ಕೋಲ್ಕತ್ತಾ:
ಬುಧವಾರ ಸಂಜೆ ನಡೆಯಲಿರುವ ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಭಾಗವಹಿಸಲು ದೆಹಲಿಗೆ ತೆರಳುವ ಮುನ್ನ, ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ, ಮುಂದೆ ಸಾಗಲು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಮತ್ತು ಅಲ್ಲಿ ಯಾರೂ ಕಿಂಗ್ ಮೇಕರ್ ಇಲ್ಲ ಎಂದು ಹೇಳಿದರು.
‘ಮೊದಲು ಸಭೆ ನಡೆಯಲಿ ಮತ್ತು ಅದರ ನಂತರವೇ ನಾನು ಏನನ್ನಾದರೂ ಹೇಳಲು ಸಾಧ್ಯವಾಗುತ್ತದೆ. ವಿವಿಧ ರಾಜ್ಯಗಳ ರಾಜಕೀಯ ಪಕ್ಷಗಳು ಅಲ್ಲಿ ಸಮಾವೇಶಗೊಳ್ಳುತ್ತಿವೆ. ಕೆಲವರು ತಮಿಳುನಾಡಿನಿಂದ, ಕೆಲವರು ಬಿಹಾರದಿಂದ ಮತ್ತು ಕೆಲವರು ಪಂಜಾಬ್‌ನಿಂದ ಬರುತ್ತಿದ್ದಾರೆ. ಕೇವಲ ಎರಡು ಸ್ಥಾನಗಳನ್ನು ಗೆದ್ದಿರುವ ಪಕ್ಷವು ಸಭೆಗೆ ಹಾಜರಾಗುತ್ತಿರುವಾಗ, 29 ಲೋಕಸಭಾ ಸದಸ್ಯರನ್ನು ಹೊಂದಿರುವ ತೃಣಮೂಲ ಕಾಂಗ್ರೆಸ್ ಕೂಡ ಸಭೆಯಲ್ಲಿ ಭಾಗವಹಿಸುತ್ತಿದೆ. ಮೊದಲು ಸಭೆ ನಡೆಯಲಿ, ಯಾರೂ ಕಿಂಗ್ ಮೇಕರ್ ಅಲ್ಲ. ದೇಶದ ಸಾಮಾನ್ಯ ಜನರು ನಿಜವಾದ ಅರ್ಥದಲ್ಲಿ ಕಿಂಗ್‌ಮೇಕರ್‌ಗಳು’ ಎಂದು ಬ್ಯಾನರ್ಜಿ ದೆಹಲಿಗೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ನಾಯಕರು ಪಶ್ಚಿಮ ಬಂಗಾಳದಲ್ಲಿ ತಾವು ಸಾಧಿಸಲಿರುವ ಚುನಾವಣಾ ವಿಜಯಗಳ ಬಗ್ಗೆ ಸಾರ್ವಜನಿಕವಾಗಿ ಹೆಚ್ಚೆಚ್ಚು ಮಾತನಾಡಿದಷ್ಟು, ಸಾಮಾನ್ಯ ಜನರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅನ್ನು ಮತ್ತಷ್ಟು ಬೆಂಬಲಿಸಲು ಪ್ರೇರೇಪಿಸುತ್ತವೆ ಎಂದರು.
‘2021ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅವರು 200ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದಾಗಿ ಹೇಳಿದ್ದರು. ಆದರೆ, ವಾಸ್ತವದಲ್ಲಿ ತೃಣಮೂಲ ಕಾಂಗ್ರೆಸ್ 200ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿತು. ಈ ಬಾರಿ ಅವರು ಪಶ್ಚಿಮ ಬಂಗಾಳದಲ್ಲಿ 30 ಲೋಕಸಭಾ ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿದ್ದರು. ಆದರೆ, ವಾಸ್ತವದಲ್ಲಿ ನಾವು 29 ಸ್ಥಾನಗಳನ್ನು ಗೆದ್ದಿದ್ದೇವೆ. ಹಾಗಾಗಿ ಅವರು ಮತ್ತೆ ಮತ್ತೆ ಬಂಗಾಳಕ್ಕೆ ಬಂದು ಇಂತಹ ಹೇಳಿಕೆಗಳನ್ನು ನೀಡುತ್ತಿರಬೇಕೆಂದು ನಾನು ಬಯಸುತ್ತೇನೆ ಎಂದು ಹೇಳಿದರು.