ಆನ್‌ಲೈನ್ ಗೇಮ್: ಬೆಟ್ಟಿಂಗ್ ನಿಷೇಧಕ್ಕೆ ಚಿಂತನೆ

ತುಮಕೂರು:

     ರಾಜ್ಯದಲ್ಲಿ ಕೆಲವು ಆನ್‌ಲೈನ್ ಗೇಮ್, ಆನ್‌ಲೈನ್ ಬೆಟ್ಟಿಂಗ್ ನಿಷೇಧಿಸುವ ನಿಟ್ಟಿನಲ್ಲಿ ಚಿಂತನೆಗಳು ನಡೆದಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇತ್ತೀಚೆಗೆ ಹೇಳಿರುವುದು ಪ್ರಸಕ್ತ ಸನ್ನಿವೇಶಕ್ಕೆ ಸ್ವಾಗತಾರ್ಹ ಕ್ರಮ.

    ರಾಜ್ಯದ ಹಲವೆಡೆ ಮಾದಕ ವಸ್ತುಗಳ ಹಾವಳಿಯ ದುರಂತಗಳು ಹಾಗೂ ಆನ್‌ಲೈನ್ ಗೇಮ್ ಅಪಾಯಗಳು ವರದಿಯಾಗುತ್ತಲೇ ಇವೆ. ಸಾವು ನೋವುಗಳು ಸಂಭವಿಸುತ್ತಿವೆ. ವಿದ್ಯಾರ್ಥಿಗಳು ಮತ್ತು ಯುವ ಜನತೆ ಹೆಚ್ಚು ಬಲಿಯಾಗುತ್ತಿದ್ದಾರೆ.

     ಇದನ್ನು ಗಮನಿಸಿರುವ ಮುಖ್ಯಮಂತ್ರಿಗಳು ಮಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇದೊಂದು ತುಂಬಾ ಗಂಭೀರವಾದ ವಿಷಯ ಎಂದು ಪ್ರಸ್ತಾಪಿಸಿದ್ದಾರೆ. ಡ್ರಗ್ಸ್ ಹಾವಳಿ ಹಾಗೂ ಕೆಲವು ಅಪಾಯಕಾರಿ ಆನ್‌ಲೈನ್ ಗೇಮ್ ನಿಷೇಧಿಸದೆ ಹೋದರೆ ಭವಿಷ್ಯದಲ್ಲಿ ಯುವ ಜನತೆಯ ಪರಿಸ್ಥಿತಿ ಹದಗೆಡಲಿದೆ ಎನ್ನುವ ಆತಂಕ ವ್ಯಕ್ತಪಡಿಸಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಯುವಜನರನ್ನು ಅತಿ ಹೆಚ್ಚು ಬಲಿ ತೆಗೆದುಕೊಳ್ಳುತ್ತಿರುವ ವಸ್ತುಗಳಲ್ಲಿ ಮಾದಕ ದ್ರವ್ಯ ಪ್ರಮುಖ ಸ್ಥಾನ ಪಡೆದಿದೆ. ಇದರ ಬೆನ್ನಲ್ಲೇ ಆನ್‌ಲೈನ್ ಗೇಮ್ ಹೊಸ ಅವತಾರದಲ್ಲಿ ಹುಟ್ಟಿಕೊಳ್ಳುತ್ತಿದ್ದು, ಕಳೆದ 4-5 ವರ್ಷಗಳಿಂದ ಯುವ ಜನತೆಯನ್ನು ಹೆಚ್ಚು ಹೆಚ್ಚು ಆಕರ್ಷಿಸ ತೊಡಗಿದೆ. ಈ ಆಟಗಳಿಗೆ ಬಿದ್ದು ಬಹಳಷ್ಟು ಯುವಕರು, ವಿದ್ಯಾರ್ಥಿಗಳು ಮಾನಸಿಕ ಕ್ಷೋಭೆಗೆ ಒಳಗಾಗಿದ್ದಾರೆ. ಬಹಳಷ್ಟು ಜನ ಹಣ, ಆಸ್ತಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಇದು ಒಂದು ರೀತಿಯಲ್ಲಿ ಲಾಟರಿ ಇದ್ದಂತೆ. ರದ್ದಾಗಿರುವ ಲಾಟರಿ ಈಗ ಆನ್‌ಲೈನ್ ಜೂಜು ರೂಪದಲ್ಲಿ ಕೆಲವರಿಗೆ ಕಾಣಿಸಿಕೊಂಡಿದೆ.

