ಉಡುಪಿ : ರಘುಪತಿ ಭಟ್ ತಾನು ಗೆಲ್ಲುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ : ಬಿ ವೈ ವಿಜಯೇಂದ್ರ

ಉಡುಪಿ:

   ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ರಾಜ್ಯದಲ್ಲಿ ಚುನಾಯಿತ ಸರ್ಕಾರ ಇದೆ ಎನ್ನುವುದನ್ನು ಜನ ಮರೆತಿದ್ದಾರೆ. ಪೊಲೀಸ್ ಅಧಿಕಾರಿಗಳು, ಸರ್ಕಾರದ ಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

   ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರು ಏನು ಬೇಕಾದರೂ ಮಾಡಬಹುದು ಎನ್ನುವ ವಾತಾವರಣ ನಿರ್ಮಾಣವಾಗಿದೆ. ಅಲ್ಪಸಂಖ್ಯಾತರ ತುಷ್ಟೀಕರಣದ ಪರಿಣಾಮಕ್ಕೆ ಜನ ಕಷ್ಟ ಪಡುತ್ತಿದ್ದಾರೆ ಎಂದರು.

    ನೈರುತ್ಯ ಪದವೀಧರ ಕ್ಷೇತ್ರದಲ್ಲಿ ರಘುಪತಿ ಭಟ್ ಬಂಡಾಯ ವಿಚಾರವಾಗಿ ಮಾತನಾಡಿದ ಬಿ.ವೈ ವಿಜಯೇಂದ್ರ, ರಘುಪತಿ ಭಟ್ ತನ್ನ ಮೂಗಿನ ನೇರಕ್ಕೆ ಮಾತನಾಡುತ್ತಿದ್ದಾರೆ. ರಘುಪತಿ ಭಟ್ಗೆ ಪಕ್ಷದಿಂದ ಯಾವತ್ತು ಅನ್ಯಾಯ ಆಗಿಲ್ಲ. ಅವರಿಗೆ ಸಾಕಷ್ಟು ಅವಕಾಶ ಸಿಕ್ಕಿದೆ. ಅವಕಾಶ ಸಿಗಬೇಕಾದವರು ಅನೇಕ ಮಂದಿ ನಮ್ಮ ಪಕ್ಷದಲ್ಲಿದ್ದಾರೆ.

   ಸಿಕ್ಕವರಿಗೆ ಮತ್ತೆ ಮತ್ತೆ ಅವಕಾಶ ಸಿಗಬೇಕು ಎನ್ನುವುದು ಸರಿಯಲ್ಲ. ರಘುಪತಿ ಭಟ್ ತಾನು ಗೆಲ್ಲುತ್ತೇನೆ ಎನ್ನುವ ಭ್ರಮೆಯಲ್ಲಿದ್ದಾರೆ. ಬಿಜೆಪಿ ಪಕ್ಷ , ಸಂಘಟನೆ ಬಲಿಷ್ಠವಾಗಿದೆ. ಧನಂಜಯ್ ಸರ್ಜಿಯನ್ನು ದೊಡ್ಡ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದರು.

   ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇರ್ ಕಟ್ಟಿಂಗ್ ವಿಚಾರವಾಗಿ ಮಾತನಾಡಿದ ಅವರು, ಶಿಕ್ಷಣ ಸಚಿವರು ಶಿಸ್ತಿನಿಂದ ಇರಬೇಕು. ನಾನು ಹೇಳಿರುವುದು ಶಿಕ್ಷಕರು, ಪೋಷಕರು, ಮಕ್ಕಳ ಅಭಿಪ್ರಾಯ. ನನ್ನ ಅಭಿಪ್ರಾಯ ಅಲ್ಲ. ಕನ್ನಡ ಗೊತ್ತಿರುವವರು ಸಚಿವರಾದರೆ ರಾಜ್ಯಕ್ಕೂ ಮಕ್ಕಳ ಶಿಕ್ಷಣಕ್ಕೂ ಒಳಿತು ಎಂದರು.

   ಪಾಪ ಅವರು ಮನಸಿಗೆ ಬಹಳ ನೋವು ಮಾಡಿಕೊಂಡಂತಿದೆ. ನೋವು ಮಾಡಿಕೊಳ್ಳುವುದು ಬಿಟ್ಟು ಶಿಕ್ಷಣ ಕ್ಷೇತ್ರವನ್ನು ಉದ್ಧಾರ ಮಾಡಿ. ಶಿಕ್ಷಣವನ್ನು ಸರಿಯಾದ ದಾರಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ ಎನ್ನುವ ನಂಬಿಕೆ ನನಗೆ ಇಲ್ಲ. ಕನ್ನಡ ಬರುವುದಿಲ್ಲ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಕನ್ನಡ ಗೊತ್ತಿರುವ, ಶಿಕ್ಷಣಕ್ಕೆ ಆದ್ಯತೆ ಕೊಡುವ ವ್ಯಕ್ತಿಗೆ ಅಧಿಕಾರ ಕೊಡಬೇಕು. ಇದರಿಂದ ಶಿಕ್ಷಣ ಕ್ಷೇತ್ರ ಮತ್ತು ನಮ್ಮ ನಾಡು ಉಳಿಯುತ್ತದೆ. ಇದರಿಂದ ಮಕ್ಕಳ ಶಿಕ್ಷಣ ಉಳಿಯುತ್ತದೆ. ಶಿಕ್ಷಣ ಕ್ಷೇತ್ರಕ್ಕೆ ತುಂಬಾ ಪಾವಿತ್ರತೆ ಇದೆ. ಶಿಕ್ಷಕರು, ಮಕ್ಕಳು ಶಿಸ್ತಿನಿಂದ ಶಾಲೆಗೆ ಬರಬೇಕು. ಹಾಗಾಗಿ ಶಿಕ್ಷಣ ಸಚಿವರು ಶಿಸ್ತಿನಿಂದ ಇರಬೇಕು ಎಂದು ಹೇಳಿದರು.

Recent Articles

spot_img

Related Stories

Share via
Copy link
Powered by Social Snap