ಇಂದಿನಿಂದ ಅನ್ನಭಾಗ್ಯದ ಅಕ್ಕಿಯ ಹಣ ವಿತರಣೆ …!

ಬೆಂಗಳೂರು: 

     ಅನ್ನಭಾಗ್ಯ ಯೋಜನೆ ರೂಪರೇಷೆ ಪ್ರಕಾರ ಸರ್ಕಾರ ಪ್ರತಿ ವ್ಯಕ್ತಿಗೆ 10 ಕಿಲೋ ಅಕ್ಕಿ ನೀಡಬೇಕಿತ್ತು. ಇದರಲ್ಲಿ 5 ಕಿಲೋ ಅಕ್ಕಿಯನ್ನು ಕೇಂದ್ರ ಸರ್ಕಾರ ನೀಡುತ್ತಿದೆ. ಉಳಿದ 5 ಕಿಲೋ ಅಕ್ಕಿ ಲಭ್ಯವಿಲ್ಲದ  ಕಾರಣ ಅಕ್ಕಿ ಬದಲಿಗೆ 1 ಕೆಜಿಗೆ 34 ರೂಪಾಯಿಯಂತೆ 5 ಕಿಲೋ ಅಕ್ಕಿಗೆ 170 ರೂ. ನೀಡಲು ಸರ್ಕಾರ ನಿರ್ಧರಿಸಿದೆ. ಈ ಯೋಜನೆಗೆ ಬಜೆಟ್‌ನಲ್ಲೂ ಸಿಎಂ ಸಿದ್ದರಾಮಯ್ಯ ಹಣ ಮೀಸಲಿಟ್ಟಿದ್ದಾರೆ.

     ರಾಜ್ಯದಲ್ಲಿ ಸುಮಾರು 1.29 ಕೋಟಿ ಬಿಪಿಎಲ್‌ ಕಾರ್ಡ್‌ಗಳು ಬಳಕೆಯಲ್ಲಿವೆ. ಬಿಪಿಎಲ್ ಕಾರ್ಡ್‌ ಆಧಾರದಲ್ಲಿ 4.41 ಕೋಟಿ ಫಲಾನುಭವಿಗಳು ಈ ಯೋಜನೆಯನ್ನು ಅವಲಂಬಿಸಿದ್ದಾರೆ. ಇದರಲ್ಲಿ ಪ್ರತಿಯೊಬ್ಬನ ಅಕೌಂಟ್‌ಗೆ ಮಾಸಿಕ 170 ರೂ. ಬರಲಿದೆ.  ಹಣಕಾಸು ಸಚಿವರೂ ಆಗಿರುವ ಸಿಎಂ, 2023-24ನೇ ಹಣಕಾಸು ವರ್ಷಕ್ಕೆ ಬಜೆಟ್‌ನಲ್ಲಿ ತಿಂಗಳಿಗೆ 856.25 ಕೋಟಿ ರೂ.ನಂತೆ 10,275 ಕೋಟಿ ರೂ. ಹಣ ಮೀಸಲಿಟ್ಟಿದ್ದಾರೆ.

     ಜುಲೈ 1 ರಂದು ಯೋಜನೆಯನ್ನು ಪ್ರಾರಂಭಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಮತ್ತು ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆಯು ಮುಕ್ತ ಮಾರುಕಟ್ಟೆ ಮಾರಾಟ ಯೋಜನೆಯಡಿ ರಾಜ್ಯಗಳಿಗೆ ಅಕ್ಕಿ ಮತ್ತು ಗೋಧಿ ಮಾರಾಟವನ್ನು ಸ್ಥಗಿತಗೊಳಿಸುವ ನೀತಿ ನಿರ್ಧಾರವನ್ನು ತೆಗೆದುಕೊಂಡಿದ್ದರಿಂದ  ಅಡಚಣೆ ಎದುರಾಯಿತು. ಹೀಗಾಗಿ ಇಕ್ಕಟ್ಟಿನಲ್ಲಿ ಸಿಕ್ಕಿರುವ ರಾಜ್ಯ ಸರ್ಕಾರವು ಅಕ್ಕಿ ಸರಬರಾಜು ಖಾತ್ರಿಯಾಗುವವರೆಗೆ ಫಲಾನುಭವಿಗಳಿಗೆ ಅಕ್ಕಿ ಬದಲಿಗೆ ನಗದು ಪಾವತಿಸಲು ನಿರ್ಧರಿಸಿದೆ. ಇದೀಗ  ಸರಕಾರ ಟೆಂಡರ್ ಕರೆದಿದೆ.

   ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ್ದ ಐದು ಭರವಸೆಗಳಲ್ಲಿ, ಸರ್ಕಾರವು ಗೃಹ ಶಕ್ತಿ ಯೋಜನೆ ಪ್ರಾರಂಭಿಸಿದೆ, ಎಲ್ಲಾ  KSRTC ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap