು ಭಾಗಗಳಲ್ಲಿ ಮಂಗಳವಾರ ಚುನಾವಣೋತ್ತರ ಹಿಂಸಾಚಾರ ವರದಿಯಾಗಿದೆ. ಈ ಘಟನೆಗಳಿಗೆ ಸಂಬಂಧಿಸಿದಂತೆ ಆಡಳಿತಾರೂಢ ವೈಎಸ್‌ಆರ್‌ಸಿಪಿ ಮತ್ತು ಪ್ರತಿಪಕ್ಷ ಟಿಡಿಪಿ ನಾಯಕರು ಪರಸ್ಪರ ಆರೋಪಗಳನ್ನು ಮಾಡಿದ್ದಾರೆ.