    ಅಪಾಯಕಾರಿ ಆನ್‌ಲೈನ್ ಆಟಗಳನ್ನು ಮೂರು ವಿಧಗಳಾಗಿ ವಿಂಗಡಿಸಬಹುದು. ಮೊದಲನೆಯದು ಬೆಟ್ಟಿಂಗ್ ಒಳಗೊಂಡ ಆಟಗಳು, ಎರಡನೆಯದು ಬಳಕೆದಾರರಿಗೆ ಹಾನಿಯುಂಟು ಮಾಡುವ ಆಟಗಳು, ಮೂರನೆಯದಾಗಿ ನಾರ್ಸಿಸಿಸ್ಟ್ಗಳಾಗಿ ಬದಲಾಗುವ ಆಟಗಳು. ಈ ಯಾವುದೇ ವರ್ಗಗಳು ಆಟದಲ್ಲಿ ಕಾಣಿಸಿಕೊಂಡರೆ ಅವುಗಳನ್ನು ನಿಷೇಧಿಸಲಾಗುತ್ತದೆ ಎಂದು ಇತ್ತೀಚೆಗೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವರು ಹೇಳಿದ್ದಾರೆ.

    ಕೇವಲ ಕೆಲವೇ ರೂಪಾಯಿಗಳ ಬಂಡವಾಳ ಹಾಕಿ ಸಾವಿರಾರು , ಲಕ್ಷ ಲಕ್ಷ ದುಡಿಯಬಹುದಾದ ಆಮಿಷವೊಡ್ಡಿ ಯುವಕರನ್ನು ದಾರಿ ತಪ್ಪಿಸುತ್ತಿರುವ ಹಲವಾರು ಆನ್‌ಲೈನ್ ಗೇಮ್ಸ್ ಆ್ಯಪ್‌ಗಳು ಚಾಲ್ತಿಯಲ್ಲಿವೆ. ಇವುಗಳಲ್ಲಿ ಈಗಾಗಲೇ ಕೆಲವನ್ನು ನಿಷೇಧಿಸಲಾಗಿದೆ. ಆದರೂ ಅಲ್ಲಲ್ಲಿ ಕೆಲವೊಂದು ಗೇಮ್ಸ್ಗಳು ಸಕ್ರಿಯವಾಗಿದ್ದು, ಇವೆಲ್ಲವನ್ನು ನಿಷೇಧಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿರುವುದು ಸಮಾಧಾನಕರ ಅಂಶ.

    ಕೊರೊನಾ ಲಾಕ್‌ಡೌನ್ ಅವಧಿಯಲ್ಲಿ ಈ ಆನ್‌ಲೈನ್ ಗೇಮ್‌ಗಳು ಹೆಚ್ಚು ಚಾಲ್ತಿ ಪಡೆದುಕೊಂಡವು. ಆಗಿನ ಕಾಲಕ್ಕೆ ಒಂಟಿತನ ನಿವಾರಣೆಗೆ ಕೆಲವರಿಗೆ ಇದು ಅಗತ್ಯ ಎನ್ನಿಸಿದರೂ ಆನಂತರದ ದಿನಗಳಲ್ಲಿ ಈ ಆಟಗಳಿಗೆ ಜೋತುಬಿದ್ದವರೆ ಹೆಚ್ಚು. ಕ್ರಿಕೆಟ್ ಮತ್ತು ಜೂಜು ಪ್ರೇಮಿಗಳನ್ನು, ಯುವ ಜನತೆಯನ್ನು ಕೇಂದ್ರೀಕರಿಸಿಕೊAಡು ಆನ್‌ಲೈನ್ ಆ್ಯಪ್‌ಗಳನ್ನು ರೂಪಿಸಲಾಗುತ್ತದೆ. ಸಣ್ಣ ಮೊತ್ತದ ಹಣ ಹೂಡಿ ಹೆಚ್ಚು ಲಾಭ ಗಳಿಸುವ ಆಸೆಯಿಂದ ಬಹಳಷ್ಟು ಮಂದಿ ಇದರೊಳಗೆ ಬೀಳುತ್ತಿರುವುದು ಆತಂಕಕಾರಿ ವಿಷಯ.

    ಕಳೆದ ಮೂರು ವರ್ಷಗಳ ಸಮಯದಲ್ಲಿ ಕೆಲವೊಂದು ಭಾಗದಲ್ಲಿ ಆನ್‌ಲೈನ್ ಗೇಮ್‌ಗಳು ಮಕ್ಕಳನ್ನು ಹೇಗೆ ಬಲಿತೆಗೆದುಕೊಳ್ಳುತ್ತಿವೆ ಎಂಬ ಸುದ್ದಿಗಳು ವ್ಯಾಪಕವಾಗತೊಡಗಿದವು. ಈ ಆಟದೊಳಗೆ ಮಗ್ನರಾದ ಸಾಕಷ್ಟು ವಿದ್ಯಾರ್ಥಿಗಳು ತಮ್ಮ ಪ್ರಾಣ ಕಳೆದುಕೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಮುಂದೆ ಇವೆ. ಇಂತಹ ಆಟಗಳಿಗೆ ಮನಸೋತವರು ಕುಟುಂಬ ಸದಸ್ಯರ ಜೊತೆ ಸದಾ ಜಗಳವಾಡುವುದು, ಆರೋಗ್ಯದಲ್ಲಿ ಏರುಪೇರು, ನಿದ್ರೆಯ ಬಗ್ಗೆ ಗಮನ ಕೊಡದೆ ಇರುವುದು, ಮೊಬೈಲ್ ಅಥವಾ ಕಂಪ್ಯೂಟರ್ ಕಸಿದುಕೊಂಡರೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವುದು ಸಾಮಾನ್ಯ ಸಂಗತಿಗಳಾಗಿವೆ. ಎಷ್ಟೋ ಮಂದಿ ಪೋಷಕರು ತಮ್ಮ ಮಕ್ಕಳ ಈ ಸ್ಥಿತಿಯನ್ನು ಕಂಡು ಮರುಗಿದ್ದಾರೆ. ಈಗಲೂ ಮರುಗುತ್ತಿದ್ದಾರೆ.

    ಕೆಲವು ರಾಜ್ಯಗಳಲ್ಲಿ ಆನ್‌ಲೈನ್ ಗೇಮ್ ನಿಷೇಧಿಸಲಾಗಿದೆ. ಕರ್ನಾಟಕದಲ್ಲಿಯೂ ಈ ಹಿಂದೆ ಆನ್‌ಲೈನ್ ಗೇಮಿಂಗ್ ನಿಷೇಧ ಮಾಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ಹೈಕೋರ್ಟ್ ಮೊರೆ ಹೋಗಿದ್ದರು. ಸಂವಿಧಾನಬದ್ಧವಾಗಿ ಆನ್‌ಲೈನ್ ಗೇಮಿಂಗ್ ನಿಷೇಧ ಮಾಡಿಲ್ಲ ಎಂದ ನ್ಯಾಯಾಲಯವು ಸರ್ಕಾರದ ಆದೇಶ ಕಾನೂನು ಬಾಹಿರ ಎಂದು ತಿಳಿಸಿತ್ತು. ಇದಾದ ನಂತರ ಅಧಿವೇಶನದಲ್ಲಿ ತಿದ್ದುಪಡಿ ಕಾಯ್ದೆ ಮಂಡಿಸಿ ಕಾನೂನಾತ್ಮಕವಾಗಿ ಇದರ ನಿಷೇಧಕ್ಕೆ ಅಂಕುಶ ಹಾಕಲಾಗುವುದು ಎಂದು ಕಾನೂನು ಸಚಿವರು ಹೇಳಿದ್ದರು. ಇದೀಗ ಈ ಚರ್ಚೆ ಮತ್ತೆ ಮುನ್ನಲೆಗೆ ಬಂದಿದ್ದು, ಬಹಳಷ್ಟು ದೂರು ಇಂತಹ ಗೇಮ್‌ಗಳನ್ನು ನಿಷೇಧಿಸುವುದು ಒಳಿತು ಎಂಬ ಒಲವು ವ್ಯಕ್ತಪಡಿಸುತ್ತಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link