ಬೆಂಗಳೂರು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಶತದಿನ ಪೂರೈಸಿದ್ದು, ಈ ನಡುವಲ್ಲೇ ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ, ಆಡಳಿತ ಪಕ್ಷದ ನಾಯಕರ ನಡುವೆ ಒಳಜಗಳ ಶುರುವಾಗಿದೆ ಎಂದು ಬಿಜೆಪಿ ಹೇಳಿದೆ,
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ, ತನ್ನ ಮನೆಯೊಳಗಿನ ಕಿಚ್ಚನ್ನೇ ನಿಯಂತ್ರಿಸಲು ವಿಫಲವಾಗಿರುವ ಕಾಂಗ್ರೆಸ್‌ಗೆ, ಸದಾ ಬೇರೆಯವರದ್ದೇ ಚಿಂತೆ ಜಾಸ್ತಿಯಾಗಿದೆ. ಅವರ ಒಳಜಗಳಗಳ ಜಿಲ್ಲಾವಾರು ಸ್ಯಾಂಪಲ್ ಹೀಗಿದೆ ನೋಡಿ ಎಂದು ಹೇಳಿ, ಪಟ್ಟಿಯನ್ನು ಪ್ರಕಟಿಸಿದೆ.
ಕಲ್ಬುರ್ಗಿ: ಟ್ರೋಲ್ ಮಿನಿಸ್ಟರ್ ಪ್ರಿಯಾಂಕ್ ಖರ್ಗೆ ಅವರಿಗೆ ಸಚಿವ ಸ್ಥಾನ ನೀಡಿದ್ದು, ಕಲ್ಬುರ್ಗಿ ಜಿಲ್ಲೆಯ ಉಳಿದ ಕೈ ಶಾಸಕರಿಗೆ ಹಿಡಿಸಿಲ್ಲ. ಬಿ.ಆರ್. ಪಾಟೀಲ್ ಸರ್ಕಾರದ ವಿರುದ್ಧವೇ ಪತ್ರ ಬರೆದರೆ, ಅಜಯ್ ಸಿಂಗ್ ಪಕ್ಷದ ಚಟುವಟಿಕೆಗಳಿಂದ ದೂರ ದೂರ.
ರಾಯಚೂರು: ಶಾಸಕರೇ ಅಲ್ಲದ ಬೋಸರಾಜುಗೆ ಸಚಿವ ಸ್ಥಾನ ನೀಡಿದ್ದಕ್ಕೆ, ರಾಯಚೂರು ಕೈ ಶಾಸಕರು ರಾಜೀನಾಮೆ ಬೆದರಿಕೆ ಹಾಕಿದ್ದಾರೆ, ಅನುದಾನದ ಆಸೆ ತೋರಿಸಿ, ಸಿಎಂ ಸಿದ್ದರಾಮಯ್ಯ ತೇಪೆ ಹಚ್ಚಿದ್ದಾರೆ.
ಧಾರವಾಡ: ಸಂತೋಷ್ ಲಾಡ್‌ರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಡಿ.ಕೆ. ಶಿವಕುಮಾರ್ ಬಣದ ವಿನಯ್ ಕುಲಕರ್ಣಿ ಹಾಗೂ ಪರಮೇಶ್ವರ್ ಬಣದ ಪ್ರಸಾದ್ ಅಬ್ಬಯ್ಯ ನಿಗಿ ನಿಗಿ ಕೆಂಡ ಕಾರುತ್ತಿದ್ದಾರೆ.
ಶಿವಮೊಗ್ಗ: ನಿನ್ನೆ ಮೊನ್ನೆ ಬಂದ ಮಧು ಬಂಗಾರಪ್ಪರಿಗೇಕೆ ಮಂತ್ರಿಗಿರಿ ಎಂದು ಸಿದ್ದರಾಮಯ್ಯ ಬಣದ ಭದ್ರಾವತಿಯ ಸಂಗಮೇಶ್ ಗುರ್ ಎನ್ನುತ್ತಿದ್ದಾರೆ.
ದಾವಣಗೆರೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಭ್ರಷ್ಟಾಚಾರಕ್ಕೆ ಬೇಸತ್ತು, ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜು ರಾಜೀನಾಮೆ ಬಿಸಾಡಿ ಹೊರಹೋಗುವ ಮಾತನಾಡಿದ್ದಾರೆ.
ಕೊಪ್ಪಳ: ಶಿವರಾಜ್ ತಂಗಡಗಿರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ, ಶಾಸಕ ಬಸವರಾಜ ರಾಯರೆಡ್ದಿ, ಸರ್ಕಾರದ ಭ್ರಷ್ಟಾಚಾರವನ್ನು ಹೋದಲ್ಲಿ ಬಂದಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಿದ್ದಾರೆ.
ಬೆಳಗಾವಿ: ಸಿದ್ದರಾಮಯ್ಯ ಬಣದ ಸತೀಶ್ ಜಾರಕಿಹೊಳಿಯವರಿಗೂ ಹಾಗೂ ಡಿ.ಕೆ. ಶಿವಕುಮಾರ್ ಬಣದ ಹೆಬ್ಬಾಳ್ಕರ್‌ಗೂ ಹುಸಿ ಮುನಿಸು, ಕಾಂಗ್ರೆಸ್ಸಿಗೆ ಬೆಳಗಾವಿ ಸೂತ್ರ ಹರಿದ ಗಾಳಿಪಟವಾಗಿದೆ.
ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್‌ರವರ ಏಕಪಕ್ಷೀಯ ನಡೆಗಳಿಗೆ ಬೇಸತ್ತು, ಬೆಂಗಳೂರು ಕೈ ಶಾಸಕರು, ಡಿ.ಕೆ. ಶಿವಕುಮಾರ್‌ರವರ ಸಿಟಿ ರೌಂಡ್ಸ್ಗೆ ಚಕ್ಕರ್ ಹಾಕುತ್ತಿದ್ದಾರೆ.
ಇದೆಲ್ಲದರ ನಡುವೆ ತಮಗೆ ಮಂತ್ರಿಗಿರಿ ತಪ್ಪಿಸಿದರು ಎಂಬ ಕಾರಣಕ್ಕೆ, ಡಿ.ಕೆ. ಶಿವಕುಮಾರ್‌ರವರ ಸಂಪೂರ್ಣ ಸಹಕಾರದೊಂದಿಗೆ ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಸಿಎಂ ಸಿದ್ದರಾಮಯ್ಯ ಕುರ್ಚಿಗೆ ಟೈಂ ಬಾಂಬ್ ಇಟ್ಟಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಬ್ಲಾಸ್ಟ್ ಆಗುವುದು ಖಚಿತ ಹಾಗೂ ನಿಶ್ಚಿತ ಎಂದು ಹೇಳಿದೆ.
ಮತ್ತೊಂದು ಟ್ವೀಟ್ ನಲ್ಲಿ ತಾವೇ ಸ್ಥಾಪಿಸಿ, ಮುಗಿಲೆತ್ತರಕ್ಕೆ ಬೆಳೆಸಿದ್ದ ವರ್ಗಾವಣೆ ದಂಧೆ ಇಲ್ಲವೇ ಇಲ್ಲ ಎಂದು ವಾದಿಸಿದ್ದ ಸಿಎಂ ಸಿದ್ದರಾಮಯ್ಯ, ಈಗ ವರ್ಗಾವಣೆ ದಂಧೆಯನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದೆ.
ವರ್ಗಾವಣೆಗಳು ಜೂನ್ 1ಕ್ಕೆ ಆರಂಭವಾಗಿ ಜುಲೈ 3ಕ್ಕೆ ಮುಗಿಯಬೇಕಾಗಿತ್ತು, ಆದರೆ ಈಗಾಗುತ್ತಿರುವುದು …ಊರೆಲ್ಲಾ ಕೊಳ್ಳೆ ಹೊಡೆದ ಮೇಲೆ, ದಿಡ್ಡಿ ಬಾಗಿಲು ಹಾಕಿದರಂತೆ ಎಂಬ ಮಾತಿನಂತೆ, ಈಗ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳಿಗೆ ಶಿಸ್ತು ಕ್ರಮದ ಎಚ್ಚರಿಕೆ ನೀಡುವ ನಾಟಕವಾಡುತ್ತಿದ್ದಾರೆ ಎಂದು ಟೀಕಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